ಬುಧವಾರ, ಜೂಲೈ 8, 2020
21 °C

ಭವಿಷ್ಯದ ನುಡಿಗಾಗಿ ಮುಖ್ಯಮಂತ್ರಿ ಬಳಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಹುಬ್ಬಳ್ಳಿ: ನಾನು ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ‘ನುಡಿ’ ಹೇಳಿದ್ದೆ. ಹಾಗೆಯೇ ಆಯಿತು. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಕಡೆಗಳಲ್ಲಿ ನಾನು ‘ನುಡಿ’ದಂತೆ ಫಲಿತಾಂಶ ಬಂದಿದೆ. ಈಗಲೂ ಹೇಳುತ್ತೇನೆ, ಈ ಬಾರಿಯ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಶೇ. 70  ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ....’ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಶಿರಬಡಗಿಯ ಗುಡದಯ್ಯ ವೀರಪ್ಪ ಹೊನ್ನತ್ತಿ ಹೀಗೆ ಹೇಳುವಾಗ ಯಾವುದೇ ಭಾವಾತಿರೇಕಕ್ಕೆ ಒಳಗಾಗಿರಲಿಲ್ಲ. ಕಾರಣ, ಅವರೇ ಹೇಳುವಂತೆ ಅವರಿಗೆ ಇಂಥ ಆಲೋಚನೆ ಹೊಳೆಯುವುದು ಕಾಲಿಗೆ ‘ಕೋಲು’ ಕಟ್ಟಿದಾಗ ಮಾತ್ರ.ಮರಗಾಲು ಕಲಾವಿದರಾಗಿರುವ, ಈಗಾಗಲೇ ಮರಗಾಲು ಕಟ್ಟಿಕೊಂಡು ಶಬರಿಮಲೆ, ಧರ್ಮಸ್ಥಳ, ತಿರುಪತಿ, ಶ್ರೀಶೈಲ, ಗುಲ್ಬರ್ಗ, ಪಂಡರಾಪುರ ಮುಂತಾದ ಕಡೆಗಳಿಗೆ ತೆರಳಿ ಗಮನ ಸೆಳೆದಿರುವ ಗುಡದಯ್ಯ ಈಗ ಸ್ವಂತ ಭವಿಷ್ಯದ ‘ನುಡಿ’ಯನ್ನು ಬೇರೆಯವರಿಂದ, ಅಂದರೆ ಸರ್ಕಾರದಿಂದ ಕೇಳಬೇಕಾಗಿದೆ. ಇದಕ್ಕಾಗಿ ಈ ತಿಂಗಳ ಮಧ್ಯದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಸಿದ್ಧತೆಯಲ್ಲಿದ್ದಾರೆ .75 ವರ್ಷದ ಗುಡದಯ್ಯ ಬೇರೆಯವರ ಹೊಲದಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಮರಗಾಲು ಇವರ ಹವ್ಯಾಸ. ಆದರೆ ಈಗ ಈ ಎರಡನ್ನು ಕೂಡ ಸರಿಯಾಗಿ ನಿಭಾಯಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಮೊಣಕಾಲಿನ ನೋವು ಇದಕ್ಕೆ ಅನುವು ಮಾಡಿಕೊಡುತ್ತಿಲ್ಲ. ಕೊನೆಯ ಪುತ್ರ ಈರಪ್ಪ ಗುಡದಯ್ಯ ಅವರು ಕೂಲಿ ಕೆಲಸ ಮಾಡಿ ಈಗ ತಂದೆ ಹಾಗೂ ತಾಯಿ ಕಾಶಮ್ಮ ಅವರನ್ನು ಸಾಕುತ್ತಾರೆ. ಇಂಥ ಸ್ಥಿತಿಯಲ್ಲಿ ಕಲಾವಿದನಾಗಿರುವ ತನಗೆ ಸರ್ಕಾರ ಯಾವುದಾದರೂ ರೀತಿಯಲ್ಲಿ ನೆರವು ನೀಡಬೇಕು ಎಂಬುದು ಅವರ ಬಯಕೆ.ಶಿರಬಡಗಿಯಲ್ಲಿರುವ ‘ಮರಗಾಲು ಕಲಾಕಾರರ ಸಂಘ’ದ ಇತರ ಕಲಾವಿದರ ಜೊತೆಗೂಡಿ ಮುಖ್ಯಮಂತ್ರಿಗಳ ಬಳಿಗೆ ತೆರಳಲು ಅವರು ಸಜ್ಜಾಗಿದ್ದಾರೆ. ಸವಣೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ತೆರಳಿ ಅಲ್ಲಿಂದ ಮರಗಾಲು ಕಟ್ಟಿಕೊಂಡೇ ಸಿಎಂ ಬಳಿಗೆ ಹೋಗುವುದಾಗಿ ಭಾನುವಾರ ‘ಪ್ರಜಾವಾಣಿ’ ಕಚೇರಿಗೆ ಆಗಮಿಸಿದ ಅವರು ತಿಳಿಸಿದರು.‘ಸ್ವಲ್ಪ ಜಮೀನು ಇದೆ. ಅದರಲ್ಲಿ ಏನಾದರೂ ಬೆಳೆಯಬೇಕಾದರೆ ಬಂಡವಾಳ ಹೂಡಬೇಕು. ಅದು ನನ್ನಲ್ಲಿಲ್ಲ. ಜಮೀನು ಇರುವುದರಿಂದ ಸಂಧ್ಯಾ ಸುರಕ್ಷಾದ ಫಲಾನುಭವಿ ಆಗಲು ಸಾಧ್ಯವಾಗಲಿಲ್ಲ. ಹೀಗಾಗಿ ಕಲಾವಿದರಿಗೆ ನೀಡುವ ಮಾಸಾಶನವನ್ನಾದರೂ ನೀಡುವಂತೆ ಸರ್ಕಾರವನ್ನು ಕೋರಲಾಗುವುದು ಎಂದು ಅವರು ತಿಳಿಸಿದರು.‘ಕೂಲಿ ಕೆಲಸ ಮಾಡಿ ನಾಲ್ಕು ಮಂದಿ ಮಕ್ಕಳನ್ನು ಸಾಕಿದೆ. ಅವರ್ಯಾರಿಗೂ ಶಿಕ್ಷಣ ಕೊಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಎಲ್ಲರಿಗೂ ಕೂಲಿ ಕೆಲಸವೇ ಗತಿ. ಸಣ್ಣ ಮಗ ಮಾತ್ರ ನಮ್ಮ ಜೊತೆ ಇದ್ದಾನೆ. ಆತನ ದುಡಿಮೆಯಿಂದ ಜೀವನ ಸಾಗಬೇಕು. ಎಲ್ಲ ಕಲಾವಿದರಿಗೂ ಇದೇ ರೀತಿಯ ಕಷ್ಟದ ಪರಿಸ್ಥಿತಿ. ಇದೆಲ್ಲವನ್ನು ಮುಖ್ಯಮಂತ್ರಿಗಳಿಗೆ ವಿವರಿಸುತ್ತೇನೆ. ಅವರು ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಾರೆ ಎಂಬ ಭರವಸೆ ಇದೆ ಎಂದರು ಅವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.