ಗುರುವಾರ , ಮೇ 13, 2021
39 °C
2006ರಲ್ಲಿ 10,141, 2012ರಲ್ಲಿ ಕೇವಲ 2,908 ಬಾಂಡ್

ಭಾಗ್ಯಲಕ್ಷ್ಮಿ: ಹಂಚಿಕೆ ಭಾರಿ ಇಳಿಮುಖ

ಮನೋಜ್‌ಕುಮಾರ್ ಗುದ್ದಿ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಜಾರಿಗೊಳಿಸಿದ್ದ ಭಾಗ್ಯಲಕ್ಷ್ಮಿ ಬಾಂಡ್ ಹಂಚಿಕೆ ಪ್ರಕ್ರಿಯೆ ಜಿಲ್ಲೆಯಲ್ಲಿ ನೀರಸವಾಗಿದ್ದು, ವರ್ಷದಿಂದ ವರ್ಷಕ್ಕೆ ಬಾಂಡ್‌ಗಳ ಸಂಖ್ಯೆ ಇಳಿಮುಖವಾಗುತ್ತಲೇ ಸಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರು ಮಾತ್ರ ಈ ಯೋಜನೆಗೆ ಅರ್ಹರು ಎಂಬ ನಿಯಮ ಫಲಾನುಭವಿಗಳ ಸಂಖ್ಯೆ ಕಡಿಮೆಯಾಗಲು ಕಾರಣ ಎನ್ನಲಾಗುತ್ತಿದೆ.`ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ನಿಗದಿತ ಅವಧಿಯಲ್ಲಿ ಫಲಾನುಭವಿಯಾಗುವವರಿಗೆ ಬಿಪಿಎಲ್ ಕಾರ್ಡ್ ವಿತರಣೆಯಾಗದಿರುವುದರಿಂದ ಬಾಂಡ್ ಅರ್ಜಿಗಳ ಸಂಖ್ಯೆ ಕ್ಷೀಣಗೊಳ್ಳಲು ಕಾರಣವಾಗುತ್ತಿದೆ. ಬಿಪಿಎಲ್ ಕಾರ್ಡ್ ದೊರೆಯಲು ವಿಳಂಬವಾದುದರಿಂದ ಹೆಣ್ಣು ಮಗು ಹೆತ್ತ ಕುಟುಂಬದವರು ಬಾಂಡ್ ಸಹವಾಸವೇ ಬೇಡವೆಂದು ದೂರವುಳಿಯುತ್ತಿದ್ದಾರೆ. ಇದು ಯೋಜನೆಯ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆ ಅಲ್ಲ. ಆದರೆ, ನಾವೂ ಎಷ್ಟೆಂದು ಫಲಾನುಭವಿಗಳ ಮನೆಗೆ ಅಲೆಯಬೇಕು? ಅವರಿಂದಲೂ ಒಂದಷ್ಟು ಸಹಕಾರ ಸಿಕ್ಕರೆ ಯೋಜನೆ ಯಶಸ್ವಿಯಾಗುತ್ತದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ತ್ರಿಶುಲಾ ಅಪ್ಪಣ್ಣವರ.ಯೋಜನೆ ಜಾರಿಯಾದ 2006ನೇ ಸಾಲಿನಿಂದ 2012-13ರವರೆಗೆ ಜಿಲ್ಲೆಯಲ್ಲಿ ಒಟ್ಟು 61,138 ಭಾಗ್ಯಲಕ್ಷ್ಮಿ ಬಾಂಡ್‌ಗಳಿಗೆ ಮಂಜೂರಾತಿ ನೀಡಲಾಗಿದೆ. ಅದರಲ್ಲಿ 55,860 ಬಾಂಡ್‌ಗಳು ಫಲಾನುಭವಿಗಳಿಗೆ ತಲುಪಿದ್ದು, ಇನ್ನೂ 5,278 ಬಾಂಡ್‌ಗಳನ್ನು ಸರ್ಕಾರ ವಿತರಿಸಬೇಕಿದೆ.ಆದರೆ, ವಿಷಯ ಇದಲ್ಲ. ಮೊದಲ ವರ್ಷ ಜಿಲ್ಲೆಯಲ್ಲಿ 10,141 ಬಾಂಡ್‌ಗಳ ಮಂಜೂರಾತಿ ದೊರಕಿತ್ತು, 2008-09ರಲ್ಲಿ ಅತಿ ಹೆಚ್ಚು, ಅಂದರೆ 11,761 ಬಾಂಡ್‌ಗಳು ಬಂದಿದ್ದರೆ, 2012-13ನೇ ಸಾಲಿನಲ್ಲಿ ಕೇವಲ 2908 ಬಾಂಡ್‌ಗಳಿಗೆ ಮಂಜೂರಾತಿ ದೊರಕಿದೆ!ಅರ್ಜಿ ಸಲ್ಲಿಕೆಯಾದ ಎಲ್ಲ ಫಲಾನುಭವಿಗಳಿಗೆ ಸರ್ಕಾರ ಬಾಂಡ್‌ಗಳನ್ನು ವಿತರಿಸುತ್ತದೆ. ಮಗುವಿಗೆ 18 ವರ್ಷಗಳಾದ ಬಳಿಕ ಎರಡು ಲಕ್ಷ ರೂಪಾಯಿ ದೊರೆಯುತ್ತದೆ (ಯೋಜನೆ ಆರಂಭದಲ್ಲಿ ಈ ಮೊತ್ತ ಒಂದು ಲಕ್ಷ ಇತ್ತು).

ಕೆಲವು ಲೋಪದೋಷಗಳಿದ್ದ ಅರ್ಜಿಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಡೆಹಿಡಿದಿದೆ. 2006-07ನೇ ಸಾಲಿನಲ್ಲಿ ಸಲ್ಲಿಕೆಯಾದ ಎಲ್ಲ ಅರ್ಜಿದಾರರಿಗೂ ಬಾಂಡ್‌ಗಳನ್ನು ತಲುಪಿಸಲಾಗಿದೆ. 2007-08ರಲ್ಲಿ 80, 2008-09ರಲ್ಲಿ 421, 2009-2010ರಲ್ಲಿ 1701, 2011-12ರಲ್ಲಿ 168 ಬಾಂಡ್‌ಗಳನ್ನು ತಡೆಹಿಡಿಯಲಾಗಿದೆ.ಸೂಕ್ತ ದಾಖಲೆಗಳನ್ನು ಸಲ್ಲಿಸಿದ ಬಳಿಕವಷ್ಟೇ ಈ ಅರ್ಜಿಗಳಿಗೆ ಮುಕ್ತಿ ದೊರೆತು ಬಾಂಡ್ ಸಿಗಲಿದೆ. ಆದರೆ ನಾಲ್ಕೈದು ವರ್ಷದ ಹಿಂದಿನಿಂದಲೂ ವಿಲೇವಾರಿಯಾಗದ ಅರ್ಜಿಗಳು ಬಾಂಡ್ ರೂಪ ಪಡೆಯುವುದು ಕಷ್ಟದ ಕೆಲಸ ಎನ್ನುತ್ತಾರೆ ಅಪ್ಪಣ್ಣವರ.ಬಾಂಡ್ ದೊರೆಯಬೇಕು ಎಂದರೆ ಬಿಪಿಎಲ್ ಕಾರ್ಡ್ ಹಾಜರುಪಡಿಸಲೇಬೇಕು. ಆದರೆ, ಎಷ್ಟೋ ಬಾರಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಿಗದಿತ ಸಮಯದಲ್ಲಿ ಆಯಾ ಫಲಾನುಭವಿಗಳಿಗೆ ಕಾರ್ಡ್‌ಗಳನ್ನು ಮಂಜೂರು ಮಾಡಿರಲಿಲ್ಲ. ಇದು ಅಂತಿಮವಾಗಿ ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಬಗೆಹರಿದಿತ್ತು. ಭಾಗ್ಯಲಕ್ಷ್ಮಿ ಬಾಂಡ್ ಫಲಾನುಭವಿಗಳ ಬಿಪಿಎಲ್ ಕಾರ್ಡ್‌ಗಳನ್ನು `ವಿಶೇಷ ಪ್ರಕರಣ' ಎಂದು ಪರಿಗಣಿಸಿ ಕೂಡಲೇ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು.ಇದಾದ ಬಳಿಕ ಬರುವ ಹೊಸ ಅರ್ಜಿಗಳೊಂದಿಗೆ ಬಿಪಿಎಲ್ ಕಾರ್ಡ್‌ನ ನಕಲು ಪ್ರತಿ ಇರಲೇಬೇಕು. ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದ್ದು ಸಾಲದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಫಲಾನುಭವಿಗಳಿಗೆ ಸೂಚಿಸುತ್ತಿದ್ದಾರೆ.ಆದರೆ, ಚುನಾವಣೆ ನೀತಿ ಸಂಹಿತೆಗಿಂತ ಮುಂಚೆಯೇ ಅರ್ಜಿ ಸಲ್ಲಿಸಿದ ಕಾರ್ಡ್‌ಗಳನ್ನೇ ಇನ್ನೂ ಮುದ್ರಿಸಿಲ್ಲ.ನೂತನ ಪಡಿತರ ಚೀಟಿಗಳಿಗಾಗಿ ಅರ್ಜಿ ಸ್ವೀಕಾರ ಪ್ರಕ್ರಿಯೆ ಇನ್ನೂ ನಡೆದಿದೆ. ಹೊಸ ಕಾರ್ಡ್‌ಗಳನ್ನು ಮುದ್ರಿಸುವಂತೆ ಇಲಾಖೆಯಿಂದ ಇನ್ನೂ ಸೂಚನೆ ಬಂದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.