ಭಾನುವಾರ, ಏಪ್ರಿಲ್ 11, 2021
23 °C

ಭೂಮಿ ತೆರವಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ತಾಲ್ಲೂಕಿನಲ್ಲಿ ಅತಿಕ್ರಮಣ ಭೂಮಿಯಲ್ಲಿ ಗುಡಿಸಲು ಕಟ್ಟಿಕೊಂಡು ವಾಸ ಮಾಡಿದ್ದವರನ್ನು ತೆರವುಗೊಳಿಸಬಾರದು ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಶುಕ್ರವಾರ ತಹಸೀಲ್ದಾರ ಬಸವರಾಜು ಅವರಿಗೆ ಮನವಿ ಸಲ್ಲಿಸಿತು.

ಜಮೀನು ಖುಲ್ಲಾ ಪಡಿಸುವಂತೆ ಈಗಾಗಲೇ ತಹಸೀಲ್ದಾರ ಕಚೇರಿಯಿಂದ ಅತಿಕ್ರಮಣದಾರರಿಗೆ ಈಗಾಗಲೇ ನೋಟಿಸು ನೀಡಲಾಗಿದೆ. ಖುಲ್ಲಾ ಪಡಿಸದೇ ಇರುವ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ನೀಡುತ್ತಲೇ ಬಂದಿದ್ದೇವೆ. ಬಡ, ಮುಗ್ಧ ಜನರಿಗೆ ಆಶ್ವಾಸನೆ ನೀಡಲಾಗಿದೆಯೇ ಹೊರತು ಪರಿಹಾರ ನೀಡಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಜಮೀನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಂದಾಯ ಭೂಮಿ ಕಾಯ್ದೆ ಕಲಂ 1964ರ ಕಲಂ 192(ಎ)ರಂತೆ ಕ್ರಿಮಿನಲ್ ಮೊಕದ್ದಮೆಯನ್ನು ಏಕೆ ದಾಖಲಿಸಬಾರದು ಎಂದು ತಿಳಿವಳಿಕೆ ಪತ್ರ ನೀಡಿರುವುದು ಬಡ ಜನರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ.

ಕೂಲಿನಾಲಿ ಮಾಡಿ ಜೀವನ ನಡೆಸುತ್ತಿರುವ ಬಡ ಕುಟುಂಬದವರು ಸರಕಾರಿ ಜಮೀನಿನಲ್ಲಿ ಗುಡಿಸಲು ಕಟ್ಟಿಕೊಂಡಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ ದಿನವೀಡಿ ದುಡಿಯುವ ಇವರಿಗೆ ಸ್ವಂತ ಮನೆ ನಿರ್ಮಿಸಿಕೊಳ್ಳುವಷ್ಟು ಆರ್ಥಿಕ ಬಲವಿಲ್ಲ. ವಸತಿ ರಹಿತ ಬಡಕುಟುಂಬಗಳಿಗೆ ವಸತಿ ನೀಡುವ ಸರ್ಕಾರಿ ಸುತ್ತೋಲೆಯಿದ್ದರೂ ಯಾವ ಪ್ರಯೋಜನವೂ ಇವರಿಗಾಗಿಲ್ಲ ಎಂದು ವೇದಿಕೆ ವಿಷಾದಿಸಿದೆ.

ಈ ಎಲ್ಲ ಅಂಶಗಳನ್ನು ಪರಿಗಣಿಸಿ ಬಡಕುಟುಂಬಗಳು ಖುಲ್ಲಾ ಪಡಿಸುವುದನ್ನು ಕೈಬಿಡಬೇಕು ಎಂದು ವೇದಿಕೆ ಮನವಿ ಮಾಡಿದೆ.

ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಲಿಷಾ ಎಲಕಪಾಟಿ, ಮಹಾ ಪ್ರಧಾನಕಾರ್ಯದರ್ಶಿ ಮಂಜು ಗೌಂಡರ್, ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಣ ದನಗರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗುಲಾಬಿ ನಾಯ್ಕ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.