ಶುಕ್ರವಾರ, ಜುಲೈ 30, 2021
21 °C

ಬ್ರೆಜಿಲ್‌ನಲ್ಲಿ ಬಂಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರೆಜಿಲ್ ದೇಶದಲ್ಲಿ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದು ದಿನ ಹೋದಂತೆ ಪ್ರತಿಭಟನೆ ತಾರಕಕ್ಕೇರುತ್ತಿದೆ. ಕಳೆದ ಒಂದು ವಾರದಲ್ಲಿ ಲಕ್ಷಾಂತರ ಜನರು ದೇಶದ ನೂರಾರು ಪಟ್ಟಣ, ನಗರಗಳಲ್ಲಿ, ರಾಜಧಾನಿ ಬ್ರೆಸಿಲಿಯಾ ಹಾಗೂ ರಿಯೋ ಡಿ ಜನೈರೋದಲ್ಲಿ ಬೀದಿಗೆ ಇಳಿದು ಬಸ್ ಪ್ರಯಾಣ ದರ ಏರಿಕೆ, ಸರ್ಕಾರದಲ್ಲಿನ ಭ್ರಷ್ಟಾಚಾರ, ಶೀಘ್ರದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಮತ್ತು ವಿಶ್ವ ಫುಟ್‌ಬಾಲ್ ಪಂದ್ಯಾವಳಿಗೆ ಸಂಬಂಧಪಟ್ಟ ನಿರ್ಮಾಣ ಕಾಮಗಾರಿಗಳಿಗಾಗಿ ಭಾರಿ ಪ್ರಮಾಣದಲ್ಲಿ ಹಣ ವೆಚ್ಚ ಮಾಡುತ್ತಿರುವುದರ ವಿರುದ್ಧ ಪ್ರತಿಭಟಿಸಿದ್ದಾರೆ. ಬಸ್ ಪ್ರಯಾಣ ದರದ ಹೆಚ್ಚಳ ವಿರೋಧಿಸಿ ಚಿಕ್ಕದೊಂದು ಊರಿನಲ್ಲಿ  ಆರಂಭವಾದ ಈ  ಪ್ರತಿಭಟನೆ ರಾಷ್ಟ್ರದ ಉದ್ದಗಲಕ್ಕೆ ವ್ಯಾಪಿಸಿ ಜನಾಂದೋಲನವಾಗಿ ಪರಿವರ್ತಿತವಾಗಿದೆ.ಬ್ರೆಜಿಲ್ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಅಭಿವೃದ್ಧಿಯ ವಿಚಾರದಲ್ಲಿ ಗಣನೀಯ ಸಾಧನೆ ಮಾಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ಗತಿ ಕುಂಠಿತಗೊಳ್ಳಲಾರಂಭಿಸಿತು. ಈ ದೇಶದಲ್ಲಿ ಸ್ಥಿರ ರಾಜಕೀಯ ವ್ಯವಸ್ಥೆಯ ಜತೆಗೆ ಪ್ರಜಾಸತ್ತಾತ್ಮಕ ಸರ್ಕಾರ ಅಸ್ತಿತ್ವದಲ್ಲಿದೆ. ಆದರೆ ಅಧ್ಯಕ್ಷ ದಿಲ್ಮಾ ಅವರ ಸರ್ಕಾರ ಭ್ರಷ್ಟಾಚಾರದ ಕಾರಣಕ್ಕೆ ತೀವ್ರ ಟೀಕೆಯನ್ನು ಎದುರಿಸುತ್ತಿದೆ.ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ವೆಚ್ಚ ಮಾಡುವ ಬದಲು ವಿಶ್ವಮಟ್ಟದ ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ವಹಿಸುತ್ತಿರುವ ಆಸಕ್ತಿ ಜನರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಸರ್ಕಾರ ಕ್ರೀಡಾಂಗಣದ ಬದಲಾಗಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆ ಮತ್ತು ಆಸ್ಪತ್ರೆಗಳ ನಿರ್ಮಾಣಕ್ಕೆ ಆಸಕ್ತಿ ವಹಿಸಬೇಕು ಎನ್ನುವುದು ಜನರ ಬೇಡಿಕೆಯಾಗಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರ ಕೂಡ ಕಾಣಿಸಿಕೊಂಡಿದೆ.ಪೊಲೀಸ್ ಮತ್ತು ಜನರ ಮಧ್ಯೆ ನಡೆದ ಘರ್ಷಣೆಯಲ್ಲಿ ಒಬ್ಬ ನಾಗರಿಕ ಸತ್ತು ಹಲವರು ಗಾಯಗೊಂಡಿದ್ದಾರೆ. ರಾಜಧಾನಿಯಲ್ಲಿರುವ ಸಂಸತ್ ಭವನ ಮತ್ತು ದೇಶದ ವಿವಿಧೆಡೆ ಇರುವ ಶಾಸಕಾಂಗದ ಕಟ್ಟಡಗಳನ್ನು ಸ್ವಾಧೀನಕ್ಕೆ ಪಡೆಯಲು ಪ್ರತಿಭಟನಾಕಾರರು ಯತ್ನಿಸಿದ್ದೂ ಇದೆ. ಇಂದು ವಿಶ್ವದ ಒಂದಲ್ಲ ಒಂದು ರಾಷ್ಟ್ರದಲ್ಲಿ ಜನಾಂದೋಲನ ರೂಪುಗೊಳ್ಳುತ್ತಲೇ ಇದೆ. ಟರ್ಕಿ ದೇಶದಲ್ಲಿ ಪ್ರತಿಭಟನೆ ಮುಂದುವರಿದಿದೆ.ಬ್ರೆಜಿಲ್‌ನ ಅಧ್ಯಕ್ಷರು ಪ್ರತಿಭಟನಾಕಾರರ ಕೆಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದ ಬಳಿಕವೂ ಪ್ರತಿಭಟನೆಯ ಕಾವು ಇಳಿದಿಲ್ಲ. ವಿಶ್ವದ ವಿವಿಧೆಡೆ  ಪ್ರತಿಭಟನೆಗಳು ಬೇರೆ ಬೇರೆ ಕಾರಣಗಳಿಗೆ ನಡೆಯುತ್ತಿವೆ. ಎಲ್ಲ ಕಡೆಗಳ ಜನರ ಮೂಲ ಬೇಡಿಕೆ ಎಂದರೆ ಸರ್ಕಾರ ಜವಾಬ್ದಾರಿಯುತವಾಗಿರಲಿ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸಲಿ ಎನ್ನುವುದಾಗಿದೆ.ಬಂಡಾಯ ಎದ್ದ ಪ್ರತಿಭಟನಾಕಾರರು ಸಂಘಟಿತರಲ್ಲ ನಿಜ. ಆದರೆ ಸರ್ಕಾರ ತಕ್ಷಣಕ್ಕೆ ಗಮನ ಹರಿಸಬೇಕಾದ ಸಮಸ್ಯೆಗಳೇನು ಮತ್ತು ಸರ್ಕಾರ ಎಲ್ಲಿ ಎಡವಿದೆ ಎನ್ನುವುದರತ್ತ ಜನರು ಬೆಟ್ಟು ಮಾಡಿ ತೋರಿಸಿದ್ದಾರೆ. ದೇಶ ಯಾವುದೇ ಇರಲಿ, ಚಳವಳಿ ಸಾರುವ ಸಂದೇಶವನ್ನು ಆಳುವ ಜನರು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ದೊಡ್ಡ ಬೆಲೆ ತೆರಬೇಕಾದೀತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.