ಶನಿವಾರ, ಜುಲೈ 31, 2021
28 °C
ರಾಜ್ಯಪಾಲರ ಹುದ್ದೆ ಪ್ರಸ್ತುತತೆ

ಬೇಕಾಗಿದ್ದಾರೆ ರಾಜನೀತಿ ತಜ್ಞರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಕಾಗಿದ್ದಾರೆ ರಾಜನೀತಿ ತಜ್ಞರು

ಸಂಶಯವೇ ಇಲ್ಲ, ರಾಜ್ಯಪಾಲರ ಹುದ್ದೆ ಸಂವಿಧಾನ ಕರ್ತೃಗಳ ಎಲ್ಲ ನಿರೀಕ್ಷೆಗಳನ್ನೂ ಹುಸಿಗೊಳಿಸಿದೆ. ಆ ಹುದ್ದೆಯಲ್ಲಿ ಇದ್ದವರು ಕೇಂದ್ರ ಸರ್ಕಾರದ ಏಜೆಂಟರಾಗಿ, ಆಜ್ಞಾನುವರ್ತಿಗಳಾಗಿ ನಡೆದುಕೊಳ್ಳುವುದಿಲ್ಲ ಎಂದು ನಂಬಲಾಗಿತ್ತು. ಆ ಸ್ಥಾನಕ್ಕೆ ಘನತೆಯುಳ್ಳ ಅನುಭವಿ, ಪ್ರಾಜ್ಞ, ಮೇಧಾವಿಗಳನ್ನು ನೇಮಕ ಮಾಡಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ರಾಜ್ಯಪಾಲರು ನಿಷ್ಪಕ್ಷಪಾತವಾಗಿ, ಪಕ್ಷಾತೀತವಾಗಿ ನಡೆದುಕೊಳ್ಳುವರು ಎಂಬ ಸದಾಶಯ ಹೊಂದಲಾಗಿತ್ತು.ರಾಜ್ಯಪಾಲರ ಹುದ್ದೆಯನ್ನು ಅತ್ಯಂತ ಪ್ರಬಲವಾಗಿ ಸಮರ್ಥಿಸಿದ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರಂತೂ ‘ರಾಜ್ಯಪಾಲ ಒಬ್ಬ ಸಾಂವಿಧಾನಿಕ ಶಿಶು. ಯಾವುದೇ ರೀತಿಯಿಂದ ರಾಜ್ಯದ ಆಡಳಿತದಲ್ಲಿ ಮೂಗು ತೂರಿಸುವುದಿಲ್ಲ’ ಎಂದು ಘಂಟಾಘೋಷವಾಗಿ ಹೇಳಿದ್ದರು. ಕಳೆದ 66 ವರ್ಷಗಳಲ್ಲಿ ಆ ಹುದ್ದೆಯಲ್ಲಿ ಇದ್ದವರು ನಡೆಸಿದ ಕಾರ್ಯವೈಖರಿ ಗಮನಿಸಿದರೆ ಆ ಎಲ್ಲ ನಿರೀಕ್ಷೆ– ಆಶಯಗಳು ಹುಸಿಗೊಂಡಿರುವುದು ಸ್ಪಷ್ಟ.ರಾಜ್ಯಪಾಲರ ಕಚೇರಿಯಲ್ಲಿ ರಾಜಕೀಯ, ಜಾತೀಯತೆ, ಮತಾಂಧತೆ, ಭ್ರಷ್ಟಾಚಾರ ತುಂಬಿರುವ ಕುರಿತು ಪದೇ ಪದೇ ದೂರುಗಳು ಕೇಳಿಬರುತ್ತಿವೆ. ಕೇಂದ್ರದಲ್ಲಿ ಅಧಿಕಾರ ಹೊಂದಿರುವ ಪಕ್ಷದ ಬೆಂಬಲವನ್ನು ಹೊಂದಿದ ರಾಜ್ಯಪಾಲರಂತೂ ರಾಜ್ಯ ಸರ್ಕಾರದ ಮೇಲೆ ಸವಾರಿ ಮಾಡಿ, ಆಡಳಿತದಲ್ಲಿ ಮೂಗು ತೂರಿಸಿ, ಒಂದು ರೀತಿಯ ‘ಸೂಪರ್‌ ಸರ್ಕಾರ’ದ ತರಹ ವರ್ತಿಸಿರುವ ಉದಾಹರಣೆಗಳು ಸಹ ನಮ್ಮ ಮುಂದಿವೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ನಿತೀಶ್‌ ಕುಮಾರ್‌, ಮಮತಾ ಬ್ಯಾನರ್ಜಿ ಹಾಗೂ ಅರವಿಂದ ಕೇಜ್ರಿವಾಲ್‌ ಅವರು ಎತ್ತಿರುವ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.ಮೊದಲನೆಯ ಪ್ರಶ್ನೆ: ರಾಜ್ಯಪಾಲರ ಹುದ್ದೆ ಇರಬೇಕೇ? ಕೇಂದ್ರದಲ್ಲಿ ರಾಷ್ಟ್ರಪತಿ ಇದ್ದಂತೆ ರಾಜ್ಯದಲ್ಲಿ ರಾಜ್ಯಪಾಲ ಇರಬೇಕಾಗುತ್ತದೆ. ಭಾರತದ ಸಂವಿಧಾನದಲ್ಲಿ ರಾಜ್ಯದ ಶಾಸನ ರಚನಾ ಅಧಿಕಾರ ಹಾಗೂ ನ್ಯಾಯಾಂಗದ ಅಧಿಕಾರ ಹೊರತುಪಡಿಸಿ ಇರುವ ಉಳಿದೆಲ್ಲ ಅಧಿಕಾರವನ್ನು ರಾಜ್ಯಪಾಲರು ಇಲ್ಲವೆ ಅವರ ಹೆಸರಿನಲ್ಲಿಯೇ ನಿರ್ವಹಣೆ ಮಾಡಬೇಕಾಗುತ್ತದೆ. ಇದು ಸಂವಿಧಾನ ಒಪ್ಪಿಕೊಂಡ ಕ್ರಮವಾಗಿದೆ.ರಾಜ್ಯಪಾಲರು ಸ್ವಂತ ವಿವೇಚನೆಯಂತೆ ಕಾರ್ಯ ನಿರ್ವಹಿಸಲು ಇರುವ ಅವಕಾಶ ಕಡಿಮೆ. ಸಾಧಾರಣವಾಗಿ ಅವರು ಸಚಿವ ಸಂಪುಟದ ಸಲಹೆ–ಸೂಚನೆ ಮೇರೆಗೆ ಕೆಲಸ ಮಾಡಬೇಕಾಗುತ್ತದೆ (ಕಲಂ 163). ಆದಾಗ್ಯೂ ಕೆಲ ವಿಷಯಗಳಲ್ಲಿ ಅವರು ಸ್ವಂತ ವಿವೇಚನೆ ಬಳಸುವ ಅಧಿಕಾರ ಇದೆ (ಉದಾಹರಣೆಗೆ ಮುಖ್ಯಮಂತ್ರಿಯನ್ನಾಗಿ ಯಾರನ್ನು ಮಾಡಬೇಕು ಹಾಗೂ ಸಚಿವ ಸಂಪುಟ ವಿಶ್ವಾಸ ಕಳೆದುಕೊಂಡಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಅನುಸರಿಸುವ ಮಾರ್ಗ ಮತ್ತು ವಿಧಾನ). ಉಳಿದಂತೆ ಸ್ವಂತ ವಿವೇಚನೆ ಬಳಸುವಂತಿಲ್ಲ. ಆಡಳಿತದಲ್ಲಿ ಸಚಿವ ಸಂಪುಟದ ಸಲಹೆಗಳ ಮೇಲೆ ಮೇಲ್ಮನವಿ ಪ್ರಾಧಿಕಾರವಾಗಿ ನಡೆದುಕೊಳ್ಳುವಂತಿಲ್ಲ.ಕರ್ನಾಟಕದ ಇತ್ತೀಚಿನ ಅನುಭವವನ್ನೇ ತೆಗೆದುಕೊಂಡರೆ ಈ ಎಲ್ಲ ನಿರೀಕ್ಷೆಗಳು ಹುಸಿಯಾಗಿ, ಆಶಯಗಳು ಮೂಲೆಗುಂಪಾಗಿವೆ. ಸಂಪುಟದ ಸಲಹೆಗಳನ್ನು ಸಂವಿಧಾನಕ್ಕೆ ವಿರುದ್ಧವಾಗಿ ತಿರಸ್ಕರಿಸಲಾಗಿದೆ.ಇನ್ನು ಕಲಂ 155ಕ್ಕೆ (ರಾಜ್ಯಪಾಲರ ನೇಮಕಾತಿ) ಬದಲಾವಣೆ ತರಬೇಕೇ ಎನ್ನುವ ಎರಡನೆಯ ಪ್ರಶ್ನೆಗೆ ಬರೋಣ. ಕೇಂದ್ರ ಸಚಿವ ಸಂಪುಟದ ಸಲಹೆ ಮೇರೆಗೆ ರಾಷ್ಟ್ರಪತಿಯು ರಾಜ್ಯಪಾಲರ ನೇಮಕ ಮಾಡಬೇಕು ಎಂದು ಈ ಕಲಂನಲ್ಲಿ ಸೂಚಿಸಲಾಗಿದೆ. ರಾಜ್ಯಪಾಲರ ನೇಮಕಕ್ಕೆ ಇರುವ ಈ ನಿರಂಕುಶ ಅಧಿಕಾರ ತೀವ್ರ ದುರ್ಬಳಕೆಗೆ ಒಳಗಾಗಿ ಅತೃಪ್ತ ರಾಜಕಾರಣಿಗಳನ್ನು ಸಮಾಧಾನಪಡಿಸಲೋ ಅಥವಾ ಮಂತ್ರಿ ಪದವಿಯಿಂದ ಹೊರಹೋಗಬೇಕಿರುವ ಸಕ್ರಿಯ ರಾಜಕಾರಣಿಗಳಿಗೆ ಪುನರ್ವಸತಿ ಕಲ್ಪಿಸಲೋ ಈ ಹುದ್ದೆಯನ್ನು ಪದೇ ಪದೇ ಬಳಕೆ ಮಾಡಲಾಗಿದೆ. ಈ ದುರುಪಯೋಗವೇ ರಾಜ್ಯಪಾಲರ ಹುದ್ದೆ ತನ್ನ ಘನತೆ ಕಳೆದುಕೊಳ್ಳಲು ಕಾರಣವಾಗಿದೆ. ಆದ್ದರಿಂದ ಈಗಿರುವ ನಿರಂಕುಶ ಅಧಿಕಾರಕ್ಕೆ ಬದಲಾಗಿ ಪ್ರಜಾಸತ್ತಾತ್ಮಕವಾಗಿ ರಾಜ್ಯಪಾಲರನ್ನು ಆಯ್ಕೆ ಮಾಡುವುದು ಉಚಿತವಾಗಿದೆ.ಈ ದೋಷ ಸರಿಪಡಿಸಿದರೆ ರಾಜ್ಯಪಾಲರು ರಾಜ್ಯ ಸರ್ಕಾರದ ವಿರೋಧಿಯಾಗುವ ಬದಲು ಅದರ ರಕ್ಷಕರಾಗಿ, ಮಾರ್ಗದರ್ಶಿಯಾಗಿ, ಸಂವಿಧಾನಾತ್ಮಕವಾಗಿ ನಡೆದುಕೊಳ್ಳಬಹುದು. ಎಲ್ಲಕ್ಕಿಂತ ಹೆಚ್ಚಾಗಿ ರಾಜ್ಯ ಆಡಳಿತದ ಸಾಂವಿಧಾನಿಕ ಹಾಗೂ ಆಲಂಕಾರಿಕ ನೇತೃತ್ವವನ್ನು ವಹಿಸಿಕೊಳ್ಳುವ ರಾಜನೀತಿ ತಜ್ಞ ಆಗಬಹುದು. ಎಲ್ಲಿಯವರೆಗೆ ಅನಿರ್ಬಂಧಿತ ನೇಮಕ ಅಧಿಕಾರ ಇರುವುದೋ ಅಲ್ಲಿಯವರೆಗೆ ಅಧಿಕಾರದ ದುರುಪಯೋಗವನ್ನು ತಡೆಯಲು ಸಾಧ್ಯವಿಲ್ಲ. ಈ ದೋಷವನ್ನು ಸರಿಪಡಿಸಲು ಉತ್ತಮ ಮಾರ್ಗವೆಂದರೆ ರಾಜ್ಯಪಾಲರನ್ನು ನೇಮಕ ಮಾಡುವ ಬದಲು ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡುವುದು. ಈ ಆಯ್ಕೆ ಮಾಡಲು ಒಂದು ವಿಶೇಷವಾದ ಮತದಾನದ ಕೂಟವನ್ನು ರಚಿಸಬಹುದು. ಉದಾಹರಣೆಗೆ ಎಲ್ಲ ನೇರ ಚುನಾವಣೆಗಳ ಮೂಲಕ ಬಂದ ಶಾಸಕರು, ಲೋಕಸಭಾ ಸದಸ್ಯರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಮೇಯರ್‌ಗಳು, ಪೌರಾಡಳಿತ ಸಂಸ್ಥೆಗಳ  ಅಧ್ಯಕ್ಷರು ಇಂತಹ ಮತದಾನದ ಕೂಟದಲ್ಲಿ ಇರಬಹುದು. ಯಾರ ಮತಗಳಿಗೆ ಎಷ್ಟು ಮೌಲ್ಯ ಇರಬೇಕು ಹಾಗೂ ಮತದಾನದ ಸ್ವರೂಪ ಹೇಗಿರಬೇಕು ಎಂಬ ವಿವರವನ್ನು ಚರ್ಚೆಯ ಮೂಲಕ ಸ್ಪಷ್ಟಪಡಿಸಿಕೊಳ್ಳಬಹುದು.ರಾಜ್ಯಪಾಲರ ಅಧಿಕಾರಾವಧಿ ಪ್ರಶ್ನೆಯೂ ಈಗ ಮುನ್ನೆಲೆಗೆ ಬಂದಿದೆ. 156 (1)ನೇ ಕಲಂನ ಪ್ರಕಾರ, ರಾಷ್ಟ್ರಪತಿಯ ವಿಶ್ವಾಸ ಇರುವವರೆಗೆ ಮಾತ್ರ ರಾಜ್ಯಪಾಲರು ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯ. ಈ ಕಲಂ ಅನ್ನು ತೆಗೆದುಹಾಕಬೇಕು. ಬದಲಾಗಿ ವಾಗ್ದಂಡನೆ ವಿಧಿಸಿ ಕೆಳಗೆ ಇಳಿಸುವ ಅಧಿಕಾರ (ರಾಷ್ಟ್ರಪತಿಯನ್ನು  ವಜಾಗೊಳಿಸುವ ಮಾದರಿ) ಅಥವಾ ಬೇಡವೆಂದಾಗ ಹಿಂದಕ್ಕೆ ಕರೆಸುವ ಅಧಿಕಾರವನ್ನು ಮತದಾನದ ಕೂಟ ಅಥವಾ ವಿಧಾನಮಂಡಲಕ್ಕೆ ನೀಡಬಹುದು.ರಾಜ್ಯಪಾಲರ ಅಧಿಕಾರ ವ್ಯಾಪ್ತಿಯ ಪ್ರಶ್ನೆಯೂ ಮತ್ತೆ ಮತ್ತೆ ಚರ್ಚೆಗೆ ಒಳಗಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಒಂದು ಸಮತೋಲನ ಕಾಪಾಡಿಕೊಂಡು ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ರಾಜ್ಯಪಾಲರ ಕರ್ತವ್ಯ. ಆದ್ದರಿಂದಲೇ ಹೇಳುವುದು ಕೇಂದ್ರ ಸರ್ಕಾರಕ್ಕೆ ನೀಡಿರುವ ಆ ಹುದ್ದೆಯ ನೇಮಕದ ಅಧಿಕಾರದಿಂದ ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು. ಆಡಳಿತ ವಿಕೇಂದ್ರೀಕರಣವನ್ನು ಹೆಚ್ಚು ಸತ್ವಶಾಲಿಯಾಗಿ ಮಾಡಲು ಕೇಂದ್ರ ಸರ್ಕಾರಕ್ಕೆ ಸದ್ಯ ನೀಡಲಾಗಿರುವ ರಾಜ್ಯಪಾಲರ ನೇಮಕಾತಿ ಮತ್ತು ವಜಾ ಅಧಿಕಾರವನ್ನು ಮೊಟಕುಗೊಳಿಸುವ ಜತೆ ಜತೆಗೆ ರಾಜ್ಯಪಾಲರಿಗೆ ಈಗಿರುವ ಅಧಿಕಾರ ಮತ್ತು ವಿವೇಚನೆಗಿಂತ ಹೆಚ್ಚಿನ ಅಧಿಕಾರವನ್ನು ಕೊಡಬಾರದು. ಇಲ್ಲದಿದ್ದರೆ ಅವರೇ ಶಕ್ತಿಕೇಂದ್ರವಾಗಿ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ದಿನನಿತ್ಯ ಜಟಾಪಟಿ ನಡೆಯುವ ವಾತಾವರಣ ಸೃಷ್ಟಿಯಾಗುತ್ತದೆ.ಅರುಣಾಚಲ ಪ್ರದೇಶ ರಾಜ್ಯಪಾಲರ ಸಂವಿಧಾನಬಾಹಿರ ನಡವಳಿಕೆ ಮತ್ತು ಈ ಹಿಂದೆ ಬಿಹಾರ ವಿಧಾನಸಭೆಯನ್ನು ವಿಸರ್ಜಿಸುವಲ್ಲಿ ಆಗಿನ ರಾಜ್ಯಪಾಲರು ತೋರಿಸಿದ ಆತುರ ಹಾಗೂ ಕರ್ತವ್ಯ ಲೋಪಗಳು ಸುಪ್ರೀಂ ಕೋರ್ಟ್‌ನಲ್ಲಿ ತೀವ್ರ ವಾಗ್ದಂಡನೆಗೆ ಗುರಿಯಾಗಿವೆ. ಇಂತಹ ತೀರ್ಪುಗಳು ಬಂದಾಗ ಕೇಂದ್ರ ಸರ್ಕಾರ ನಡೆದುಕೊಳ್ಳಬೇಕಾದ ಕನಿಷ್ಠ ನೈತಿಕ ಮಾದರಿ ಎಂದರೆ ಅಂತಹ ರಾಜ್ಯಪಾಲರನ್ನು ತಕ್ಷಣ ವಜಾ ಮಾಡಿ, ಹೊಸಬರನ್ನು ನೇಮಕ ಮಾಡುವುದು. ಸಕ್ರಿಯ ರಾಜಕಾರಣ ಅಥವಾ ಕೇಂದ್ರ, ರಾಜ್ಯ ಸರ್ಕಾರ ಇಲ್ಲವೆ ನ್ಯಾಯಾಂಗದ ಹುದ್ದೆಗಳಲ್ಲಿ ಇದ್ದವರನ್ನು ರಾಜ್ಯಪಾಲರ ಹುದ್ದೆಗೆ ಪರಿಗಣಿಸಬಾರದು.ಅದರಲ್ಲೂ ನ್ಯಾಯಮೂರ್ತಿಗಳನ್ನು ನೇಮಕ ಮಾಡುವುದು ನ್ಯಾಯಾಂಗದ ಕಾರ್ಯತತ್ಪರತೆ, ನಿಷ್ಪಕ್ಷಪಾತತೆ ಹಾಗೂ ಪಕ್ಷಾತೀತ ಗುಣಗಳಿಗೆ ಮಾರಕವಾಗುವುದು. ನ್ಯಾಯಮೂರ್ತಿ ಆದವರು ರಾಜ್ಯಪಾಲರ ಹುದ್ದೆಯ ಹಿಂದೆ ಬಿದ್ದರೆ ನ್ಯಾಯಾಂಗವು ಕಾರ್ಯಾಂಗದ ಅಡಿಯಾಳು ಆಗುವುದರಲ್ಲಿ ಸಂಶಯವಿಲ್ಲ.ಕೊನೆಯದಾಗಿ 356ನೇ ಕಲಂನ ಪ್ರಶ್ನೆ. ಭಾರತದ ಸಂವಿಧಾನ ಸದೃಢವಾಗಿ ಕಟ್ಟಿರುವ, ಸಮತೋಲನ ಸಾಧಿಸಿ ರಚಿಸಿರುವ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವುದೇ ರಾಜ್ಯಪಾಲರ ಹುದ್ದೆಯ ಈಗಿನ ಸ್ವರೂಪ. ಕೇಂದ್ರದಲ್ಲಿ ಆಡಳಿತ ನಡೆಸಿರುವ ಎಲ್ಲ ಪಕ್ಷಗಳು ಈ ಹುದ್ದೆಯ ದುರುಪಯೋಗ ಮಾಡಿಕೊಂಡು ಗಂಭೀರವಾದ ಅಪಚಾರ ಎಸಗಿವೆ. 356ನೇ ಕಲಂನ ಅಧಿಕಾರ ಚಲಾಯಿಸುವ ಮೂಲಕ ರಾಜ್ಯಗಳಲ್ಲಿರುವ ಬೇರೆ ಪಕ್ಷಗಳ ಸರ್ಕಾರಗಳ ಮೇಲಷ್ಟೇ ರಾಷ್ಟ್ರಪತಿ ಆಡಳಿತದ ಅಸ್ತ್ರ ಪ್ರಯೋಗಿಸಿದ ಗುಟ್ಟೇನು? ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವೇ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರದ ಮೇಲೇಕೆ ಈ ಗದಾಪ್ರಹಾರ ನಡೆಯಲಿಲ್ಲ? 356ನೇ ಕಲಂ ನೀಡಿರುವ ಅಧಿಕಾರ ಇದುವರೆಗೆ ನೂರು ಬಾರಿ ಪ್ರಯೋಗ ಆಗಿರುವುದು, ರಾಜ್ಯಪಾಲರ ಹುದ್ದೆಯನ್ನು ಕೇಂದ್ರದಲ್ಲಿರುವ ಸರ್ಕಾರ ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಸಾಕ್ಷಿ.ಭಾರತದ ಸಂವಿಧಾನ ಬಹುತೇಕ ಇಂಗ್ಲೆಂಡ್‌ ಪ್ರಜಾತಂತ್ರವನ್ನು ಅಳವಡಿಸಿಕೊಂಡಿದೆ. ಬ್ರಿಟನ್ನಿನಲ್ಲಿರುವ ವ್ಯವಸ್ಥೆ ಸುಮಾರು 700 ವರ್ಷಗಳ ಇತಿಹಾಸ ಹೊಂದಿದೆ. ಅಲ್ಲಿನ ಸಮಾಜ ಈ ಪ್ರಜಾತಂತ್ರವನ್ನು ಹೆಜ್ಜೆ ಹೆಜ್ಜೆಗೂ ಶ್ರೀಮಂತಗೊಳಿಸುತ್ತಾ ಹೊರಟಿದೆ. ಅಂತಹ ಪ್ರಜಾತಂತ್ರವನ್ನು ನಮ್ಮ ಸಂವಿಧಾನ ಈ ನೆಲದಲ್ಲಿ ನಾಟಿ ಮಾಡಿದೆ. ಭಾರತದಲ್ಲಿರುವ ವೈವಿಧ್ಯ ಇಂಗ್ಲೆಂಡ್‌ನಲ್ಲಿಲ್ಲ. ಆ ದೇಶದಲ್ಲಿ ಇವತ್ತಿನ ಬಹುಮತ ನಾಳಿನ ಅಲ್ಪಮತ ಆಗಬಹುದು. ಆದರೆ, ಭಾರತದಲ್ಲಿ ಭಾಷೆ ಆಧಾರದ ಮೇಲೆ ಚುನಾವಣೆ ಮಾಡಿದರೆ ಸರ್ವಕಾಲಕ್ಕೂ ಒಂದೇ ಬಹುಮತ ಇರುತ್ತದೆ. ಅದಕ್ಕಿಂತ ಮುಖ್ಯವಾಗಿ ರಾಜಕಾರಣದಲ್ಲಿ ಧರ್ಮ ಬೆರೆತರೆ ಹಿಂದೂ ಬಹುಮತ ಯಾವಕಾಲಕ್ಕೂ ಮುಂದುವರಿದು ಪ್ರಜಾತಂತ್ರಕ್ಕೆ ಮಾರಕವಾಗುತ್ತದೆ. 300 ಭಾಷೆಗಳು, ಒಂಬತ್ತು ಧರ್ಮಗಳು, 5000 ಜಾತಿಗಳು ಭಾರತದ ವೈವಿಧ್ಯವನ್ನು ಶ್ರೀಮಂತಗೊಳಿಸಿವೆ.ಭಾರತದ ಶಕ್ತಿ ಇರುವುದು ಈ ವೈವಿಧ್ಯದಲ್ಲಿ. ಆದ್ದರಿಂದಲೇ ಹೇಳುವುದು, ಉತ್ತರದ ಕಾಶ್ಮೀರ, ಪೂರ್ವದ ಅರುಣಾಚಲ ಪ್ರದೇಶದಲ್ಲಿ ಉದ್ಭವಿಸಿದಂತಹ ಸಮಸ್ಯೆಗಳಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗಬಾರದು. ರಾಷ್ಟ್ರಪತಿ ಆಡಳಿತ ಹೇರುವಲ್ಲಿ ಅನುಸರಿಸುವ ವಿಧಾನ ಹಾಗೂ ಆತುರ ಈಗಾಗಲೇ ಗಡಿ ರಾಜ್ಯಗಳಲ್ಲೂ ಅಸಮಾಧಾನ ಉಂಟುಮಾಡಿದೆ.ಆಡಳಿತ ವಿಕೇಂದ್ರೀಕರಣದ ಮೂಲಕ ರಾಜ್ಯಗಳ ಸ್ವಾಯತ್ತತೆ ಕಾಪಾಡಿ, ಒಕ್ಕೂಟ ವ್ಯವಸ್ಥೆಯನ್ನು ಇನ್ನೂ ಬಲಯುತವಾಗಿ ಕಟ್ಟಲು ರಾಜ್ಯಪಾಲರ ನೇಮಕಾತಿ ಪ್ರಕ್ರಿಯೆಗೆ ಅಗತ್ಯ ಮಾರ್ಪಾಡು ತರುವುದು ತುರ್ತು ಅಗತ್ಯವಾಗಿದೆ. ಇದು ಏಳು ದಶಕಗಳ ಆಡಳಿತದಲ್ಲಿ ಸ್ಪಷ್ಟವಾಗಿ ಗೋಚರಿಸಿರುವ ಎಚ್ಚರಿಕೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.