ಸೋಮವಾರ, ಮಾರ್ಚ್ 8, 2021
19 °C

ಭರದ ಕಾಮಗಾರಿ: ಮುಗಿಯದ ಕಿರಿಕಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭರದ ಕಾಮಗಾರಿ: ಮುಗಿಯದ ಕಿರಿಕಿರಿ

ರಾಣೆಬೆನ್ನೂರು: ನಗರದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚುತ್ತಿದ್ದು, ಅಭಿವೃದ್ಧಿ ಕಾಮಗಾರಿಗಳು ಭರಾಟೆ ಯಿಂದ ನಡೆಯುತ್ತಿವೆ. ಅತ್ತ ರಾಷ್ಟ್ರೀಯ ಹೆದ್ದಾರಿ ಡಿವೈಡರ್ ರಸ್ತೆ ನಿರ್ಮಾಣ ಕೈಗೊಂಡಿದ್ದರಿಂದ ರಸ್ತೆ ಅಗಲೀಕರಣ ಮತ್ತು ರಸ್ತೆ ಅತಿಕ್ರಮಣ ತೆರವುಗೊಳಿಸುವುದು, ಇತ್ತ ನಗರದ ತುಂಬೆಲ್ಲಾ ಒಳಚರಂಡಿ ಯೋಜನೆ ಕಾಮಗಾರಿ ನಡೆಯುತ್ತಿರುವುದು ನಗರದ ಜನತೆಗೆ ಸಂತಸ ತಂದಿದೆ, ಆದರೆ ಕಾಮಗಾರಿ ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿರು ವುದು ಜನತೆಯ ಸುಗಮ ಸಂಚಾರಕ್ಕೆ ಅಷ್ಟೇ ಕಿರಿಕಿರಿ ಉಂಟು ಮಾಡಿದೆ.ನಗರದಲ್ಲಿ ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕೆ ಯೋಜನಾ ಕೋಶದಿಂದ ಒಳಚರಂಡಿ ಕಾಮಗಾರಿಗೆ 30.49 ಕೋಟಿ ರೂ ಅನುದಾನಕ್ಕೆ ಅಂದಾಜಿಸಲಾಗಿತ್ತು.ಸರ್ಕಾರ 35.53 ಕೋಟಿ ರೂ ಬಿಡುಗಡೆ ಮಾಡಿದೆ. ನಗರದಲ್ಲಿ ಒಟ್ಟು 187 ಕಿಮೀ ಒಳಚರಂಡಿ ಯೋಜನೆಗೆ ಸರ್ವೆ ಮಾಡಲಾಗಿತ್ತು. ಸದ್ಯ 65 ಕಿ.ಮೀ.ನಷ್ಟು ಕಾಮಗಾರಿ ಕೈಗೊಳ್ಳಲಾಗಿದೆ. 2010ರ  ಜೂನ್16  ಕ್ಕೆ ಪ್ರಾರಂಭಿಸಿದ 65 ಕಿ.ಮೀ ಪೈಪ್ ಲೈನ್ ಅಳವಡಿಸುವ ಕಾಮಗಾರಿ 2012ರ ಡಿಸೆಂಬರ್ 22 ಕ್ಕೆ ಕಾಮಗಾರಿ ಸಂಪೂರ್ಣ ಮುಕ್ತಾಯವಾಗಬೇಕಿತ್ತು. ಈ ವರ್ಷ ಶೇ. 27 ರಷ್ಟು ಕಾಮಗಾರಿ ಆಗಬೇಕಿತ್ತು, ದೊಡ್ಡ ಬಂಡೆಗಲ್ಲು ಹತ್ತಿದ್ದರಿಂದ ಕಾಮಗಾರಿ ಕುಂಠಿತವಾಗಿದೆ. ಶೇ.18 ರಷ್ಟು ಮಾತ್ರ  ಕಾಮಗಾರಿ ಮುಗಿದಿದೆ. ಇಲ್ಲಿಯವರೆಗೆ 5 ಕೋಟಿ ರೂ ಖರ್ಚು ಆಗಬೇಕಿತ್ತು, ಆದರೆ 3 ಕೋಟಿ ರೂ ಹಣ ಮಾತ್ರ ಖರ್ಚಾಗಿದೆ. ನಗರದಲ್ಲಿ ಒಟ್ಟು 2573 ಮ್ಯಾನ್ ಹೋಲ್‌ಗಳು ಇದ್ದು, ಈಗ 1400 ಮ್ಯಾನಹೋಲ್ ಹಾಕಲಾಗಿದೆ, ಈಗಾಗಲೇ ಕಾಂಕ್ರೀಟ್ ರೆಡಿ ಮ್ಯಾನ್‌ಹೋಲ್‌ಗಳನ್ನು ತಂದು ಹಾಕಲಾಗುತ್ತಿದೆ ಎನ್ನುತ್ತಾರೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಜಿ.ಎನ್. ಕುಂದಾಪೂರ.ಈಶ್ವರನಗರ, ಗೌರಿಶಂಕರನಗರ, ಚೌಡೇಶ್ವರಿ ದೇವಸ್ಥಾನ ಹಿಂಭಾಗ, ಮೆಡ್ಲೇರಿ ರಸ್ತೆ, ಮೃತ್ಯುಂಜಯನಗರ, ಪೂರ್ವ ಬಡಾವಣೆ ಶಾಲೆ, ವಿನಾಯಕ ನಗರ, ಬನಶಂಕರಿ ಬಡಾವಣೆ, ಎಕೆಜೆ ಕಾಲೋನಿ. ಗಣೇಶ ನಗರ, ರಾಜೇಶ್ವರಿ ನಗರ, ವಿದ್ಯಾನಗರ ಮತ್ತು ಮಾರುತಿನಗರದಲ್ಲಿ ಶೇ. 70ರಷ್ಟು ಕಾಮಗಾರಿ ಮುಗಿದಿದೆ.ರಾಜೇಶ್ವರಿ ನಗರ ಮತ್ತು ಮಾರುತಿ ನಗರದಲ್ಲಿ ಒಳಚರಂಡಿ ಕಾಲುವೆ ತೋಡುವಾಗ ಮೂರು ನಾಲ್ಕು ಕಡೆ ಹೆಚ್ಚಿನ ಚರಂಡಿ ನೀರು ತುಂಬಿಕೊಂಡಿದ್ದರಿಂದ ಅದನ್ನು ತೆಗೆದು ಹಾಕುವಲ್ಲಿ ಮತ್ತು ಕೆಲ ಕಡೆ ಬೃಹತ್ ಬಂಡೆಗಲ್ಲು ಹತ್ತಿದ್ದರಿಂದ ಕಂಪ್ರೆಸ್ಸರ್ ಹಚ್ಚಿ ಬಂಡೆಯನ್ನು ಒಡೆಯುವಲ್ಲಿ ಸಾಕಷ್ಟು ಸಮಯ ತೆಗೆದುಕೊಂಡಿದ್ದರಿಂದ ಕಾಮಗಾರಿ ವಿಳಂಬವಾಗಿದೆ ಎನ್ನುತ್ತಾರೆ ರಾಮಕೀ ಇನಪಾಸ್ಟ್ರಕ್ಚರ್ ಲಿಮಿಟೆಡ್ ಮತ್ತು ವೆಂಚುರ್ ವಿತ್ ಎಪಿಆರ್ ಪ್ರೊಜೆಕ್ಟ್ಸ್‌ನ ಹೈದ್ರಬಾದ್ ಕಂಪನಿಯ ಗುತ್ತಿಗೆಯ ವ್ಯವಸ್ಥಾಪಕರಾದ ಶ್ರೀಮನ್ ನಾರಾಯಣ.ಸಂಪೂರ್ಣ ಒಳಚರಂಡಿ ಯೋಜನೆ ಮುಗಿದ ಮೇಲೆ ಈಗಾಗಲೇ ಕಟ್ ಮಾಡಿದ ರಸ್ತೆಯನ್ನು ಪುನಾ ಮರು ನಿರ್ಮಾಣ ಮಾಡಲಾಗುವುದು. ಒಳ ಚರಂಡಿ ಕಾಲುವೆಗೆ ಸಿಮೆಂಟ್ ಕಾಂಕ್ರೀಟ್ ಪೈಪ್ ಮತ್ತು ಸ್ಟೋನ್ ವೇರ್ ಪೈಪ್‌ಗಳನ್ನು ಉಪಯೋಗಿಸ ಲಾಗುತ್ತಿದೆ. ಗೌರಿಶಂಕರ ನಗರದಲ್ಲಿ ಮಾತ್ರ ಯಾವುದೇ ಅಡೆತಡೆ ಇಲ್ಲದೇ ಬೇಗನೆ ಕಾಮಗಾರಿ ಮುಗಿಯಿತು ಎನ್ನುತ್ತಾರೆ ಎಂಜಿನಿಯರ್.ಒಳಚರಂಡಿ ಶುದ್ಧೀಕರಣ ಘಟಕ ನಗರದ ಹೊರ ವಲಯ ದಲ್ಲಿರುವ ಹುಲ್ಲತ್ತಿ ರಸ್ತೆಯಲ್ಲಿ 7.50 ಎಂ.ಎಲ್‌ಡಿ ಕೆಪಾಸಿಟಿ, ಮೇನ್ ಟ್ಯಾಂಕ್8.10 ಕಿಮೀ, ಒಟ್ಟು 65.14 ಕಿಮೀ, ಎಸ್‌ಟಿಪಿ 6 ಕೋಟಿ ಅನುದಾನದಲ್ಲಿ (ಒಳಚಂರಡಿ ಶುದ್ದೀಕರಣ ಘಟಕ) ಸೀವೆಜ್ ಟ್ರೀಟ್‌ಮೆಂಟ್ ಪ್ಲಾಂಟ್ ನಿರ್ಮಾಣ ಕಾರ್ಯ ನಡೆದಿದೆ ಎನ್ನುತ್ತಾರೆ ಎಂಜಿನಿಯರ್ ಪ್ರಭು ಮುಂಡಾಸದ.100 ಮೀ ಉದ್ದ 5 ಯುನಿಟ್‌ನ ಬದು ನಿರ್ಮಾಣ (ಲಗೂನ್ಸ್) ಬಂಡ್ ಕಟ್ಟಲಾಗಿದೆ. ಒಳಚರಂಡಿ ಶುದ್ಧೀಕರಣ ಘಟಕದ ಬಳಿ ಜನರೇಟರ್ ಕೊಠಡಿ, ಸಿಬ್ಬಂದಿ ವಸತಿ ಗೃಹ, ಕಂಟ್ರೋಲ್ ರೂಮ್ ನಿರ್ಮಾಣ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗಿದೆ. ಮೆಡ್ಲೇರಿ ರಸ್ತೆ, ಕೊಟ್ರೇಶ್ವರ ನಗರ, ಚೌಡೇಶ್ವರಿ ನಗರದ ರೈಲ್ವೆ ಹಳಿ ಹತ್ತಿರ ಸುರಂಗ ಮಾರ್ಗ ಕೊರೆದು ಒಳಚರಂಡಿ ಕಾಲುವೆ ಕೊರೆಯಲಾಗಿದೆ. 2010ರ ಜೂ. 23ರಂದು ಒಳಚರಂಡಿ ಯೋಜನೆ ಕಾಮಗಾರಿ ಪ್ರಾರಂಭವಾಗಿದ್ದು, 2011ರ ಡಿ.22ರೊಳಗಾಗಿ ಕಾಮಗಾರಿ ಮುಗಿಯಬೇಕಾಗಿದೆ ಎನ್ನುತ್ತಾರೆ. ಕಾದು ನೋಡಬೇಕಿದೆ.ಜನೆತೆಗೆ ಕಿರಿ ಕಿರಿ: ನಗರದ ಒಳಚರಂಡಿ ಯೋಜನೆಯ (ಯುಜಿಡಿ) ಕಾಮಗಾರಿ ಕೈಗೆತ್ತಿಕೊಂಡು ರಸ್ತೆಗಳ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆಯಲ್ಲದೇ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ನಾಗರಿಕರು ದ್ವಿಚಕ್ರವಾಹನಗಳ ಮೇಲೆ ಸವಾರಿ ಮಾಡುವುದಿರಲಿ ನಡೆದುಕೊಂಡು ಹೋಗಲೂ ಭಯ ಪಡುವಂತಾಗಿದೆ.ಶಾಲಾ ಕಾಲೇಜುಗಳು ಪ್ರಾರಂಭ ವಾಗಿದ್ದು, ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಆಟೋ ಮತ್ತು ಶಾಲಾ ವಾಹನಗಳು ಓಡಾಡಲು ತೊಂದರೆ ಅನುಭವಿಸಬೇಕಾಗಿದೆ. ಎಲ್ಲಿ ಬೇಕಾದಲ್ಲಿ ಸಿಕ್ಕು ಹಾಕಿಕೊಳ್ಳುತ್ತವೆ, ಇಡೀ ನಗರವೇ ಕೊಳಚೆ ಪ್ರದೇಶದಂತೆ ಭಾಸವಾಗುತ್ತಿದೆ. ತಕ್ಷಣವೇ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ಅರಿತುಕೊಂಡು ಸೂಕ್ತ ಸುರಕ್ಷತಾ ವ್ಯವಸ್ಥೆ ಮಾಡಬೇಕು, ಇಲ್ಲವಾದರೆ ಮಳೆಗಾಲ ಮುಗಿಯುವ ವರೆಗೂ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ನಗರದ ಜನತೆ ಒತ್ತಾಯಿಸುತ್ತಿದ್ದಾರೆ. ಎಲ್ಲ ರಸ್ತೆಗಳ ಮಧ್ಯದದಲ್ಲಿಯೇ ದೊಡ್ಡ ದೊಡ್ಡ ಗುಂಡಿಗಳನ್ನು ತೆಗೆದು ಒಳಚರಂಡಿ ಟ್ಯಾಂಕ್‌ಗಳನ್ನು ಅಳವಡಿಸಲಾಗುತ್ತಿದೆ. ಆದರೆ, ಮುಂಗಾರು ಮಳೆ ಪ್ರಾರಂಭವಾಗಿದ್ದರಿಂದ ಯಾವುದೇ ರಸ್ತೆಗೆ ಹೋದರೂ ತಗ್ಗು ಇದೆ ಎಂಬುದು ಗೊತ್ತಾಗುವುದಿಲ್ಲ. ಯಾವುದೆ ಸುಕ್ಷರತಾ ಕ್ರಮ ತೆಗೆದುಕೊಳ್ಳದೇ ಗುಂಡಿಗಳನ್ನು ಅಗೆದು ಅರ್ಧಮರ್ಧ ಮುಚ್ಚಿ ಹಾಗೇ ಬಿಡಲಾಗಿದೆ. ಹೊರ ತೆಗೆದ ಮಣ್ಣು ರಸ್ತೆ ಮೇಲೆ ಹರಡಿ ರಸ್ತೆಗಳು ಕೆಸರುಮಯವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.