ಸೋಮವಾರ, ಆಗಸ್ಟ್ 3, 2020
27 °C

ಭಾವಪೂರ್ಣ ಗಾಯನ, ಮೋಹಕ ನೃತ್ಯ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾವಪೂರ್ಣ ಗಾಯನ, ಮೋಹಕ ನೃತ್ಯ ಪ್ರದರ್ಶನ

ನಾದಜ್ಯೋತಿ ಶ್ರೀತ್ಯಾಗರಾಜಸ್ವಾಮಿ ಭಜನ ಸಭೆಯ ಆಶ್ರಯದಲ್ಲಿ ಮಲ್ಲೇಶ್ವರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ನಡೆದ ಎಂಟನೇ ಹರಿದಾಸ ಸಂಭ್ರಮದ ಕೊನೆಯ ಅಧಿವೇಶನದಲ್ಲಿ (ಭಾನುವಾರ ಸಂಜೆ) ವಿವಿಧ ಹರಿದಾಸರ ರಚನೆಗಳನ್ನು ಭಾವಪೂರ್ಣವಾಗಿ ಬಳ್ಳಾರಿ ಎಂ. ರಾಘವೇಂದ್ರ ಹಾಡಿದರು.

 

ಶಾಸ್ತ್ರೀಯ ಸಂಗೀತ ಕಛೇರಿಯಂತೆ ರಾಗಾಲಾಪನೆ, ನೆರೆವಲ್ ಮತ್ತು ಸ್ವರಪ್ರಸ್ತಾರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡದೆ ಹಾಡಿದ ರಚನೆಗಳ ಭಾವಕ್ಕೆ ಒತ್ತು ನೀಡಿ ಲಲಿತವಾಗಿ ಅವುಗಳನ್ನು ಶಾಸ್ತ್ರೀಯ ರಾಗಗಳಲ್ಲಿ ಹಾಡಿದುದು ವಿಶೇಷವಾಗಿತ್ತು.

 

ಅನುಭವೀ ಹಾಗೂ ಪರಿಣತ ಪಿಟೀಲು ವಾದಕ ಪ್ರೊ. ಟಿ.ಟಿ. ಶ್ರೀನಿವಾಸನ್ ಅವರ ಪ್ರೇರಕ ಸಹಕಾರದೊಂದಿಗೆ ಹಾಡಿದ ಅವರಿಗೆ ಆನೂರು ದತ್ತಾತ್ರೇಯ ಶರ್ಮ ಮತ್ತು ಸಿ.ಪಿ.ವ್ಯಾಸವಿಠಲ ಅವರ ಔಚಿತ್ಯಪೂರ್ಣ ಮೃದಂಗ ಮತ್ತು ಖಂಜರಿ ಪಕ್ಕವಾದ್ಯ ಸಹಕಾರವಿತ್ತು. ವ್ಯಾಸವಿಠಲ ಅವರು ಸಂದರ್ಭಕ್ಕನುಸಾರವಾಗಿ ಭಾವೋತ್ತೇಜಕ ರೀತಿಯಲ್ಲಿ ತಮ್ಮ ಖಂಜರಿಯ ಗೆಜ್ಜೆಗಳನ್ನು ಮತ್ತು ಗುಮ್ಕಿಗಳನ್ನು ಎಫೆಕ್ಟ್ಸ್ ರೀತಿಯಲ್ಲಿ ಬಳಸಿದುದು ರಂಜಿಸಿತು.ರಾಘವೇಂದ್ರ ಅವರು ಜಗನ್ನಾಥದಾಸರ `ಲಂಬೋದರ ರಕ್ತಾಂಬರ~ ಪದದೊಂದಿಗೆ ತಮ್ಮ ಗಾಯನವನ್ನು ಆರಂಭಿಸಿದರು. `ಸುಮ್ಮನೆ ಬರುವುದೇ ಮುಕ್ತಿ~ (ಆನಂದಭೈರವಿ) ತಿಳಿ ಹೇಳಿದಂತೆ ಮೂಡಿತು. ಲಘು ರಾಗ ಚಿತ್ರಣದ ಮುನ್ನುಡಿಯ `ಪ್ರಾಣದೇವ ನೀನಲ್ಲದೆ~ ಆಕರ್ಷಿಸಿತು.ಏನು ಪುಣ್ಯವ ಮಾಡಿ (ಜಂಝೂಟಿ, ಮಧ್ಯಮ ಕಾಲದಲ್ಲಿ) ಮತ್ತು ಶ್ರೀ ರಘುವರಕುಲ ( ಕ್ಷೀರಸಾಗರದಲ್ಲಿ ಉಗಾಭೋಗದೊಂದಿಗೆ) ಅವರ ಗಾನ ಕೌಶಲ್ಯವನ್ನು ಪ್ರತಿಬಿಂಬಿಸಿತು. ಹೆಳವನಕಟ್ಟಿ ಗಿರಿಯಮ್ಮನವರ `ಬಾರನೇತಕೆ ನೀರೆ~ (ಯಮುನಾಕಲ್ಯಾಣಿ)ಯಲ್ಲಿ ರಾಗ ಮತ್ತು ಭಾವಗಳ ಅದಮ್ಯ ಸೌಂದರ್ಯ ವ್ಯಕ್ತವಾಯಿತು.ಚಿಕ್ಕದಾದ ಹಾಗೂ ಚೊಕ್ಕವಾಗಿದ್ದ ಸಮಾರೋಪ ಭಾಷಣ ಮಾಡಿದ ಹೆಸರಾಂತ ನೇತ್ರ ತಜ್ಞ ಹಾಗೂ ಕುಶಲ ಗಾಯಕರಾದ ಡಾ. ಬಿ. ಆರ್. ಪದ್ಮನಾಭರಾವ್ ಅವರು ಹರಿದಾಸ ಸಾಹಿತ್ಯದ ಮಹತ್ವವನ್ನು ಬಣ್ಣಿಸಿದರು. ಹರಿದಾಸ ಸಾಹಿತ್ಯ ಮತ್ತು ಕರ್ನಾಟಕ ಸಂಗೀತದ ನಡುವಿನ ಒಡನಾಟವನ್ನು ಅವರು ಪ್ರಸ್ತಾಪಿಸಿ ಅದರ ಸತ್ವ-ತತ್ವಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಮಾನ್ಯ ಜನತೆಗೂ ಮುಟ್ಟಿಸುವ ಸಕಲ ಪ್ರಯತ್ನಗಳಿಗೆ ತಮ್ಮ ಬೆಂಬಲ ಪ್ರಕಟಿಸಿದರು.ನವರತ್ನಮಾಲಿಕಾ ಗೋಷ್ಠಿ ಗಾಯನ


ನುರಿತ ಗಾಯಕಿ ಎಂ.ಎಸ್. ವಿದ್ಯಾ ನೇತೃತ್ವದಲ್ಲಿ ಪುರಂದರದಾಸರ ನವರತ್ನಮಾಲಿಕಾ ರಚನೆಗಳ ಗೋಷ್ಠಿ ಗಾಯನದೊಂದಿಗೆ ಈ ಬಾರಿಯ ಹರಿದಾಸ ಸಂಭ್ರಮ ಮುಕ್ತಾಯಗೊಂಡಿತು.

 

ಸಿ.ಎಸ್. ಉಷಾ (ಪಿಟೀಲು), ಹರಿನಾರಾಯಣ (ಮೃದಂಗ) ಮತ್ತು ಆರ್. ಪಿ. ರವಿಶಂಕರ್ (ಘಟ)ಅವರ ಉಪಯುಕ್ತ ಪಕ್ಕವಾದ್ಯಗಳೊಂದಿಗೆ `ಜಯ ಜಾನಕೀಕಾಂತ~ (ನಾಟ), `ಆಡಿದನೋ ರಂಗ~ (ಅಠಾಣ), `ಕಲ್ಲು ಸಕ್ಕರೆ ಕೊಳ್ಳಿರೊ~ (ಕಲ್ಯಾಣಿ) ಮುಂತಾದ ರಚನೆಗಳನ್ನು ಅಷ್ಟ ಗಾಯಕಿಯರು ಏಕ ಕಂಠ ಮತ್ತು ಸಮಾನ ಪ್ರತಿಭೆಗಳನ್ನು ಮೇಳೈಸಿಕೊಂಡು ನಿರೂಪಿಸಿದರು.ಲವಲವಿಕೆಯ ನೃತ್ಯ ಕ್ರಿಯೆಗಳು

ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ನಡೆದ ರಮ್ಯೋ ಕಡಂಬಿ ಅವರ ನೃತ್ಯ ಪ್ರದರ್ಶನದ ಅಂಗ ರಚನೆ ಭರತನಾಟ್ಯದ ಮೋಹಕ ರೂಪಣ ಮತ್ತು ಅಭಿವ್ಯಂಜನೆಗೆ ನೆರವಾಯಿತು.ನುರಿತ ಗುರು ನಾಗಭೂಷಣ್ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿರುವ ರಮ್ಯೋ ಅವರ ಆತ್ಮವಿಶ್ವಾಸದ ನೃತ್ಯ ಕ್ರಿಯೆಗಳನ್ನು ರಸಿಕರು ಮೆಚ್ಚಿದರು. ಸದೃಢ ಕಾಯ, ಮೋಹಕ ಮುಖಚರ್ಯೆ, ಭಾವಗಳನ್ನು ನೇರವಾಗಿ ಪ್ರತಿಫಲಿಸುವ ಮುಖಿಜಗಳು, ಲಯದ ಲವಲವಿಕೆ ಹಾಗೂ ಪ್ರದರ್ಶನ ಉತ್ಸಾಹ ಅವರ ಕಾರ್ಯಕ್ರಮವನ್ನು ಮೇಲ್ಮಟ್ಟಕ್ಕೆ ಏರಿಸಿದ ಅಂಶಗಳು.ಎಂದಿನಂತೆ ಪುಷ್ಪಾಂಜಲಿ (ನಾಟ, ಏಕತಾಳ)ದ ಪೀಠಿಕೆ. ತಂಜಾವೂರು ಸೋದರರ ನಟೇಶ ಕೌತುವಂ (ಹಂಸಧ್ವನಿ)ನ ಶಿವನ ಗುಣಗಾನ ಹಾಗೂ ನೃತ್ತದ ತುಣುಕುಗಳು ಕಾರ್ಯಕ್ರಮಕ್ಕೆ ಭದ್ರ ಬುನಾದಿಯನ್ನು ಒದಗಿಸಿದವು. ಕ್ಲಿಷ್ಟಕರವಾದ ಮಿಶ್ರಛಾಪಿನ ಶಾಮಾಶಾಸ್ತ್ರಿಗಳ ಭೈರವಿ ಸ್ವರಜತಿ ಅಚ್ಚರಿಗೊಳಿಸಿದ ಆಯ್ಕೆಯಾಗಿತ್ತು.

 

ಕಾಮಾಕ್ಷಿ ದೇವಿಯನ್ನು ವರ್ಣಿಸುತ್ತಾ ನಮನಗಳನ್ನು ಸಲ್ಲಿಸುವ ಈ ರಚನೆ ಸಂಗೀತ ಕ್ಷೇತ್ರದಲ್ಲಿ ಕೇಳಿ ಬರುವಂತಹುದು. ಅದರ ಸ್ವರಗಳು ಮತ್ತು ಜತಿಗಳನ್ನು ನೃತ್ತಕ್ಕೆ ರೂಪಾಂತರಗೊಳಿಸಲಾಗಿದ್ದ ಸಂಯೋಜನೆಯನ್ನು ರಮ್ಯೋ ಉತ್ತಮವಾಗಿ ನಿರ್ವಹಿಸಿದರು. ರಾಗದ ಆರೋಹಣ ಕ್ರಮದ ಸ್ವರಗಳಿಂದ ಆರಂಭವಾಗುವ ಅನುಪಲ್ಲವಿಗಳನ್ನು ಸುಖಕರವಾಗಿದ್ದ ಲಯದಲ್ಲಿ ವಿವೇಚಿಸಿದ ಪರಿ ಪ್ರಶಂಸಾರ್ಹ.ನರ್ತಕಿಯು ದೇವಿಯ ಗುಣಗಾನದ ಅಭಿನಯಕ್ಕೆ ವಸ್ತುವನ್ನು ಅದರ ಸಾಹಿತ್ಯದಿಂದ ಪಡೆದುಕೊಂಡರು. ಹಾಗಾಗಿ ದೇವಿಯ ನಾನಾ ರೂಪ ದರ್ಶನ ಸರಸವೂ ಸಮಗ್ರವೂ ಆಗಿ ನೆರವೇರಿತು. ಗಾಯನದಲ್ಲಿ ಉಂಟಾದ ಅಲ್ಪ ಸ್ವಲ್ಪ ಎಡರುತೊಡರುಗಳಿಂದ ವಿಚಲಿತರಾಗದೆ ರಮ್ಯೋ ಸಂಭಾಳಿಸಿಕೊಂಡು ಮುಂದುವರೆದುದು ಅವರ ಏಕಾಗ್ರತೆ ಮತ್ತು ಮಾಧ್ಯಮದ ಮೇಲಿನ ಸ್ತುತ್ಯರ್ಹ ಹಿಡಿತವನ್ನು ತೋರಿತು. ಅವರ ಕಾರ್ಯಕ್ರಮದ ಪ್ರಮುಖ ಘಟ್ಟವಾಗಿದ್ದ ಅಠಾಣ ವರ್ಣದ ವಿಶ್ಲೇಷಣೆಯನ್ನು ಕುರಿತಾಗಿಯೂ ಅದೇ ಮಾತನ್ನು ಹೇಳಬಹುದು. ತೆರಿಯೂರು ರಾಮಗೋಪಾಲಶರ್ಮ ಅವರ `ನಿನ್ನೆ ನಮ್ಮಿನಾನುರಾ ಕೃಷ್ಣ~ ತೆಲುಗು ವರ್ಣ ಶ್ರೀಕೃಷ್ಣನನ್ನು ಕೇಂದ್ರ ಬಿಂದುವನ್ನಾಗಿ ಹೊಂದಿರುವಂತಹುದು.ವೇದಿಕೆಯನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡು ನರ್ತಕಿಯು ಕೃಷ್ಣ ಲೀಲೆಗಳನ್ನು ಅಭಿನಯಿಸಿ ಭಕ್ತನು ಅವನ ಕೃಪೆಗಾಗಿ ಮನವಿ ಮಾಡಿಕೊಳ್ಳುವ ಭಾವವನ್ನು ಅರ್ಥಪೂರ್ಣವಾಗಿ ಸಾಕಾರಗೊಳಿಸಿದರು. ಅದಕ್ಕೆ ಅಡಕವಾಗಿದ್ದ ನೃತ್ಯ ಮತ್ತು ನೃತ್ತಗಳು ಅಭಿನಂದನೆ ಗಿಟ್ಟಿಸಿಕೊಂಡವು. ಅಡುವು ವೈವಿಧ್ಯ, ಸುಂದರವಾಗಿದ್ದ ನಯನ ಹಾಗೂ ಗ್ರೀವಾ ಭೇದಗಳು, ಗಟ್ಟಿ ಲಯದ ತೀರ್ಮಾನಗಳು ಕಳಶಪ್ರಾಯವಾಗಿದ್ದವು.ವಿರಾಮದ ನಂತರ ಊತ್ತುಕ್ಕಾಡು ಅವರ `ಸ್ವಾಗತಂ ಕೃಷ್ಣ~ (ಮೋಹನ) ಮತ್ತೊಮ್ಮೆ ಕೃಷ್ಣನಿಗೆ ಮೀಸಲಾಗಿತ್ತು. ಪುರಂದರದಾಸರ `ಯಮನೆಲ್ಲಿ ಕಾಣನೆಂದು~ (ಶಿವರಂಜಿನಿ) ರಾಮನ ಶಿಷ್ಟ ರಕ್ಷಕ ದುಷ್ಟ ಶಿಕ್ಷಕ ರೂಪಗಳನ್ನು ವರ್ಣಿಸುತ್ತದೆ. ಅದರಂತೆ ರಮ್ಯೋ ರಾಮನೇ ಯಮನಾಗಿ ಲೋಕ ಕಲ್ಯಾಣವನ್ನು ಮಾಡುವ ತತ್ವವನ್ನು ಸೊಗಸಾಗಿ ಅಭಿನಯಿಸಿದರು. ಅವರ ಸಾತ್ವಿಕಾಭಿನಯ ಗಮನ ಸೆಳೆಯಿತು.ಕ್ಷೇತ್ರಜ್ಞನ `ಎಂದೆಂದು~ (ಸುರುಟಿ) ಪದಾಭಿನಯದ ನಂತರ ಮೋಹನಕಲ್ಯಾಣಿ ತಿಲ್ಲಾನದ ನಿರೂಪಣೆಯೊಂದಿಗೆ ತಮ್ಮ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದರು.  ಗುರು ನಾಗಭೂಷಣ್ (ನಟುವಾಂಗ), ಶ್ರೀನಿತ್ಯಾ ರಂಗನಾಥನ್ (ಗಾಯನ), ಮಧುಸೂದನ್ (ಪಿಟೀಲು), ಶಂಕರರಾಮನ್ (ವೀಣೆ), ವಿವೇಕ್ ಕೃಷ್ಣ (ಕೊಳಲು) ಮತ್ತು ಬೆಟ್ಟ ವೆಂಕಟೇಶ್ (ಮೃದಂಗ) ಅವರ ಪಕ್ಕವಾದ್ಯಗಳಿಂದ ರಮ್ಯೋ ಅವರ ಭರತನಾಟ್ಯ ಸುಸಂಘಟಿತವಾಗಿತ್ತು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.