ಭಾನುವಾರ, ಮಾರ್ಚ್ 26, 2023
31 °C

ಬೇವಿನಮಟ್ಟಿ ಕೆರೆ ಹೂಳು ಖಾಲಿ: ರೈತರ ಶ್ರಮಕ್ಕೆ ಸಾಕ್ಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇವಿನಮಟ್ಟಿ ಕೆರೆ ಹೂಳು ಖಾಲಿ: ರೈತರ ಶ್ರಮಕ್ಕೆ ಸಾಕ್ಷಿ

ಹುನಗುಂದ: ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಕೈಕೊಟ್ಟ ಪರಿಣಾಮವಾಗಿ ಬರಗಾಲ ತಾಂಡವ ವಾಡುತ್ತಿದೆ. ಯಾವುದೇ ಬಿತ್ತನೆಯಾಗಿಲ್ಲ. ಸರ್ಕಾರ ಈಗಾಗಲೇ ಬರಗಾಲ ಎಂದು ಘೋಷಣೆಯನ್ನು ಮಾಡಿದೆ. ಕೃಷಿ ಸಾಲ ಮನ್ನಾ ಮಾಡಿದೆ. ತಾಲ್ಲೂಕಿನ ಬರಗಾಲ ನಿರ್ವಹಣೆಗೆ ಅನುದಾನ ನೀಡಿದೆ ಎನ್ನಲಾಗಿದೆ. ಆದರೆ ಈ ಯಾವುದನ್ನೂ ನೋಡದೇ ಬೇವಿನಮಟ್ಟಿ ಮತ್ತು ಸುತ್ತಲಿನ ರೈತರು ತಾವೇ ಮುಂದಾಗಿ ಕೆರೆಯ ಹೂಳನ್ನು ತೆಗೆಯುತ್ತಿರುವುದು ಗಮನ ಸೆಳೆದಿದೆ.



ಸುಮಾರು ಅರ್ಧ ಶತಮಾನದ ಹಿನ್ನೆಲೆಯುಳ್ಳ ಈ ಕೆರೆ 28 ಎಕರೆ ಪ್ರದೇಶವನ್ನು ಹೊಂದಿದೆ. ತನ್ನ ಸುತ್ತಲಿನ ಬೇವಿನಮಟ್ಟಿ, ಹೊನ್ನರಹಳ್ಳಿ, ಯರನಕೇರಿ ಮತ್ತು ಹಿರೆಯರನಕೇರಿ ಗ್ರಾಮಗಳ ಜನರು ಮತ್ತು ದನಕರುಗಳಿಗೆ ಸಂಜೀವಿನಿ ಯಾಗಿದೆ.



ನಾಲ್ಕು ವರ್ಷಗಳಿಂದ ಈ ಕೆರೆ ಬತ್ತಿತ್ತು. ಸಾಕಷ್ಟು ಹೂಳು ತುಂಬಿತ್ತು. ಸರ್ಕಾರದ ಅನುದಾನಕ್ಕಾಗಿ ಕಾಯ್ದರು. ಪ್ರಯೋಜ ನಾವಾಗಲಿಲ್ಲ. ಕೊನೆಗೆ ತಾವೇ ಮುಂದಾಗಿ ಕಳೆದ ಮೂರು ತಿಂಗಳಿಂದ ಸುಮಾರು 10 ಅಡಿ ಹೂಳು ತೆಗೆದಿದ್ದಾರೆ.



ರೈತರು ತಮ್ಮ ಟ್ರ್ಯಾಕ್ಟರ್ ತಂದು ಕೆರೆಯಲ್ಲಿನ ಫಲವತ್ತಾದ ಹೂಳು ಮಣ್ಣನ್ನು ತಮ್ಮ ಹೊಲಗಳಿಗೆ ಹಾಕಿಕೊಂಡಿದ್ದಾರೆ. ಇದರಿಂದ ಅತ್ತ ಕೆರೆ ಖಾಲಿ ಇತ್ತ ಹೊಲಕ್ಕೆ ಫಲವತ್ತಾದ ಮಣ್ಣು ಬಿದ್ದಂತಾಗಿದೆ.



ಶುಕ್ರವಾರ ಕೆರೆಗೆ ಭೇಟಿ ನೀಡಿದ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಡಾ.ಎಂ.ಪಿ.ನಾಡಗೌಡ ರೈತರ ಕಾರ್ಯವನ್ನು ಮೆಚ್ಚಿಕೊಂಡು ಮಾತನಾಡಿ, 2005ರಲ್ಲಿ ತಮ್ಮ ಶಾಸಕರ ಅನುದಾನದಲ್ಲಿ ರೂ. 15 ಲಕ್ಷ ನೆರವು ಕೊಟ್ಟಿದ್ದೆ. ಆಗೊಮ್ಮೆ ಒಂದಿಷ್ಟು ಹೂಳು ತೆಗೆದಿದ್ದರು. ಮತ್ತೆ ಆ ಕಾರ್ಯ ನಡೆದಿರಲಿಲ್ಲ. ರೈತರು ಸಂಘಟಿತರಾಗಿ ಮುಂದಾದರೆ ಏನೆಲ್ಲ  ಮಾಡಬಹುದು ಎನ್ನಲು ಈ ಕಾರ್ಯ ಸಾಕ್ಷಿ ಎಂದರು.



`ನಮ್ಮ ಜನಕ್ಕೆ ದೇವಸ್ಥಾನ ಮತ್ತು ಇತರ ಧಾರ್ಮಿಕ ಕಟ್ಟಡ    ಕಟ್ಟುವಲ್ಲಿರುವ    ಶ್ರದ್ಧೆ ತಮ್ಮ ಹೊಲ ಮತ್ತು ಮನೆಗಳ ನಿರ್ಮಾಣದಲ್ಲಿ ತೋರದಿರುವುದು ವಿಷಾದಪಡುವ ಸಂಗತಿ ಎಂದು ಹೇಳಿದರು.



ಹಳ್ಳಿಗಾಡಿನ ಜನರು ಸಾಂಪ್ರದಾಯಿಕ ಕೃಷಿ ಯೊಂದಿಗೆ ಆಧುನಿಕ ತಂತ್ರಜ್ಞಾನವನ್ನೂ ಬಳಸಿಕೊಂಡು ಉನ್ನತಿಯನ್ನು ಸಾಧಿಸಬೇಕು. ತಮ್ಮ ಮಕ್ಕಳು ಕೆಲವರಾದರೂ ಕೃಷಿಯತ್ತ ವಾಲುವಂತೆ     ಮಾಡಿದರೆ ಭವಿಷ್ಯದಲ್ಲಿ ಕೃಷಿಯಲ್ಲಿ ಪ್ರಗತಿಯನ್ನು ಸಾಧಿಸಬಹುದು ಎಂದರು.



ಗ್ರಾಮದ ಹಿರಿಯರಾದ ನಿಂಗನಗೌಡ ಗೌಡಪ್ಪನವರ ಮತ್ತು ಯಲ್ಲನಗೌಡ ನಡುವಿನಮನಿ ಪ್ರತಿಕ್ರಿಯಿಸಿ, `ಈ ಭಾಗದ ದೊಡ್ಡ ಕೆರೆಯಾದ ಇದನ್ನು ನಾವೆಲ್ಲ ಒಗ್ಗೂಡಿ ಹೂಳು ತೆಗೆದಿದ್ದೇವೆ. ಇದರಿಂದ ಅಂತರ್ಜಲ ವೃದ್ಧಿಗೂ ಸಹಾಯವಾಗುತ್ತದೆ. ಬರುವ ದಿನಗಳಲ್ಲೂ ಸಂಪೂರ್ಣ ಹೂಳು ತೆಗೆದು ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತೇವೆ~ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.