ಭಾನುವಾರ, ಮೇ 16, 2021
28 °C

ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗಳೂರು: ಭದ್ರಾ ಮೇಲ್ದಂಡೆ ಯೋಜನೆಯಡಿ ಸಮಗ್ರ ನೀರಾವರಿಗೆ ಆಗ್ರಹಿಸಿ ನೀರಾವರಿ ಹೋರಾಟ ಸಮಿತಿ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧದ ಎದುರು ಸೋಮವಾರ ಪ್ರದರ್ಶನ ನಡೆಸಿದರು.ಡಿ.ಎನ್. ದೇಸಾಯಿ ವರದಿಯಲ್ಲಿ ತಾಲ್ಲೂಕಿಗೆ ಕೇವಲ 18 ಸಾವಿರ ಎಕರೆಗೆ ನೀರು ಹರಿಸಲು ಶಿಫಾರಸು ಮಾಡಲಾಗಿದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಬರಪೀಡಿತ ಪ್ರದೇಶದಲ್ಲಿ ಸಮಗ್ರ ನೀರಾವರಿ ಯೋಜನೆ ಜಾರಿ ಮಾಡದೇ ಇದ್ದಲ್ಲಿ ಇಲ್ಲಿನ ಜನಜೀವನ ಕಷ್ಟಕರವಾಗಿ ಪರಿಣಮಿಸಲಿದೆ.

ಬೇಡಿಕೆ ಈಡೇರಿಕೆಗಾಗಿ 105 ದಿನಗಳ ನಿರಂತರ ಹೋರಾಟ ನಡೆಸಿದ್ದು 18 ಸಾವಿರ ಎಕರೆ ನೀರಾವರಿಗೆ ಅಲ್ಲ. ಅದು ಸಮಗ್ರ ನೀರಾವರಿಗಾಗಿ. ಆದರೆ, ಹೋರಾಟಕ್ಕೆ ಸರ್ಕಾರ ಸಕರಾತ್ಮಾಕವಾಗಿ ಸ್ಪಂದಿಸುತ್ತಿಲ್ಲ ಎಂದು ಪ್ರದರ್ಶನಕಾರರು ಆರೋಪಿಸಿದರು.ಕಾಲುವೆ ಮಾರ್ಗವನ್ನು ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟದ ಬದಲು ಹೆಚ್ಚುವರಿಯಾಗಿ ಸುತ್ತುವರಿದುಕೊಂಡು ಬರುವಂತೆ ವಿನ್ಯಾಸ ಮಾಡಿರುವುದು ತಾರತಮ್ಯದಿಂದ ಕೂಡಿದೆ. ಇದರಿಂದ ಕೊನೆಯ ಭಾಗಕ್ಕೆ ಸಮಪರ್ಕಕವಾಗಿ ನೀರು ಹರಿಯಲು ಸಾಧ್ಯವಾಗದೆ ಈ ಭಾಗದ ರೈತರಿಗೆ ಅನ್ಯಾಯವಾಗಲಿದೆ.

 

ಬೆಳಗಟ್ಟ ಮಾರ್ಗವಾಗಿ ಪ್ರಸ್ತುತ ಕೋಲಾರ ಜಿಲ್ಲೆಗೆ ನೀಡುವ 5.6 ಟಿಎಂಸಿ ನೀರನ್ನು  ನ್ಯಾಯ ಸಮ್ಮತವಾಗಿ ಈ ಪ್ರದೇಶಕ್ಕೆ ನೀಡಬೇಕು ಎಂದು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ತೋರಣಗಟ್ಟೆ ತಿಪ್ಪೇಸ್ವಾಮಿ ಒತ್ತಾಯಿಸಿದರು.ಮುಂದಿನ ಹಂತದ ಹೋರಾಟದ ರೂಪರೇಷೆಯನ್ನು ನಿರ್ಧರಿಸುವ ಸಲುವಾಗಿ ಏ. 21ರಂದು ಪಟ್ಟಣದಲ್ಲಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಪಕ್ಷಾತೀತವಾಗಿ ನಿರ್ಧಾರ ಕೈಗೊಳ್ಳಲಾಗುವುದು. ತಾಲ್ಲೂಕಿನ ಸಮಸ್ತ ಜನತೆಯ ಹಿತದೃಷ್ಟಿಯಿಂದ ಎಲ್ಲರೂ ಸಹಕಾರ ನೀಡಬೇಕು ಎಂದು ತಿಪ್ಪೇಸ್ವಾಮಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಎಚ್.ಪಿ. ನಾಗರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು. ಜಿ.ಪಂ. ಸದಸ್ಯರಾದ ಕೆ.ಪಿ. ಪಾಲಯ್ಯ, ಕಾಂಗ್ರೆಸ್ ಮುಖಂಡರಾದ ತಿಪ್ಪೇಸ್ವಾಮಿಗೌಡ, ಎಚ್.ಪಿ. ರಾಜೇಶ್, ಹನುಮಂತಾಪುರ ಕೃಷ್ಣಮೂರ್ತಿ, ಕಲ್ಲೇಶ್ ರಾಜ್  ಪಟೇಲ್, ಬಿಸ್ತುವಳ್ಳಿ ಬಾಬು ಹಾಗೂ ಆರ್. ಓಬಳೇಶ್, ಡಿ.ಟಿ. ಆದಂ, ದಲಿತ ಸಂಘರ್ಷ ಸಮಿತಿ ಸಂಚಾಲಕ ಸಿದ್ದಮ್ಮನಹಳ್ಳಿ ವೆಂಕಟೇಶ್, ಪ್ರಕಾಶ್‌ರೆಡ್ಡಿ, ನಾಗಲಿಂಗಪ್ಪ, ಅಬ್ದುಲ್ ಲತೀಫ್ ಸಾಬ್, ತ್ಯಾಗರಾಜ್, ಓಬಣ್ಣ  ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.