ಶನಿವಾರ, ಜೂನ್ 12, 2021
28 °C

ಬ್ಯಾಡ್ಮಿಂಟನ್‌ : ಬದಲಾವಣೆಯ ಗಾಳಿ

ಪ್ರಮೋದ್‌ ಜಿ.ಕೆ. Updated:

ಅಕ್ಷರ ಗಾತ್ರ : | |

‘ಭಾರತದಲ್ಲಿ ಕ್ರಿಕೆಟ್‌ ಬಿಟ್ಟರೆ ಹೆಚ್ಚು ಖ್ಯಾತಿ ಹೊಂದಿರುವುದು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವುದು ಬ್ಯಾಡ್ಮಿಂಟನ್‌. ಇನ್ನು ಕೆಲವೇ ವರ್ಷಗಳಲ್ಲಿ ಇದು ಉತ್ತುಂಗಕ್ಕೆ ಏರಲಿದೆ. ಏಕೆಂದರೆ, ಯುವ ಆಟಗಾರರೇ ಸ್ವಂತ ಆಸಕ್ತಿಯಿಂದ ಈ ಕ್ರೀಡೆಯತ್ತ ಒಲವು ತೋರುತ್ತಿದ್ದಾರೆ. ಪಾಲಕರೂ ಬೆಂಬಲ ನೀಡುತ್ತಿದ್ದಾರೆ’

ಮಾಜಿ ಆಟಗಾರ ವಿಮಲ್‌ ಕುಮಾರ್‌ ಅವರು ಇಂಡಿಯನ್ ಬ್ಯಾಡ್ಮಿಂಟನ್‌ ಲೀಗ್‌ (ಐಬಿಎಲ್‌) ನಡೆಯುತ್ತಿದ್ದ ಸಂದರ್ಭದಲ್ಲಿ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಈ ಮಾತು ಹೇಳಿದ್ದರು.ಹೋದ ವರ್ಷ ನಡೆದ ಚೊಚ್ಚಲ ಐಬಿಎಲ್‌ ಭಾರತದ ಬ್ಯಾಡ್ಮಿಂಟನ್‌ ರಂಗದಲ್ಲಿ ಹೊಸ ಕ್ರಾಂತಿ ಹುಟ್ಟು ಹಾಕಿತು. ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ಯಾಡ್ಮಿಂಟನ್‌ ‘ಶಕ್ತಿ ಕೇಂದ್ರ’ ಎನಿಸಿರುವ ಚೀನಾ ಹಾಗೂ ಮಲೇಷ್ಯಾ  ರಾಷ್ಟ್ರಗಳ ಕಣ್ಣು ಭಾರತದ ಮೇಲೆ ನೆಟ್ಟವು. ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಮಲೇಷ್ಯಾದ ಲೀ ಚೊಂಗ್‌ ವೀ ಐಬಿಎಲ್‌ನಲ್ಲಿ ಆಡಿದರು. ಚೀನಾದ ಆಟಗಾರರೂ ಪಾಲ್ಗೊಂಡರು. ಇದರಿಂದ ಭಾರತ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ ಅಂಗಳದಲ್ಲಿ ತನ್ನ ಅಧಿಪತ್ಯವನ್ನು ಬಲಗೊಳಿಸುತ್ತಾ ಸಾಗಿತು.ಇದಕ್ಕೂ ಮುನ್ನ ಘಟಿಸಿದ ಕೆಲ ಸಂಗತಿಗಳು ಭಾರತದಲ್ಲಿ ಬ್ಯಾಡ್ಮಿಂಟನ್‌ ಕ್ರಾಂತಿಗೆ ಮುನ್ನುಡಿ ಬರೆದವು. ಅದು 1980ರಲ್ಲಿ ನಡೆದ ಮಹತ್ವದ ಬೆಳವಣಿಗೆ. ಹಿರಿಯ ಆಟಗಾರ ಪ್ರಕಾಶ್‌ ಪಡುಕೋಣೆ ಅವರು ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದರು. ಜೊತೆಗೆ ವಿಶ್ವ ಚಾಂಪಿಯನ್‌ಷಿಪ್‌, ವಿಶ್ವಕಪ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಪ್ರಾಬಲ್ಯ ಮೆರೆದರು.13 ವರ್ಷಗಳ ಹಿಂದೆ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡದ ಈಗಿನ ಕೋಚ್‌ ಪುಲ್ಲೇಲ ಗೋಪಿಚಂದ್‌ ಪದಕ ಗೆದ್ದರು. ಬ್ಯಾಡ್ಮಿಂಟನ್ ಕ್ರಾಂತಿಗೆ ನಾಂದಿ ಹಾಡಿದ್ದ ಪ್ರಕಾಶ್‌ ಪಡುಕೋಣೆ ಮತ್ತು ಗೋಪಿಚಂದ್ ನಂತರ ಸಾಕಷ್ಟು ಭವಿಷ್ಯದ ತಾರೆಗಳನ್ನು ರೂಪಿಸಿದರು.ಇತ್ತೀಚಿನ ಐದು ವರ್ಷಗಳು ಬ್ಯಾಡ್ಮಿಂಟನ್‌ ರಂಗದ ಸುವರ್ಣ ಕಾಲ. ‘ಭಾರ ತದ ಬ್ಯಾಡ್ಮಿಂಟನ್‌ ರಾಜಧಾನಿ’ ಎನಿಸಿಕೊಳ್ಳುತ್ತಿರುವ ಹೈದರಾಬಾದ್ ನಿರೀಕ್ಷೆಗೂ ಮೀರಿ ಅಸಾಧಾರಣ ಪ್ರತಿಭೆಗಳನ್ನು ಬೆಳಕಿಗೆ ತಂದಿತು. ಸೈನಾ ನೆಹ್ವಾಲ್‌, ಪಿ.ವಿ. ಸಿಂಧು, ಪಿ. ಕಶ್ಯಪ್ ಅವರೆಲ್ಲಾ ಮುತ್ತಿನ ನಗರಿಯಿಂದ ಅರಳಿದ ಮುತ್ತುಗಳೇ.ಇವರ ಜೊತೆಗೆ ಚೇತನ್‌ ಆನಂದ್‌, ಜ್ವಾಲಾ ಗುಟ್ಟಾ, ಕರ್ನಾಟಕದ ಅಶ್ವಿನಿ ಪೊನ್ನಪ್ಪ, ವಿ. ದಿಜು, ಅಜಯ ಜಯರಾಮ್ ಮತ್ತು ಸೌರಭ್‌ ವರ್ಮಾ ಅವರಂಥ ಪ್ರತಿಭೆಗಳು ಬೆಳಕಿಗೆ ಬಂದರು. ಸಿಂಗಲ್ಸ್‌ ವಿಭಾಗದ ತಾರೆಗಳಾದ ಸೈನಾ ಹಾಗೂ ಸಿಂಧು ಬ್ಯಾಡ್ಮಿಂಟನ್ ರಂಗದಲ್ಲಿ ಹೊಸ ಅಲೆ ಎಬ್ಬಿಸಿದರು.ಎರಡು ವರ್ಷಗಳ ಹಿಂದೆ ಲಂಡನ್ ಒಲಿಂಪಿಕ್ಸ್‌ನಲ್ಲಿ ಸೈನಾ ಪದಕ ಗೆದ್ದಾಗ ಸದ್ದಿಲ್ಲದಂತೆ ಅದೆಷ್ಟೋ ಯುವ ಪ್ರತಿಭೆಗಳು ರ್‍ಯಾಕೆಟ್‌ ಕೈಗೆತ್ತಿಕೊಂಡರು. ಸಾಕಷ್ಟು ಪಾಲಕರು ತಮ್ಮ  ಮಕ್ಕಳು ಬ್ಯಾಡ್ಮಿಂಟನ್‌ ಆಡಲಿ ಎಂದು ಅಪೇಕ್ಷೆ ಪಟ್ಟರು.ಗೋಪಿಚಂದ್‌ ಅಕಾಡೆಮಿಯಲ್ಲಿ ತರಬೇತಿ ಪಡೆದ ಸೈನಾ ಲೆಕ್ಕವಿಲ್ಲದಷ್ಟು ಬ್ಯಾಡ್ಮಿಂಟನ್‌ ಪ್ರಿಯರ ತಾರೆಯಾದರು. ಈ ಎಲ್ಲಾ ಸಾಧನೆಗೆ ಕಳಸವಿಟ್ಟಂತೆ ಒಲಿಂಪಿಕ್ಸ್‌ನಲ್ಲಿಯೂ ಪದಕ ಒಲಿದು ಬಂತು. ಜೊತೆಗೆ, ಅದೇ ವರ್ಷ ಸ್ವಿಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ ಲಭಿಸಿತು.ಸೈನಾ ಸಾಧನೆಯ ಜೊತೆಗೆ ಸಿಂಧು ಕೂಡಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದರು. ಹೋದ ವರ್ಷ ಚೀನಾದ ಗುವಾಂಗ್ ಜೌನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದರು. ಭಾರತದ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ ಎನ್ನುವ ಕೀರ್ತಿಗೂ ಪಾತ್ರರಾದರು. ಹೀಗೆ ಭಾರತದ ಒಂದೊಂದೇ ಸಾಧನೆಯ ಹೆಜ್ಜೆಗಳು ವಿಶ್ವದ ಇತರ ರಾಷ್ಟ್ರಗಳಿಗೆ ಎಚ್ಚರಿಕೆ ಗಂಟೆಯಾಯಿತು.ಐಬಿಎಲ್‌ನಿಂದ ಆಟಗಾರರು ಆರ್ಥಿಕವಾಗಿ ಬಲಿಷ್ಠರಾದರು. ಜೊತೆಗೆ ಮಹಾರಾಷ್ಟ್ರ ಬ್ಯಾಡ್ಮಿಂಟನ್‌ ಲೀಗ್‌ (ಎಂಬಿಎಲ್‌) ಮತ್ತು ಕರ್ನಾಟಕ ಬ್ಯಾಡ್ಮಿಂಟನ್‌ ಲೀಗ್‌ (ಕೆಬಿಎಲ್‌) ಆರಂಭವಾದ ಕಾರಣ ಆಯಾ ರಾಜ್ಯಗಳ ಅಟಗಾರರಿಗೆ ಅವಕಾಶ ಸಿಕ್ಕಿತು. ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಯೂ ಹೆಚ್ಚಾಯಿತು. ಇದರಿಂದ ಭಾರತ ಬಲಾಢ್ಯವೆನಿಸಿಕೊಳ್ಳತೊಡಗಿತು.ಪಡುಕೋಣೆ ಮೆಚ್ಚುಗೆ

‘ಸಾಧಿಸಬೇಕೆನ್ನುವ ಛಲ ಹೊಂದಿ ರುವವರಿಗೆ ವಯಸ್ಸು ನೆಪವೇ ಅಲ್ಲ. ದೃಢ ನಿರ್ಧಾರವಿದ್ದರೆ ಯಾವ ಸಾಧನೆ ಯೂ ಅಸಾಧ್ಯವಲ್ಲ. ಅರವಿಂದ್‌ ಸಾಧನೆ ಯುವಕರಿಗೆ ಪಾಠವಾಗಲಿ’ಇದೇ ತಿಂಗಳು ಜರ್ಮನ್ ಓಪನ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದ ಕರ್ನಾಟಕದ ಅರವಿಂದ್‌ ಭಟ್‌ ಸಾಧನೆ ಬಗ್ಗೆ ಕೋಚ್‌ ಪ್ರಕಾಶ್‌ ಪಡುಕೋಣೆ ಮುಕ್ತಕಂಠದಿಂದ ಶ್ಲಾಘಿಸಿದ್ದು ಹೀಗೆ.ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಶಸ್ತಿ ಗೆಲ್ಲಬೇಕೆನ್ನುವ ಹೆಬ್ಬಯಕೆ ಹೊಂದಿದ್ದ ಅರವಿಂದ್‌ ಈ ಸಾಧನೆ ಮಾಡಿದಾಗ ಅವರಿಗೆ 34 ವರ್ಷ! ಅರವಿಂದ್‌ ಎಲ್ಲರೂ ಮೆಚ್ಚುವಂಥ ಸಾಧನೆ ಮಾಡಿದ್ದಾರೆ. ಇದು ಯುವ ಆಟಗಾರರಿಗೆ ಸ್ಫೂರ್ತಿ. ಜೊತೆಗೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಮಿಂಚುತ್ತಿರುವ ರೋಹನ್‌ ಕ್ಯಾಸ್ಟಲಿನೊ, ಸಿಂಧು ಭಾರದ್ವಾಜ್‌, ಹರ್ಷಿತ ಅಗರವಾಲ್‌, ಅನೂಪ್‌ ಶ್ರೀಧರ್ ಸೇರಿದಂತೆ ಹಲವರು ರಾಜ್ಯದ ಭವಿಷ್ಯದ ಭರವಸೆ ಎನಿಸಿದ್ದಾರೆ.‘ಟೂರ್ನಿಗೆ ತೆರಳುವ ಮುನ್ನ ಪ್ರಶಸ್ತಿ ಗೆಲ್ಲುವ ಬಗ್ಗೆ ನನಗೇ ಭರವಸೆ ಇರಲಿಲ್ಲ. ಕನಿಷ್ಠ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರೆ ಸಾಕು ಎನ್ನುವ ಗುರಿಯಿತ್ತು. ಆದರೆ, ನನ್ನಲ್ಲಿನ ಆತ್ಮವಿಶ್ವಾಸ ಪ್ರಶಸ್ತಿ ತಂದುಕೊಟ್ಟಿತು’ ಎಂದು ಅರವಿಂದ್‌ ತಮ್ಮ ಸಾಧನೆಯ ಗುಟ್ಟನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.