ಮಂಗಳವಾರ, ಮಾರ್ಚ್ 9, 2021
31 °C

ಬೆಳ್ಳಿ ತೆರೆಯ ಹಿಂದೆ.......... ಐವತ್ತು ವಸಂತಗಳ ಸ್ಮರಣೆಯಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳ್ಳಿ ತೆರೆಯ ಹಿಂದೆ.......... ಐವತ್ತು ವಸಂತಗಳ ಸ್ಮರಣೆಯಲ್ಲಿ

ನಾನು ದ್ವಾರಕೀಶ್. ದೇವರ ದಯೆಯಿಂದ ಸಿನಿಮಾಗೆ ಬಂದೆ. ಐವತ್ತು ವರ್ಷ ಈ ರಂಗದಲ್ಲೇ ಕಳೆದೆ. ಇಷ್ಟು ಸುದೀರ್ಘ ಕಾಲ ಇಲ್ಲಿ ಏಗಿದ್ದಕ್ಕೆ ಸಂತೋಷವಿದೆ. ಮತ್ತೊಂದು ಕಡೆ ಸಣ್ಣ ವಿಷಾದ. ಆಟೊಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ನಾನು ಈ ರಂಗಕ್ಕೆ ಯಾಕೆ ಬಂದೆನೋ ಅಂತ ಆಗಾಗ ಅನ್ನಿಸಿದ್ದೂ ಇದೆ. ಕನ್ನಡ ಚಿತ್ರರಂಗದ ಯಾವ ಹಾಸ್ಯನಟರೂ ಐವತ್ತು ಚಿತ್ರಗಳನ್ನು ತೆಗೆಯಲಿಲ್ಲ, ಆ ಕೆಲಸ ನನ್ನಿಂದ ಸಾಧ್ಯವಾಯಿತಲ್ಲ ಎಂಬ ಸಮಾಧಾನವೂ ಇದೆ.ಸಿನಿಮಾ ಬದುಕು ಸುಲಭವಲ್ಲ. ಅದನ್ನು ಅರಿತಿದ್ದ ನನ್ನ ಅಣ್ಣ ಮೈಸೂರಿನಲ್ಲಿ ನನಗೆಂದೇ ಪ್ರೀತಿಯಿಂದ ಆಟೊಮೊಬೈಲ್ ಅಂಗಡಿ ಇಟ್ಟುಕೊಟ್ಟಿದ್ದ. ತನ್ನ ತಮ್ಮ ಸಿನಿಮಾ ಮೋಹಕ್ಕೆ ಬೀಳದಿರಲಿ ಎಂಬುದು ಅವನ ಕಾಳಜಿಯಾಗಿತ್ತು. ನಾನು ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದೆ. ಶಾಲೆಯಲ್ಲಿದ್ದಾಗಲೇ `ರೆಸಿಟೆಷನ್~ ಸ್ಪರ್ಧೆಯಲ್ಲಿ ಬಹುಮಾನ ಬಾಚಿಕೊಂಡಿದ್ದೆ. `ದಲ್ಲಾಳಿ~, `ಮುತ್ತೈದೆ ಭಾಗ್ಯ~, `ಕನ್ಯಾದಾನ~ ಚಿತ್ರಗಳ ಹಾಡುಗಳನ್ನು ಹೇಳಿ ಬಹುಮಾನಗಳನ್ನು ಪಡೆದಿದ್ದೆ. `ಫ್ಯಾನ್ಸಿ ಡ್ರೆಸ್~ ಹಾಕಿಕೊಂಡಾಗಲೂ ಬಹುಮಾನ ಬಂದಿತ್ತು. ಶಾಲಾ ವೇದಿಕೆಗಳಲ್ಲಿ ಚಟುವಟಿಕೆಗಳಿದ್ದರೆ ನಾನಿರಲೇಬೇಕಿತ್ತು. ಆ ಘಟ್ಟದಲ್ಲೇ ಕಲಾ ವೇದಿಕೆಗಳಲ್ಲಿ ಕಾರ್ಯದರ್ಶಿಯಾಗಿ ನಾನು ಕೆಲಸ ಮಾಡಿದ್ದೆ.ಮನೆಯಲ್ಲಿ ಮದುವೆ, ಮುಂಜಿ ಅಂತೇನಾದರೂ ಸಮಾರಂಭಗಳು ನಡೆದರೆ ಊಟವಾದ ಮೇಲೆ ಸಂಬಂಧಿಕರೆಲ್ಲಾ `ಏ ದ್ವಾರ್ಕಿ ಒಂದು ಹಾಡು ಹಾಡೋ~, `ರಾಮಾಯಣ ಮಾಡೋ~ ಅಂತೆಲ್ಲಾ ನನ್ನನ್ನು ಕರೆಯುತ್ತಿದ್ದರು. ನಾನು ನಿಸ್ಸಂಕೋಚವಾಗಿ ಅವರು ಕೇಳಿದ ಹಾಡುಗಳನ್ನು ಹೇಳುತ್ತಿದ್ದೆ. ರಾಮಾಯಣವನ್ನು ಒಬ್ಬನೇ ಅಭಿನಯಿಸಿ ತೋರುತ್ತಿದ್ದೆ.ಚಿಕ್ಕ ವಯಸ್ಸಿನಲ್ಲಿ ನಾನು ಹೀಗೆ ಇದ್ದಿದ್ದರಿಂದ ನಮ್ಮಣ್ಣನಿಗೆ ತನ್ನ ತಮ್ಮ ಎಲ್ಲಿ ಸಿನಿಮಾ ರಂಗಕ್ಕೆ ಹೋಗಿಬಿಡುತ್ತಾನೋ ಎಂಬ ಆತಂಕವಿತ್ತು. ಸಿನಿಮಾ ಸುಲಭವಲ್ಲ. ಬಣ್ಣದ ಬದುಕು ಕಷ್ಟ. ಅದು ನೀರಿನ ಮೇಲಿನ ಗುಳ್ಳೆ ಎಂಬ ಅರಿವು ಅವನಿಗೆ ಇತ್ತು.ಬಣ್ಣ ಹಚ್ಚಿದವರೆಲ್ಲಾ ರಾಜ್‌ಕುಮಾರ್, ದಿಲೀಪ್‌ಕುಮಾರ್, ಎಂ.ಜಿ.ಆರ್ ಆಗೋಕೆ ಸಾಧ್ಯವಿಲ್ಲ. ನಾನು ಅದುಹೇಗೋ ಈ ಉದ್ಯಮದಲ್ಲಿ ಇಷ್ಟು ವರ್ಷ ಕಳೆದೆ. ಮೊನ್ನೆ ಮೊನ್ನೆ ನನ್ನ ಸೊಸೆ, `ಚಿತ್ರೋದ್ಯಮಕ್ಕೆ ಬಂದು ಐವತ್ತು ವರ್ಷ ಆಯಿತಲ್ಲಾ; ಇಲ್ಲಿ ನಿಮ್ಮ ಸಾಧನೆ ಏನು~ ಎಂದು ಪ್ರಶ್ನಿಸಿದಳು. ಒಂದು ಕ್ಷಣ ನಾನು ತಬ್ಬಿಬ್ಬಾದೆ. ನಿಜ, ನಾನು ಒಂದೈವತ್ತು ಸಿನಿಮಾ ಮಾಡಿರಬಹುದು. ಕೆಲವೊಮ್ಮೆ ಅದೇನೂ ದೊಡ್ಡದಲ್ಲ ಎನ್ನಿಸಿದೆ. ನೂರು ಸಿನಿಮಾ ಮಾಡಬೇಕಿತ್ತು ಎನ್ನಿಸಿದೆ. ನನಗೆ ನೂರೈವತ್ತು ಸಿನಿಮಾ ಮಾಡುವ ಆಸೆಯಿತ್ತು. ಅದ್ಭುತವಾದ ಸ್ಟುಡಿಯೋ ಕಟ್ಟಬೇಕೆಂಬ ಆಸೆಯಿತ್ತು. ಟೂರ್ ಮಾಡಿಕೊಂಡು ನಾಟಕಗಳನ್ನಾಡುವ ಕಂಪೆನಿ ಕಟ್ಟಬೇಕೆಂಬ ಆಸೆಯೂ ಇತ್ತು. ಇಂಥ ಹಲವಾರು ಆಸೆಗಳು ಹಾರಿಹೋದವಲ್ಲ ಎಂಬ ನೋವು ನನಗಿದೆ.ಬಂಗಲೆ ಕಟ್ಟಿದ್ದೇನೆ. ಕಾರು ಕೊಂಡಿದ್ದೇನೆ. ಅದಷ್ಟೇ ಸಾಧನೆ ಆಗುವುದಿಲ್ಲವಲ್ಲ. ನನಗೆ ಸಿಗಬೇಕಾದಷ್ಟು ಚಪ್ಪಾಳೆ ಸಿಕ್ಕಿದ್ದರೆ, ಚಿತ್ರರಂಗದ ನಾಯಕರ ಸೂಕ್ತ ಬೆಂಬಲ ಇದ್ದಿದ್ದರೆ ಇನ್ನಷ್ಟು ಅದ್ಭುತವಾದ ಸಿನಿಮಾಗಳನ್ನು ಕೊಡಬಹುದಿತ್ತು. ಸಿನಿಮಾ ಪಯಣದ ಹಾದಿಯಲ್ಲಿ ಬೇಲಿಗಳು ಸಿಕ್ಕವು. ಬಂಡೆಗಳು ಎದುರಾದವು. ಸುನಾಮಿ ಕೂಡ ಬಂತು. ಅಷ್ಟೆಲ್ಲವನ್ನೂ ಎದುರಿಸಿದ ನಂತರವೂ ಸಿನಿಮಾ ನನ್ನ ಬದುಕು ಅನ್ನೋದು ಮಾತ್ರ ಮನಸ್ಸಿನಿಂದ ಹೋಗಲೇ ಇಲ್ಲ.ಮೊನ್ನೆ ಯಾರೋ ಒಬ್ಬರು ಫೋನ್ ಮಾಡಿ, `ಉದಯ ಟೀವಿಯಲ್ಲಿ ನಿಮ್ಮದೇ ಸಿನಿಮಾಗಳನ್ನು ಹಾಕುತ್ತಿದ್ದಾರೆ. ಎಷ್ಟೆಲ್ಲಾ ಒಳ್ಳೆ ಚಿತ್ರಗಳನ್ನು ನೀವು ಮಾಡಿದ್ದೀರಿ. ಯಾವ ನಾಯಕನಟನ ಪೂರ್ಣ ಸಹಕಾರ ಇಲ್ಲದಿದ್ದರೂ ಇಷ್ಟೆಲ್ಲಾ ಮಾಡಿದ್ದೀರಲ್ಲ~ ಎಂದು ಕೇಳಿದರು. ನನಗೆ ತಕ್ಷಣಕ್ಕೆ ಹೆಮ್ಮೆ ಎನಿಸಿತು. ಆಮೇಲೆ ಸುಮ್ಮನೆ ನನ್ನಪಾಡಿಗೆ ನನ್ನನ್ನು ಬಿಟ್ಟಿದ್ದಿದ್ದರೆ ಇನ್ನಷ್ಟು ಒಳ್ಳೆ ಸಿನಿಮಾಗಳನ್ನು ತೆಗೆಯಬಹುದಿತ್ತು ಎನ್ನಿಸಿ, ಅವರಿಗೂ ಅದನ್ನೇ ಹೇಳಿದೆ. `ಗುರು ಶಿಷ್ಯರು~, `ಪ್ರಚಂಡ ಕುಳ್ಳ~, `ಭಾಗ್ಯವಂತರು~, `ಮೇಯರ್ ಮುತ್ತಣ್ಣ~ ಮೊದಲಾದ ಚಿತ್ರಗಳನ್ನು ಅವರು ಉದಾಹರಣೆಯಾಗಿ ಕೊಟ್ಟರು. ನನ್ನ ಸಿನಿಮಾ ಗ್ರಾಫ್ ಇಷ್ಟು ಚಿಕ್ಕದೇ ಅಂತಲೂ ಆಗಾಗ ಅನ್ನಿಸಿ, ಬೇಸರಪಟ್ಟುಕೊಳ್ಳುತ್ತೇನೆ.ಬೆಂಗಳೂರಿನಿಂದ ಚೆನ್ನೈಗೆ ಹೋಗಿ, ಅಲ್ಲಿಂದ ಇಲ್ಲಿಗೆ ಬಂದು, ಮತ್ತೆ ಅಲ್ಲಿಗೆ ಹೋಗಿ ತಮಿಳು ಸಿನಿಮಾ ಮಾಡಿ, ಇಲ್ಲಿ ಬಂದಮೇಲೆ ಪದೇಪದೇ ಕಷ್ಟಗಳನ್ನೆದುರಿಸಿ ಸಿನಿಮಾಗಳನ್ನು ಮಾಡಿದ ನಾನು ಫುಟ್‌ಬಾಲ್ ತರಹ ಆಗಿಬಿಟ್ಟೆನಲ್ಲ ಅಂದುಕೊಂಡಿದ್ದೇನೆ. ಕಲಾ ಸರಸ್ವತಿ ನನ್ನ ಕೈಹಿಡಿದಳು. ನನ್ನ ಜೀವನ ಸುಂದರವಾದದ್ದು. ಸಂತೋಷದ ಜೊತೆಜೊತೆಗೇ ಕಷ್ಟಗಳೂ ಬಂದೆರಗಿವೆ. ಆದರೆ, ಅವನ್ನೆಲ್ಲಾ ಮೀರಿ ಚಿತ್ರಗಳನ್ನು ಮಾಡಿದ್ದೇನೆಂದರೆ ಅದಕ್ಕೆ ಇನ್ಯಾವುದೋ ದಿವ್ಯವಾದ ಶಕ್ತಿಯೇ ಪ್ರೇರಣೆ ಎಂದು ನಾನು ನಂಬಿದ್ದೇನೆ. ಆ ಶಕ್ತಿ ನನ್ನಿಂದ ಇಷ್ಟೆಲ್ಲವನ್ನೂ ಮಾಡಿಸಿದೆ.`ಕನ್ನಿಕಾ ಪರಮೇಶ್ವರಿ~ ಚಿತ್ರದಲ್ಲಿ ನರಸಿಂಹರಾಜು ಹಿಂದೆ ನಿಂತು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದವನು ನಾನು. ಆಗ ಆ ಪಾತ್ರಕ್ಕೆ 250 ರೂಪಾಯಿ ಸಂಭಾವನೆ ಸಂದಿತ್ತು.ನಮ್ಮ ಸೋದರಮಾವ ಹುಣಸೂರು ಕೃಷ್ಣಮೂರ್ತಿಗಳು ಚಿತ್ರರಂಗದಲ್ಲಿದ್ದರು. ಹಾಗಾಗಿ ಅವರ ಗಾಳಿ ನನಗೂ ಬೀಸಿತ್ತೋ ಏನೋ. ಅವರು ನಮ್ಮ ಮನೆಗೆ ಊಟಕ್ಕೆ ಬಂದಾಗ ಹೆಚ್ಚು ತುಪ್ಪ ಬಡಿಸಿ, ಚಮಚಾ ಹಿಡಿಯುತ್ತಿದ್ದೆ. `ಸಿನಿಮಾದಲ್ಲಿ ಯಾವಾಗ ಚಾನ್ಸ್ ಕೊಡಿಸ್ತೀಯ ಮಾವ~ ಎಂದು ಅರ್ಜಿ ಹಾಕಿ, ತಲೆತಿನ್ನುತ್ತಿದ್ದೆ. ಇನ್ನೊಂದು ಕಡೆ ಅಣ್ಣನಿಗೆ ಯಾವ ಕಾರಣಕ್ಕೂ ತನ್ನ ತಮ್ಮ ಸಿನಿಮಾಗೆ ಹೋಗಕೂಡದೆಂಬ ಕಾಳಜಿ. ಕೊನೆಗೆ ದೇವರೇ ನನ್ನನ್ನು ಸಿನಿಮಾಗೆ ಕರೆದುಕೊಂಡು ಬಂದ.ಚಲನಚಿತ್ರರಂಗ ಮೊದಲಿನಿಂದಲೂ ಒಂದಾಗಿದ್ದಿದ್ದರೆ ನಾನು ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ಖಂಡಿತ ಮಾಡಲು ಸಾಧ್ಯವಾಗುತ್ತಿತ್ತು. ಇಲ್ಲಿ ಅನೇಕರು ನನ್ನ ಕಾಲೆಳೆದರು. ಆದರೂ ದೇವರು ನನ್ನಿಂದ ಇಷ್ಟೆಲ್ಲಾ ಚಿತ್ರಗಳನ್ನು ಮಾಡಿಸಿದ.ಸಿನಿಮಾಗಳಲ್ಲಿ ಕಾಣುವ ಮಾದರಿ ನಾಯಕ, ಅಣ್ಣ-ತಮ್ಮ, ಅಕ್ಕ-ತಂಗಿಯಂತೆ ಪಾತ್ರ ಹಾಕುವವರೂ ಇದ್ದುಬಿಟ್ಟರೆ ಚಿತ್ರರಂಗ ಉತ್ತುಂಗಕ್ಕೆ ಹೋಗಿರುತ್ತಿತ್ತು. ಆಗ ಮದ್ರಾಸನ್ನು, ಹೈದರಾಬಾದನ್ನು ನಾವು ಮೀರಿಸಿರುತ್ತಿದ್ದೆವೇನೋ? ಪರಭಾಷಾ ಹಾವಳಿಯನ್ನು ಹೊಡೆದುಹಾಕುತ್ತಿದ್ದೆವೇನೋ? ಈಗ ಕನ್ನಡ ಚಿತ್ರರಂಗ ವರ್ಷಕ್ಕೆ ನೂರು ನೂರಿಪ್ಪತ್ತು ಚಿತ್ರಗಳನ್ನು ಮಾಡುತ್ತಿದೆ. ಆದರೆ, ಅದರಲ್ಲಿ ಕಾಳೆಷ್ಟು, ಜೊಳ್ಳೆಷ್ಟು ಎಂದಾಗ ಆತಂಕವಾಗುತ್ತದೆ.1965ರಲ್ಲಿ ಸಿನಿಮಾ ಮಾಡಲು ಶುರು ಮಾಡಿದವನು ಇಲ್ಲಿಯವರೆಗೆ ನಾನು ಅದನ್ನು ನಿಲ್ಲಿಸಿಲ್ಲ. ಬರುವ ಆಗಸ್ಟ್‌ಗೆ ನನ್ನ ವಯಸ್ಸು 70 ದಾಟುತ್ತದೆ. ಸಿನಿಮಾಗೆ ಬಂದಾಗ ನನಗೆ ಕೇವಲ 23 ವರ್ಷ. `ಮೇಯರ್ ಮುತ್ತಣ್ಣ~ ಮಾಡಿದಾಗ ಇನ್ನೂ 27 ವರ್ಷದ ಹುಡುಗ.ನಾನು ಕೋಟ್ಯಧಿಪತಿಯ ಮಗನಲ್ಲ, ರಿಯಲ್ ಎಸ್ಟೇಟ್ ಹಿನ್ನೆಲೆಯವನಲ್ಲ, ಅಪ್ಪನ ಹಣವನ್ನೂ ನಾನು ತರಲಿಲ್ಲ. ಸೊಗಸಾಗಿ ಸ್ಕೂಟರ್ ಮೇಲೆ ಕಾಲೇಜಿಗೆ ಹೋಗುತ್ತಿದ್ದ ನಾನು ಮದ್ರಾಸ್‌ನಲ್ಲಿ ಬೋರ್‌ವೆಲ್ ಪಂಪ್ ಹೊಡೆದು ನೀರು ತುಂಬಿಸಿಕೊಂಡು ಸ್ನಾನ ಮಾಡುವ ಪರಿಸ್ಥಿತಿಗೆ ಒಗ್ಗಿಕೊಂಡೆ. ಸಿನಿಮಾ ಕುರಿತ ಹೆಬ್ಬಯಕೆಯೇ ಅದಕ್ಕೆ ಕಾರಣ.ನಾನು ಮೊದಲಿನಿಂದಲೂ ಆಸೆಗಳನ್ನು ಇಟ್ಟುಕೊಂಡು ಬದುಕಿದವನು. ಬದುಕಿನಲ್ಲಿ ಏನಾದರೂ ಸಾಧಿಸಬೇಕಾದರೆ ಇಂಥ ಆಸೆಗಳಿರಬೇಕು. ದುರಾಸೆಗಳು ಇರಬಾರದು.ಚಿತ್ರರಂಗದಲ್ಲಿ ಬಣ್ಣಹಚ್ಚಿದ ಎಷ್ಟೋ ನಾಯಕರಿಗೆ ನಿರ್ಮಾಣ ಒಲಿಯಲಿಲ್ಲ. ವಿಷ್ಣುವರ್ಧನ್ ಎರಡು ಸಿನಿಮಾ ಮಾಡಲು ಆಗಲಿಲ್ಲ. ಸೂಪರ್‌ಸ್ಟಾರ್ ರಜನೀಕಾಂತ್ `ಬಾಬಾ~ ನೆಲಕಚ್ಚಿದಾಗ ಕುಗ್ಗಿಹೋದರು. ಕಲ್ಯಾಣ್ ಕುಮಾರ್, ಬಾಲಕೃಷ್ಣ, ನರಸಿಂಹರಾಜು ಎಲ್ಲರೂ ನಿರ್ಮಾಣದಲ್ಲಿರುವ ಆತಂಕಗಳನ್ನು ಕಂಡು ಬೆದರಿದ್ದವರೇ. ಪರಿಸ್ಥಿತಿ ಹೀಗಿದ್ದರೂ ನನ್ನಿಂದ ಐವತ್ತು ಸಿನಿಮಾ ಮಾಡಲು ಸಾಧ್ಯವಾಗಿರುವುದು ನಿಜಕ್ಕೂ ಹೆಮ್ಮೆಯ ವಿಷಯ.  ಒಬ್ಬನೇ ಕೂತು ಯೋಚಿಸಿದಾಗ ನನ್ನ ಬದುಕಿನ ಬಗೆಬಗೆಯ ದೃಶ್ಯಗಳು ಬಿಚ್ಚಿಕೊಳ್ಳುತ್ತವೆ. ಅವುಗಳಲ್ಲಿ ಗುಡ್ ಸೀನ್ಸ್, ಬ್ಯಾಡ್ ಸೀನ್ಸ್, ಕಾಮಿಡಿ, ಫೈಟ್, ಥ್ರಿಲ್ ಎಲ್ಲಾ ಇದೆ. ಕನ್ನಡವಷ್ಟೇ ಅಲ್ಲದೆ ತಮಿಳಿನಲ್ಲಿ ಮೂರು, ಹಿಂದಿಯಲ್ಲಿ ಎರಡು, ತೆಲುಗಿನಲ್ಲಿ ಒಂದು ಸಿನಿಮಾ ಮಾಡಿದ ಅನುಭವ ನನ್ನದು.ಪರದೆ ಮೇಲೆ ಕಲ್ಪನೆಯ ಸಿನಿಮಾ ಮೂಡಿಸುತ್ತೇವೆ. ಎರಡೂವರೆ ಗಂಟೆ ಅದನ್ನು ಜನ ನೋಡುತ್ತಾರೆ. ಮತ್ತೆ ದೀಪಗಳೆಲ್ಲಾ ಹೊತ್ತುತ್ತವೆ. ಹೊರಗೆ ಗೇಟ್‌ಕೀಪರ್ ಗೇಟನ್ನು ಮುಚ್ಚುತ್ತಾನೆ. ಚಿತ್ರಮಂದಿರದ ಒಳಹೊಕ್ಕರೆ ಖಾಲಿಖಾಲಿ. ಸಿನಿಮಾ ಮಾಡುವವರ ಬದುಕೂ ಹೀಗೆಯೇ; ಈಗ ಭರ್ತಿಯಾಗಿರುವುದು, ಕೆಲವೇ ದಿನಗಳಲ್ಲಿ ಖಾಲಿ ಖಾಲಿ.ಸೂಪರ್‌ಸ್ಟಾರ್ ಆದವನು ಕೂಡ ಧುತ್ತೆಂದು ಕುಸಿದುಬಿಡುತ್ತಾನೆ. ನನ್ನ ಬದುಕಿನಲ್ಲೂ ಇಂಥ ಎಲ್ಲಾ ಅನುಭವಗಳೂ ಆಗಿವೆ. ಅವನ್ನೆಲ್ಲಾ ಮುಂದೆ ಒಂದೊಂದಾಗಿ ಹಂಚಿಕೊಳ್ಳುತ್ತೇನೆ.

- ಮುಂದಿನ ವಾರ: ಚಿತ್ರೋದ್ಯಮಕ್ಕೆ ನಾನು ಬಂದದ್ದು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.