ಶನಿವಾರ, ಏಪ್ರಿಲ್ 17, 2021
32 °C

ಭದ್ರಾವತಿ: ಸ್ವಚ್ಛತೆಗೆ ಆಗ್ರಹಿಸಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭದ್ರಾವತಿ: ನಗರದ ಸ್ವಚ್ಛತೆ ಕಾಪಾಡುವಲ್ಲಿ ನಗರಸಭೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಡಿ. ದೇವರಾಜ ಅರಸು ಜನ ಜಾಗೃತಿ ವೇದಿಕೆ ಹಾಗೂ ಸುವರ್ಣ ಮಹಿಳಾ ಜಾಗೃತಿ ವೇದಿಕೆ ಕಾರ್ಯಕರ್ತರು ಶುಕ್ರವಾರ ರಾತ್ರಿಯಿಂದ ಧರಣಿ ಆರಂಭಿಸಿದರು.ನಗರದ ಸ್ವಚ್ಛತೆ ಕುರಿತಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ, ಅನಿವಾರ್ಯವಾಗಿ ಪ್ರತಿಭಟನೆ ನಡೆಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.



ವೇದಿಕೆ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಆರ್. ವೇಣುಗೋಪಾಲ್ ಮಾತನಾಡಿ. ನಗರವನ್ನು ಕಸ ಮುಕ್ತವನ್ನಾಗಿ ಮಾಡಲು ಹಲವು ಅಂಶಗಳನ್ನು ಪಾಲಿಸುವ ಅಗತ್ಯವಿದೆ. ಅದಕ್ಕೆ ಸಹಕಾರ ದೊರೆಯದ ಕಾರಣ ಹೋರಾಟ ನಡೆಸಲಾಗಿದೆ ಎಂದರು.ಮಂಗಳೂರು ನಗರದಲ್ಲಿ ಸ್ವಚ್ಛತೆ ಸಂಬಂಧ ಕರೆದಿರುವ ಟೆಂಡರ್ ಮಾದರಿಯಲ್ಲೇ ಇಲ್ಲಿಯೂ ಕ್ರಮ ತೆಗದುಕೊಳ್ಳಬೇಕು. ಅಲ್ಲಿನ ಷರತ್ತಿನ ಪ್ರಕಾರ ಗುತ್ತಿಗೆ ನೀಡಿದರೆ ಲೋಪದ ಸಾಧ್ಯತೆ ಇರುವುದಿಲ್ಲ. ಹಾಗಾಗಿ, ಈ ಬೇಡಿಕೆ ಈಡೇರಿಕೆಗೆ ನಮ್ಮ ಒತ್ತಾಯವಿದೆ ಎಂದು ಅವರು ತಿಳಿಸಿದರು.



ಇಲ್ಲಿನ ನ್ಯೂಟೌನ್ ಭಾಗದ ಎರಡು ವಾರ್ಡ್‌ಗಳನ್ನು ಮಾತ್ರ ಸ್ವಚ್ಛತಾ ಟೆಂಡರ್ ಕಾರ್ಯಕ್ಕೆ ಸೇರ್ಪಡೆ ಮಾಡಿರುವುದು ಸರಿಯಲ್ಲ. ಇದಕ್ಕೆ ಎಲ್ಲಾ ವ್ಯಾಪ್ತಿಯನ್ನು ಸೇರ್ಪಡೆ ಮಾಡಬೇಕು ಎಂಬುದು ತಮ್ಮ ಬೇಡಿಕೆಯಲ್ಲಿನ ಪ್ರಮುಖ ಅಂಶವಾಗಿದೆ. ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಅವರ ಆದೇಶ ಪ್ರಕಾರ ಟೆಂಡರ್ ಪ್ರಕ್ರಿಯೆ ನಡೆದಾಗ ಸ್ವಚ್ಛತೆ ಸಮಸ್ಯೆ ಎದುರಾಗುವುದಿಲ್ಲ. ಇದನ್ನು ಪಾಲನೆ ಮಾಡಲು ಅಧಿಕಾರಿಗಳು ಮುಂದಾಗಬೇಕು ಎಂದು ಆಗ್ರಹಿಸಿದರು.ಈ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಜಿಲ್ಲೆ ಹಾಗೂ ತಾಲ್ಲೂಕು ಆಡಳಿತದಿಂದ ಭರವಸೆ ಸಿಗುವ ತನಕ ಧರಣಿ ನಡೆಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.