ಶುಕ್ರವಾರ, ಏಪ್ರಿಲ್ 23, 2021
28 °C

ಭೋರ್ಗರೆದ ತುಂಗಭದ್ರೆ: ಸಂಪರ್ಕ ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ: ತುಂಗಭದ್ರೆಯ ಒಡಲಲ್ಲಿ ನೀರಿನ ಹರಿವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಸುಮಾರು 50 ಎಕರೆಗೂ ಹೆಚ್ಚು ಬತ್ತ ಮತ್ತು ತರಕಾರಿ ಬೆಳೆದ ಜಮೀನು ಜಲಾವೃತಗೊಂಡಿದೆ.ನಗರದ ಹಿಂದೂ ರುದ್ರಭೂಮಿಯ ಹಿಂಭಾಗದಲ್ಲಿರುವ 18 ಎಕರೆ ಬತ್ತ ನಾಟಿ ಮಾಡಿದ ಜಮೀನು ಸಂಪೂರ್ಣ ಜಲಾವೃತಗೊಂಡಿದೆ. ತಾಲ್ಲೂಕಿನ ಉಕ್ಕಡಗಾತ್ರಿ, ಎಳೆಹೊಳೆ ಗ್ರಾಮದ ಸುಮಾರು 20 ಎಕರೆಗೂ ಹೆಚ್ಚು ಬತ್ತ ಮತ್ತು ತರಕಾರಿ ಬೆಳೆದ ಜಮೀನುಗಳೂ ಜಲಾವೃತಗೊಂಡಿವೆ. ಇನ್ನೂ ಹತ್ತಾರು ಎಕರೆ ಜಮೀನು ಮುಳುಗಡೆಯಾಗುವ ಸಾಧ್ಯತೆಗಳಿವೆ.

 

ತಾಲ್ಲೂಕಿನ ಸಾರಥಿ ಮತ್ತು ಚಿಕ್ಕಬಿದರೆ ಗ್ರಾಮ ಹಾಗೂ ಉಕ್ಕಡಗಾತ್ರ್ರಿ ಮತ್ತು ಫತ್ತೆಪುರ ಮಧ್ಯೆ ಇರುವ ಹಳ್ಳದಲ್ಲಿ ನೀರು ಹೆಚ್ಚಾಗಿದ್ದು, ಅಲ್ಲಿನ ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು ಸಂಚಾರ ದುಸ್ತರವಾಗಿದೆ. ಉಕ್ಕಡಗಾತ್ರಿ ಗ್ರಾಮಸ್ಥರು ತುಮ್ಮಿನಕಟ್ಟಿ ಮಾರ್ಗವನ್ನು ಪರ್ಯಾಯವಾಗಿ ಬಳಸುತ್ತಿದ್ದಾರೆ.ಚಿಕ್ಕಬಿದರೆ ಮತ್ತು ಸಾರಥಿ ಮಧ್ಯೆ ಇರುವ ಹಳ್ಳಕ್ಕೆ ನಿರ್ಮಿಸಲಾದ ಸೇತುವೆ ಪ್ರತಿವರ್ಷ ಮಳೆಗಾಲದಲ್ಲೂ ಮುಳುಗಡೆಯಾಗುತ್ತದೆ. ಸೇತುವೆ ಎತ್ತರ  ಮಾಡಿ ಹೆಚ್ಚುವರಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುತ್ತೇವೆ ಎಂದು ಜನಪ್ರತಿನಿಧಿಗಳು ಭರವಸೆ ನೀಡುತ್ತಾರೆ.  ಮಳೆಗಾಲ ಕಳೆದ ನಂತರ ಎಲ್ಲರೂ ಈ ವಿಚಾರ ಮರೆತು ಬಿಡುತ್ತಾರೆ. ಮತ್ತೆ ಮಳೆಗಾಲ ಬಂದು ಸೇತುವೆ ಮುಳುಗಿದಾಗ ಪುನಃ ಭರವಸೆಗಳು ಹರಿದಾಡುತ್ತವೆ. ಇದುವರೆಗೂ ಸೇತುವೆ ಎತ್ತರಿಸುವ ಕಾರ್ಯಕ್ಕೆ ಚಾಲನೆಯೇ ದೊರೆತಿಲ್ಲ ಎಂಬುದು ಚಿಕ್ಕಬಿದರೆ ಗ್ರಾಮಸ್ಥರ ಅಳಲು.ಸಂಪರ್ಕ ಕಡಿತ

ಹರಪನಹಳ್ಳಿ:
ತಾಲ್ಲೂಕಿನಾದ್ಯಂತ ಮಳೆಯ ಕಣ್ಣಾಮುಚ್ಚಾಲೆ ಮುಂದುವರಿದಿದ್ದರೂ, ಮಲೆನಾಡಿನ ಪಶ್ಚಿಮಘಟ್ಟಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತುಂಗಭದ್ರಾ ನದಿಯ ಒಡಲಾಳದಲ್ಲಿನ ನೀರು ಭೋರ್ಗರೆಯುತ್ತಿದೆ. ನದಿಯಲ್ಲಿ ಪ್ರವಾಹ ಕಾಣಿಸಿಕೊಂಡಿದ್ದು, ಮೂರ‌್ನಾಲ್ಕು ಗ್ರಾಮಗಳ ನಡುವಿನ ಸಂಪರ್ಕ ಬುಧವಾರ ಕಡಿತಗೊಂಡಿದೆ.ಹಲುವಾಗಲು- ಗರ್ಭಗುಡಿ, ನಂದ್ಯಾಲ-ನಿಟ್ಟೂರು ನಡುವಿನ ಸಂಪರ್ಕ ರಸ್ತೆಗಳು ಜಲಾವೃತಗೊಂಡಿರುವ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದೆ. ಉಳಿದಂತೆ ನದಿಪಾತ್ರದ ಹಳ್ಳಿಗಳಾದ ನಂದ್ಯಾಲ, ಹಲುವಾಗಲು, ಕಡತಿ, ನಿಟ್ಟೂರು, ವಟ್ಲಹಳ್ಳಿ, ಗರ್ಭಗುಡಿ, ತಾವರಗೊಂದಿ ಹಾಗೂ ನಿಟ್ಟೂರುಬಸಾಪುರ ಗ್ರಾಮಗಳ ವಿವಿಧ ಗ್ರಾಮಗಳ ನದಿತೀರದಲ್ಲಿನ ಜಮೀನುಗಳಲ್ಲಿ ಈಗಾಗಲೇ ನಾಟಿ ಮಾಡಿದ್ದ ನೂರಾರು ಎಕರೆ ಬತ್ತ, ಮೆಕ್ಕೆಜೋಳ ಹಾಗೂ ತರಕಾರಿ ಬೆಳೆ ಜಲಾವೃತವಾಗಿದೆ.ನದಿಯ ಒಡಲಾಳದಲ್ಲಿ ನೀರಿನ ಹರಿವು ಪ್ರಮಾಣ ಭರ್ಜರಿಯಾಗಿದ್ದು, ಇದೇ ಪ್ರಮಾಣದಲ್ಲಿ ಮುಂದುವರಿದರೆ, ಹಲುವಾಗಲು ಸೇರಿದಂತೆ ಕೆಲ ಗ್ರಾಮಗಳಿಗೂ ನೀರು ನುಗ್ಗುವ ಅಪಾಯ ಇದೆ. ಜತೆಗೆ,  ಪಟ್ಟಣಕ್ಕೆ ನೀರು ಪೂರೈಸುವ ಜಾಕ್‌ವೆಲ್‌ಗೂ  ನೀರು ಹರಿದು ಬರುತ್ತಿರುವುದರಿಂದ ಮುಳುಗಡೆಯ ಭೀತಿ ಎದುರಾಗಿದೆ. ಜಾಕ್‌ವೆಲ್ ಮುಳುಗಿದರೆ, ಪಟ್ಟಣದಲ್ಲಿ  ಕುಡಿಯುವ ನೀರಿನ ಹಾಹಾಕಾರ ತಲೆದೋರಲಿದೆ.ನದಿಯ ದಡದ ಮೇಲಿದ್ದ ವಿವಿಧ ಗ್ರಾಮಗಳ ಕೆಲ ರೈತರ ಮೋಟಾರ್ ಪಂಪ್‌ಸೆಟ್‌ಗಳು ಸಹ ಮುಳುಗಡೆಯಾಗಿದೆ. ಕೆಲ ಮೋಟಾರ್‌ಗಳು ಚಾಲ್ತಿಯಲ್ಲಿದ್ದಾಗಲೇ ನೀರು ವಕ್ಕರಿಸಿರುವುದರಿಂದ ಮೋಟಾರ್‌ಗಳು ಸುಟ್ಟುಹೋಗಿವೆ ಎಂದು ರೈತ ಸೋಮಪ್ಪ ಹೇಳಿದರು.ಬಸವಾಪಟ್ಟಣ ವರದಿ

ಈ ವರ್ಷ ಮಳೆ ದೂರವಾಗಿ ಬರಗಾಲ ಬಂತೆಂದು ಭಾವಿಸಿದ ರೈತರಿಗೆ ಒಂದು ವಾರದಿಂದ ಬೀಳುತ್ತಿರುವ ಮಳೆ ಭರವಸೆ ನೀಡಿದೆ. ಮಳೆ ಬರುವುದೆಂಬ ಭರವಸೆಯಿಂದ ಬಿತ್ತನೆ ಮಾಡಿದ ಮೆಕ್ಕೆಜೋಳ, ಹೈಬ್ರಿಡ್‌ಜೋಳ, ರಾಗಿ, ತೊಗರಿ, ಅವರೆ, ಮೆಣಸಿನ ಬೇಳೆಗಳು ಮಳೆಯ ತುಂತುರಿನಿಂದ ಜೀವ ಹಿಡಿದು ಮುಂದೆ ಫಲಕೊಡುವ ನಿರೀಕ್ಷೆ ಮೂಡಿಸಿವೆ.ಬಸವಾಪಟ್ಟಣ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು 5,000 ಹೆಕ್ಟೇರ್ ಮೆಕ್ಕೆಜೋಳ, 2,000 ಹೆಕ್ಟೇರ್ ಹೈಬ್ರಿಡ್ ಜೋಳ, 500 ಹೆಕ್ಟೇರ್ ರಾಗಿ, ಒಂದು ಸಾವಿರ ಹೆಕ್ಟೇರ್ ದ್ವಿದಳಧಾನ್ಯಗಳ ಬಿತ್ತನೆ ಆಗಿದ್ದು, ಮಳೆಯಿಂದ ನೆಮ್ಮದಿಗೊಂಡ ರೈತರು, ಕಳೆ ತೆಗೆದು ಎಡೆಕುಂಟೆ ಹೊಡೆಯುವುದರಲ್ಲಿ ನಿರತರಾಗಿದ್ದಾರೆ.ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಶೇಕಡಾ 40ರಷ್ಟು ನಾಟಿ ಕಾರ್ಯ ಸಂಪೂರ್ಣವಾಗಿದ್ದು, ಉತ್ತಮ ಮಳೆಯಿಂದ ಭದ್ರಾ ಅಣೆಕಟ್ಟು ಭರ್ತಿಯಾಗುವ ಹಂತದಲ್ಲಿದ್ದು, ಬೇಸಿಗೆ ಬೆಳೆಗೂ ನೀರು ದೊರೆಯಬಹುದೆಂದು ರೈತರು ನೆಮ್ಮದಿಯಿಂದ ಇದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.