ಶನಿವಾರ, ಜೂಲೈ 11, 2020
28 °C

ಭದ್ರಾ ಮೇಲ್ದಂಡೆ: ಸರ್ಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಹೊಸೂರು (ತರೀಕೆರೆ): ಭದ್ರಾ ಮೇಲ್ದಂಡೆ ಯೋಜನೆ ತಾಲ್ಲೂಕಿನಲ್ಲಿ ಪ್ರಾರಂಭವಾಗಿ ವರ್ಷ ಕಳೆದರೂ ಯೋಜನೆ  ಅಧಿಕಾರಿಗಳು ಸಂಕಷ್ಟದಲ್ಲಿರುವ ರೈತರನ್ನು ಭೇಟಿ ಮಾಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಯೋಜನೆಯ ವ್ಯಾಪ್ತಿಯಲ್ಲಿ ಜಮೀನು ಕಳೆದುಕೊಳ್ಳುತ್ತಿರುವವರು ತಾಲ್ಲೂಕಿನ ಕೆ.ಹೊಸೂರು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದ ರೈತರ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.ನಮ್ಮ ಕಷ್ಟಗಳನ್ನು ಕಣ್ಣಾರೆ ಕಾಣಲು ಸ್ಥಳಕ್ಕೆ ಬೇಟಿ ನೀಡುವಂತೆ ಹಲವು ಬಾರಿ ಮಾಡಿದ ಮನವಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಮತ್ತು ಯೋಜನೆ ಅನುಷ್ಟಾನ ವಿರುದ್ಧ ಸದ್ಯದಲ್ಲಿ ರೈಲು, ರಸ್ತೆತಡೆ ಚಳುವಳಿ ನಡೆಸಲು ಸಭೆಯಲ್ಲಿ ರೈತರು ನಿರ್ಣಯ ಕೈಗೊಂಡರು.ತಾಲ್ಲೂಕಿನ ಲಕ್ಕವಳ್ಳಿ ಹೋಬಳಿಯಲ್ಲಿ ಮಾತ್ರ ನೀರಾವರಿ ಸೌಲಭ್ಯವಿದ್ದು, ಭದ್ರಾನದಿಯಿಂದ ಎಲ್ಲಾ ಹೋಬಳಿಗಳಿಗೆ ಮೊದಲು ನೀರು ಕೊಟ್ಟು ನಂತರ ಇತರರಿಗೆ ನೀರುಕೊಡಿ ಎಂದು ಹೇಳಿದ ರೈತರು ಯಾವುದೇ ಕಾರಣಕ್ಕೂ ಯೋಜನೆ ಸಂಪೂರ್ಣವಾಗಿ ತಾಲ್ಲೂಕಿನಲ್ಲಿ ಜಾರಿಯಾಗಲು ಬಿಡುವುದಿಲ್ಲ ಎಂದರು. ಸಭೆಯಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಕುಮಾರ್ ಯೋಜನೆಗೆ ನಮ್ಮ ವಿರೋಧವಿಲ್ಲ, ಆದರೆ ಸರ್ಕಾರ ಅನಗತ್ಯವಾಗಿ ಸುರಂಗ ತೋಡುವುದಕ್ಕೆ ನಮ್ಮ ವಿರೋಧವಿದೆ ಎಂದರು.ರೈತರ ಪರ ಮಾತನಾಡಿದ ಖಾಸಗಿ ಕಂಪನಿಯೊದರ ಎಂಜಿನಿಯರ್ ನೀಲಕಂಠ, ಯೋಜನೆಗೆ ತಮ್ಮ ಜಮೀನು ಕಳೆದುಕೊಳ್ಳುತ್ತಿರುವ ರೈತರು ತಾವೇ ಹೋರಾಡಬೇಕಾದ ಸ್ಥಿತಿ ಬಂದಿದೆ. ಜನಪ್ರತಿನಿಧಿಗಳು ಜನ ನಾಯಕರು ಕೇವಲ ರೈತರ ಕಣ್ಣೊರೆಸುವ ನಾಟಕವನ್ನಾಡುತ್ತಿದ್ದಾರೆ ಎಂದರು.ತಾಲ್ಲೂಕಿನಲ್ಲಿ ಯೋಜನೆಯ ಕಾಲುವೆ ಬರುವ ಮಾರ್ಗದ ಗ್ರಾಮಗಳಾದ ಹಳಿಯೂರು, ಸೊಕ್ಕೆ, ಚಾಕೋನಹಳ್ಳಿ, ಇಂದಾವರ, ಅಟತ್ತಿಗನಾಳು, ಬೀರಾಪುರ, ಚನ್ನಾಪುರ, ದ್ಯಾಮಾಪುರ, ಕಲ್ಲುಶೆಟ್ಟಿಹಳ್ಳಿ, ಜೋಡಿ ಗೋವಿಂದಪುರ, ಸಮತಳ ಗ್ರಾಮ ಸೇರಿದಂತೆ ನೂರಾರು ರೈತರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.