ಸೋಮವಾರ, ಜನವರಿ 20, 2020
29 °C
ಅಡಿಕೆ ‘ಸಿಂಗಾರ’ ತಿನ್ನುವ ಕೋತಿಗಳು

ಮಂಗಗಳ ಉಪಟಳದಿಂದ ಅಪಾರ ಬೆಳೆ ನಷ್ಟ

ಪ್ರಜಾವಾಣಿ ವಾರ್ತೆ/ ಶಿವಾನಂದ ಕರ್ಕಿ Updated:

ಅಕ್ಷರ ಗಾತ್ರ : | |

ತೀರ್ಥಹಳ್ಳಿ: ಅಡಿಕೆ ಮೆಳೆ(ಮಿಡಿ)ಗಳನ್ನು ತಿನ್ನುತ್ತಿದ್ದ ಮಂಗಗಳು ಈಗ ಅಡಿಕೆಯ ಸಿಂಗಾರ ತಿನ್ನಲು ಆರಂಭಿಸಿರುವುದು ಅಡಿಕೆ ಬೆಳೆಗಾರರನ್ನು ಕಂಗಾಲಾಗಿಸಿದೆ. ಅಡಿಕೆ ಮರದ ಹೊಡೆಯಿಂದ ಸಿಂಗಾರ ಹೊರಗೆ ಮೂಡುತ್ತಿರುವಾಗಲೇ ಮಂಗಗಳು ಅದನ್ನು ಕಿತ್ತು ತಿನ್ನುವ ಅಭ್ಯಾಸ ಮಾಡಿ ಕೊಂಡಿರುವುದರಿಂದ  ಫಸಲು ಉಳಿಸಿಕೊಳ್ಳುವುದು ಈಗ ರೈತರಿಗೆ ಸವಾಲಿನ ಕೆಲಸವಾಗಿದೆ.ಹತ್ತು, ಹನ್ನೆರಡು ವರ್ಷಗಳಿಂದ ಈಚೆಗೆ ಮಂಗಗಳು ಅಡಿಕೆ ಮೆಳೆಯನ್ನು ತಿನ್ನುವ ಪರಿಪಾಟಲು ಕಲಿತಿವೆ. ಇದರಿಂದ ಪ್ರತಿವರ್ಷ ಕೋಟ್ಯಂತರ ಮೌಲ್ಯದ ಅಡಿಕೆ ಬೆಳೆ ನಾಶವಾಗಲು ಕಾರಣವಾಗಿದೆ. ಮಂಗಗಳು ಒಮ್ಮೆ ದಾಳಿ ಇಟ್ಟ ನಂತರ ಆ ತೋಟಗಳಲ್ಲಿ ಕನಿಷ್ಠ ಮೂರರಿಂದ ನಾಲ್ಕು ಕ್ವಿಂಟಲ್‌ ಅಡಿಕೆ ಫಸಲ ನಾಶಪಡಿಸುತ್ತವೆ. ಈ ದಾಳಿಯಿಂದ ಬೆಳೆಯನ್ನೇ ಕಳೆದುಕೊಂಡ ರೈತರು ಅನೇಕರಿದ್ದಾರೆ. ಮಂಗಗಳ ನಿಯಂತ್ರಣಕ್ಕೆ ಇನ್ನಿಲ್ಲದ ಕಸರತ್ತನ್ನು ನಡೆಸಿದರೂ ಮಂಗಗಳ ನಿಯಂತ್ರಣ ರೈತರಿಂದ ಸಾಧ್ಯವಾಗದಾಗಿದೆ.  ಹೊಂಬಾಳೆಯಿಂದ ಹೊರ ಬಂದ ಹಿಂಗಾರವನ್ನು ಮುರಿದು ತಿನ್ನುವ ಮಂಗಗಳು ಇದನ್ನು ಆಹಾರ ಮಾಡಿಕೊಂಡಿವೆ. ಎಳೆ ಹಿಂಗಾರ ಮೃದು ಹಾಗೂ ಸಿಹಿ ಇರುವುದರಿಂದ ಇದನ್ನು ತಿನ್ನುವ ಅಭ್ಯಾಸ ಮಾಡಿಕೊಂಡ ಮಂಗಗಳು ರೈತರ ಕಣ್ಣು ತಪ್ಪಿಸಿ ತೋಟಗಳಿಗೆ ದಾಳಿ ಇಡುತ್ತಿವೆ. ಅತೀ ಸೂಕ್ಷ್ಮವಾದ ಹಿಂಗಾರ ಮಂಗನ ದಾಳಿಗೆ ತುತ್ತಾದ ನಂತರ ಬೆಳೆಯುತ್ತಲೇ ಹಾಳಾಗುತ್ತದೆ.ಕೊಳೆ ರೋಗದಿಂದ ಬೆಳೆ ಕಳೆದುಕೊಂಡು ಕಂಗಾಲಾದ ರೈತರು ಮುಂದಿನ ಫಸಲನ್ನು ಜತನದಿಂದ ಕಾಪಾಡಿಕೊಂಡು ಸಕಾಲಕ್ಕೆ ಔಷಧಿ ಸಿಂಪಡಿಸಿ ಬೆಳೆ ಉಳಿಸಿಕೊಳ್ಳಬೇಕು ಎಂಬ ಪ್ರಯತ್ನಕ್ಕೆ ಮಂಗಗಳು ತಡೆಯೊಡ್ಡಿದಂತಾಗಿದೆ.ಒಂದು ಎಕರೆ ಪ್ರದೇಶದಲ್ಲಿ ಒಂದು ಬೆಳೆಯನ್ನು ಬೆಳೆಯಲು ಸಾಕಷ್ಟು ಪ್ರಮಾಣದ ಹಣವನ್ನು ಖರ್ಚು ಮಾಡಬೇಕು. ಗೊಬ್ಬರ, ಮಣ್ಣು, ನೀರು ಪೂರೈಕೆ, ಔಷಧಿ ಸಿಂಪಡಣೆ, ಕಾವಲು, ಕೂಲಿ ಸೇರಿದಂತೆ ಸುಮಾರು ₨ 40 ಸಾವಿರಕ್ಕೂ ಹೆಚ್ಚು

ವೆಚ್ಚವಾಗುತ್ತದೆ.ಒಂದು ಎಕರೆ ಪ್ರದೇಶದಲ್ಲಿ 400 ಅಡಿಕೆ ಮರಗಳೆಂದು ನಿಗದಿಯಾಗಿದ್ದರೂ ಸಾಂಪ್ರದಾಯಿಕ

ತೋಟಗಳಲ್ಲಿ ಹೆಚ್ಚು ಸಂಖ್ಯೆಯ ಮರಗಳಿರುತ್ತವೆ. ಇಷ್ಟೆಲ್ಲ ವ್ಯವಸ್ಥೆ ಕಲ್ಪಿಸಿ ಬೆಳೆ ಕೈಗೆ ಸಿಗುತ್ತದೆ ಎಂಬ ಯಾವ ಭರವಸೆಯೂ ಇಂದು ರೈತರಲ್ಲಿ ಉಳಿದಿಲ್ಲ.‘ಪೇಟೆಯಿಂದ ಆಗುಂಬೆ ಕಾಡಿನಲ್ಲಿ ತಂದು ಬಿಡುವ ಮಂಗಗಳು ಈ ರೀತಿ ಅಭ್ಯಾಸ ಮಾಡಿಕೊಂಡಿವೆ. ಕಾಡಿನಲ್ಲಿ ಎಷ್ಟೇ ಆಹಾರ ಸಿಕ್ಕರೂ ಈ ಬಗೆಯ ಮಂಗಗಳು ಊರಿನ ಕಡೆಯೇ ದಾಳಿ ಇಡುತ್ತವೆ. ಇವುಗಳ ಉಪಟಳ  ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಅರಣ್ಯ ಇಲಾಖೆ  ಇವುಗಳನ್ನು ನಿಯಂತ್ರಣದಲ್ಲಿ ಇಡಬೇಕು. ನಗರ ಪ್ರದೇಶದಲ್ಲಿನ ಮಂಗಗಳನ್ನು ಕಾಡಿಗೆ ತಂದು ಬಿಡುವ ಪರಿಪಾಟ ನಿಲ್ಲಿಸಬೇಕು’ ಎಂದು ಆಗುಂಬೆ ಹೋಬಳಿ ರೈತ ಶಾಂತಪ್ಪ ಹೇಳುತ್ತಾರೆ.ಮಂಗಗಳ  ಹಾವಳಿಯಿಂದ ರೈತರಿಗೆ ನಷ್ಟವಾಗುತ್ತಿದೆ. ಈ ಕುರಿತು ಇಲಾಖೆ ಮೇಲಾಧಿಕಾರಿ ಗಮನಕ್ಕೆ ತರುತ್ತೇನೆ’ ಎಂದು ಆಗುಂಬೆ ವಲಯ ಅರಣ್ಯಾಧಿಕಾರಿ ಬೋರಯ್ಯ ತಿಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)