ಗುರುವಾರ , ಏಪ್ರಿಲ್ 22, 2021
29 °C

ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾದ ಭಕ್ತಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಕಾಲಿಡಲು ಸಹ ಆಗದಷ್ಟು ಜನದಟ್ಟಣೆ, ಕಣ್ಣು ಹಾಯಿಸಿದಷ್ಟು ಜನಸಾಗರ. ಇನ್ನು ರಥದೆತ್ತರಕ್ಕೆ ಬಾಳೆಹಣ್ಣು  ಎಸೆಯುತ್ತ ಭಕ್ತಾದಿಗಳು ಭಕ್ತಿ ಭಾವ ಮೆರೆದರು.

ತಾಲ್ಲೂಕಿನ ಭೋಗನಂದೀಶ್ವರ ದೇವಾಲಯದ ಆವರಣದಲ್ಲಿ ಗುರುವಾರ ನಡೆದ ಬ್ರಹ್ಮರಥೋತ್ಸವದಲ್ಲಿ. ರಾಜ್ಯ ಮತ್ತು ಹೊರ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತ ಸಮೂಹ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.ಭಕ್ತಿಯ ಭಾವದಲ್ಲಿ ಲೀನವಾಗಿ ದೇವರ ದರ್ಶನ ಪಡೆದರೆ,  ಇನ್ನೂ ಕೆಲವರು ಹರಕೆಗಳನ್ನು ಈಡೇರಿದ್ದಕ್ಕೆ ಕೃತಜ್ಞತೆ ಅರ್ಪಿಸಿದರು. ಸ್ಥಳೀಯರು ಮತ್ತು ಸುತ್ತಮುತ್ತಲ ಗ್ರಾಮದ ನಿವಾಸಿಗಳು ದೇವರ ದರ್ಶನ ಪಡೆದು ಮನೆಗಳಿಗೆ ಮರಳಿದರೆ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳು ಸೇರಿದಂತೆ ದೂರದ ಜಿಲ್ಲೆಗಳಿಂದ ಆಗಮಿಸಿದ್ದ ಜನರು ದೇವಾಲಯದ ಆವರಣದಲ್ಲಿರುವ ಉದ್ಯಾನದಲ್ಲೇ ಬುಧವಾರ ರಾತ್ರಿ ಕಳೆದರು. ದೇವಾಲಯದಲ್ಲಿ ನೀರು ಮತ್ತು ಇತರ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.ಎರಡೂ ರಥಗಳು ಸಿದ್ಧಗೊಂಡಿರುವುದನ್ನು ಕಂಡ ಭಕ್ತಾದಿಗಳು ಉತ್ಸವ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳುವ ಮುನ್ನವೇ ರಥಗಳತ್ತ ಬಾಳೆಹಣ್ಣು ಮತ್ತು ದವನ ಎಸೆಯ ತೊಡಗಿದರು.  ದೊಡ್ಡ ರಥದಲ್ಲಿ ಭೋಗನಂದೀಶ್ವರ ಮತ್ತು ಗಿರಿಜಾಂಬ ಹಾಗೂ ಚಿಕ್ಕರಥದಲ್ಲಿ ಅಂಬಿಕಾ ಮತ್ತು ಗಣಪತಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಕೂಡಲೇ ಭಕ್ತರ ಉತ್ಸಾಹ ತಾರಕಕ್ಕೇರಿತು.ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ ಅವರು ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿದ್ದ ಯುವಕರನ್ನು ಸರಪಳಿ ಹಿಡಿದುಕೊಂಡು ರಥವನ್ನು ಎಳೆದರು.ರಥಗಳು ಮುಂದೆ ಸಾಗುತ್ತಿದ್ದಂತೆ ದೂರದೂರದಲ್ಲಿ ನೆರೆದಿದ್ದ ಭಕ್ತಾದಿಗಳು ಸಮೀಪಕ್ಕೆ ಬಂದು ಉತ್ಸವಮೂರ್ತಿಗಳು ಮತ್ತು ರಥಗಳತ್ತ ಬಾಳೆಹಣ್ಣು ಎಸೆಯತೊಡಗಿದರು.ತೇರು ಎಳೆಯುವ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಿರಲಿ ಎಂಬ ಉದ್ದೇಶದಿಂದ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸಾಗುತ್ತಿದ್ದ ರಥಗಳ ಚಕ್ರಗಳ ಬಳಿ ಬರುತ್ತಿದ್ದ ಭಕ್ತಾದಿಗಳನ್ನು ದೂರ ಸರಿಸಲು ಮತ್ತು ಸುರಕ್ಷತೆಯಿಂದ ಮುನ್ನಡೆಯುವಂತೆ ಹೇಳಲು ಪೊಲೀಸರು ಹರಸಾಹಸ ಪಟ್ಟರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.