ಶುಕ್ರವಾರ, ಜನವರಿ 24, 2020
28 °C

ಭಾರತ-ಪಾಕ್ ಸಂಬಂಧ; ಮಾಧ್ಯಮ ಪಾತ್ರ ಪ್ರಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: `ಭಾರತ-ಪಾಕ್ ಸಂಬಂಧ ಸುಧಾರಿಸುವಲ್ಲಿ ಮಾಧ್ಯಮಗಳಿಗೂ ಪ್ರಮುಖ ಪಾತ್ರವಿದೆ. ಎರಡೂ ದೇಶಗಳ ಮಾಧ್ಯಮಗಳು ಸ್ವಲ್ಪ ಪೂರಕ ಮನೋಭಾವದಿಂದ ಕೆಲಸ ಮಾಡಬೇಕಷ್ಟೆ~....

-ಹೀಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದವರು 17ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಪಾಕಿಸ್ತಾನ ನಿಯೋಗದ ಪ್ರತಿನಿಧಿ, ಯುವಕ ಮನ್ಸೂರ್ ನವಾಝ್.ಈಗ ಪಾಕಿಸ್ತಾನದಲ್ಲಿ ಸೇನೆ ಆಡಳಿತಕ್ಕೆ ಬರಬಹುದೆಂದು ಇಲ್ಲಿನ ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ ಪರಿ

ಸ್ಥಿತಿ ಅಷ್ಟೇನೂ ಕೆಟ್ಟದ್ದಾಗಿಲ್ಲ. ಗಿಲಾನಿ ಸರ್ಕಾರ ಗಂಭೀರ ಸಮಸ್ಯೆ ಎದುರಿಸುತ್ತಿಲ್ಲ. ಈಗ 1977 (ಜುಲ್ಫಿಕರ್ ಆಲಿ ಭುಟ್ಟೊ ಸರ್ಕಾರ ಪತನ ಸಂದರ್ಭ) ಅಥವಾ 1999ರ ಪರಿಸ್ಥಿತಿಯೇನೂ ಇಲ್ಲ. ಸೇನೆ ಮೊದಲಿನಷ್ಟು ಪ್ರಬಲವಾಗಿಲ್ಲ. ಸೇನಾಡಳಿತ ವಹಿಸಿಕೊಳ್ಳುತ್ತದೆ ಎಂಬುವುದು ಅತಿಯಾದ ಮಾತು. ಭಾರತದಲ್ಲಿ ಏನಾದರೂ ಆದರೆ ಪಾಕಿಸ್ತಾನ ಮಾಧ್ಯಮಗಳೂ ಸ್ವಲ್ಪ ಉತ್ಪ್ರೇಕ್ಷೆಯಿಂದಲೇ ಬರೆಯುತ್ತವೆ. ಇಲ್ಲಿಯೂ ಅದೇ ಪರಿಸ್ಥಿತಿ ಇರುವಂತೆದೆ. ಇದರಿಂದ ಉಭಯ ದೇಶಗಳಲ್ಲಿ ವೈರತ್ವ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ಮಾಧ್ಯಮಗಳಿಗೆ ಹೆಚ್ಚು ಜವಾಬ್ದಾರಿ ಇದೆ~ ಎಂದರು.

`ಎರಡೂ ದೇಶಗಳು, ತಮ್ಮ ಸೇನೆ ಬಲಪಡಿಸಲು ಮಾಡುವ ಲಕ್ಷಗಟ್ಟಲೆ ಡಾಲರ್ ವೆಚ್ಚವನ್ನು ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಬಳಸಿದ್ದರೆ ಸಾಕಷ್ಟು ಪ್ರಗತಿ ಕಾಣಬಹುದಿತ್ತು~ ಎಂದು ಮನದಾಳದ ಮಾತು ತಿಳಿಸಿದರು.

ಲಾಹೋರ್ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರ ವಿದ್ಯಾರ್ಥಿಯಾಗಿರುವ ನವಾಝ್ ಇಸ್ಲಾಮಾಬಾದ್‌ನ ಅಟಕ್ ಪಟ್ಟಣದವರು.

`ರಾಜಕೀಯ ವ್ಯಕ್ತಿಗಳಿಂದ ಎರಡೂ ದೇಶಗಳ ನಡುವೆ ಸಂಬಂಧ ಸುಧಾರಿಸಿಲ್ಲ. ಕಾಶ್ಮೀರ ಸಮಸ್ಯೆ ಪರಿಹಾರವಾದರೆ ಏನಾದರೂ ಆಗಬಹುದೇನೊ~ ಎನ್ನುವ ಅಭಿಪ್ರಾಯ 22 ವರ್ಷದ ಈ ಯುವಕನದ್ದು.

ಶುಕ್ರವಾರ ಮಧ್ಯಾಹ್ನ ನಗರದ ಜಪ್ಪಿನಮೊಗರು ಕಡೆಕಾರ್‌ನಲ್ಲಿ ಯುವಜನೋತ್ಸವ ಅಂಗವಾಗಿ ಏರ್ಪಡಿಸಿರುವ ಜಲ ಸಾಹಸ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಶ್ರೀಲಂಕಾದ ಒಟ್ಟು 16 ಮಂದಿಯ ನಿಯೋಗ ಬಂದಿತ್ತು. ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ವತಿಯಿಂದ ಜೆಟ್ ಸ್ಕೀಯಿಂಗ್, ಬನಾನಾ ರೈಡ್, ಕಯಾಕಿಂಗ್ ಏರ್ಪಡಿಸಲಾಗಿದ್ದ ಸ್ಥಳದಲ್ಲಿ ಸಾಹಸ ಕ್ರೀಡೆಗಳ ರೋಮಾಂಚನಕಾರಿ ಅನುಭವ ಪಡೆಯಲು ಕಾದುನಿಂತಿತ್ತು.

`ಲಾಹೋರ್‌ನಿಂದ ನವದೆಹಲಿಗೆ ನಾವು ಬಸ್‌ನಲ್ಲಿ ಬಂದೆವು. ನಂತರ ದೆಹಲಿಯಿಂದ ವಿಮಾನದಲ್ಲಿ ಗುರುವಾರ ಸಂಜೆ ಮಂಗಳೂರಿಗೆ ಬಂದಿಳಿದೆವು. ನಂತರ ನೋಂದಣಿ ಮೊದಲಾದ ಪ್ರಕ್ರಿಯೆಗಳಿಂದಾಗಿ ನಮಗೆ ಉದ್ಘಾಟನಾ ಸಮಾರಂಭ ನೋಡಲು ಆಗಲಿಲ್ಲ. ಆ ಅಪರೋಪದ ಸಂದರ್ಭವನ್ನು ಕಣ್ತುಂಬಿಕೊಳ್ಳಲು ಅವಕಾಶವಾಗಿದ್ದರೆ ಒಳ್ಳೆಯದಿತ್ತು. ಶಿಷ್ಟಾಚಾರ ಅಧಿಕಾರಿ ಮಹೇಂದರ್ ಸಿಂಗ್ ಇಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ~ ಎಂದರು.

ಪಾಕ್ ನಿಯೋಗದಲ್ಲಿ ಇದ್ದ ಝಿಲೋಮಿ ವಾಡಿವಾಲ್ಲಾ ಮಾತನಾಡಿ `ರಾಜಕೀಯ ಮಟ್ಟದಲ್ಲಿ ಸೌಹಾರ್ದ ಸಂಬಂಧ ಇಲ್ಲ ನಿಜ. ಎರಡೂ ದೇಶಗಳ ಜನರ ನಡುವೆ ಸಮಸ್ಯೆ ಇದ್ದಂತಿಲ್ಲ~ ಎಂದರು. ಝಿಲೊಮಿ ಅಹಮದಾಬಾದಿನಲ್ಲಿ ಹುಟ್ಟಿದವರು. ಮುಂಬೈಯಲ್ಲಿ ನೆಂಟರಿದ್ದಾರೆ. ಈಕೆ ಲಾಹೋರ್ ವಿ.ವಿ.ಯಲ್ಲಿ ಮ್ಯಾನೇಜ್‌ಮೆಂಟ್ ಸೈನ್ಸ್ ವಿದ್ಯಾರ್ಥಿನಿ. ಜಲ ಸಾಹಸ ಕ್ರೀಡೆ ಈಕೆಗೆ ಹೊಸದು. ಈಕೆ ಭಾರತಕ್ಕೆ ಆಗ್ಗಾಗ್ಗೆ ಬರುತ್ತಿರುತ್ತಾರೆ. ಆದರೆ ಮಂಗಳೂರು ಭೇಟಿ ಇದೇ ಮೊದಲು.

ಪಾಕ್ ನಿಯೋಗದಲ್ಲಿ ಇಬ್ಬರು ಯುವತಿಯರು, ನಾಲ್ವರು ಯುವಕರಿದ್ದರೆ, ಆಫ್ಘಾನಿಸ್ತಾನ ತಂಡದಲ್ಲಿ ನಾಲ್ವರು, ಶ್ರೀಲಂಕಾ ನಿಯೋಗದಲ್ಲಿ ಆರು ಮಂದಿ ಇದ್ದರು.

ಪ್ರತಿಕ್ರಿಯಿಸಿ (+)