ಮಂಗಳವಾರ, ಜನವರಿ 28, 2020
19 °C
ಇಂದಿನಿಂದ ಜೂನಿಯರ್‌ ವಿಶ್ವಕಪ್‌ ಹಾಕಿ ಟೂರ್ನಿ

ಭಾರತ ತಂಡಕ್ಕೆ ಹಾಲೆಂಡ್‌ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮನ್‌ಪ್ರೀತ್‌ ಸಿಂಗ್‌ ಸಾರಥ್ಯದ ಭಾರತ ತಂಡದವರು ಶುಕ್ರವಾರ ಇಲ್ಲಿ ಆರಂಭವಾಗಲಿರುವ 10ನೇ ಎಫ್‌ಐಎಚ್‌ ಜೂನಿಯರ್‌ ವಿಶ್ವಕಪ್‌ ಹಾಕಿ ಟೂರ್ನಿಯ ತಮ್ಮ ಮೊದಲ ಪಂದ್ಯದಲ್ಲಿ ಬಲಿಷ್ಠ ಹಾಲೆಂಡ್‌ ತಂಡವನ್ನು ಎದುರಿಸಲಿದ್ದಾರೆ.ಈ ಪಂದ್ಯ ಮೇಜರ್‌ ಧ್ಯಾನ್‌ಚಂದ್‌ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ತಂಡದವರು ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಇದೇ ಗುಂಪಿನಲ್ಲಿ ಹಾಲೆಂಡ್‌, ಕೊರಿಯಾ ಹಾಗೂ ಕೆನಡಾ ತಂಡಗಳಿವೆ. ಒಟ್ಟು 16 ತಂಡಗಳನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ. ಡಿಸೆಂಬರ್‌ 15ರಂದು ಫೈನಲ್‌ ನಡೆಯಲಿದೆ.ಹಾಲಿ ಚಾಂಪಿಯನ್‌ ಜರ್ಮನಿ ‘ಎ’ ಗುಂಪಿನಲ್ಲಿದೆ. ಈ ತಂಡದವರು ಆಡಿದ 9 ವಿಶ್ವಕಪ್‌ಗಳಲ್ಲಿ ಐದರಲ್ಲಿ ಗೆದ್ದಿದ್ದಾರೆ. ಸದ್ಯ ಈ ತಂಡ ಅಗ್ರ ರ್‍ಯಾಂಕಿಂಗ್‌ ಹೊಂದಿದೆ. ಆತಿಥೇಯ ತಂಡದ ನಾಯಕ ಮನ್‌ಪ್ರೀತ್‌ ಹಾಗೂ ಮುಖ್ಯ ಕೋಚ್‌ ಗ್ರೇಗ್‌ ಕ್ಲಾರ್ಕ್‌ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ. ಭಾರತದವರು 2001ರಲ್ಲಿ ವಿಶ್ವಕಪ್‌ ಜಯಿಸಿದ್ದರು. 2005ರಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.‘ಈ ಬಾರಿ ಪದಕ ಜಯಿಸಲು ನಮಗೆ ಉತ್ತಮ ಅವಕಾಶವಿದೆ. ಆದರೆ ಒತ್ತಡವನ್ನು ಮೈಮೇಲೆ ಎಳೆದುಕೊಳ್ಳಲು ನಾವು ಇಷ್ಟಪಡುವುದಿಲ್ಲ. ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ತೋರಬೇಕು’ ಎಂದು ಕ್ಲಾರ್ಕ್‌ ಹೇಳಿದ್ದಾರೆ. ‘ಈ ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ಬಲಿಷ್ಠ ತಂಡ ಯಾವುದು ಎಂದು ಹೇಳುವುದು ಕಷ್ಟ. ಕೆಲ ದೇಶಗಳ ಎದುರು ನಾವು ಇತ್ತೀಚೆಗೆ ಯಾವುದೇ ಪಂದ್ಯ ಆಡಿಲ್ಲ. ಆದರೆ ಯೂರೋಪಿನ ತಂಡಗಳ ಭಯ ಇದ್ದೇ ಇದೆ. ಹಾಲೆಂಡ್‌, ಜರ್ಮನಿ ಹಾಗೂ ಬೆಲ್ಜಿಯಂ ತಂಡಗಳು ಅಪಾಯಕಾರಿ’ ಎಂದೂ ಅವರು ನುಡಿದಿದ್ದಾರೆ.ಭಾರತ ತಂಡದಲ್ಲಿ ಈಗ ಮೂವರು ಡ್ರ್ಯಾಗ್‌ಫ್ಲಿಕರ್‌ ಇದ್ದಾರೆ. ಗುರ್ಜಿಂದರ್‌ ಸಿಂಗ್‌, ಉಪನಾಯಕ ಅಮಿತ್‌ ರೋಹಿದಾಸ್‌ ಹಾಗೂ ಸುಖ್‌ಮಂಜಿತ್‌ ಸಿಂಗ್‌ ಎದುರಾಳಿ ಮೇಲೆ ಒತ್ತಡ ಹೇರಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಫಾರ್ವರ್ಡ್‌ ಆಟಗಾರರಾದ ಮನ್‌ದೀಪ್‌ ಸಿಂಗ್, ಆಕಾಶ್‌ದೀಪ್‌ ಸಿಂಗ್‌, ರಮಣದೀಪ್‌ ಸಿಂಗ್‌ ಅವರ ಮೇಲೆ ಭರವಸೆ ಇಡಬಹುದು. ಪಂದ್ಯ ಶ್ರೇಷ್ಠ ಗೌರವ ಪಡೆಯುವವರು ₨ 1 ಲಕ್ಷ ಹಣ ಪಡೆಯಲಿದ್ದಾರೆ. ಹೆಚ್ಚು ಗೋಲು ಗಳಿಸುವವರು ₨ 50 ಸಾವಿರ ಗಳಿಸಲಿದ್ದಾರೆ.

ಗುಂಪುಗಳು ಇಂತಿವೆ: ಗುಂಪು ‘ಎ’: ಜರ್ಮನಿ, ಪಾಕಿಸ್ತಾನ, ಬೆಲ್ಜಿಯಂ, ಈಜಿಪ್ಟ್‌. ಗುಂಪು ‘ಬಿ’: ಆಸ್ಟ್ರೇಲಿಯಾ, ಸ್ಪೇನ್‌, ಅರ್ಜೆಂಟೀನಾ, ಫ್ರಾನ್ಸ್‌. ಗುಂಪು ‘ಸಿ’: ಹಾಲೆಂಡ್‌, ಕೊರಿಯಾ, ಭಾರತ, ಕೆನಡಾ. ಗುಂಪು ‘ಡಿ’: ಇಂಗ್ಲೆಂಡ್‌, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ, ಮಲೇಷ್ಯಾ.

ಶುಕ್ರವಾರದ ಪಂದ್ಯಗಳು

ಭಾರತ–ಹಾಲೆಂಡ್‌ (ಆರಂಭ: ರಾತ್ರಿ 8 ಗಂಟೆಗೆ). ಕೊರಿಯಾ–ಕೆನಡಾ (ಆರಂಭ: ಮಧ್ಯಾಹ್ನ 12 ಗಂಟೆಗೆ). ಆಸ್ಟ್ರೇಲಿಯಾ–ಅರ್ಜೆಂಟೀನಾ (ಆರಂಭ: ಮಧ್ಯಾಹ್ನ 2 ಗಂಟೆಗೆ). ಜರ್ಮನಿ–ಬೆಲ್ಜಿಯಂ (ಆರಂಭ: ಮಧ್ಯಾಹ್ನ 2.30 ಗಂಟೆಗೆ). ನ್ಯೂಜಿಲೆಂಡ್‌–ಮಲೇಷ್ಯಾ (ಆರಂಭ: ಸಂಜೆ 4 ಗಂಟೆಗೆ). ಸ್ಪೇನ್‌–ಫ್ರಾನ್ಸ್‌ (ಆರಂಭ: ಸಂಜೆ 5 ಗಂಟೆಗೆ). ಪಾಕಿಸ್ತಾನ–ಈಜಿಪ್ಟ್‌ (ಆರಂಭ: ಸಂಜೆ 6ಗಂಟೆಗೆ). ಇಂಗ್ಲೆಂಡ್‌–ದಕ್ಷಿಣ ಆಫ್ರಿಕಾ (ಆರಂಭ: ರಾತ್ರಿ 7.30 ಗಂಟೆಗೆ)

ಪ್ರತಿಕ್ರಿಯಿಸಿ (+)