ಸೋಮವಾರ, ಜೂನ್ 21, 2021
29 °C

ಭಾರತ- ಇರಾನ್ ವಾಣಿಜ್ಯ ವಹಿವಾಟು:4ವರ್ಷಗಳಲ್ಲಿ 2,500 ಕೋಟಿ ಡಾಲರ್ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ (ಪಿಟಿಐ): ಭಾರತ ಇರಾನ್ ನಡುವಿನ ದ್ವಿಪಕ್ಷೀಯ ವಾಣಿಜ್ಯ ವಹಿವಾಟನ್ನು ಮುಂದಿನ ನಾಲ್ಕು ವರ್ಷಗಳಲ್ಲಿ 2,500 ಕೋಟಿ ಡಾಲರ್‌ಗೆ ಏರಿಸುವ ಗುರಿ ಹೊಂದಲಾಗಿದೆ.ಇರಾನ್‌ಗೆ 80 ಜನರ ವಾಣಿಜ್ಯ ನಿಯೋಗ ಕರೆದೊಯ್ಯುತ್ತಿರುವ ವಾಣಿಜ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಅರವಿಂದ್ ಮೆಹ್ತಾ ಈ ವಿಚಾರ ತಿಳಿಸಿದ್ದಾರೆ.ಪ್ರಸ್ತುತ ಭಾರತ ಮತ್ತು ಇರಾನ್ ನಡುವಿನ ವಹಿವಾಟು 1,500 ಕೋಟಿ ಡಾಲರ್‌ಗಳಷ್ಟು ಇದೆ.

ಖಾಸಗಿ ಹಾಗೂ ಸಾರ್ವಜನಿಕ ವಲಯದ ಪ್ರತಿನಿಧಿಗಳನ್ನು ಒಳಗೊಂಡ ಭಾರತದ ನಿಯೋಗ ಐದು ದಿನಗಳ ಕಾಲ ಇರಾನ್‌ನಲ್ಲಿ ಇರಲಿದ್ದು, ಹೊಸ ವಾಣಿಜ್ಯಾವಕಾಶಗಳನ್ನು ಹುಡುಕಲಿದೆ.

 

ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಫೀಕ್ ಅಹ್ಮದ್ ಸಹ ಈ ನಿಯೋಗದಲ್ಲಿ ಇದ್ದಾರೆ ಎಂದು `ಟೆಹರಾನ್ ಟೈಮ್ಸ~ ವರದಿ ಮಾಡಿದೆ.ಇರಾನ್‌ನ ಪರಮಾಣು ಚಟುವಟಿಕೆ ವಿರುದ್ಧ ಅಮೆರಿಕ ಮತ್ತಿತರ ದೇಶಗಳು ಆರ್ಥಿಕ ದಿಗ್ಬಂಧನ ವಿಧಿಸಿರುವ ಸಂದರ್ಭದಲ್ಲಿ ಹಾಗೂ ಇರಾನ್‌ಗೆ ಭಾರತ ಪಾವತಿಸಬೇಕಾದ ತೈಲದ ಹಣದ ಕುರಿತು ಸಮಸ್ಯೆ ಮುಂದುವರಿದಿರುವಾಗ ದ್ವಿಪಕ್ಷೀಯ ವಾಣಿಜ್ಯ ಸಂಬಂಧ ಸುಧಾರಿಸಿಕೊಳ್ಳುವತ್ತ ಭಾರತ ಈ ಹೆಜ್ಜೆ ಇಟ್ಟಿದೆ.ಈ ಕುರಿತು ಕಳೆದ ತಿಂಗಳು  ಹೇಳಿಕೆ ನೀಡಿದ್ದ ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್, ರಫ್ತು ಚಟುವಟಿಕೆಗೆ ಉತ್ತೇಜನ ನೀಡಲು ಹಾಗೂ ಆರ್ಥಿಕ ದಿಗ್ಬಂಧನದಿಂದ ಉದ್ಭವಿಸಿರುವ ವಾಣಿಜ್ಯಾವಕಾಶಗಳ ಕುರಿತು ಮಾಹಿತಿ ಪಡೆಯಲು ನಿಯೋಗ ಕಳುಹಿಸುತ್ತಿರುವುದಾಗಿ ಹೇಳಿದ್ದರು.ಭಾರತಕ್ಕೆ ಆ ದೇಶದಲ್ಲಿ ದೊಡ್ಡ ಅವಕಾಶವಿದೆ. ತೈಲ ವಹಿವಾಟಿನ ಶೇ 45ರಷ್ಟು ಮೊತ್ತವನ್ನು ಆ ದೇಶಕ್ಕೆ ರಫ್ತು ಹೆಚ್ಚಿಸುವ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಉಭಯ ದೇಶಗಳೂ ಆಶಿಸಿವೆ ಎಂದೂ ಖುಲ್ಲರ್ ತಿಳಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.