ಶುಕ್ರವಾರ, ಮೇ 14, 2021
31 °C

ಬೇಡಿಕೆ ಈಡೇರಿಕೆಗಾಗಿ ಕಾರ್ಮಿಕರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ನೇತೃತ್ವದಲ್ಲಿ ಅಸಂಘಟಿತ ಕಾರ್ಮಿಕರು ಶುಕ್ರವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕುಶಲತೆ ಆಧಾರದ ಮೇಲೆ ಕನಿಷ್ಟ ವೇತನವನ್ನು ಜಾರಿಗೆ ತರಬೇಕು. ಬಿಪಿಎಲ್, ಎಪಿಎಲ್ ಎಂಬ ವ್ಯತ್ಯಾಸವಿಲ್ಲದೇ ಎಲ್ಲ ಕುಟುಂಬಗಳಿಗೆ ಕನಿಷ್ಟ ಆಹಾರ ಧಾನ್ಯವನ್ನು ನೀಡುವ ವ್ಯವಸ್ಥೆ ಜಾರಿಗೆ ತರಬೇಕು. ರಾಜ್ಯದ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚಿಸಲು ಹಾಗೂ ಸೂಕ್ತ ಶಿಫಾರಸ್ಸುಗಳನ್ನು ಸರ್ಕಾರಕ್ಕೆ ಸಲ್ಲಿಸಲು ಪ್ರತಿ ವರ್ಷ ರಾಜ್ಯ ಕಾರ್ಮಿಕರ ಸಮ್ಮೇಳನವನ್ನು ನಡೆಬೇಕು ಎಂದು ಮನವಿಯಲ್ಲಿ ಒತಾಯಿಸಲಾಗಿದೆ.ಅಸಂಘಟಿತ ಕಾರ್ಮಿಕರಿಗೆ ಜನಶ್ರೀ ಬಿಮಾ ಯೋಜನೆ ಮತ್ತು ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಗಳನ್ನು ಅನ್ವಯಿಸುವ ಜವಾಬ್ದಾರಿಯನ್ನು ಕಾರ್ಮಿಕ ಇಲಾಖೆಗೆ ವಹಿಸಬೇಕು. ಎಲ್ಲ ಕಾರ್ಮಿಕರಿಗೆ ನಿವೇಶನ ಮತ್ತು ವಸತಿಯನ್ನು ಉಚಿತವಾಗಿ ನೀಡಬೇಕು.ಬಿಸಿಯೂಟ, ಅಂಗನವಾಡಿ ಹಾಗೂ ಆಶಾ ನೌಕರರಿಗೆ ಕೆಲಸದ ಭದ್ರತೆ ಒದಗಿಸಬೇಕು. ಕಾರ್ಮಿಕರಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಗೆ ವಹಿಸಿರುವ ಜವಾಬ್ದಾರಿಯನ್ನು ಬದಲಾಯಿಸಿ ಕಾರ್ಮಿಕ ಇಲಾಖೆಗೆ ನೀಡಬೇಕು. 45ನೇ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನ ಪ್ರಕಾರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಿ ಅವರನ್ನು ಕಾಯಂಗೊಳಿಸಬೇಕು. ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕು ಎಂದು ಕಾರ್ಮಿಕರು ಒತ್ತಾಯಿಸಿದ್ದಾರೆ.ಶಂಕರಗೌಡ ದೇಸಾಯಿ, ವಿ.ಎಸ್.ಜಮುನಾಳ, ಪ್ರವೀಣ ಬಡಿಗೇರ, ಸಂಧ್ಯಾ ಕುಲಕರ್ಣಿ, ಎಸ್.ಕೆ.ಪಾಟೀಲ, ಸುನಂದಾ ತಲ್ಲೂರ, ಗೀತಾ ಹರ್ವಿ, ರೂಪಾ ಘಸ್ತಿ ಮತ್ತಿತರರು ಹಾಜರಿದ್ದರು.ಕಾರ್ಮಿಕರ ವೆುರವಣಿಗೆ

ಚಿಕ್ಕೋಡಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಸಂಯೋಜಿತ ವಿವಿಧ ಸಂಘಟನೆಗಳ ಸದಸ್ಯರು ಶುಕ್ರವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ ರಾಜಶೇಖರ ಡಂಬಳ ಸೇರಿದಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಸಿಐಟಿಯು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೈಬು ಜೈನೇಖಾನ್, ಗ್ರಾಮ ಪಂಚಾಯ್ತಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ಎ.ಬಬಗೌಡ ಅವರ ಮುಂದಾಳತ್ವದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಹಾಗೂ ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ಚಿಕ್ಕೋಡಿ ತಾಲ್ಲೂಕು ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರತಿಭಟನೆಯಲ್ಲಿ  ಘೋಷಣೆಗಳನ್ನು ಕೂಗಿ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಿದರು.ಗ್ರಾಮ ಪಂಚಾಯ್ತಿ ನೌಕರರ ವೇತನಕ್ಕಾಗಿ ಪ್ರತ್ಯೇಕ ಅನುದಾನ ನೀಡಬೇಕು, ಗ್ರಾ.ಪಂ. ನೌಕರರ ಕೆಲಸ ಕಾಯಂಗೊಳಿಸಬೇಕು, ಅಂಗನವಾಡಿ ನೌಕರರಿಗೆ ರೂ 10 ಸಾವಿರ ಕನಿಷ್ಠ ವೇತನ ನಿಗದಿಯಾಗಬೇಕು, ಅಂಗನವಾಡಿ ಕೇಂದ್ರಗಳ ಖಾಸಗೀಕರಣ ಮಾಡಬಾರದು, ಅಂಗನವಾಡಿ ಕಟ್ಟಡಗಳ ಬಾಡಿಗೆ ಹಣವನ್ನು ಸಕಾಲದಲ್ಲಿ ಒದಗಿಸಬೇಕು, ಅಂಗನವಾಡಿ ನೌಕರರಿಗೆ ನಿವೇಶನ ನೀಡಬೇಕು, ಅಕ್ಷರದಾಸೋಹ ನೌಕರರಿಗೆ ಶಾಲೆಗಳಲ್ಲಿ ಎಸ್‌ಡಿಎಂಸಿ ಆಡಳಿತ ಮಂಡಳಿ ಕಿರುಕುಳ ತಪ್ಪಿಸಬೇಕು, ಅಕ್ಟೋಬರ್ ರಜೆಯ ಸಂಬಳ ಸಿಗುವಂತಾಗಬೇಕು.ಅಕ್ಷರದಾಸೋಹ ಯೋಜನೆ ಖಾಸಗೀಕರಣ ಮಾಡಬಾರದು,  ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗಾಗಿ ಖಾಸಗೀಕರಣದ ನೀತಿ ಹಾಗೂ ಗುತ್ತಿಗೆಯನ್ನು ಕೈಬಿಡಬೇಕು, ಕಾರ್ಯಕರ್ತೆಯರಿಗೆ ಮೆಡಿಕಲ್ ಕಿಟ್ ವಿತರಿಸಬೇಕು. ಆಸ್ಪತ್ರೆಗಳಲ್ಲಿ ಅಧಿಕಾರಿಗಳ ಕಿರುಕುಳ ತಪ್ಪಿಸಬೇಕು ಮೊದಲಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಸಂಘಟನೆಯ ಪದಾಧಿಕಾರಿಗಳಾದ ಎಸ್.ಬಿ. ಘಾಟಗೆ, ಗುರವ್ವಾ ಮಡಿವಾಳ, ಮೀನಾಕ್ಷಿ ಜಾಧವ, ಎಸ್.ಆರ್. ಉರಣೆ, ಚಂದ್ರಕಾಂತ ಹಲಗಲಿ  ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.