ಶುಕ್ರವಾರ, ಮೇ 14, 2021
30 °C

ಭ್ರಷ್ಟಾಚಾರಿ ಅಲ್ಲ, ದುರಂಹಕಾರಿಯೂ ಅಲ್ಲ - ಡಿವಿಎಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡೆಕೋಲು (ಸುಳ್ಯ ತಾಲ್ಲೂಕು): `ನಾನು ಭ್ರಷ್ಟಾಚಾರಿಯೂ ಅಲ್ಲ, ದುರಂಹಕಾರಿಯೂ ಅಲ್ಲ. ಅಧಿಕಾರ ದುರುಪಯೋಗಪಡಿಸಿಕೊಂಡವನಲ್ಲ. ಜನತೆ ಪರವಾಗಿಲ್ಲ ಎಂದು ಪಾಸ್ ಮಾರ್ಕ್ ನೀಡುವ ರೀತಿ ಆಡಳಿತ ನೀಡಿದ್ದೇನೆ. ಮುಂದೆಯೂ ಹುಟ್ಟೂರು ಮಂಡೆಕೋಲಿಗೆ ಗೌರವ ತರುವ ರೀತಿ ಆಡಳಿತ ನಡೆಸುತ್ತೇನೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.ಸುಳ್ಯ ತಾಲ್ಲೂಕಿನ ಮಂಡೆಕೋಲಿನಲ್ಲಿ ಒಟ್ಟು 9.25 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿರುವ ಸೇತುವೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು ವ್ಯಂಗ್ಯದ ಮಾತುಗಳ ಮೂಲಕ ರಾಜಕೀಯ ವೈರಿಗಳನ್ನು ಚುಚ್ಚಿದರು.`ನಾನು ಸ್ವಂತ ಶಕ್ತಿಯಿಂದ ಮುಖ್ಯಮಂತ್ರಿ ಆಗಿಲ್ಲ. ಜನತೆಯ ಆಶೀರ್ವಾದದಿಂದ ನನಗೆ ಈ ಸ್ಥಾನ ಸಿಕ್ಕಿದೆ. ಮಂಡೆಕೋಲಿನಂತಹ ಕುಗ್ರಾಮದಲ್ಲಿ ಹುಟ್ಟಿ ಬೆಳೆದ ಸಾಮಾನ್ಯ ಹುಡುಗನೂ ಮುಖ್ಯಮಂತ್ರಿಯಾಗಿ ಬೆಳೆಯಬಲ್ಲ ಎಂದು ತೋರಿಸಿಕೊಟ್ಟ ಕೀರ್ತಿ ಭಾರತೀಯ ಜನತಾ ಪಕ್ಷಕ್ಕೆ ಸಲ್ಲಬೇಕು. ನಾನು ಹೋರಾಟಗಳ ಮೂಲಕ ಬೆಳೆದವನು. ರಾಜಕೀಯವಾಗಿ ಸಿಕ್ಕ ಅವಕಾಶವನ್ನು ಸದ್ವಿನಿಯೋಗ ಮಾಡಿಕೊಂಡಿದ್ದೇನೆ. ಪ್ರಾಮಾಣಿಕವಾಗಿ ನಡೆದಿದ್ದೇನೆ ಎಂದು ಅವರು ಹೇಳಿದರು.ರಾಜ್ಯದಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಪಾರದರ್ಶಕ ಆಡಳಿತ ನಡೆಸುವುದು, ಸ್ವಜನ ಪಕ್ಷಪಾತಕ್ಕೆ ಕಡಿವಾಣ ಹಾಕಿ, ಆಡಳಿತ ಸುಧಾರಣೆ ತರುವುದು ನನ್ನ ಗುರಿ~ ಎಂದರು.`ಭ್ರಷ್ಟಾಚಾರ ಎಲ್ಲಿ ಆರಂಭವಾಗಿದೆಯೋ ಅಲ್ಲೇ ಅದಕ್ಕೆ ಕಡಿವಾಣ ಹಾಕಬೇಕಾಗಿದೆ. ಮುಖ್ಯಮಂತ್ರಿ ಕಚೇರಿಯೂ ಇದಕ್ಕೆ ಹೊರತಾಗಿಲ್ಲ. ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ಭ್ರಷ್ಟಾಚಾರ ನಿಂತರೆ ಉಳಿದ ಕಡೆ ತನ್ನಿಂದ ತಾನೆ ಅದಕ್ಕೆ ಕಡಿವಾಣ ಬೀಳುತ್ತದೆ~ ಎಂದರು.`ಜನತಾದರ್ಶನದಲ್ಲಿ ಬರುವ ದೂರುಗಳ ಪೈಕಿ ಹೆಚ್ಚಿನವು ಅರ್ಜಿ ವಿಲೇವಾರಿ ವಿಳಂಬ ಕುರಿತವು. ಇದನ್ನು ನಿವಾರಿಸಲು ಕಡತ ವಿಲೇವಾರಿ ಕಾರ್ಯವನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾನು ಎರಡು ದಿನಕ್ಕೊಮ್ಮೆ 500ರಂತೆ ವಾರಕ್ಕೆ 2500ಕ್ಕೂ ಅಧಿಕ ಕಡತಗಳನ್ನು  ವಿಲೇವಾರಿ ಮಾಡುತ್ತೇನೆ~ ಎಂದರು.`ಪಾರದರ್ಶಕ ಆಡಳಿತ ನಡೆಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮಹತ್ವಾಕಾಂಕ್ಷಿ ಸಕಾಲ ಯೋಜನೆ ಜಾರಿಗೆ ತರಲಾಗಿದೆ. ಸಕಾಲವನ್ನು ಪ್ರಾಯೋಗಿಕವಾಗಿ ಜಾರಿಗೆ ತಂದ ನಾಲ್ಕು ತಾಲ್ಲೂಕುಗಳಲ್ಲಿ ಒಂದೇ ತಿಂಗಳ ಅವಧೀಯಲ್ಲಿ 1.74 ಲಕ್ಷ ಅರ್ಜಿಗಳು ಬಂದಿದ್ದು, ಈ ಸಂಬಂಧ 1.66 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಯೋಜನೆ ಯಶಸ್ವಿಯಾಗಲಿದೆ~ ಎಂದು ಸಿ.ಎಂ. ವಿಶ್ವಾಸ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.