ಸೋಮವಾರ, ಮೇ 17, 2021
31 °C

ಭಾರತ ಕ್ರಿಕೆಟ್‌ನ ಟೈಗರ್ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್‌ನ ಹುಲಿ ಇನ್ನು ಘರ್ಜಿಸುವುದಿಲ್ಲ! ಸರ್ವಶ್ರೇಷ್ಠ ನಾಯಕ ಎಂದೇ ಹೆಸರು ಮಾಡಿದ್ದ ಮನ್ಸೂರ್ ಅಲಿ ಖಾನ್ ಪಟೌಡಿ ಜೂನಿಯರ್ ಅವರ ಜೀವನದ ಇನಿಂಗ್ಸ್ ಕೊನೆಗೊಳ್ಳುವುದರೊಂದಿಗೆ ಭಾರತದ ಕ್ರಿಕೆಟ್ `ನವಾಬ~ನನ್ನು ಕಳೆದುಕೊಂಡಂತಾಯಿತು.ಮೂರು ತಿಂಗಳಿನಿಂದ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಪಟೌಡಿ (70) ಇಲ್ಲಿನ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಕೊನೆಯುಸಿರೆಳೆದರು.ಅವರು ಪತ್ನಿ ಹಾಗೂ ಬಾಲಿವುಡ್ ನಟಿ ಶರ್ಮಿಳಾ ಟ್ಯಾಗೋರ್, ಪುತ್ರ ಸೈಫ್ ಅಲಿ ಖಾನ್, ಪುತ್ರಿಯರಾದ ಸೋಹಾ ಅಲಿ ಖಾನ್ ಹಾಗೂ ಸಬಾ ಅಲಿ ಖಾನ್ ಅವರನ್ನು ಅಗಲಿದ್ದಾರೆ.ಪಟೌಡಿ ಯುವಕನಾಗಿದ್ದಾಗ ಕಾರು ಅಪಘಾತದಲ್ಲಿ ಬಲಗಣ್ಣಿನ ದೃಷ್ಟಿ ಕಳೆದುಕೊಂಡಿದ್ದರು. ಆದರೆ ಭಾರತ ಕ್ರಿಕೆಟ್‌ಗೆ ಅವರು ಹೊಸ ದೃಷ್ಟಿ ನೀಡಿದರು. 1962ರಲ್ಲಿ ಅವರು ಭಾರತ ತಂಡದ ನಾಯಕರಾದರು. ಆಗ ಅವರ ವಯಸ್ಸು ಕೇವಲ 21. ಕೇವಲ 3 ಟೆಸ್ಟ್ ಆಡಿದ ಅನುಭವ ಅವರದ್ದಾಗಿತ್ತು. ನಾಯಕತ್ವವನ್ನು ಸವಾಲಾಗಿ ಸ್ವೀಕರಿಸಿ ಯಶಸ್ವಿಯಾಗಿದ್ದರು. ಅವರು ಆಡಿದ 46 ಟೆಸ್ಟ್‌ಗಳಲ್ಲಿ 40ರಲ್ಲಿ ಭಾರತ ತಂಡ ಮುನ್ನಡೆಸಿದ್ದಾರೆ. ಅದರಲ್ಲಿ ಒಂಬತ್ತು ಪಂದ್ಯಗಳಲ್ಲಿ ಗೆಲುವು ಲಭಿಸಿದೆ. `ಟೈಗರ್~ ನಾಯಕತ್ವದಲ್ಲಿ ಭಾರತ ತಂಡ ನ್ಯೂಜಿಲೆಂಡ್ ನೆಲದಲ್ಲಿ ಸರಣಿ ಜಯಿಸಿತ್ತು. 1967ರಲ್ಲಿ ಬಂದ ಆ ಜಯ ವಿದೇಶಿ ನೆಲದಲ್ಲಿ ಭಾರತಕ್ಕೆ ಸಿಕ್ಕ ಮೊದಲ ಸರಣಿ ಗೆಲುವು ಕೂಡ.  ಅವರು ಅರ್ಜುನ (1964) ಹಾಗೂ ಪದ್ಮಶ್ರೀ (967) ಪ್ರಶಸ್ತಿ ಪುರಸ್ಕೃತರಾಗಿದ್ದರು. ಬಾಲಿವುಡ್‌ನಲ್ಲಿ ಮಿಂಚು ಹರಿಸುತ್ತಿದ್ದ ಶರ್ಮಿಳಾ ಅವರನ್ನು 1969ರಲ್ಲಿ ವಿವಾಹವಾದರು. ಅವರ ಜೀವನ ವಿವಾದಗಳಿಂದೇನೂ ಮುಕ್ತವಾಗಿರಲಿಲ್ಲ. ಕೃಷ್ಣಮೃಗ ಬೇಟಿಯಾಡಿದ್ದಕ್ಕೆ 2005ರಲ್ಲಿ ಅವರನ್ನು ಬಂಧಿಸಲಾಗಿತ್ತು.ಇಂಗ್ಲೆಂಡ್ ಎದುರು ದೆಹಲಿಯಲ್ಲಿ 1961ರಲ್ಲಿ ಅವರು ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 14 ವರ್ಷ ಕಾಲ ಭಾರತದ `ಟೈಗರ್~ ಆಗಿ ಮೆರೆದ ಮನ್ಸೂರ್ ಭಾರತ ಕಂಡ ಯಶಸ್ವಿ ನಾಯಕ ಎನಿಸಿದರು. ವೆಸ್ಟ್‌ಇಂಡೀಸ್ ಎದುರು ಮುಂಬೈಯಲ್ಲಿ 1975ರಲ್ಲಿ ತಮ್ಮ ಕೊನೆಯ ಪಂದ್ಯ ಆಡಿದ್ದರು. ಅವರು ಮ್ಯಾಚ್ ರೆಫರಿ ಹಾಗೂ ಕ್ರಿಕೆಟ್ ಆಡಳಿತದಾರರಾಗಿಯೂ ಸೇವೆ ಸಲ್ಲಿಸ್ದ್ದಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.