ಭಾನುವಾರ, ಏಪ್ರಿಲ್ 18, 2021
33 °C

ಭಾರತೀಯ ಚಿತ್ರಕಲೆಗೆ ಭವಿಷ್ಯವಿದೆ: ನರಸಿಂಹಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ‘ತರುಣರು ಇಂದು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದರಿಂದ ಭಾರತೀಯ ಚಿತ್ರಕಲೆಗೆ ಭವಿಷ್ಯವಿದೆ’ ಎಂದು ಭಾರತೀಯ ವಿದ್ಯಾಭವನ ಮೈಸೂರು ಕೇಂದ್ರದ ಅಧ್ಯಕ್ಷ ಪ್ರೊ.ಎ.ವಿ. ನರಸಿಂಹಮೂರ್ತಿ ಶುಕ್ರವಾರ ಅಭಿಪ್ರಾಯಪಟ್ಟರು.ಭಾರತೀಯ ವಿದ್ಯಾಭವನ ಬೆಂಗಳೂರು, ಮೈಸೂರು ಹಾಗೂ ಮಡಿಕೇರಿ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಕೊಡಗಿನ ಅತ್ಯಂತ ಕುಗ್ರಾಮಗಳಲ್ಲಿ ಒಂದಾಗ ಗರ್ವಾಲೆಯಲ್ಲಿ ಹಮ್ಮಿಕೊಂಡಿರುವ ‘ಗರ್ವಾಲೆ ಭವನೋತ್ಸವ-2011’ ಸ್ಥಳದಲ್ಲಿಯೇ ಚಿತ್ರ ಬರೆಯುವ ಹೆಸರಾಂತ ಚಿತ್ರ ಕಲಾವಿದರ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.‘ಭಾರತೀಯ ಚಿತ್ರಕಲೆಗೆ ಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿದೆ. ಆದಿ ಮಾನವನ ಕಾಲದಿಂದಲೂ ಚಿತ್ರಕಲೆ ತನ್ನ ಗತವೈಭವವನ್ನು ಉಳಿಸಿಕೊಂಡು ಬಂದಿದೆ. ಅಂತಹ ಪರಂಪರೆಯನ್ನು ನಾವು ಮುಂದುವರಿಸಿಕೊಂಡು ಹೋಗಬೇಕಾಗಿದೆ. ‘ರವಿ ಕಾಣದ್ದನ್ನು ಕವಿ ಕಂಡ’ ಎಂಬಂತೆ ಚಿತ್ರಕಲೆಯಲ್ಲಿ ನಮಗೆ ಕಾಣದ್ದು ಕಲಾವಿದರಿಗೆ ಗೊತ್ತಾಗಲಿದೆ. ಕರ್ನಾಟಕ ಹಾಗೂ ಪಂಜಾಬ್‌ನ ಚಿತ್ರಕಲೆಗಳು ದೇಶದಲ್ಲಿಯೇ ಪ್ರಮುಖ ಸ್ಥಾನ ಪಡೆದಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಶಿಬಿರದಲ್ಲಿ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದ ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್. ರಾಮಾನುಜ, ‘ಮೂರು ದಿನಗಳ ಕಾಲ ನಡೆಯಲಿರುವ ಈ ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿರುವ 25 ಮಂದಿ ಕಲಾವಿದರು ಗರ್ವಾಲೆ ಭೂವಿನ್ಯಾಸ ರಚನೆ ಜತೆಗೆ, ಅದರ ಸುತ್ತಮುತ್ತಲಿನ ಪ್ರಕೃತಿಯ ಸೌಂದರ್ಯವನ್ನು ಚಿತ್ರಕಲೆಯಲ್ಲಿ ಸೆರೆಹಿಡಿಯಲಿದ್ದಾರೆ’ ಎಂದರು.ಶಿಬಿರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ, ದರ್ಬಾರಿ ಸೇಥ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ದತ್ತಿ ಉಪನ್ಯಾಸ ನೀಡಿದ ಚಾರ್ಟರ್ಡ್ ಅಕೌಂಟೆಂಟ್ ಹಾಗೂ ತೆರಿಗೆ ತಜ್ಞ ಪದಮ್ ಖಿಂಜಾ, ಆರ್ಥಿಕ ಅಭಿವೃದ್ಧಿಯಲ್ಲಿ ಬಜೆಟ್‌ನ ಪಾತ್ರದ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.ಕಲಾ ಶಿಬಿರದ ನಿರ್ದೇಶಕ ಎಚ್.ಎನ್.ಸುರೇಶ್ ಮಾತನಾಡಿ, ಮಾರ್ಚ್ 20ರವರೆಗೆ ನಡೆಯಲಿರುವ ಈ ಭೂ ವಿನ್ಯಾಸ ರಚನೆ ಶಿಬಿರದಲ್ಲಿ ಸುಮಾರು 50 ಜಲವರ್ಣ ಹಾಗೂ ತೈಲವರ್ಣ ಚಿತ್ರಗಳು ರೂಪುಗೊಳ್ಳಲಿವೆ. ಮುಂದಿನ ದಿನಗಳಲ್ಲಿ ದೇಶದ ವಿವಿಧೆಡೆ ಸಂಚಾರಿ ವಸ್ತುಪ್ರದರ್ಶನದ ಮೂಲಕ ಗರ್ವಾಲೆಯ ಸುಂದರ ಚಿತ್ರಣವನ್ನು ಪ್ರದರ್ಶಿಸಲಾಗುವುದು ಎಂದರು.ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಪಿ. ಉತ್ತಪ್ಪ ದರ್ಬಾರಿ ಸೇಥ್ ದತ್ತಿ ಕುರಿತು ವಿವರಣೆ ನೀಡಿದರು. ಮೈಸೂರಿನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಎಂಜಿನಿಯರ್ಸ್‌ (ಎನ್‌ಐಇ) ಕಾಲೇಜಿನ ಹಿರಿಯ ಅಧಿಕಾರಿಗಳು, ಕಾನೂನು ತಜ್ಞ ಸಿ.ಕೆ.ಎನ್. ರಾಜಾ, ಗರ್ವಾಲೆ ಪಟ್ಟೆದಾರ ಸೋಮಯ್ಯ, ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಕೆ.ಸಿ. ಪೆಮ್ಮಯ್ಯ, ಜಿ.ಬಾಲಾಜಿ, ವಿ. ಮುರಳೀಧರ್  ಇದ್ದರು. ಗರ್ವಾಲೆ ಶಾಲೆಯ ಮಕ್ಕಳು ಪ್ರಾರ್ಥಿಸಿದರು. ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಉಪಾಧ್ಯಕ್ಷ ಕೆ.ಎಸ್. ದೇವಯ್ಯ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.