ಶುಕ್ರವಾರ, ಏಪ್ರಿಲ್ 16, 2021
31 °C

ಭಾನುವಾರ, 15-7-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಲ್ವನ್ ಠಾಣ್ಯದಿಂದ 200 ಗಜ ದೂರಕ್ಕೆ ಚೀಣಿ ಸೈನಿಕರ ಹಿನ್ನಡೆ

ದೆಹಲಿ, ಜುಲೈ 14 - ಗಾಲ್ವನ್ ಕಣಿವೆಯಲ್ಲಿ ಭಾರತ ಠಾಣ್ಯವನ್ನು ಸುತ್ತುವರಿದಿದ್ದ ಚೀಣೀ ಪಡೆಗಳು ಈ ಬೆಳಿಗ್ಗೆಯ ವೇಳೆಗೆ 200 ಗಜ ಹಿಂದಕ್ಕೆ ಸರಿದಿದ್ದವೆಂದು ಅಧಿಕೃತ ವಕ್ತಾರರೊಬ್ಬರು ತಿಳಿಸಿದರು.ಭಾರತದ ಸಣ್ಣ ಠಾಣ್ಯದ ಸೈನಿಕರು ದೃಢವಾದ ನಿಲುವನ್ನು ತಾಳಿದುದರಿಂದಲೂ ಚೀಣಿಯರು ಇನ್ನು ಮುಂದಕ್ಕೆ ಬಂದಲ್ಲಿ ಅವರನ್ನು ಎದುರಿಸಲಾಗುವುದೆಂದು ಅವರು ಎಚ್ಚರಿಕೆ ನೀಡಿದುದರಿಂದಲೂ ಭಾರತೀಯ ಸೈನಿಕರಿಗಿಂತ ಅಧಿಕ ಸಂಖ್ಯೆಯಲ್ಲಿದ್ದ ಚೀಣಿಯರು ಹಿಮ್ಮೆಟ್ಟಿದರೆಂದು ಈ ವಕ್ತಾರರು ಹೇಳಿದರು.ಆ ಠಾಣ್ಯದಲ್ಲಿರುವ ಭಾರತದ ಸೈನಿಕರ ಹದಿನೈದರಷ್ಟಕ್ಕೂ ಹೆಚ್ಚು ಚೀಣಿ ಸೈನಿಕರು ಜುಲೈ 10 ರಿಂದ ಅದನ್ನು ಮೂರು ದಿಕ್ಕುಗಳಿಂದ ಸುತ್ತುವರಿದಿದ್ದರು. ಭಾರತವು ಚೀಣಕ್ಕೆ ಪ್ರತಿಭಟನೆಗಳನ್ನು ಸಲ್ಲಿಸಿದರೂ ಸಹ ನಿನ್ನೆ ಚೀಣಿ ಸೈನಿಕರು ಆ ಠಾಣ್ಯದಿಂದ 15 ಗಜಗಳಷ್ಟು ಸಮೀಪಕ್ಕೆ ಬಂದಿದ್ದರು.ಇನ್ನಷ್ಟು ಹತ್ತಿರ ಬಂದರೆ ಆತ್ಮರಕ್ಷಣೆಗಾಗಿ ಅವರ ಮೇಲೆ ಗುಂಡು ಹಾರಿಸುವುದಾಗಿ ಠಾಣ್ಯದ ಸೈನಿಕರು ಚೀಣಿಯರಿಗೆ ಎಚ್ಚರಿಕೆ ನೀಡಿದ್ದಲ್ಲದೆ ಸಹಾಯ ಬರದಂತೆ ಆ ಠಾಣ್ಯವು ಪ್ರತ್ಯೇಕಗೊಂಡರೂ ಸಹ ಅಚಲ ನಿರ್ಧಾರ - ದಿಟ್ಟತನದಿಂದ ಅವರನ್ನು ಎದುರಿಸಿ ನಿಂತರು.ಇಂದು ಬೆಳಿಗ್ಗೆಯ ಹೊತ್ತಿಗೆ ಚೀಣಿಯರು ಆ ಠಾಣ್ಯದಿಂದ ಸುಮಾರು 200 ಗಜಗಳಷ್ಟು ದೂರಕ್ಕೆ ಹಿಮ್ಮೆಟ್ಟಿದ್ದರು.

ಹರ್ಷಚಿತ್ತ ಪ್ರಧಾನಿ ನೆಹರೂ ಅವರಿಗೆ ನಗರದ ಸ್ವಾಗತ

ಬೆಂಗಳೂರು, ಜುಲೈ 14 - ಪ್ರಕೃತ ಗೊತ್ತಾಗಿರುವಂತೆ ರಾಜ್ಯಕ್ಕೆ ನಾಲ್ಕು ದಿನಗಳ ಭೇಟಿಗಾಗಿ ಇಂದು ಮಧ್ಯಾಹ್ನ ಇಲ್ಲಿಗಾಗಮಿಸಿದ ಹರ್ಷಚಿತ್ತ ಪ್ರಧಾನಿ ನೆಹರೂರವರಿಗೆ ಆದರದ ಸ್ವಾಗತ ನೀಡಲಾಯಿತು.12-17ಕ್ಕೆ ಸರಿಯಾಗಿ ಹಿಂದೂಸ್ತಾನ್ ವಿಮಾನ ನಿಲ್ದಾಣದಲ್ಲಿ ಬಂದು ನಿಂತ ರಾಜಹಂಸದಿಂದ ಅಚ್ಚ ಬಿಳಿಯ ಉಡುಪು ಧರಿಸಿ ಎಂದಿನ ನಗೆಮುಖದೊಂದಿಗೆ ಪ್ರಧಾನಿಯು ಹೊರಬಂದಾಗ ನಿನ್ನೆಯಿಂದ ನಗರದಲ್ಲಿ ಕವಿದಿರುವ ಮೋಡ ಸ್ವಲ್ಪ ತಿಳಿಗೊಂಡು ತಿಳಿಬಿಸಿಲು ಹರಡಿತ್ತು.

`ವಿಜ್ಞಾನವೊಂದೇ ಏಷ್ಯದ ಏಳಿಗೆಗೆ ಹಾದಿ~

ಬೆಂಗಳೂರು, ಜುಲೈ 14 - ಆಧುನಿಕ ವಿಜ್ಞಾನ ಹಾಗೂ ಔದ್ಯೋಗಿಕ ವಿಜ್ಞಾನವನ್ನು ಅರಿಯದಿದ್ದಲ್ಲಿ ಏಷ್ಯದ ರಾಷ್ಟ್ರಗಳ ಮುನ್ನಡೆ ಸಾಧ್ಯವಿಲ್ಲವೆಂದು ಪ್ರಧಾನ ಮಂತ್ರಿ ನೆಹರೂ ಅವರು ಇಂದು ಇಲ್ಲಿ ಎಚ್ಚರಿಕೆ ನೀಡಿದರು.1960 ರಲ್ಲಿ ಡಾ. ಎಂ. ವಿ. ಅವರ ಶತಮಾನೋತ್ಸವದ ಸಂದರ್ಭದಲ್ಲಿ ತಾವು ಹೇಳಿದುದನ್ನು ಸ್ಮರಿಸಿಕೊಂಡ ಪ್ರಧಾನಿಯು `ವಿಜ್ಞಾನವಿಲ್ಲದೆ ಹೋದರೆ, ನಾವು ನಾಶವಾಗುತ್ತೇವೆ, ಆತ್ಮ ಜ್ಞಾನವಿಲ್ಲದಿದ್ದರೂ ನಾಶರಾಗುತ್ತೇವೆ~ ಎಂದರು.

 

ಆಧುನಿಕ ಕೈಗಾರಿಕೆ ಹಾಗೂ ಔದ್ಯೋಗಿಕ ಪ್ರಗತಿಯ ದರ್ಶನ ಮಾಡಿಕೊಡುವ ದಿವಂಗತ ಡಾ. ಎಂ. ವಿ. ಅವರ ಸ್ಮಾರಕ ಮ್ಯೂಸಿಯಂನ ಆರಂಭೋತ್ಸವವನ್ನು ಪ್ರಧಾನಿ ನೆಹರೂ ಅವರು ಸಂಜೆ ನೆರವೇರಿಸಿದರು. ಏಷ್ಯದ ರಾಷ್ಟ್ರಗಳು ಪ್ರಗತಿಯನ್ನು ಸಾಧಿಸಬೇಕಾದರೆ `ಆಧುನಿಕ ಪ್ರಪಂಚವನ್ನು~ ಅರಿತು ಅರ್ಥಮಾಡಿಕೊಂಡು ಅನುಸರಿಸುವುದೇ ಮಾರ್ಗವೆಂಬುದು 15 ನಿಮಿಷಗಳ ಕಾಲ ಮಾಡಿದ ಪ್ರಧಾನಿಯ ಭಾಷಣದ ಪ್ರಧಾನ ಅಂಶವಾಗಿತ್ತು.ಸುಮಾರು 12 ಲಕ್ಷ ರೂಪಾಯಿಗಳ ಖರ್ಚಿನಲ್ಲಿ ನಿರ್ಮಾಣವಾಗಿರುವ ಭವ್ಯ ಮ್ಯೂಸಿಯಂನ ಪಕ್ಕದಲ್ಲಿ ನಿರ್ಮಿತವಾಗಿದ್ದ ಭವ್ಯ ಚಪ್ಪರದಲ್ಲಿ ಆರಂಭೋತ್ಸವ ಸಮಾರಂಭ ನಡೆಯಿತು. ಸುಮಾರು 3 ಸಾವಿರ ಮಂದಿ ಆಹ್ವಾನಿತರು ಹಾಜರಿದ್ದರು.

ರಷ್ಯದಲ್ಲಿ ಹತೋಟಿ ಕೇಂದ್ರ ಸ್ಥಾಪಿಸುವ ವಿಷಯವನ್ನು ತ್ಯಜಿಸಲು ಪಶ್ಚಿಮ ಸಿದ್ಧ?

ಜಿನೀವ, ಜುಲೈ 14 -
ಅಣು ಪ್ರಯೋಗ ನಿಷೇಧ ಉಸ್ತುವಾರಿಗೆ ರಷ್ಯದಲ್ಲಿ ಹತೋಟಿ ನೆಲೆಗಳನ್ನು ಸ್ಥಾಪಿಸಬೇಕೆಂಬ ತನ್ನ ಒತ್ತಾಯವನ್ನು ಪಶ್ಚಿಮವು ಕೈಬಿಡಬಹುದೆಂದು ಹದಿನೇಳು ರಾಷ್ಟ್ರಗಳ ನಿಶ್ಶಸ್ತ್ರೀಕರಣ ಸಮ್ಮೇಳನದಲ್ಲಿನ ಅಮೆರಿಕದ ಪ್ರತಿನಿಧಿ ಆರ್ಥರ್ ಡೀನ್ ಇಂದು ಇಲ್ಲಿ ಸೂಚನೆ ಇತ್ತರು.ಸೋಮವಾರ ಪುನರಾರಂಭವಾಗಲಿರುವ ಸಮ್ಮೇಳನದಲ್ಲಿ ಭಾಗವಹಿಸಲು ಡೀನ್‌ರಸ್ಕ್ ಜಿನೀವಾಕ್ಕೆ ವಾಪಸಾಗಿದ್ದಾರೆ. ಅಣು ಪ್ರಯೋಗ ನಿಶೇಧಕ್ಕೆ ಸಂಬಂಧಿಸಿದ ಈ ಪ್ರಮುಖ ಅಂಶವು ಸಂಧಾನದ ತೃಪ್ತಿಕರ ಪ್ರಗತಿಗೆ ಭಾರಿ ಆಶಾದಾಯಕ ಎನಿಸಿದೆ.ರಷ್ಯದಲ್ಲಿ ಹತೋಟಿ ನೆಲೆಗಳನ್ನು ಸ್ಥಾಪಿಸುವ ವಿಷಯದ ಬಗ್ಗೆ ಪ್ರಶ್ನಿಸಲು ರಷ್ಯದಲ್ಲಿ ಹತೋಟಿ ನೆಲೆಗಳನ್ನು ನಿರ್ಮಿಸುವುದೇ ಉತ್ತಮ. ಆದರೆ ಅದಕ್ಕೆ ರಷ್ಯ ಒಪ್ಪದಿದ್ದರೆ ಬೇರೊಂದು ವ್ಯವಸ್ಥೆಯನ್ನು ನಾವು ಸಿದ್ಧಪಡಿಸಿಕೊಳ್ಳಬಹುದು. ಆದರೆ ಅದು ಅಷ್ಟು ಉತ್ತಮವಾಗಿರದು ಎಂದು ಡೀನ್ ನುಡಿದರು.ಅಣುಸ್ಫೋಟಗಳನ್ನು ಪತ್ತೆ ಹಚ್ಚುವ ವಿಧಾನಗಳನ್ನು ಉತ್ತಮಗೊಳಿಸುವುದು ಹಾಗೂ ಭೂಗರ್ಭ ಸ್ಪೋಟಗಳ ವಿಶ್ಲೇಷಣೆ ಬಗ್ಗೆ ಬ್ರಿಟನ್ ಮತ್ತು ಅಮೆರಿಕಗಳ ವಿಜ್ಞಾನಿಗಳು ನಡೆಸಿರುವ ಕಾರ್ಯವನ್ನು ಅವರು ಪ್ರಸ್ತಾಪಿಸಿದರು. ಅವರುಗಳ ವರದಿ ಇನ್ನು 15 ದಿನಗಳಲ್ಲಿ ಸಿದ್ಧವಾಗುವುದೆಂದು ಅವರು ತಿಳಿಸಿದರು.

ಆಸ್ಟ್ರಿಯಕ್ಕೆ ಖ್ರುಶ್ಚೋವ್ ಬೆದರಿಕೆ?

ಮಾಸ್ಕೊ, ಜುಲೈ 14 - ಆಸ್ಟ್ರಿಯವು ಐರೋಪ್ಯ ಸಾಮಾನ್ಯ ಮಾರುಕಟ್ಟೆಯನ್ನು ಸೇರಿದರೆ ರಷ್ಯದ ಸೇನೆಗಳು ಆಸ್ಟ್ರಿಯದೊಳಕ್ಕೆ ನುಗ್ಗುವುದೆಂದು ರಷ್ಯದ ಪ್ರಧಾನ ಮಂತ್ರಿ ಖ್ರುಶ್ಚೋವ್ ಆಸ್ಟ್ರಿಯದ ಚಾನ್ಸೆಲರ್ ಡಾ. ಆಲ್ಫಾನ್ಸ್ ಗೋರ್ಚಾಚ್‌ರವರಿಗೆ ತಿಳಿಸಿದ್ದಾರೆಂದು ನಂಬಲರ್ಹ ಸೋವಿಯತ್ ವಲಯಗಳು ಇಂದು ಇಲ್ಲಿ ತಿಳಿಸಿದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.