ಬುಧವಾರ, ಮೇ 25, 2022
30 °C

ಭ್ರಷ್ಟಾಚಾರದ ವಿರುದ್ಧ ಜನಾಂದೋಲನ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದ್ದು, ಭ್ರಷ್ಟಾಚಾರದ ವಿರುದ್ಧ ಜನಾಂದೋಲನ ರೂಪುಗೊಳ್ಳುವ ತುರ್ತು ಅಗತ್ಯವಿದೆ ಎಂದು ಸೋಷಿಯಾಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ರಾಜ್ಯ ಕಾರ್ಯದರ್ಶಿ ಹಾಗೂ ಕೇಂದ್ರ ಸಮಿತಿ ಸದಸ್ಯ ಕೆ. ರಾಧಾಕೃಷ್ಣ ಪ್ರತಿಪಾದಿಸಿದರು.ಕೇಂದ್ರ, ರಾಜ್ಯದ ರಾಜಕೀಯ ಹೊಲಸಾಗಿದೆ. ಮುಖ್ಯಮಂತ್ರಿ, ಸಚಿವ ಸಂಪುಟದ ಸಹೋದ್ಯೋಗಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಗಣಿ ಹಗರಣ, ಭೂಹಗರಣದಿಂದ ಕೋಟ್ಯಂತರ ಹಣ ದೋಚಲಾಗಿದೆ. ಬಂಡವಾಳಶಾಹಿಗಳಿಗೆ ಮುಕ್ತ ಆಹ್ವಾನ ನೀಡುವ ಮೂಲಕ ಬೃಹತ್ ಶೋಷಿತ ಸಮಾಜ ನಿರ್ಮಾಣಕ್ಕೆ ನಾಂದಿಹಾಡುತ್ತಿದ್ದಾರೆ.ಕೇಂದ್ರದಲ್ಲಿ ತರಂಗಾಂತರಂಗ ಹಗರಣ, ಆದರ್ಶ ಹಗರಣ, ಕಾಮನ್‌ವೆಲ್ತ್ ಹಗರಣ ಗಳಿಂದಾಗಿ ದೇಶ ತಲೆ ತಗ್ಗಿಸುವಂತಾಗಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.ಭೂಹಗರಣಗಳಿಗೆ ಬೆನ್ನೆಲುಬಾಗಿ ನಿಂತಿರುವ ಕೆಐಎಡಿಬಿ ಎಂಬ ಕುಖ್ಯಾತ ಸಂಸ್ಥೆ, ಅಭಿವೃದ್ಧಿಯ ನೆಪದಲ್ಲಿ ರೈತರ ಸಮೃದ್ಧ ಭೂಮಿಯನ್ನು ಬೇಕಾಬಿಟ್ಟಿ ವಶಪಡಿಸಿಕೊಂಡು ಬಂಡವಾಳಶಾಹಿಗಳಿಗೆ ನೀಡುತ್ತಿದೆ. ಭೂಮಿಯನ್ನೇ ನಂಬಿದ ಬಡ-ಮಧ್ಯಮ ವರ್ಗದ ರೈತರು ಬೀದಿಗೆ ಬೀಳುತ್ತಿದ್ದಾರೆ ಎಂದು ದೂರಿದರು.ಅದಿರು ಗಣಿಗಾರಿಕೆಯಿಂದ ಸಂಪತ್ತು ಕೆಲವೇ ಪಟ್ಟಭದ್ರರ ಕೈಯಲ್ಲಿ ಕೇಂದ್ರೀಕೃತವಾಗಿದೆ. ಅವರನ್ನು ರಕ್ಷಿಸಲು ಸರ್ಕಾರ ಮುಂದಾಗಿದೆ. ಜನರ ಪರವಾಗಿ ಧ್ವನಿ ಎತ್ತಬೇಕಿದ್ದ ಸಿಪಿಐ, ಸಿಪಿಎಂ ಮತ್ತಿತರ ಕಮ್ಯುನಿಸ್ಟ್ ಪಕ್ಷಗಳು ಭ್ರಷ್ಟರ ಜತೆ ಕೈಜೋಡಿಸಿವೆ ಎಂದು ವಿಷಾದಿಸಿದರು.ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮತ್ತಿತರ ಎಲ್ಲ ರಾಜಕೀಯ ಪಕ್ಷಗಳೂ ಮೌಲ್ಯಗಳನ್ನು ಗಾಳಿಗೆ ತೂರಿ ಭ್ರಷ್ಟಾಚಾರದಲ್ಲಿ ತೊಡಗಿವೆ. ಇಂತಹ ಸಂದರ್ಭದಲ್ಲಿ ಪ್ರಜ್ಞಾವಂತ ಜನತೆ ಎಚ್ಚೆತ್ತುಕೊಳ್ಳಬೇಕು. ಪ್ರತಿಭಟನೆಯ ಮೂಲಕ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು. ಭ್ರಷ್ಟರಿಗೆ ಶಿಕ್ಷೆಯಾಗಬೇಕು. ಕೆಐಎಡಿಬಿ ವಿಸರ್ಜಿಸಬೇಕು. ಭೂಮಿಯನ್ನು ರೈತರಿಗೆ ವಾಪಸ್ ನೀಡಬೇಕು. ಕೊಳೆತ ಬಂಡವಾಳಶಾಹಿ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಎಂ.ಎನ್. ಶ್ರೀರಾಮ್, ಟಿ.ವಿ.ಎಸ್. ರಾಜು, ರುದ್ರೇಶ್, ದೀಪಾ, ಮಂಜುನಾಥ್, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.