ಗುರುವಾರ , ಜೂನ್ 17, 2021
27 °C

ಭಾರತೀಯ ವಿಜ್ಞಾನ ಸಂಸ್ಥೆಯ ಹಿಂದೆ...

ಡಾ.ಆರ್.ಸುಬ್ರಹ್ಮಣ್ಯಂ Updated:

ಅಕ್ಷರ ಗಾತ್ರ : | |

ಸ್ವಾಮಿ ವಿವೇಕಾನಂದರ ದೃಷ್ಟಿಕೋನ ಪಾಶ್ಚಿಮಾತ್ಯ ದೇಶಗಳಲ್ಲಿ ಹಿಂದುತ್ವವನ್ನು ಪಸರಿಸುವುದರ ಆಚೆಗೂ ವಿಸ್ತರಿಸಿತ್ತು. ಭಾರತ ಧಾರ್ಮಿಕ ಪ್ರಧಾನ ರಾಷ್ಟ್ರವಾಗಿದ್ದರೂ  ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯ ಮಹತ್ವವನ್ನೂ ಅದು ಅರ್ಥ ಮಾಡಿಕೊಳ್ಳಬೇಕು ಎಂಬ ಕಾಳಜಿ ಅವರಿಗಿತ್ತು.ಭಾರತೀಯರು ಅಜ್ಞಾನ ಮತ್ತು ಮೂಢನಂಬಿಕೆಯಲ್ಲಿ ಹುದುಗಿಹೋಗಿದ್ದು, ಇದು ಅವರ ದೈಹಿಕ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಅಡ್ಡಗಾಲಾಗಿದೆ ಎಂಬ ಕಳವಳ ಅವರನ್ನು ಕಾಡುತ್ತಿತ್ತು.ಪ್ರಯೋಗಕ್ಕೆ ಒಳಪಡಿಸದೇ ಯಾವುದನ್ನೂ ಒಪ್ಪಿಕೊಳ್ಳಬೇಡಿ ಎಂದು ವಿವೇಕಾನಂದರು ತಮ್ಮ ಅನುಯಾಯಿಗಳಿಗೆ ಪದೇ ಪದೇ ಹೇಳುತ್ತಲೇ ಇದ್ದರು. ಯಾವುದನ್ನೇ ಆಗಲಿ ಒಪ್ಪಿಕೊಳ್ಳುವ ಅಥವಾ ನಿರಾಕರಿಸುವ ಮುನ್ನ ಅದನ್ನು ಸಂಪೂರ್ಣ ಪರಾಮರ್ಶೆಗೆ ಒಳಪಡಿಸಬೇಕು ಎಂಬುದು ಅವರ ಬಲವಾದ ಪ್ರತಿಪಾದನೆಯಾಗಿತ್ತು.`ಯಾವ ವಿಷಯನ್ನಾಗಲಿ ಸೂಕ್ತವಾಗಿ ಪರಿಶೀಲಿಸದೇ ಅದನ್ನು ಸಾರಾಸಗಟಾಗಿ ತಿರಸ್ಕರಿಸುವುದು ಸ್ವಸ್ಥ ಮನಸ್ಸಿನ ಸಂಕೇತ ಅಲ್ಲ, ವಿಶೇಷ ಮಾನಸಿಕ ಪ್ರಕ್ರಿಯೆಗಳ ವಿವರ ಕೊಡಲು ವಿಫಲರಾಗಿರುವ ಭೌತಿಕ ವಿಜ್ಞಾನಿಗಳು, ತಮ್ಮದೇ ಅಸ್ತಿತ್ವವನ್ನು ನಿರಾಕರಿಸಲು ಸಹ ಹೆಣಗಾಡುತ್ತಾರೆ~ ಎಂದು ಅವರು ಹೇಳುತ್ತಿದ್ದರು.ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಅಸ್ತಿತ್ವಕ್ಕೆ ಬರುವಲ್ಲಿ ವಿವೇಕಾನಂದರ ಕೊಡುಗೆಯೂ ಇದೆ ಎಂಬ ವಿಷಯ ಕೆಲವರಿಗಷ್ಟೇ ತಿಳಿದಿದೆ. 1893ರಲ್ಲಿ ವಿವೇಕಾನಂದರು ಮೊದಲ ಬಾರಿಗೆ ಸರ್ ಜಮ್‌ಷೆಡ್‌ಜಿ ಟಾಟಾ ಅವರನ್ನು ಭೇಟಿ ಮಾಡಿದ್ದರು.ಯೊಕೊಹಾಮದಿಂದ ವ್ಯಾಂಕೋವರ್‌ಗೆ ತೆರಳುತ್ತಿದ್ದ ಹಡಗಿನಲ್ಲಿ ಇಬ್ಬರೂ ಒಟ್ಟಿಗೇ ಪ್ರಯಾಣಿಸುತ್ತಿದ್ದರು. ಹಿಂದುತ್ವವನ್ನು ವಿಶ್ವದಾದ್ಯಂತ ಪ್ರಚುರಪಡಿಸುವ ತಮ್ಮ ಜೀವನದ ಧ್ಯೇಯ ಹೊತ್ತು ಸ್ವಾಮಿ ಅಮೆರಿಕಕ್ಕೆ ಹೊರಟಿದ್ದರು. ದೇಶದ ಕೈಗಾರಿಕಾ ಕ್ಷೇತ್ರದ ಪ್ರಮುಖರಾಗಿದ್ದ ಜಮ್‌ಷೆಡ್‌ಜಿ, ತಮ್ಮ ಉಕ್ಕು ಘಟಕಕ್ಕೆ ಅಗತ್ಯವಾಗಿದ್ದ ಸಲಕರಣೆಗಳು ಮತ್ತು ತಂತ್ರಜ್ಞಾನದ ಶೋಧನೆಗಾಗಿ  ಅಮೆರಿಕಕ್ಕೆ ತೆರಳುತ್ತಿದ್ದರು.ದೇಶಾಭಿಮಾನಿಗಳಾಗಿದ್ದ ಈ ಇಬ್ಬರೂ ಅಸಾಧಾರಣ ಗಣ್ಯರು ತಮ್ಮ ದೇಶವಾಸಿಗಳ ಕಲ್ಯಾಣದ ಬಗ್ಗೆ ಅಪಾರ ಕಾಳಜಿ ಹೊಂದಿದವರಾಗಿದ್ದರು. ಬಳಿಕ ಇಬ್ಬರ ನಡುವೆ ಮಾತುಕತೆ ಆರಂಭವಾಯಿತು. ಜಮ್‌ಷೆಡ್‌ಜಿ ಅವರನ್ನು ಆಶೀರ್ವದಿಸಿದ ವಿವೇಕಾನಂದರು, ಪಶ್ಚಿಮದ ವೈಜ್ಞಾನಿಕ, ತಾಂತ್ರಿಕ ಸಾಧನೆಗಳನ್ನು ಭಾರತದ ಸಂನ್ಯಾಸ ತತ್ವ ಮತ್ತು ಮಾನವೀಯತೆಯ ಜೊತೆ ಮಿಳಿತ ಮಾಡಿದರೆ ಎಷ್ಟು ಅದ್ಭುತವಾಗಿರುತ್ತದೆ ಎಂದು ಹೇಳಿದರು.ವೈಜ್ಞಾನಿಕ ಮತ್ತು ತಾಂತ್ರಿಕ ಪರಿಣತಿ ಹೊಂದಿದ ಮಾನವ ಸಂಪನ್ಮೂಲ ಸೃಷ್ಟಿಸುವ ಸಂಸ್ಥೆಯೊಂದನ್ನು ನೀವು ಸೃಷ್ಟಿಸಬಾರದೇಕೆ ಎಂದು ಸಹ ಟಾಟಾ ಅವರನ್ನು ಕೇಳಿದರು. ಈ ಭೇಟಿಯ ಬಳಿಕ ಪರಸ್ಪರರು ಮತ್ತೊಮ್ಮೆ ಭೇಟಿ ಆಗಲೇ ಇಲ್ಲವಾದರೂ ಸ್ವಾಮೀಜಿ ಅವರ ಮಾತುಗಳು ಮಾತ್ರ ಜಮ್‌ಷೆಡ್‌ಜಿ ಅವರ ಹೃದಯಕ್ಕೆ ನಾಟಿದ್ದವು. ಐದು ವರ್ಷಗಳ ಬಳಿಕ ಇದಕ್ಕೆ ಜಮ್‌ಷೆಡ್‌ಜಿ ಅವರ ಉತ್ತರ, ಪತ್ರದ ರೂಪದಲ್ಲಿ ವಿವೇಕಾನಂದರ ಕೈಸೇರಿತ್ತು.ಬೆಂಗಳೂರಿನಲ್ಲಿ ಅಂತಹ ಸಂಸ್ಥೆಯೊಂದನ್ನು ಹುಟ್ಟುಹಾಕಲು ತಾವು ಬಯಸಿದ್ದು, ಅದರ ನೇತೃತ್ವವನ್ನು ವಹಿಸಿಕೊಳ್ಳುವಿರಾ ಎಂದು ವಿವೇಕಾನಂದರನ್ನು ಜಮ್‌ಷೆಡ್‌ಜಿ ಕೇಳಿದ್ದರು.

ಈ ಆಹ್ವಾನವನ್ನು ವಿವೇಕಾನಂದರು ವಿನೀತರಾಗೇ ತಳ್ಳಿಹಾಕಿದರಾದರೂ ಟಾಟಾ ಅವರ ಪ್ರಯತ್ನವನ್ನು ಮಾತ್ರ ಉತ್ತೇಜಿಸಿದರು. ಈ ಸಂಗತಿ ಮತ್ತು ಇಬ್ಬರ ನಡುವಿನಇಂತಹ ಸಂವಾದವೇ ಬೆಂಗಳೂರಿನಲ್ಲಿ ಸಂಸ್ಥೆಯನ್ನು ಕಟ್ಟಲು ಸಾಧನವಾಯಿತು ಎಂಬುದು ಈಗ ಕೆಲವರ ನೆನಪಿನಲ್ಲಷ್ಟೇ ಇದೆ.

 

ವಿವೇಕಾನಂದರು 1902ರ ಜುಲೈನಲ್ಲಿ ನಿಧನರಾದರು. ನಂತರ ಜಮ್‌ಷೆಡ್‌ಜಿ ಸಹ ಹೆಚ್ಚು ಕಾಲ ಬದುಕುಳಿಯಲಿಲ್ಲ. 1904ರಲ್ಲಿ ಅವರು ನಿಧನರಾದಾಗ ಇನ್ನು ಐದು ವರ್ಷಗಳ ಬಳಿಕ ತಮ್ಮ ದೃಷ್ಟಿಕೋನ ಸಾಕಾರಗೊಳ್ಳುತ್ತದೆ ಎಂಬ ಅರಿವೂ ಅವರಿಗಿರಲಿಲ್ಲ.

ಹೀಗೆ ಟಾಟಾ ಸಮೂಹದ ಕೊಡುಗೆಯಾಗಿ 1909ರಲ್ಲಿ ಅಸ್ತಿತ್ವಕ್ಕೆ ಬಂದ ಭಾರತೀಯ ವಿಜ್ಞಾನ ಸಂಸ್ಥೆ ಇಂದು ರಾಷ್ಟ್ರದ ಹೆಮ್ಮೆಯ ಸಂಸ್ಥೆಯಾಗಿದೆ.ಈ ಒಂದು ಸಂಸ್ಥೆಯ ಕಾರಣಕ್ಕಷ್ಟೇ ಸ್ವಾಮಿ ವಿವೇಕಾನಂದರು ಸ್ಮರಣಾರ್ಹರಲ್ಲ. ಭಾರತದ ಬೆಳವಣಿಗೆಗೆ ವೈಜ್ಞಾನಿಕ ಮನೋಭಾವ ಪೂರಕ ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು. `ಮಾಂತ್ರಿಕ ಲಾಟೀನಿನ~ ರೀತಿಯಲ್ಲಿ ಹಳ್ಳಿಹಳ್ಳಿಗೆ ಹೋಗಿ ಗ್ರಾಮೀಣ ಸಹೋದರರಲ್ಲಿ ವಿಜ್ಞಾನದ ಮಹತ್ವವನ್ನು ಬೋಧಿಸಿ ಎಂದು ಅವರು ತಮ್ಮ ಅನುಯಾಯಿಗಳನ್ನು ಪ್ರೇರೇಪಿಸುತ್ತಿದ್ದರು. ಭಾರತದ ಸಮಸ್ಯೆಗಳ ಪರಿಹಾರಕ್ಕೆ ವೈಜ್ಞಾನಿಕ ಹಿನ್ನೆಲೆಯ ಅಗತ್ಯ ಇದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದ ದಾರ್ಶನಿಕರೂ ಅವರಾಗಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.