ಶುಕ್ರವಾರ, ಮೇ 27, 2022
21 °C

ಭೂಸ್ವಾಧೀನ ಪ್ರಕ್ರಿಯೆಗೆ ಶೀಘ್ರವೇ ಚಾಲನೆ : ವಿ.ಸೋಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ಪಟ್ಟಣದಲ್ಲಿ ಸೂರಿಲ್ಲದವರಗೆ ಉಚಿತ ನಿವೇಶನ ಕೊಡಲು ಅಗತ್ಯ ಇರುವ ಭೂಸ್ವಾಧೀನ ಪ್ರಕ್ರಿಯೆಗೆ ಶೀಘ್ರವೇ ವಿಶೇಷ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.ಜೆ.ಎನ್.ಎನ್.ಯು.ಆರ್.ಎಂ, ಐ.ಎಚ್.ಎಸ್. ಡಿ.ಪಿ. ಯೋಜನೆ ಅಡಿಯಲ್ಲಿ ಇಲ್ಲಿನ ಶಿವಾಜಿ ಪೇಟೆಯಲ್ಲಿ ನಿರ್ಮಾಣಗೊಂಡಿರುವ 190 ಮನೆಗಳ ಉದ್ಘಾಟನಾ ಸಮಾರಂಭದಲ್ಲಿ ವಸತಿ ಸಮುಚ್ಛಯ ಉದ್ಘಾಟಿಸಿ ಅವರು ಮಾತನಾಡಿದರು.‘ಯೋಜನೆ ಅಡಿಯಲ್ಲಿ ಗಜೇಂದ್ರಗಡದಲ್ಲಿ ಸೂರು ಇಲ್ಲದ 1600 ಕುಟುಂಬಗಳಿಗೆ ಉಚಿತ ನಿವೇಶನ ಹಾಗೂ 50 ಸಾವಿರ ಸಬ್ಸಿಡಿ ಹಣ ಹಾಗೂ ಶೇ.3ರ ಬಡ್ಡಿಯಲ್ಲಿ 50 ಸಾವಿರ ಬ್ಯಾಂಕ್ ಸಾಲದ ಮೂಲಕ ಮನೆ ಕಟ್ಟಿಸಿ ಕೊಡಲಾಗುವುದು. ಇದಕ್ಕಾಗಿ ಅಗತ್ಯ ಇರುವ 40 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆಗಾಗಿ ವಿಶೇಷ ಅಧಿಕಾರಿಯನ್ನು ನೇಮಿಸಲಾಗುವುದು’ ಎಂದು ಅವರು ತಿಳಿಸಿದರು.‘ಗುಣಮಟ್ಟದಲ್ಲಿ ಹಿಂದುಳಿದಿರುವ ಇಲ್ಲಿನ 190 ಮನೆಗಳನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ದತ್ತು ತೆಗೆದುಕೊಂಡು ಎರಡು ತಿಂಗಳ ಒಳಗಾಗಿ ಮನೆಗಳನ್ನು ದುರಸ್ತಿ ಮಾಡಿಸಿ ಸಂಪೂರ್ಣ ಗುಣಮಟ್ಟದ ಮನೆಗಳನ್ನು ಕೊಡಲಾಗುವುದು’ ಎಂದು ಅವರು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ಜಿಲ್ಲೆಯಲ್ಲಿ ಸ್ಥಳಾಂತರಗೊಳ್ಳಲಿರುವ 14 ಗ್ರಾಮಗಳ ಮನೆಗಳ ನಿರ್ಮಾಣಕ್ಕೆ ಅಗತ್ಯ ಇರುವ ಹೆಚ್ಚಿನ ಹಣವನ್ನು ಇದೇ ಬಜೆಟ್‌ನಲ್ಲಿ ಕಾಯ್ದಿರಿಸುವಂತೆ ಸೋಮಣ್ಣರ ಜೊತೆಗೆ ತಾವು ಸಿ.ಎಂ.ಗೆ ಮನವಿ ಮಾಡುವುದಾಗಿ ಹೇಳಿದರು.  ಗಜೇಂದ್ರಗಡದಲ್ಲಿ ಮನೆಗಳ ನಿರ್ಮಾಣಕ್ಕೆ ಅಗತ್ಯ ಇರುವ ಭೂ ಸ್ವಾಧೀನ ಪ್ರಕ್ರಿಯೆಗೆ ವಿಶೇಷ ಅಧಿಕಾರಿಯನ್ನು ನೇಮಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.ಶಾಸಕ ಕಳಕಪ್ಪ ಬಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಅಕ್ಕಮ್ಮ ರಾಮಜಿ, ಉಪಾಧ್ಯಕ್ಷ ಎ.ಬಿ.ಲೋದಿ, ಸದಸ್ಯೆ ಪುಷ್ಪಾವತಿ ಭಾಂಡಗೆ, ಜಿ.ಪಂ.ಸದಸ್ಯ ರಮೇಶ ಮುಂದಿಮನಿ, ಜಿಲ್ಲಾಧಿಕಾರಿ ಶಂಕರನಾರಾಯಣ, ಜಿ.ಪಂ. ಸಿ.ಇ.ಓ. ವೀರಣ್ಣ ತುರಮರಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತ ಎಸ್.ಪುಟ್ಟಸ್ವಾಮಿ, ಮಹಾದೇವಪ್ರಸಾದ, ಪ್ರಭಾಕರ ಚಿಣಿ ಉಪಸ್ಥಿತರಿದ್ದರು.ಭಾವುಕರಾದ ಬಂಡಿ

ಕಾರ್ಯಕ್ರಮಗಳಲ್ಲಿ ಸದಾ ನಗುತ್ತಲೇ ಮಾತನಾಡುತ್ತಿದ್ದ ಶಾಸಕ ಬಂಡಿ ಅವರು ಭಾನುವಾರ ಫಲಾನುಭವಿಗಳಿಗೆ ಮನೆಗಳ ವಿತರಣಾ ಕಾರ್ಯಕ್ರಮದಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ ಭಾವುಕರಾಗಿಯೇ ತುಂಬಿ ಬಂದ ಕಂಠದಲ್ಲಿ ಮಾತನಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.