ಗುರುವಾರ , ಜೂನ್ 24, 2021
23 °C

ಬ್ರಿಟನ್‌ ಉಪಗ್ರಹಕ್ಕೆ ವಿಮಾನದ ಸುಳಿವು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌ (ಪಿಟಿಐ): ನಾಪತ್ತೆಯಾಗಿ­ರುವ ಮಲೇಷ್ಯಾ ವಿಮಾನಯಾನ ಸಂಸ್ಥೆಯ ‘ಎಂಎಚ್‌­370‘ ವಿಮಾನ­ದಿಂದ ಸಂಕೇತಗಳು ಬಂದಿದ್ದವು ಎಂದು ಜಾಗತಿಕವಾಗಿ ಮೊಬೈಲ್‌ ದೂರವಾಣಿ­ಗಳಿಗೆ ಉಪಗ್ರಹ ಸಂವಹನ ಸೇವೆಗಳನ್ನು ಒದಗಿ­ಸುವ ಬ್ರಿಟನ್ನಿನ ಉಪಗ್ರಹ ಆಧಾ­ರಿತ ದೂರ­ಸಂಪರ್ಕ ಕಂಪೆನಿ ‘ಇನ್‌ಮಾರ್ಸಾಟ್‌’ ಹೇಳಿದೆ.‘ದಿನನಿತ್ಯ ಸ್ವಯಂಚಾಲಿತ ಸಂಕೇತ­ಗಳು ಉಪಗ್ರಹದಲ್ಲಿ ದಾಖಲಾಗುತ್ತಿವೆ. ಹೀಗೆ ದಾಖ­ಲಾದ ಸಂವಹನಗಳನ್ನು ವಿಶ್ಲೇ­ಷಿಸಿದಾಗ ಒಂದು ಸಂಕೇತವು ನಾಪತ್ತೆ­ಯಾಗಿರುವ ಮಲೇಷ್ಯಾದ ವಿಮಾನದಿಂದ ಮಾರ್ಚ್‌ 8ರಂದು ಬಂದಿದೆ ಎಂದು ನಮ್ಮ ಕಂಪೆನಿಯ ಪಾಲುದಾರ ಸಂಸ್ಥೆ ಎಸ್‌ಐಟಿಎ ಒದಗಿಸಿದೆ. ಇದನ್ನು ಮಲೇಷ್ಯಾದ ವಿಮಾನಯಾನ ಸಂಸ್ಥೆ ಜೊತೆಗೆ ಹಂಚಿಕೊಳ್ಳಲಾಗಿದೆ’ ಎಂಬ ‘ಇನ್‌ಮಾರ್ಸಾಟ್‌’ ಹೇಳಿಕೆಯನ್ನು ‘ಕ್ಸಿನ್‌ಹುವಾ’ ಸುದ್ದಿಸಂಸ್ಥೆ ವರದಿ ಮಾಡಿದೆ.ವಿಮಾನವು ನಾಪತ್ತೆಯಾದ ಕನಿಷ್ಠ ಐದು ತಾಸಿನ ನಂತರ ಈ ಸಂಕೇತಗಳು ‘ಇನ್‌ಮಾರ್ಸಾಟ್‌’ ಉಪಗ್ರಹಕ್ಕೆ ಬಂದಿದೆ ಎಂದು ‘ಬಿಬಿಸಿ’ ವರದಿ ಮಾಡಿದೆ.ಕ್ವಾಲಾಲಂಪುರ ವರದಿ: ವಿಮಾನ ಕಣ್ಮರೆಯ ನಂತರ ಇದೇ ಮೊದಲ ಬಾರಿಗೆ ಶನಿವಾರ ಪತ್ರಿಕಾ­ಗೋ­ಷ್ಠಿ­ಯಲ್ಲಿ ಮಾತನಾಡಿದ ಮಲೇಷ್ಯಾ ಪ್ರಧಾನಿ ನಜೀಬ್‌ ರಜಾಕ್‌, ‘ಮಾಧ್ಯಮಗಳಲ್ಲಿ ವಿಮಾನ­ ಅಪಹರ­ಣದ ಬಗ್ಗೆ ವರದಿಗಳು ಬರುತ್ತಿದ್ದರೂ ನಾವು ಸಕಾರಾತ್ಮಕ ನಿರೀಕ್ಷೆಯನ್ನೇ ಇರಿಸಿ­ಕೊಂಡು ಎಲ್ಲ ಸಾಧ್ಯತೆಗಳ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದರು.‘ವಿಮಾನದ ಸಂವಹನ ವ್ಯವಸ್ಥೆಯನ್ನು ಉದ್ದೇಶ­ಪೂರ್ವಕವಾಗಿ ನಿಷ್ಕ್ರಿಯ­ಗೊಳಿಸಿರಬಹುದು.   ಇದ­ರಿಂದಾಗಿ ವಿಮಾನ ರೆಡಾರ್‌ ಸಂಪರ್ಕಕ್ಕೆ ದೊರಕಿಲ್ಲ. ಬಹುಶಃ ವಿಮಾನ ವಾಪಸ್‌ ಬಂದಿರುವ ಸಾಧ್ಯತೆ ಇದ್ದು, ಈ ಹಂತದಲ್ಲಿ ಪಶ್ಚಿಮ ದಿಕ್ಕಿಗೆ ತಿರುಗಿದ ವಿಮಾನ ನಂತರದಲ್ಲಿ ವಾಯವ್ಯ ದಿಕ್ಕಿನತ್ತ ಸಾಗಿರ­ಬಹುದು. ಈ ಸಾಧ್ಯತೆಗಳನ್ನು ಗಮನಿಸಿದರೆ ವಿಮಾ­ನದ ವಿರುದ್ಧ ನಿಶ್ಚಿತ ರೀತಿಯಲ್ಲಿ ಪಿತೂರಿ ನಡೆ­ದಿದೆ’ ಎಂದ ಅವರು, ವಿಮಾನ ಅಪಹರಣವಾಗಿರುವ ಸಾಧ್ಯತೆ ಇದೆ ಎಂದು ಬಾಯಿಬಿಟ್ಟು ಹೇಳಲಿಲ್ಲ.ಮಲೇಷ್ಯಾದ ತನಿಖಾಧಿ­ಕಾರಿಗಳು, ವಿಮಾನ ಅಪಹರ­ಣ­ವಾಗಿರುವ ಸಾಧ್ಯತೆ ಹೆಚ್ಚಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. 14 ರಾಷ್ಟ್ರಗಳ 43 ಹಡಗುಗಳು, 58 ವಿಮಾನಗಳು ಆಗ್ನೇಯ ಏಷ್ಯಾದ ಭಾಗದಲ್ಲಿ ಶೋಧ ಕಾರ್ಯ ನಡೆಸಿ­ದರೂ ಇದುವರೆಗೆ ವಿಮಾನದ ಬಗ್ಗೆ ಯಾವುದೇ ಸುಳಿವು ಅಥವಾ ಅದರ ಭಗ್ನಾವಶೇಷ ದೊರಕಿಲ್ಲ.ನಾಪತ್ತೆಯಾಗಿರುವ ಬೋಯಿಂಗ್‌ 777–200­ಇಆರ್‌ ವಿಮಾನದಲ್ಲಿ 12 ಸಿಬ್ಬಂದಿ ವರ್ಗದವರು ಮತ್ತು 227 ಪ್ರಯಾಣಿಕರು ಸೇರಿ ಒಟ್ಟ 239 ಜನರು ಇದ್ದಾರೆ.ವಿಮಾನ ಪೈಲಟ್‌ ಮನೆಗೆ ಪೊಲೀಸರು: ನಾಪತ್ತೆಯಾಗಿರುವ ವಿಮಾನದ ಮುಖ್ಯ ಚಾಲಕ (ಪೈಲಟ್‌) ಜಹರಿ ಅಹ್ಮದ್‌ ಷಾ ಅವರ ಮನೆಗೆ ಪೊಲೀಸರು ಶನಿವಾರ ಭೇಟಿ ನೀಡಿದ್ದರು.ವಿಮಾನದ ಸಿಬ್ಬಂದಿ ಮತ್ತು ಪ್ರಯಾ­ಣಿಕರ ಕುರಿತ ತನಿಖೆಯನ್ನು  ಮರುಪರಿ­ಶೀಲಿಸಲಾ­ಗುವುದು ಎಂದು ಪ್ರಧಾನಿ ರಜಾಕ್‌ ಸುದ್ದಿಗೋಷ್ಠಿ­ಯಲ್ಲಿ ಹೇಳಿದ ಕೆಲವೇ ನಿಮಿಷಗಳಲ್ಲಿ ಇಬ್ಬರು ಪೊಲೀಸ್‌ ಅಧಿಕಾರಿಗಳು ಪೈಲಟ್‌ ಷಾ ಅವರ ಮನೆಗೆ ಹೋಗಿದ್ದರು ಎಂದಿರುವ  ಮೂಲಗಳು, ಈ ಕುರಿತು ಹೆಚ್ಚಿನ ಮಾಹಿತಿ ನೀಡಲಿಲ್ಲ.ಈ ಮಧ್ಯೆ, ವಿಮಾನ ಪೈಲಟ್‌ ಕ್ಯಾಪ್ಟನ್‌ ಜಹರಿ ಅಹ್ಮದ್‌ ಷಾ (53) ಅವರ ಪ್ರಾಮಾಣಿಕತೆ ಬಗ್ಗೆಯೂ ಶಂಕೆ­ಗಳು ವ್ಯಕ್ತವಾಗಿದ್ದವು. ಆದರೆ, ಇದನ್ನು ಅವರ ಸಹೋದ್ಯೋಗಿಗಳು ಮತ್ತು ಪರಿ­ಚಿತರು ಅಲ್ಲಗಳೆದು ಅವರೊಬ್ಬ ನಿಷ್ಠಾ­ವಂತ ಮತ್ತು ದಕ್ಷ ಪೈಲಟ್‌ ಎಂದಿದ್ದರು.ಕ್ಯಾಪ್ಟನ್‌ ಷಾ ಅವರಿಗೆ ತಮ್ಮ ಹವ್ಯಾ­ಸ­ವನ್ನು ಮುಂದುವರಿಸಲು ನಿರ್ಬಂಧ­ಗಳನ್ನು ಹೇರಿರಲಿಲ್ಲ. ಅನೇಕ ಪೈಲಟ್‌­ಗಳು ತಮ್ಮದೇ ಆದ ‘ಸಿಮ್ಯು­ಲೇಟರ್‌’­ಗಳನ್ನು ಹೊಂದಿದ್ದಾರೆ ಎಂದು ಮಲೇಷ್ಯಾ ವಿಮಾಯಾನ ಸಂಸ್ಥೆಯ ಮುಖ್ಯ ಕಾರ್ಯ­ನಿರ್ವಾಹಕ ಅಧಿಕಾರಿ ಅಹ್ಮದ್‌ ಜೌಹರಿ ಯಾಹ್ಯಾ ಈ ಹಿಂದೆಯೇ ಸ್ಪಷ್ಟಪಡಿಸಿದ್ದರು.ಅಮೆರಿಕದ ಅತ್ಯಾಧುನಿಕ ವಿಮಾನ ರವಾನೆ:  ವಿಮಾನದ ಶೋಧ ಕಾರ್ಯಕ್ಕೆ ಅಮೆರಿಕ ತನ್ನ ಅತ್ಯಾಧುನಿಕ ವಿಮಾನ ‘ಪಿ8ಎ ಪೊಸೆಡನ್‌’ನ್ನು ನಿಯೋಜಿ­ಸಿದೆ.ನಿಖರ ಮಾಹಿತಿ ಕೋರಿದ ಚೀನಾ: ನಾಪತ್ತೆಯಾಗಿರುವ ವಿಮಾನದ ಬಗ್ಗೆ ನಿಖರ ಮಾಹಿತಿಗಳನ್ನು ಹಂಚಿಕೊಳ್ಳು­ವಂತೆ ಮಲೇಷ್ಯಾ ಸರ್ಕಾರವನ್ನು ಚೀನಾ  ಕೇಳಿದೆ.‘ನುರಿತವರಿಂದಲೇ ಅಪಹರಣ’

ವಿಮಾನ ಹಾರಾಟದಲ್ಲಿ ನುರಿತ   ಒಂದಿಬ್ಬರು ವ್ಯಕ್ತಿಗಳು ವಿಮಾನ ಅಪಹರಿಸಿ, ಅದರ ಸಂವಹನ ಸಾಧನಗಳನ್ನು ನಿಷ್ಕ್ರಿಯಗೊಳಿಸಿರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ತನಿಖೆ ಸಾಗಿದೆ ಎಂದು ಮಲೇಷ್ಯಾದ ತನಿಖಾಧಿಕಾರಿಗಳು ಹೇಳಿದ್ದಾರೆ.ವಿಮಾನ ಅಪಹರಣದ ಉದ್ದೇಶ ಮತ್ತು ಬೇಡಿಕೆಗಳ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ವಿಮಾನ ಎಲ್ಲಿದೆ ಎಂಬ ವಿವರವೂ ತಿಳಿದುಬಂದಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ. ‘ನಾಗರಿಕ ವಿಮಾನಯಾನದ ರೆಡಾರ್‌ನಿಂದ ವಿಮಾನ ತಪ್ಪಿಸಿಕೊಂಡರೂ ಸೇನೆಯ ರೆಡಾರ್‌ಗೆ ಅದರ ಸಂವಹನ ದೊರಕುವ ಸಾಧ್ಯತೆ ಶೇ 50ರಷ್ಟು ಇದ್ದೇ ಇತ್ತು. ಅದರೆ, ವಿಮಾನ ಸೇನೆಯ ರೆಡಾರ್‌ಗೂ ಸಿಕ್ಕಿಲ್ಲ ಎನ್ನುವುದು ತೀವ್ರ ಅನುಮಾನಗಳನ್ನು ಹುಟ್ಟಿಸಿತು.ರೆಡಾರ್‌ ಸಂಪರ್ಕದಿಂದ ವಿಮಾನ ನಾಪತ್ತೆಯಾದ ಮೇಲೂ ಅದರಲ್ಲಿ ಕನಿಷ್ಠ ಐದು ತಾಸುಗಳ ಕಾಲ ಹಾರಾಟ ಮಾಡುವಷ್ಟು ಇಂಧನ ಇತ್ತು. ಹಾಗಾಗಿ ಅದನ್ನು ಮಲೇಷ್ಯಾ ಪರ್ಯಾಯ ದ್ವೀಪದ ಮೇಲ್ಭಾಗಕ್ಕೆ ಇರುವ ಅಂಡಮಾನ್‌ ಸಮುದ್ರ ಮತ್ತು ಹಿಂದೂ ಮಹಾಸಾಗರದ ಭಾಗಕ್ಕೆ ಒಯ್ದಿ­ರಬಹುದು’ ಎಂದು ಅನುಮಾನ ಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.