ಮಂಗಳವಾರ, ಜನವರಿ 28, 2020
24 °C

ಭಾಷಾ ದುರಭಿಮಾನ ಸಲ್ಲದು: ಕಾಂತಿ ಬೆಳ್ಯಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ: ಭಾಷೆಯ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ಇರಬೇಕು ಆದರೆ ದುರಭಿಮಾನ  ಇರಬಾರದು ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕಾಂತಿ ಬೆಳ್ಯಪ್ಪ ಹೇಳಿದರು.ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಇಲ್ಲಿಗೆ ಸಮೀಪದ ಸಾಂದೀಪನಿ ವಿದ್ಯಾಸಂಸ್ಥೆ  ಆವರಣದಲ್ಲಿ ಶುಕ್ರವಾರ ಜರುಗಿದ ಕೊಡವ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗಮ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು. ಮಕ್ಕಳಿಗೆ ಮನೆಯಿಂದಲೇ ಸಂಸ್ಕೃತಿಯ ಬಗ್ಗೆ ತಿಳಿ ಹೇಳಬೇಕು. ಕೊಡವ ಸಾಹಿತ್ಯ ಅಕಾಡೆಮಿಯ ಕಾರ್ಯಗಳಿಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಸಮಾರಂಭ ಉದ್ಘಾಟಿಸಿದರು. ವಿಶಿಷ್ಟವಾದ ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕೊಡವ ಭಾಷಿಕರೊಂದಿಗೆ ಅನ್ಯಭಾಷಿಕರೂ ಶ್ರಮಿಸಬೇಕು ಎಂದರು.   ಕೊಡವ ಸಂಸ್ಕೃತಿ ತನ್ನದೇ ಆದ ವಿಶಿಷ್ಟತೆ ಹೊಂದಿದೆ. ಇಂತಹ ಭವ್ಯ ಸಂಸ್ಕೃತಿಯನ್ನು ಉಳಿಸಿ ಮುಂದಿನ ತಲೆಮಾರಿಗೂ ವರ್ಗಾಯಿಸಲು ಕೊಡವ ಭಾಷಿಕರೊಂದಿಗೆ ಇತರರೂ ಶ್ರಮಿಸಬೇಕು.

  ಕೊಡವ ಸಾಹಿತ್ಯ ಇನ್ನಷ್ಟು ಗಟ್ಟಿಯಾಗಬೇಕು. ಕೊಡವ ಆಚಾರ-ವಿಚಾರಗಳನ್ನು ಉಳಿಸಿಕೊಳ್ಳಬೇಕೆಂದು ನುಡಿದರು.ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಐಮುಡಿಯಂಡ ರಾಣಿ ಮಾಚಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಂತರ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ.ಅಪ್ಪಣ್ಣ ಅವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು. ಕೊಡವ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆ ವಿಷಯದ ಬಗ್ಗೆ ಕಲ್ಲೇಂಗಡ ಅಪ್ಪಚ್ಚು, ಕೊಡವಾಮೆಯ ಬೆಳವಣಿಗೆಯಲ್ಲಿ ಕೊಡವ ಸಮಾಜಗಳ ಪಾತ್ರ ವಿಷಯದ ಬಗ್ಗೆ ಬಲ್ಯಾಟಂಡ ಆರತಿ ಚಿಂಗಪ್ಪ ವಿಚಾರ ಮಂಡಿಸಿದರು.ಸಮಾರಂಭದಲ್ಲಿ ಕುಂಜಿಲಗೇರಿ ತಂಡದಿಂದ ಬೊಳಕಾಟ್, ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ತಂಡದಿಂದ ಉಮ್ಮತ್ತಾಟ್, ಮಂಡ್ಯದ ಡೊಳ್ಳು ಕುಣಿತ, ವೀರಭದ್ರ ನೃತ್ಯ, ಸಾಂದೀಪನಿ ಶಾಲಾ ವಿದ್ಯಾರ್ಥಿಗಳಿಂದ ಸುಗ್ಗಿ ಕುಣಿತ, ಜಾನಪದ ನೃತ್ಯ  ಪ್ರದರ್ಶನಗೊಂಡವು.ಅಕಾಡೆಮಿಯ ಸದಸ್ಯೆ ಸಬಿತಾ ಕಾರ್ಯಪ್ಪ ಪ್ರಾರ್ಥಿಸಿದರು. ಸರ ಚಂಗಪ್ಪ ಸ್ವಾಗತಿಸಿದರು. ತೇಲಪಂಡ ಕವನ್ ಕಾರ್ಯಪ್ಪ ಹಾಗು ಪ್ರಭು ಕುಮಾರ್ ನಿರೂಪಿಸಿ, ವಿಠಲ್ ನಂಜಪ್ಪ ವಂದಿಸಿದರು.

ಪ್ರತಿಕ್ರಿಯಿಸಿ (+)