ಗುರುವಾರ , ಏಪ್ರಿಲ್ 15, 2021
27 °C

ಭೈರಪ್ಪಗೆ ನಾಡಹಬ್ಬ ಉದ್ಘಾಟನೆ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಈ ಬಾರಿಯ ವಿಶ್ವ ವಿಖ್ಯಾತ ದಸರಾ ಮಹೋತ್ಸವವನ್ನು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಉದ್ಘಾಟಿಸುವರು. ಅವರಿಗೆ ಇನ್ನೆರಡು ದಿನಗಳಲ್ಲಿ ಅಧಿಕೃತ ಆಹ್ವಾನ ನೀಡಲಾಗುವುದು~ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.`ಬೆಂಗಳೂರಿನಲ್ಲಿ ಈಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.  ದಸರಾ ಕಾರ್ಯಕ್ರಮಗಳ ಪಟ್ಟಿಯನ್ನು ಶೀಘ್ರವೇ ಅಂತರಜಾಲದಲ್ಲಿ ಪ್ರಕಟಿಸಲಾಗುವುದು~ ಎಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ದಸರಾ ಪೂರ್ವ ಸಿದ್ಧತಾ ಸಭೆಯಲ್ಲಿ ತಿಳಿಸಿದರು.`ರಾಜ್ಯದ 150 ಕ್ಕೂ ಹೆಚ್ಚು ತಾಲ್ಲೂಕುಗಳು ಭೀಕರ ಬರ ಎದುರಿಸುತ್ತಿರುವುದರಿಂದ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಸರಳ, ಅದ್ದೂರಿ ಎನ್ನುವುದಕ್ಕಿಂತ ಸಾಂಪ್ರದಾಯಿಕವಾಗಿ ನಡೆಯಲಿದೆ.

 

ಆಯಾ ಜಿಲ್ಲೆಯ ಸಂಪ್ರದಾಯ, ಕಲೆ, ಸಾಹಿತ್ಯವನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಜಂಬೂ ಸವಾರಿಗೂ ಮುನ್ನ ಅರಮನೆ ಅಂಗಳದಲ್ಲಿ ಪ್ರದರ್ಶಿತವಾಗಲಿವೆ. ಈ ಬಾರಿಯ ದಸರಾದಲ್ಲಿ ಯುವಕರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಆದಾಗ್ಯೂ, ಯುವ ದಸರಾವನ್ನು ಕೈಬಿಡಲಾಗುತ್ತಿದೆ~ ಎಂದರು.ಗಜ ಪಯಣ: ಸೆ. 7ರಂದು ಹುಣಸೂರು ತಾಲ್ಲೂಕು ವೀರನಹೊಸಹಳ್ಳಿಯಿಂದ ಗಜಪಯಣ ಆರಂಭವಾಗಲಿದೆ. ಸೆ. 10 ರಂದು ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ಅರಮನೆ ಅಂಗಳದಲ್ಲಿ ಎಲ್ಲ ಆನೆಗಳನ್ನೂ ಬರಮಾಡಿಕೊಳ್ಳಲಾಗುವುದು. ಮೊದಲ ತಂಡದಲ್ಲಿ ಆರು ಆನೆಗಳು ನಗರಕ್ಕೆ ಆಗಮಿಸಲಿವೆ. ಎರಡನೇ ತಂಡದಲ್ಲಿ ಮತ್ತೆ ಆರು ಆನೆಗಳು ಬರಲಿವೆ. ಎರಡನೇ ತಂಡದ ಆನೆಗಳು ಹೊರಡುವ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ~ ಎಂದು ತಿಳಿಸಿದರು.`ತಿತಿಮತಿ ಆನೆ ಶಿಬಿರದಿಂದ ಆನೆಗಳಾದ ಬಲರಾಮ (54), ಅಭಿಮನ್ಯು (46), ಬಳ್ಳೆ ಶಿಬಿರದಿಂದ ಅರ್ಜುನ (52), ಕೆ.ಗುಡಿಯಿಂದ ಗಜೇಂದ್ರ (57), ಬಂಡೀಪುರದಿಂದ ಕಾಂತಿ (72), ದುಬಾರೆ ಶಿಬಿರದಿಂದ ವಿಜಯ್ (55) ಮೊದಲ ತಂಡದಲ್ಲಿ ಅರಮನೆ ಅಂಗಳಕ್ಕೆ ಕಾಲಿಡಲಿವೆ. ಈ ಬಾರಿಯೂ ಬಲರಾಮನೇ ಅಂಬಾರಿ ಹೊರಲಿದ್ದು, ಜಂಬೂ ಸವಾರಿ ನೇತೃತ್ವ ವಹಿಸುವುದು ಬಹುತೇಕ ಖಚಿತವಾಗಿದೆ~ ಎಂದರು.ಅ.16ರಿಂದ 24ರವರೆಗೆ ದಸರ


ಅ. 16 ರಿಂದ 24ರ ವರೆಗೆ ನಾಡಹಬ್ಬ ನಡೆಯಲಿದ್ದು, ಮೊದಲ ದಿನ ಮಧ್ಯಾಹ್ನ 12.30 ಗಂಟೆಗೆ ಭೈರಪ್ಪ ಅವರು ದಸರೆಗೆ ಚಾಲನೆ ನೀಡುವರು. ಅ. 24ರಂದು ಆಕರ್ಷಕ ಜಂಬೂಸವಾರಿ ಹಾಗೂ ಪಂಜಿನ ಕವಾಯಿತು ನಡೆಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.