ಗುರುವಾರ , ಮೇ 26, 2022
23 °C

ಭಾರತದಲ್ಲಿ ಇಂಗ್ಲಿಷ್ ಅಧಿಕೃತ ಭಾಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಭಾರತದಲ್ಲಿ ಇಂಗ್ಲಿಷನ್ನು ವಿದೇಶಿ ಎಂಬುದಕ್ಕೆ ಬದಲಾಗಿ ಅಧಿಕೃತ ಆಡಳಿತ ಭಾಷೆಯೆಂದು ಪರಿಗಣಿಸಲಾಗಿದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ.ಎನ್.ಪ್ರಭುದೇವ್ ನುಡಿದರು.ನಗರದಲ್ಲಿ ಬುಧವಾರ ‘ರೀಜಿನಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್’ನ ದಕ್ಷಿಣ ಭಾರತ ವಿಭಾಗವು ಏರ್ಪಡಿಸಿದ್ದ ‘ಇಂಗ್ಲಿಷ್ ಶಿಕ್ಷಣದಲ್ಲಿ ಇರುವ ಸವಾಲುಗಳು ಮತ್ತು ಅವಕಾಶಗಳ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ‘ಭಾರತೀಯ ವಿಶ್ವವಿದ್ಯಾಲಯಗಳು ಈ ಭಾಷೆಯನ್ನು ಯಾವುದೇ ಮಡಿವಂತಿಕೆಯಿಲ್ಲದೇ ಬೋಧಿಸಬೇಕು. ಜೊತೆಗೆ ಪ್ರತಿಯೊಂದು ವಿ.ವಿ.ಯು ಸಹ ಭಾಷಾ ಪ್ರಯೋಗಾಲಯವನ್ನು ಸ್ಥಾಪಿಸಬೇಕು. ಆ ಮೂಲಕ ಇಂಗ್ಲಿಷನ್ನು ರಾಷ್ಟ್ರೀಯ ವಿದೇಶಿ ಭಾಷೆಯಾಗಿ ಬೋಧಿಸುವ ಕ್ರಮ ಜಾರಿಗೆ ಬರಬೇಕಿದೆ’ ಎಂದು ಅವರು ನುಡಿದರು.ಅಮೆರಿಕದ ಪ್ರಖ್ಯಾತ ಸಿನಿಮಾಗಳು, ಪುಸ್ತಕಗಳು ಹಾಗೂ ಸಂಗೀತ ಪ್ರಕಾರಗಳು ಇಂಗ್ಲಿಷ್ ಭಾಷೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಗೆ ತಂದವು. ವಿಶ್ವದ ಬಹುತೇಕ ದೇಶಗಳ ಕೆಲವು ಜನರಾದರೂ ಇಂಗ್ಲಿಷ್ ಬಲ್ಲವರಾಗಿದ್ದುದು ಈ ರೀತಿಯ ಸಿನಿಮಾ, ಪುಸ್ತಕ ಹಾಗೂ ಸಂಗೀತ ಪ್ರಕಾರಗಳಿಂದ ಎಂದು ಅವರು ಪ್ರತಿಪಾದಿಸಿದರು.ಇಂದಿನ ಕಾಮನ್‌ವೆಲ್ತ್ ರಾಷ್ಟ್ರಗಳು ಹಿಂದೆ ಬ್ರಿಟಿಷ್ ವಸಾಹತುಗಳಾಗಿದ್ದವು. ಆದ್ದರಿಂದಲೇ ಆ ದೇಶದ ಪ್ರಜೆಗಳಿಗೆ ಇಂಗ್ಲಿಷ್ ಬಹಳ ಸರಳ ಭಾಷೆಯಾಗಿದ್ದು, ಅದರಿಂದಲೇ ಹೇರಳ ಉದ್ಯೋಗಾವಕಾಶಗಳೂ ದೊರೆಯುತ್ತಿವೆ ಎಂದು ತಿಳಿಸಿದರು.ಶಿವಮೊಗ್ಗದ ಕುವೆಂಪು ವಿ.ವಿ.ಯ ಸಂದರ್ಶಕ ಪ್ರಾಧ್ಯಾಪಕ ಡೇವಿಡ್ ಬಾಂಡ್, ‘ಭಾರತದಂಥ ದೇಶದಲ್ಲಿ ಬಹುಭಾಷೆಗಳ ಉಪಯೋಗ ಮಹತ್ವದ್ದು ಹಾಗೂ ಅನಿವಾರ್ಯವಾದುದು. ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ವಸ್ತುಗಳ ವಿನ್ಯಾಸ ಮಾಡಲು ಹಾಗೂ ಪ್ರಭಾವಿ ಇಂಗ್ಲಿಷ್ ಬೋಧನೆಗೆ ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.ಸಂಸ್ಥೆಯ ನಿರ್ದೇಶಕ ಕೆ.ಕೃಷ್ಣೇಗೌಡ ಅವರು, ಸಂಸ್ಥೆಯು ವಿವಿಧ ರಾಜ್ಯಗಳಲ್ಲಿ ಶಿಕ್ಷಕರಿಗಾಗಿ ಇಂಗ್ಲಿಷ್ ಬೋಧನೆ ಮಾಡುತ್ತಿರುವುದನ್ನು ತಿಳಿಸಿದರು. ಸುಮಾರು 200 ಪ್ರತಿನಿಧಿಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ಸಂಸ್ಥೆಯ ಪ್ರಾಧ್ಯಾಪಕ ಡಾ.ಎಸ್.ವೆಂಕಟೇಶ್ವರನ್ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.