ಭಾನುವಾರ, ಮಾರ್ಚ್ 7, 2021
32 °C
ಅಮೆರಿಕ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಅಧ್ಯಕ್ಷೀಯ ಅವಧಿಯ ಕೊನೆಯ ಭಾಷಣ ಮಾಡಿದ ಒಬಾಮ

ಭವಿಷ್ಯದ ಆತಂಕ ಬೇಡ; ಆಶಾವಾದವಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭವಿಷ್ಯದ ಆತಂಕ ಬೇಡ; ಆಶಾವಾದವಿರಲಿ

ವಾಷಿಂಗ್ಟನ್‌ (ಪಿಟಿಐ/ಐಎಎನ್ಎಸ್‌):  ಅಧ್ಯಕ್ಷ ಬರಾಕ್‌ ಒಬಾಮ ಅವರು ಮಂಗಳವಾರ ‘ಅಮೆರಿಕ ಒಕ್ಕೂಟದ ಸ್ಥಿತಿಗತಿ’ ಕುರಿತು ಕಾಂಗ್ರೆಸ್‌ನ (ಸಂಸತ್ತಿನ) ಜಂಟಿ ಅಧಿವೇಶನವನ್ನುದ್ದೇಶಿಸಿ ತಮ್ಮ ಅವಧಿಯ ಕೊನೆಯ ಭಾಷಣ ಮಾಡಿದರು. ದೇಶದ ಮತ್ತು ತಮ್ಮ ಭವಿಷ್ಯದ ಬಗ್ಗೆ  ಯಾವುದೇ ಆತಂಕ ಇರಿಸಿಕೊಳ್ಳದೆ ಆಶಾವಾದಿಯಾಗಿ ಇರುವಂತೆ ಅವರು ಅಮೆರಿಕದ ಜನರಿಗೆ  ಕರೆ ನೀಡಿದರು.‘ಭವಿಷ್ಯದ ಅಮೆರಿಕ’ದ ಬಗ್ಗೆ ತಮ್ಮ ಮಹತ್ವಾಕಾಂಕ್ಷೆಗಳನ್ನು, ಚಿಂತನೆಗಳನ್ನು, ಆಶಯಗಳನ್ನು ದೇಶದ ಮುಂದೆ ಪ್ರಸ್ತುತಪಡಿಸಿದರು.  ಏಳು ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಅನುಷ್ಠಾನಕ್ಕೆ ತಂದ ಯೋಜನೆಗಳು, ಕಾರ್ಯಕ್ರಮಗಳು ಅಮೆರಿಕವನ್ನು ಯಶಸ್ಸಿನ ಹಾದಿಯಲ್ಲಿ ತಂದು ನಿಲ್ಲಿಸಿದೆ ಎಂದು ಹೆಮ್ಮೆಯಿಂದ ನುಡಿದರು.ಭಯೋತ್ಪಾದನೆ ನಿರ್ಮೂಲನೆಗೆ ಒತ್ತು, ದೇಶದ ಆರ್ಥಿಕತೆ ಬಗ್ಗೆ ಸಂತೃಪ್ತಿ,  ನಿರುದ್ಯೋಗ ಪ್ರಮಾಣದಲ್ಲಿನ ಇಳಿಕೆ, ವಲಸೆ ನೀತಿ, ಹವಾಮಾನ ಬದಲಾವಣೆ,  ರಾಜಕೀಯ ಕ್ಷೇತ್ರ, ಹೆಣ್ಣು ಮಕ್ಕಳ ಶಿಕ್ಷಣ,  ಮುಂದಿನ ಅಧ್ಯಕ್ಷರು ಆದ್ಯತೆ ನೀಡಬೇಕಾಗಿರುವ ಕಾರ್ಯಯೋಜನೆಗಳ ಬಗ್ಗೆ ಸ್ಪಷ್ಟ ನಿಲುವು, ಸಲಹೆಗಳು ಭಾಷಣದಲ್ಲಿದ್ದವು.ನಿಪುಣ ಕಲಾವಿದನೊಬ್ಬ   ತನ್ನ ಭಾವನೆಗಳಿಗೆ ಬಣ್ಣ ತುಂಬಿ, ಮೌನವಾಗಿ ಸುಂದರ ಕಲಾಕೃತಿ ರಚಿಸಿದ ರೀತಿಯಲ್ಲಿ ತಮ್ಮ ನಾಯಕತ್ವದ ಅಮೆರಿಕದ ಚಿತ್ರಣವನ್ನು ಅವರು ಮಾತಿನಲ್ಲಿ ಕಟ್ಟಿಕೊಟ್ಟರು. ಅಮೆರಿಕದ ಆರ್ಥಿಕತೆ ಬಲಿಷ್ಠ ಮತ್ತು  ಸ್ಥಿರ: ಅಮೆರಿಕದ ಆರ್ಥಿಕ ಪರಿಸ್ಥಿತಿ ನಿರಾಶದಾಯಕವಾಗಿದೆ ಎಂಬುದನ್ನು ಅಲ್ಲಗಳೆದ ಅಧ್ಯಕ್ಷ ಬರಾಕ್‌ ಒಬಾಮ ಅವರು ವಿಶ್ವದಲ್ಲೇ ಅಮೆರಿಕ ಬಲಿಷ್ಠ ಮತ್ತು ಸ್ಥಿರವಾದ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ ಎಂದು ಪ್ರತಿಪಾದಿಸಿದರು.‘ಅಮೆರಿಕದ ಆರ್ಥಿಕ ಪರಿಸ್ಥಿತಿ   ಕುರಿತಂತೆ ರಾಜಕೀಯವಾಗಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ, ಆದರೆ  ಅಮೆರಿಕ ಜಗತ್ತಿನಲ್ಲೇ ಶಕ್ತಿಶಾಲಿ ರಾಷ್ಟ್ರವಾಗಿದೆ’ ಎಂದು ತಮ್ಮ ಆರ್ಥಿಕ ನೀತಿಗಳನ್ನು ಸಮರ್ಥಿಸಿಕೊಂಡರು. ‘ಅಮೆರಿಕನ್ನರು ಭಾವಿಸಿರುವಂತೆ ನಮ್ಮ ಆರ್ಥಿಕ ಪರಿಸ್ಥಿತಿ ನಿರಾಶದಾಯಕವಾಗಿಲ್ಲ, ನಾವು ಅಪಾರವಾದ ಸೇನಾ ಶಕ್ತಿಯನ್ನು  ಹೊಂದಿದ್ದೇವೆ,  ನಮ್ಮ  ಸೇನೆ ದಕ್ಷವಾಗಿ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಈಗಾಗಲೇ ಇತಿಹಾಸ ಸಾರಿ ಹೇಳಿದೆ. ಯಾವ ದೇಶಕ್ಕೂ  ಅಮೆರಿಕ ಮತ್ತು ನಮ್ಮ ಮಿತ್ರ ದೇಶಗಳ ಮೇಲೆ ದಾಳಿ ನಡೆಸುವ ಧೈರ್ಯವಿಲ್ಲ, ಏಕೆಂದರೆ ಅವರಿಗೆ ಗೊತ್ತಿದೆ ನಾವು ಹಾಳು ಮಾಡುತ್ತೇವೆ’ ಎಂದು ಒಬಾಮ ತಿಳಿಸಿದರು.ವಿಶ್ವದ ಜನರಿಗೆ ಗೊತ್ತಿದೆ ನಮ್ಮ ನಿಲುವು ಏನು ಎಂಬುದು, ಇಂದು ಜನರು  ಮಾಸ್ಕೊ ಮತ್ತು ಬೀಜಿಂಗ್‌ ಕಡೆ ನೋಡುತ್ತಿಲ್ಲ, ಅಂತರರಾಷ್ಟ್ರೀಯ ಸಮಸ್ಯೆಗಳ ಸ್ಪಂದನಕ್ಕೆ ಅಮೆರಿಕದ ಕಡೆ ನೋಡುತ್ತಿದ್ದಾರೆ ಎಂದರು.ನನ್ನ ಆಡಳಿತಾವಧಿಯಲ್ಲಿ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಲಾಗಿದ್ದು ನಮ್ಮ ಆರ್ಥಿಕ ಪರಿಸ್ಥಿತಿ ಬಲಿಷ್ಠ ಮತ್ತು ಸ್ಥಿರವಾಗಿದೆ ಎಂದು ಅವರು  ಪುನರುಚ್ಚರಿಸಿದರು.ಬದಲಾಗೋಣ ಬನ್ನಿ...:  ‘ನಾವು ಅತಿ ವಿಶಿಷ್ಟವಾದ,  ಸಂಕ್ರಮಣದ ಕಾಲಘಟ್ಟದಲ್ಲಿದ್ದೇವೆ. ಬದಲಾವಣೆಯೆಂದರೆ... ನಾವು ಬದುಕುವ ರೀತಿ, ಕೆಲಸ ಮಾಡುವ ರೀತಿ, ನಮ್ಮ ಗ್ರಹ, ನಮ್ಮ ಸ್ಥಳ ಮತ್ತು ಇಡೀ ಜಗತ್ತನ್ನು ಮರುವಿನ್ಯಾಸಗೊಳಿಸುವ ನಿಟ್ಟಿನಲ್ಲಿ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕಿದೆ’ ಎಂದರು. ಉಪಾಧ್ಯಕ್ಷ ಜೊ ಬಿಡೆನ್‌ ಮತ್ತು ಸಭಾಧ್ಯಕ್ಷ ಪೌಲ್‌ ಡಿ. ರೇಯನ್‌ ಅವರ ಮುಂದೆ ನಿಂತು ಒಬಾಮ ತಮ್ಮ ಮನದಾಳದ ಮಾತುಗಳನ್ನು ಮುಗಿಸಿ ನಿಟ್ಟುಸಿರು ಬಿಟ್ಟರು.ಬದಲಾಗೋಣ ಬನ್ನಿ: ‘ನಾವು ಅತಿ ವಿಶಿಷ್ಟವಾದ,  ಸಂಕ್ರಮಣದ ಕಾಲಘಟ್ಟದಲ್ಲಿದ್ದೇವೆ. ಬದಲಾವಣೆಯೆಂದರೆ... ನಾವು ಬದುಕುವ ರೀತಿ, ಕೆಲಸ ಮಾಡುವ ರೀತಿ, ನಮ್ಮ ಗ್ರಹ, ನಮ್ಮ ಸ್ಥಳ ಮತ್ತು ಇಡೀ ಜಗತ್ತನ್ನು ಮರುವಿನ್ಯಾಸಗೊಳಿಸುವ ನಿಟ್ಟಿನಲ್ಲಿ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕಿದೆ’ಒಂದೆಡೆ ಹೆಮ್ಮೆ, ಮತ್ತೊಂದೆಡೆ ಬಿಗು: ಒಬಾಮ  ಅವರ ಭಾಷಣದುದ್ದಕ್ಕೂ ಡೆಮಾಕ್ರಟಿಕ್‌ ಪಕ್ಷದ ಸಂಸದರು ಮುಗುಳ್ನಗುತ್ತಾ, ತಮ್ಮ ನಾಯಕನತ್ತ ಹೆಮ್ಮೆಯ ನೋಟ ಬೀರುತ್ತಾ ಪ್ರೋತ್ಸಾಹಿಸಿದರೆ ರಿಪಬ್ಲಿಕನ್ನರು ಬಿಗುಮಾನದಿಂದ ಕುಳಿತಿದ್ದರು ಎಂದು ‘ವಾಷಿಂಗ್ಟನ್‌ ಪೋಸ್ಟ್‌’ ವರದಿ ಮಾಡಿದೆ.

ಕೊನೆಯದಲ್ಲ, ಮೊದಲ ಭಾಷಣ

ನನ್ನ ದೃಷ್ಟಿ ಯುವಜನತೆಯ ಮೇಲಿದೆ. ಹಾಗಾಗಿ ಅಧ್ಯಕ್ಷನಾಗಿ ಇದು ಕೊನೆಯ ಭಾಷಣವಲ್ಲ, ಮೊದಲನೆಯದು ಎಂದು ಅನಿಸುತ್ತಿದೆ ಎಂದು ಒಬಾಮ ಹೇಳಿದರು. ‘ನಾನು ಅಧಿಕಾರಕ್ಕೆ ಬಂದಾಗ ಆರ್ಥಿಕ ಸಂಕಷ್ಟ, ಆಂತರಿಕ ಭದ್ರತೆ ದೊಡ್ಡ ಸವಾಲಾಗಿ ನನ್ನ ಮುಂದಿತ್ತು. ಮತ್ತೊಂದು ದೊಡ್ಡ ಸಮಸ್ಯೆಯಾಗಿದ್ದುದು ನಿರುದ್ಯೋಗ. ಕಳೆದ ಏಳು ವರ್ಷಗಳಲ್ಲಿ 14 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಸುವ ಮೂಲಕ ಸಮಸ್ಯೆಯನ್ನು ಗಣನೀಯವಾಗಿ ಇಳಿಸಿದ್ದೇನೆ’ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಅಮೆರಿಕ ಈಗಲೂ ವಿಶ್ವದಲ್ಲಿ ನಾಯಕನ ಸ್ಥಾನದಲ್ಲಿ ಮುಂದುವರಿದಿದೆ. ಜಾಗತಿಕ ಮಟ್ಟದಲ್ಲಿ ಎಲ್ಲಿಯೇ ಸಮಸ್ಯೆ, ಬಿಕ್ಕಟ್ಟು ಎದುರಾದರೂ ಎಲ್ಲರೂ ನಮ್ಮತ್ತ ಎದುರುನೋಡುತ್ತಾರೆ. ಅಮೆರಿಕ ಪ್ರತಿ ಬಾರಿಯೂ ಆಯಾ ಸಂದರ್ಭಗಳ ನಿರೀಕ್ಷೆಗೆ ತಕ್ಕುದಾಗಿ ಸ್ಪಂದಿಸಿದೆ. ನಾಯಕತ್ವ ವಹಿಸಿ ಹೋರಾಡಿದೆ ಎಂದರು.

‘ಮೂರನೇ ಜಾಗತಿಕ ಯುದ್ಧವಲ್ಲ’

‘ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ವಿರುದ್ಧದ ಹೋರಾಟವನ್ನು ಮೂರನೇ ಜಾಗತಿಕ ಯುದ್ಧಕ್ಕೆ ಹೋಲಿಸಲಾಗದು. ಈ ಹೋರಾಟ ಅದಕ್ಕಿಂತ ಸಂಪೂರ್ಣ ಭಿನ್ನವಾದುದು. ಇದು ಮೂರನೇ ಜಾಗತಿಕ ಯುದ್ಧವಲ್ಲ’ ಎಂದು ಒಬಾಮ ಇದೇ ವೇಳೆ ಸ್ಪಷ್ಟಪಡಿಸಿದರು.

ಐಎಸ್‌ ವಿರುದ್ಧದ ಹೋರಾಟವನ್ನು ಮೂರನೇ ಜಾಗತಿಕ ಯುದ್ಧವೆಂಬಂತೆ ಒಬಾಮ ಬಿಂಬಿಸುತ್ತಿದ್ದಾರೆ ಎಂಬ ರಿಪಬ್ಲಿಕನ್ನರ ಟೀಕೆಗೆ ಈ ಮೂಲಕ ತಿರುಗೇಟು ನೀಡಿದರು.‘ಐಎಸ್‌ ಉಗ್ರರನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂಬ ಸಂದೇಶವನ್ನು ಅವರಿಗೆ ರವಾನಿಸಬೇಕಾದ ಅಗತ್ಯವಿದೆಯೇ?’ ಎಂದು ಅವರು ಪ್ರಶ್ನಿಸಿದರು.ಟ್ರಂಪ್‌ಗೆ ಮಾತಿನ ಚಾಟಿ: ಮುಸ್ಲಿಂ ವಲಸಿಗರನ್ನು  ತಾತ್ಕಾಲಿಕವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿರುವ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಅವರನ್ನು ಒಬಾಮ ತಮ್ಮ ಭಾಷಣದಲ್ಲಿ ಪರೋಕ್ಷವಾಗಿ ಟೀಕಿಸಿದರು. ‘ರಾಜಕಾರಣಿಗಳು ಮುಸ್ಲಿಮರನ್ನು ಅವಮಾನಿಸಿದಾಗ, ಮಸೀದಿ ಧ್ವಂಸವಾದಾಗ ಅಥವಾ ಒಂದು ಮಗು ದೌರ್ಜನ್ಯಕ್ಕೊಳಗಾದಾಗ ನಮ್ಮ ಸುರಕ್ಷತೆಗೆ ಧಕ್ಕೆ ಉಂಟಾಗುತ್ತದೆ. ‘ಧರ್ಮ ಅಥವಾ ಜನಾಂಗವನ್ನು ಗುರಿಯಾಗಿಟ್ಟುಕೊಂಡ ರಾಜಕೀಯವನ್ನು ನಾವು ಸ್ಪಷ್ಟವಾಗಿ ನಿರಾಕರಿಸಬೇಕು’ ಎಂದು ಅವರು ಟ್ರಂಪ್‌ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಅಧ್ಯಕ್ಷರ ಭಾಷಣ ಸಾಗಿಬಂದ ಬಗೆ

ಅಮೆರಿಕದ ಅಧ್ಯಕ್ಷರು ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಮಾಹಿತಿ ಹಂಚಿಕೊಳ್ಳುವುದು ಮತ್ತು ಸಂಸದರ ಸಹಮತ ಕೋರುವ ಪ್ರಮುಖ ಕಾರ್ಯಕ್ರಮ. 1790 ರಲ್ಲಿ ಜಾರ್ಜ್‌ ವಾಷಿಂಗ್ಟನ್‌ ಅವರು ನ್ಯೂಯಾರ್ಕ್‌ ಸಿಟಿಯಲ್ಲಿ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದರು. ಆಗ ಅದನ್ನು ‘ವಾರ್ಷಿಕ ಸಂದೇಶ’ ಎನ್ನಲಾಗುತ್ತಿತ್ತು.

*1801: ಥಾಮಸ್‌ ಜೆಫರ್‌ಸನ್‌ ವಾರ್ಷಿಕ ಸಂದೇಶವನ್ನು ಖುದ್ದಾಗಿ ನೀಡುವ ಬದಲು ಲಿಖಿತ ಭಾಷಣವನ್ನು ಸಿಬ್ಬಂದಿಯಿಂದ ಓದಿಸಿದರು.

*1913:  ವುಡ್ರೊ ವಿಲ್ಸನ್‌ ಅವರಿಂದ ವಾರ್ಷಿಕ ಸಂದೇಶ ಮತ್ತೆ ಆರಂಭ.

1934ರಲ್ಲಿ ಫ್ರಾಂಕ್ಲಿನ್‌ ಡಿ. ರೂಸ್‌ವೆಲ್ಟ್‌ ಅವರು ಭಾಷಣಕ್ಕೆ  ‘ಅಮೆರಿಕ ಒಕ್ಕೂಟದ ಸ್ಥಿತಿಗತಿ’ ಎಂಬ ಶೀರ್ಷಿಕೆ ನೀಡಿದರು.

ಒಬಾಮ ಭಾಷಣಕ್ಕೆ ಅಮೆರಿಕದ ಕೆಲವು ಮಾಧ್ಯಮಗಳ ಪ್ರತಿಕ್ರಿಯೆ

ಎಲ್ಲಾ ಪ್ರಮುಖ ಕ್ಷೇತ್ರಗಳ ಬಗ್ಗೆ ತಾವು ಆಶಾವಾದಿಯಾಗಿರುವುದನ್ನು ಅಧ್ಯಕ್ಷರು ಸಮರ್ಥವಾಗಿ ಬಿಂಬಿಸಿದ್ದಾರೆ

-ಲಾಸ್‌ ಏಂಜಲೀಸ್‌ ಟೈಮ್ಸ್‌

ಒಬಾಮ ತಮ್ಮ ಅಧಿಕಾರದ ಅವಧಿಯುದ್ದಕ್ಕೂ ಮುಸ್ಲಿಂ ರಾಷ್ಟ್ರಗಳ ಜತೆ ಬಾಂಧವ್ಯ ವೃದ್ಧಿಗೆ ಶ್ರಮಿಸಿದರು

–ದಿ ವಾಷಿಂಗ್ಟನ್‌ ಪೋಸ್ಟ್‌

ತಾನು ಆಶಾವಾದಿಯಾಗಿದ್ದ ಕಾರಣದಿಂದಲೇ ಆಫ್ರಿಕ ಮೂಲದ ಅಮೆರಿಕ ಪ್ರಜೆಯೊಬ್ಬ ಮೊದಲ ಬಾರಿಗೆ ಅಧ್ಯಕ್ಷನಾಗಲು ಸಾಧ್ಯವಾಯಿತು ಎಂಬುದನ್ನು ಭಾಷಣ ಇಡೀ ಜಗತ್ತಿಗೆ ಜ್ಞಾಪಿಸಿತು. ತಮ್ಮೆಲ್ಲ ಯೋಜನೆಗಳು, ಕಾರ್ಯಕ್ರಮಗಳನ್ನು ಸಮರ್ಥವಾಗಿ  ಸಂಸತ್ತಿನ ಮುಂದಿಟ್ಟರು - ‘ದಿ ನ್ಯೂಯಾರ್ಕ್‌ ಟೈಮ್ಸ್‌’ ಸಂಪಾದಕೀಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.