ಶನಿವಾರ, ಮೇ 15, 2021
22 °C

ಭಾನುವಾರ, 8-4-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುದ್ಧ ಆರಂಭವಾದರೆ ವಿಶ್ವನಾಶ ಖಂಡಿತ

ಮುಂಬೈ, ಏ. 7 - ಸಂಪೂರ್ಣ ಯುದ್ಧ ನಿಷೇಧಕ್ಕೆ ಪ್ರಥಮ ಕ್ರಮವಾಗಿ ನಿಶ್ಯಸ್ತ್ರೀಕರಣವಾಗಲೆಂದು ಭಾರತದ ರಕ್ಷಣಾ ಸಚಿವ ಶ್ರೀ ವಿ. ಕೆ. ಕೃಷ್ಣಮೆನನ್ ಇಂದು ಇಲ್ಲಿ ಸಲಹೆ ಮಾಡಿದರು.ಉತ್ತರ ಮುಂಬೈನ ಜೂಹೂ ನಿವಾಸಿಗಳು ಏರ್ಪಡಿಸಿದ್ದ ಸತ್ಕಾರ ಸಮಾರಂಭದಲ್ಲಿ ಶ್ರೀ ಮೆನನ್‌ರು ಮಾತನಾಡುತ್ತಾ, ಯುದ್ಧವೇನಾದರೂ ಆರಂಭವಾದರೆ, ವಿಜಯಿಯೂ ಇರುವುದಿಲ್ಲ. ಪರಾಜಯಿಯೂ ಇರುವುದಿಲ್ಲ ಏಕೆಂದರೆ ಇಡೀ ವಿಶ್ವವೇ ನಾಶವಾಗುತ್ತದೆ ಎಂದರು.ಶ್ರೀ ಮೆನನ್‌ರು ಪ್ರಸ್ತುತ ಶಕ್ತಿಬಣಗಳ ಪರಿಸ್ಥಿತಿಯನ್ನು `ನ್ಯೂ ಕ್ಲಿಯರ್ ಇಕ್ಕಟ್ಟು ಎಂದು ಬಣ್ಣಿಸಿ ವಿಶ್ವವನ್ನು ಅನೇಕ ಸಲ ನಾಶಮಾಡಬಲ್ಲ ಅಸ್ತ್ರಗಳು ಎರಡೂ ಬಣಗಳಲ್ಲಿ ಸಾಕಷ್ಟಿವೆ. ಇಷ್ಟಿದ್ದರೂ ಇನ್ನೂ ಅಸ್ತ್ರ ತಯಾರಿಸಬೇಕೆಂಬುದನ್ನು ನೋಡಿ ಆಶ್ಚರ್ಯವಾಗುತ್ತದೆ~ ಎಂದರು.

 

ನಿವೃತ್ತರಾದ ಬಳಿಕ ಪಾಟ್ನಾದ ಸದಾಖತ್ ಆಶ್ರಮವಾಸ

ನವದೆಹಲಿ, ಏ. 7 - ತಮ್ಮ ನಿವೃತ್ತಿಯ ನಂತರ ಪಾಟ್ನಾದ ಸದಾಖತ್ ಆಶ್ರಮಕ್ಕೆ ವಾಪಸಾಗುವುದಾಗಿ ತಿಳಿಸಿದ ರಾಷ್ಟ್ರಪತಿ ಡಾ. ಪ್ರಸಾದರು, ಜೀವಮಾನದ ಉಳಿದ ಕಾಲವನ್ನು ಜನ ಸೇವೆಯಲ್ಲಿ ಕಳೆಯುವುದಾಗಿ ತಿಳಿಸಿದರು.ದೆಹಲಿಯ ಬರಹಗಾರರು ಹಾಗೂ ಕಲಾವಿದರು ರಾಷ್ಟ್ರಪತಿ ಭವನದಲ್ಲಿ ತಮ್ಮ ಗೌರವಾರ್ಥ ಏರ್ಪಡಿಸಿದ್ದ ಸಮಾರಂಭದಲ್ಲಿ ರಾಷ್ಟ್ರಪತಿ ಡಾ. ಪ್ರಸಾದರು ಮಾತನಾಡುತ್ತಾ, ನನ್ನಲ್ಲಿ ಎಷ್ಟು ಶಕ್ತಿ ಉಳಿದಿದೆಯೋ ಅದು ನನಗೆ ತಿಳಿಯದು ಆದ್ದರಿಂದ ನಾನು ಏನು ಮಾಡಬಲ್ಲೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಲಾರೆ. ಆದರೆ ಜನ ಸೇವೆ ಮಾಡಬೇಕೆಂಬ ನಿಷ್ಠೆ ಹಾಗೂ ಆಕಾಂಕ್ಷೆ ಇದೆಯೆಂಬ ಭರವಸೆ ಕೊಡಬಲ್ಲೆ ಎಂದರು.

 

ನಗರದ ಶಾಲಾ ಕಟ್ಟಡಗಳ ದುಸ್ಥಿತಿ ನಿವಾರಣೆ

ಬೆಂಗಳೂರು, ಏ. 7 - `ಗಾಳಿ ಬೀಸದ, ಬೆಳಕು ಬೀಳದ ಕತ್ತಲೆ ಕೋಣೆಗಳಲ್ಲಿ ಕಿಕ್ಕಿರಿದು ಕುಳಿತು ವಿದ್ಯೆ ಕಲಿಯುತ್ತಿರುವ~ ಬೆಂಗಳೂರು ನಗರದ ಬಾಲಕ ಬಾಲಕಿಯರಿಗೆ ಯೋಗ್ಯ ಶಾಲಾ ಕಟ್ಟಡಗಳ ಸೌಲಭ್ಯವನ್ನೊದಗಿಸಲು ನಗರಸಭೆ ಹಾಗೂ ಸಾರ್ವಜನಿಕರು ಮುಂದೆ ಬರಬೇಕೆಂದು ಮುಖ್ಯಮಂತ್ರಿ ಶ್ರೀ ಎಸ್. ಆರ್. ಕಂಠಿಯವರು ಇಂದು ಇಲ್ಲಿ ಕರೆ ನೀಡಿದರು.ಭವಿಷ್ಯದ ಜನಾಂಗವಾದ ಮಕ್ಕಳ ಯೋಗ್ಯ ಶಿಕ್ಷಣಕ್ಕೆ ಅನುಕೂಲವಾದ ಶಾಲಾ ಕಟ್ಟಡಗಳ ಸೌಲಭ್ಯವನ್ನೊದಗಿಸುವುದರಲ್ಲಿ ನಗರಸಭೆ ಹಾಗೂ ಸಾರ್ವಜನಿಕರು ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸಲು ಮುಂದೆ ಬಂದರೆ, ಈ ಬಗ್ಗೆ ಅಗತ್ಯವಾದ ಸಹಾಯವನ್ನು ಸರ್ಕಾರವು ನೀಡುವುದೆಂದು ಮುಖ್ಯಮಂತ್ರಿಯವರು ಭರವಸೆ ನೀಡಿದರು.

ರೂರ‌್ಕೆಲಾ ಕಾರ್ಖಾನೆಯಲ್ಲಿ ಲಾಕೌಟ್; ದಿನಕ್ಕೆ ಸುಮಾರು 4 ಲಕ್ಷ ರೂಪಾಯಿ ನಷ್ಟ

ರೂರ‌್ಕೆಲಾ, ಏ. 7 - ಏಪ್ರಿಲ್ 3 ರಂದು ರೂರ‌್ಕೆಲಾ ಉಕ್ಕಿನ ಕಾರ್ಖಾನೆಯ ಎರಡು ಊದು ಕುಲುಮೆಗಳ ಲಾಕೌಟ್ ಘೋಷಿಸಿದ ಕಾರಣ, ಉತ್ಪಾದನೆಯಲ್ಲಿ ಉಂಟಾದ ನಷ್ಟದಿಂದಾಗಿ, ದಿನಕ್ಕೆ ಸುಮಾರು ನಾಲ್ಕು ಲಕ್ಷ ರೂಪಾಯಿ ನಷ್ಟವಾಗುತ್ತಿದೆಯೆಂದೂ ಜನರಲ್ ಮ್ಯಾನೇಜರ್ ಶ್ರೀ ಎಸ್. ಟಿ. ರಾಜಾರವರು ಇಂದು ಪತ್ರಿಕಾ ಪ್ರತಿನಿಧಿಗಳಿಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.