ಭಾನುವಾರ, ಮೇ 22, 2022
22 °C

ಭಾಷೆ ಕೊಲೆಗಡುಕ ಅಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರೊ. ಜಿ. ವೆಂಕಟಸುಬ್ಬಯ್ಯನವರು ಪದೇ ಪದೇ ಇಂಗ್ಲಿಷ್ ‘ಕೊಲೆಗಡುಕ’ ( ಮಾ.15 ಪತ್ರಿಕೆಗಳ ವರದಿ) ಭಾಷೆ ಎಂದು ಹೇಳುತ್ತಿರುವುದು ಸರಿಯಲ್ಲ. ಯಾಕೆಂದರೆ ದಿಟವಾಗಲೂ ಯಾವುದೇ ಭಾಷೆ ತನ್ನಿಂತಾನೆ ಕೊಲೆಗಡುಕ ಭಾಷೆ ಆಗುವುದಿಲ್ಲ. ಈವೊತ್ತು ಇಂಗ್ಲಿಷಿಗೆ ಹೆಚ್ಚಿನ ಗೌರವ, ಮನ್ನಣೆ ಸಿಗುತ್ತಿರುವುದು ಕೇವಲ ಆ ಭಾಷೆಯಿಂದಲ್ಲ. ಬದಲಾಗಿ ಅದರ ಮೂಲಕ ಹುಟ್ಟುತ್ತಿರುವ ಹೊಸ ಹೊಸ ಅರಿವಿನ ಪ್ರಕಾರಗಳಿಂದ.ಇಂದು ವಿಜ್ಞಾನ ಮತ್ತು ಹೊಚ್ಚ ಹೊಸ ತಂತ್ರಜ್ಞಾನದ ಹೆಚ್ಚಿನ ಅರಿಮೆಗಳು ಇಂಗ್ಲಿಷಿನಲ್ಲಿವೆ, ಹಾಗಾಗಿ ಈ ಆಧುನಿಕ ಯುಗದಲ್ಲಿ ಇಂಗ್ಲಿಷ್ ಕಲಿತರೆ ಸುಲಭವಾಗಿ ಕೆಲಸ ಸಿಗುತ್ತದೆ ಮತ್ತು ಅದರಿಂದ ಗುಣಮಟ್ಟದ ಬದುಕನ್ನು ಕಟ್ಟಿಕೊಳ್ಳಬಹುದು. ಇದೊಂದೆ ಅಲ್ಲದೆ ಕೆಲವರಲ್ಲಿರುವ ತಪ್ಪು ತಿಳುವಳಿಕೆಯಿಂದಾಗಿ ಇಂಗ್ಲಿಷ್ ಭಾಷೆ ಗೊತ್ತಿರುವವರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಮತ್ತು ಹೊಗಳಿಕೆ ದೊರೆಯುತ್ತಿದೆ. ನಾವು ನಮ್ಮ ಕನ್ನಡ ನುಡಿಯಲ್ಲಿ ಇವತ್ತಿನ ಜಗತ್ತಿಗೆ ಬೇಕಾದ ಹೊಸ ಹೊಸ ಅರಿವಿನ ಪ್ರಕಾರಗಳನ್ನು ಹುಟ್ಟು ಹಾಕದೆ ಇನ್ನು ಸಾಹಿತ್ಯ ಮತ್ತು ಕವನಕ್ಕೆ ಕನ್ನಡವನ್ನು ಸೀಮಿತಗೊಳಿಸಿ ತಪ್ಪು ಮಾಡುತ್ತಿದ್ದೇವೆ.ಹಾಗಾಗಿ ಇಂಗ್ಲಿಷ್ ನಮ್ಮ ಬದುಕಿನಲ್ಲಿ ಹೆಚ್ಚಿನ ಮಹತ್ವವನ್ನು ಪಡೆಯುತ್ತಾ ಇದೆ. ಇದಕ್ಕಿರುವ ಉಪಾಯವೆಂದರೆ ಕನ್ನಡವನ್ನು ತಂತ್ರಜ್ಞಾನದ ಮತ್ತು ಮಾರುಕಟ್ಟೆಯ ನುಡಿಯಾಗಿ ನಾವು ಬೆಳೆಸಬೇಕಾಗಿದೆ. ಹೊಸ ಜಗತ್ತಿನ ‘ಬೇಕು’ (ಅಗತ್ಯ)ಗಳಿಗೆ ನಾವು ಕನ್ನಡವನ್ನು ಅಣಿಗೊಳಿಸದೆ ಬರಿ ಇಂಗ್ಲಿಷನ್ನು ದೂರುವುದು ಸರಿಯಲ್ಲ. ನಾವು ಮಾಡಿದ ತಪ್ಪುಗಳಿಗೆಲ್ಲಾ ಇಂಗ್ಲಿಷನ ಮೇಲೆ ಗೂಬೆ ಕೂರಿಸುವುದು ಯಾವ ರೀತಿಯಲ್ಲೂ ಒಪ್ಪತಕ್ಕದ್ದಲ್ಲ.


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.