ಮಂಗಳವಾರ, ಏಪ್ರಿಲ್ 13, 2021
28 °C

ಬ್ಯಾಂಕಿಂಗ್ ಕಾಯ್ದೆ ಮತ್ತಷ್ಟು ಬಿಗಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೇಶದಲ್ಲಿ ಹೊಸ ಬ್ಯಾಂಕುಗಳನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ಖಾಸಗಿ ಉದ್ಯಮಿಗಳು ಅನುಮತಿಗಾಗಿ ಮತ್ತಷ್ಟು  ದಿನ ಕಾಯಬೇಕಾಗುತ್ತದೆ.ಈಗಿರುವ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ಅಗತ್ಯ ತಿದ್ದುಪಡಿ ನಂತರವಷ್ಟೇ ಈ ಅನುಮತಿಯ ರೂಪುರೇಷೆಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಹೊಸ ಬ್ಯಾಂಕಿಂಗ್ ಅನುಮತಿ ನಿಯಮಗಳಿಗೆ ಸಂಬಂಧಿಸಿದ ಅಂತಿಮ ರೂಪುರೇಷೆಗಳನ್ನು ಸರ್ಕಾರ ಪರಿಶೀಲಿಸುತ್ತಿದೆ. ಸದ್ಯ ಜಾರಿಯಲ್ಲಿರುವ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ಸಂಸತ್ತಿನಲ್ಲಿ  ಅಗತ್ಯ ತಿದ್ದುಪಡಿ ತಂದ ನಂತರವೇ ಇದನ್ನು ಅಂತಿಮಗೊಳಿಸಲಾಗುತ್ತದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೊಸ ಬ್ಯಾಂಕಿಂಗ್ ಕಾಯ್ದೆ ತಿದ್ದುಪಡಿಯ ಕರಡನ್ನು ಸಿದ್ಧಪಡಿಸಲಾಗಿದ್ದು, ಮಾರ್ಚ್ ಅಂತ್ಯದ ವೇಳೆಗೆ ಇದನ್ನು ಸಾರ್ವಜನಿಕರ ಪ್ರತಿಕ್ರಿಯೆಗಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.ಬ್ಯಾಂಕಿಂಗ್ ಸೇವೆಗಳನ್ನು ಪ್ರಾರಂಭಿಸಲು ಕಾರ್ಪೊರೇಟ್ ಸಂಸ್ಥೆಗಳು ಆಸಕ್ತಿ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಈಗಿರುವ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲು ಭಾರತೀಯ ರಿವರ್ಸ್ ಬ್ಯಾಂಕ್ ನಿರ್ಧರಿಸಿದೆ.  ಅನುಮತಿ ನೀಡುವ ಪೂರ್ವದಲ್ಲಿ ಖಾಸಗಿ ಉದ್ಯಮಿಗಳು ತೊಡಗಿಸಿಕೊಂಡಿರುವ ಇತರೆ ವಹಿವಾಟುಗಳು, ವಿಮೆ ಮತ್ತು ಸಂಪತ್ತು ನಿರ್ವಹಣೆಗಳ ಕುರಿತು ಪ್ರತ್ಯೇಕವಾಗಿ ಮಾಹಿತಿ ಸಂಗ್ರಹಿಸಲಾಗುವುದು. ಬ್ಯಾಂಕಿಂಗ್ ಕಾಯ್ದೆಗೆ  ತಿದ್ದುಪಡಿ ತರುವ ಮೂಲಕ ‘ಆರ್‌ಬಿಐ’ಗೆ ಹೆಚ್ಚಿನ ಅಧಿಕಾರ ಲಭಿಸಲಿದೆಹಾಗೂ ಠೇವಣಿದಾರರ ಹಿತಾಸಕ್ತಿಗಳನ್ನು  ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಹಾಯಕವಾಗುತ್ತದೆ ಎಂದೂ ಮೂಲಗಳು ತಿಳಿಸಿವೆ.ಸದ್ಯ ವಿಮಾ ಕಂಪೆನಿಗಳು ‘ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸಂಪತ್ತು ನಿರ್ವಹಣೆ ಸಂಸ್ಥೆಗಳನ್ನು ನಿಯಂತ್ರಿಸುತ್ತದೆ.‘ಬ್ಯಾಂಕಿಂಗ್ ನಿಯಂತ್ರಣ ತಿದ್ದುಪಡಿ ಮಸೂದೆಯು, ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಗಳಿವೆ. ಒಮ್ಮೆ ಈ ಕಾಯ್ದೆ ಜಾರಿಗೆ ಬಂದರೆ, ನಂತರ ಬ್ಯಾಂಕಿಂಗ್ ಸೇವೆಗಳನ್ನು ಪ್ರಾರಂಭಿಸಲು ಮುಂದೆ ಬರುವ ಕೈಗಾರಿಕೋದ್ಯಮಿಗಳು, ಕಾರ್ಪೊರೇಟ್  ಸಂಸ್ಥೆಗಳಿಗೆ ಇದು ಕಡ್ಡಾಯವಾಗಿ ಅನ್ವಯಿಸಲಿದೆ. ರಿಲಯನ್ಸ್ ಕ್ಯಾಪಿಟಲ್, ಇಂಡಿಯಾ ಬುಲ್ಸ್, ರೆಲಿಗೇರ್, ಐಎಫ್‌ಸಿಐ, ಆದಿತ್ಯಾ ಬಿರ್ಲಾ ಸೇರಿದಂತೆ ಹಲವು ಕಾರ್ಪೊರೇಟ್ ಕಂಪೆನಿಗಳು ಹೊಸ ಬ್ಯಾಂಕುಗಳನ್ನು ತೆರೆಯಲು ‘ಆರ್‌ಬಿಐ’ ಅನುಮತಿ ಕೋರಿದ್ದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.