ಭೂ ಕುಸಿತ: ರೈಲು ಸಂಚಾರಕ್ಕೆ ಅಡಚಣೆ

ಬುಧವಾರ, ಜೂಲೈ 24, 2019
27 °C

ಭೂ ಕುಸಿತ: ರೈಲು ಸಂಚಾರಕ್ಕೆ ಅಡಚಣೆ

Published:
Updated:

ಸಕಲೇಶಪುರ: ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಂಗಳವಾರ ಹಾಗೂ ಬುಧವಾರ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಸುಬ್ರಹ್ಮಣ್ಯ-ಸಕಲೇಶಪುರ ನಡುವಿನ ರೈಲು ಮಾರ್ಗದ ಎರಡು ಕಡೆ ಭೂ ಕುಸಿತ ಉಂಟಾಗಿ ಪ್ರಯಾಣಿಕರ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ.ಈ ಮಾರ್ಗದ ದೋಣಿಗಾಲ್ ಮತ್ತು ಕಡಗರವಳ್ಳಿ ರೈಲು ನಿಲ್ದಾಣ ನಡುವಿನ ಕಿ.ಮೀ. 54ರಲ್ಲಿ ಹಾಗೂ ಯಡಕುಮರಿ ಮತ್ತು ಸಿರಿವಾಗಿಲು ನಡುವಿನ ಕಿ.ಮೀ. 67ರ ಬಳಿ ರೈಲು ಹಳಿಗಳ ಮೇಲೆ ಬುಧವಾರ ದೊಡ್ಡ ಪ್ರಮಾಣದ ಮಣ್ಣು ಕುಸಿದಿದೆ.ಇದರಿಂದ ಬುಧವಾರ ರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆ ಹಾಗೂ ಬೆಂಗಳೂರು (ಯಶವಂತಪುರ)ದಿಂದ ಮಂಗಳೂರಿಗೆ ಹೋಗುವ ಪ್ರಯಾಣಿಕರ ರೈಲು ಸಂಚಾರ ಸ್ಥಗಿತವಾಯಿತು.ಮಣ್ಣು ಕುಸಿತ ಉಂಟಾಗಿ ಸಂಚಾರ ಸ್ಥಗಿತಗೊಂಡಿದೆ ಎಂಬ ಮಾಹಿತಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ರೈಲು ಹೊರಡುವ ಕೊನೆಯ ಕ್ಷಣಗಳಲ್ಲಿ ಹೊರಬಿದ್ದಿದೆ.ಇದರಿಂದಾಗಿ ಮಂಗಳೂರು, ಸುಬ್ರಹ್ಮಣ್ಯ, ಸಕಲೇಶಪುರ, ಹಾಸನ, ಮೈಸೂರು ಹಾಗೂ ಬೆಂಗಳೂರು ರೈಲು ನಿಲ್ದಾಣಗಳಲ್ಲಿ ಈ ರೈಲಿಗೆ ಕಾದಿದ್ದ ಸಾವಿರಾರು  ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸಬೇಕಾಯಿತು.ಬುಧವಾರ ರಾತ್ರಿ ಬೆಂಗಳೂರಿನಿಂದ ಮಂಗಳೂರಿಗೆ, ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಖಾಸಗಿ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಕರು ಭರ್ತಿಯಾಗಿ ಕೆಲವು ಪ್ರಯಾಣಿಕರು ನೂರಾರು ಕಿ.ಮೀ. ವರೆಗೆ ನಿಂತು ಪ್ರಯಾಣ ಮಾಡಿದ್ದಾಗಿ ತಿಳಿದು ಬಂದಿದೆ.ಸಂಚಾರಕ್ಕೆ ಮುಕ್ತ: ಭೂ ಕುಸಿತದಿಂದ ರೈಲು ಹಳಿಗಳ ಮೇಲೆ ಬಿದ್ದಿದ್ದ ಮಣ್ಣನ್ನು ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ತೆರವುಗೊಳಿಸಿದ್ದು, ರೈಲು ಸಂಚಾರ ಪುನಃ ಆರಂಭಗೊಂಡಿದೆ.ಮಧ್ಯಾಹ್ನ 1.15ಕ್ಕೆ ಸಕಲೇಶಪುರ ನಿಲ್ದಾಣಕ್ಕೆ ಬರುವ ಮಂಗಳೂರು-ಯಶವಂತಪುರ ಪ್ರಯಾಣಿಕರ ರೈಲು ಗುರುವಾರ ಸಂಜೆ 5.15ಕ್ಕೆ ಅಂದರೆ ಸುಮಾರು 4 ಗಂಟೆ ತಡವಾಗಿ ಬಂದು ಬೆಂಗಳೂರಿಗೆ ತೆರಳಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry