ಶುಕ್ರವಾರ, ಮೇ 20, 2022
18 °C

ಬ್ಯಾಂಕಾಕ್‌ನಲ್ಲಿ ಶಿವಮೊಗ್ಗ ಯುವಕನ ನಿಗೂಢ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ನಗರದ ಯುವಕ ಬ್ಯಾಂಕಾಕ್‌ನಲ್ಲಿ  ನಿಗೂಢ ಸಾವು ಕಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಡಿವಿಎಸ್ ಪದವಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಎಂ. ಹೊಸೂರು ಅವರ ಏಕೈಕ ಮಗ ವಿನಯ್ ಬಿ. ಹೊಸೂರು (30) ಸಾವು ಕಂಡ ಯುವಕ ಎಂದು ಗುರುತಿಸಲಾಗಿದೆ.ಮಗನ ಸಾವಿನ ವಿಷಯ ಮಂಗಳವಾರ ರಾತ್ರಿ ಪೋಷಕರಿಗೆ ಸಿಕ್ಕಿದೆ. ಇಡೀ ಕುಟುಂಬ ದುಃಖದ ಮಡುವಿನಲ್ಲಿದೆ. ಕುಟುಂಬ ವರ್ಗದ ಒಬ್ಬರು ಬ್ಯಾಂಕಾಕ್‌ಗೆ ತೆರಳಿದ್ದಾರೆ. ಶವವನ್ನು ಶುಕ್ರವಾರ ಬೆಳಿಗ್ಗೆ  ತರುವ ನಿರೀಕ್ಷೆ ಇದೆ.ವಿನಯ್, ಲಂಡನ್ ಮೂಲದ ಸ್ಫೋರ್ಟ್ಸ್ ಕಂಪೆನಿಯೊಂದರಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ತಿಂಗಳಿಗೆ ರೂ 3ರಿಂದ 4 ಲಕ್ಷ ಸಂಬಳ ನೀಡಲಾಗುತ್ತಿತ್ತು. ಆರು ತಿಂಗಳ ಹಿಂದೆಯಷ್ಟೇ ವಿನಯ್ ಈ ಕಂಪೆನಿ ಸೇರಿದ್ದರು.  ಬೆಂಗಳೂರಿನಲ್ಲಿ ಬಿ.ಕಾಂ. ಪದವಿ ಮುಗಿಸಿದ ವಿನಯ್  ಕಂಪ್ಯೂಟರ್ ತಂತ್ರಜ್ಞಾನದಲ್ಲಿ ವಿಶೇಷ ಪರಿಣತಿ ಸಾಧಿಸಿದ್ದರು. ಫುಟ್‌ಬಾಲ್ ಪಂದ್ಯದ ವರದಿ ಹಾಗೂ ಫುಟ್‌ಬಾಲ್ ಅಭಿವೃದ್ಧಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಅವರು ಕೆಲಸ ಮಾಡುತ್ತಿದ್ದರು. ಸದ್ಯ ಅವರನ್ನು ಕಂಪೆನಿ  ಥಾಯ್ಲೆಂಡ್ ದೇಶದ ಬ್ಯಾಂಕಾಕ್‌ಗೆ ಕರೆಸಿಕೊಂಡಿತ್ತು.ಬ್ಯಾಂಕಾಕ್‌ನಿಂದ ಸುಮಾರು 150 ಕಿ.ಮೀ. ದೂರದ ಪಟ್ಟಾಯಂ ಊರಿನ ವಸತಿಗೃಹದಲ್ಲಿ ವಿನಯ್ ತನ್ನ ಸಹೋದ್ಯೋಗಿಗಳೊಂದಿಗೆ ತಂಗ್ದ್ದಿದರು. ಅಲ್ಲಿನ ಈಜುಕೊಳದಲ್ಲಿ ಮುಳುಗಿದ್ದ ಇವರನ್ನು ವಸತಿಗೃಹದ ಸಿಬ್ಬಂದಿ ಗಮನಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವಿನಯ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂಬುದು ಸದ್ಯ ಕುಟುಂಬಕ್ಕೆ ಸಿಕ್ಕ ಮಾಹಿತಿ. ಸದ್ಯ ವಿನಯ್ ಶವ ಬ್ಯಾಂಕಾಕ್‌ನ ಆಸ್ಪತ್ರೆಯಲ್ಲಿ ಇದೆ. ತಮ್ಮ ಮಗನ ಸಾವಿನ ಬಗ್ಗೆ `ಪ್ರಜಾವಾಣಿ~ ಜತೆ ದುಃಖದಿಂದ ಪ್ರತಿಕ್ರಿಯಿಸಿದ ಪ್ರೊ.ಹೊಸೂರು, `ಮಗನಿಗೆ ತಕ್ಕಮಟ್ಟಿಗೆ ಈಜು ಬರುತ್ತಿತ್ತು. ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಆತನ ಜತೆಗಿದ್ದ ಇಬ್ಬರು ಯುವಕರಿಗೆ ಈತ ರೂಮಿನಿಂದ ಹೊರ ಹೋಗಿರುವುದು ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಅವನು ಬೆಳಿಗ್ಗೆ ಯಾವಾಗಲೂ ಏಳುವುದು ಸ್ವಲ್ಪ ತಡವಾಗಿ. ಇದು ನಿಗೂಢವಾಗಿದೆ. ಅಲ್ಲಿ ದೂರು ನೀಡಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ~ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.