ಭಾನುವಾರ, ಜೂನ್ 13, 2021
20 °C

ಮಂಗಳೂರು: ಸ್ವಸಹಾಯ ಸಂಘ ಸಮಾವೇಶ- ಕೇಂದ್ರ ಸಚಿವ ವೀರಪ್ಪ ಮೊಯಿಲಿ ಪ್ರಶಂಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಸಮಾಜದಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದು. ತಾನು ಕಷ್ಟ ಅನುಭವಿಸುತ್ತಿದ್ದರೂ ಮಕ್ಕಳನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯುವ ಶಕ್ತಿ ಇರುವುದು ಆಕೆಗೆ ಮಾತ್ರ. ಆಕೆ ಜ್ಞಾನ ಸಂಪಾದಿಸಿದರೆ, ಸ್ವ-ಉದ್ಯೋಗದಂತಹ ಆದಾಯ ತರುವ ವೃತ್ತಿಯಲ್ಲಿ ತನ್ನನ್ನು ತೊಡಗಿಸಿಕೊಂಡರೆ ಸಮಾಜಕ್ಕೆ ಬಲುದೊಡ್ಡ ಕೊಡುಗೆ ಸಿಕ್ಕಿದಂತಾಗುತ್ತದೆ ಎಂದು ಕೇಂದ್ರದ ಕಂಪೆನಿ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದ್ದಾರೆ.ನಗರದ ಮಿಲಾಗ್ರಿಸ್ ಶಾಲಾ ಮೈದಾನದಲ್ಲಿ ಭಾನುವಾರ ನವದೆಹಲಿಯ ಕಾರಿತಾಸ್ ಇಂಡಿಯ ಸ್ವರ್ಣ ಮಹೋತ್ಸವ ಪ್ರಯುಕ್ತ ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ(ಸಿಒಡಿಪಿ) ವತಿಯಿಂದ ನಡೆದ ಸ್ವಸಹಾಯ ಸಂಘಗಳ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.`ನನ್ನ ಅಪ್ಪ, ಅಮ್ಮ ಇಬ್ಬರೂ ಅನಕ್ಷರಸ್ಥರಾಗಿದ್ದರು. ಆದರೆ ನನ್ನ ಅಮ್ಮ ಹಟಹಿಡಿದು ಬೆಳಿಗ್ಗೆ ನಾಲ್ಕೂವರೆಗೇ ಎಬ್ಬಿಸಿ ನನ್ನನ್ನು ಓದಿಸಿದಳು. ಅದರಿಂದಲೇ ನಾನು ಇಷ್ಟು ಎತ್ತರಕ್ಕೆ ಏರುವುದು ಸಾಧ್ಯವಾಯಿತು. ತಾಯಿಯೊಬ್ಬಳು ಮನಸ್ಸು ಮಾಡಿದರೆ ಮಕ್ಕಳು ಉತ್ತಮ ದಾರಿಯಲ್ಲಿ ಸಾಗುವುದು ನಿಶ್ಚಿತ. ಆಕೆಗೆ ಆರ್ಥಿಕ ಸ್ವಾತಂತ್ರ್ಯ ಲಭಿಸಿದರಂತೂ ಕುಟುಂಬದ ನೆಮ್ಮದಿ ಹೆಚ್ಚುವುದರ ಜತೆಗೆ ಇನ್ನಷ್ಟು ಸಮಾಜಿಕ ಅಭಿವೃದ್ಧಿ ಸಾಧ್ಯ~ ಎಂದು ಮೊಯಿಲಿ ಹೇಳಿದರು.`ನಾನು ಸಿಇಟಿ ವ್ಯವಸ್ಥೆ ರೂಪಿಸಿದ್ದರಿಂದ ಗ್ರಾಮೀಣ ಪ್ರದೇಶದ ಅದೆಷ್ಟೋ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೂ ವೈದ್ಯಕೀಯ, ಎಂಜಿನಿಯರಿಂಗ್ ಸೀಟು ಸಿಕ್ಕಿ ಅವರೆಲ್ಲ ಇಂದು ಕೈತುಂಬ ಸಂಬಳ ಪಡೆಯುವ ಉದ್ಯೋಗದಲ್ಲಿದ್ದಾರೆ. ಗ್ರಾಮೀಣ ಭಾಗದಲ್ಲಿನ ಬದುಕನ್ನು ಅರಳಿಸುವ ಪ್ರಯತ್ನವನ್ನು ಸರ್ಕಾರದ ಜತೆ ಸಂಘ-ಸಂಸ್ಥೆಗಳು ಮಾಡಬೇಕು~ ಎಂದು ಅವರು ನುಡಿದರು.ಎರಡನೇ ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷರಾಗಿ ತಾವು ಹಲವು ಸುಧಾರಣೆಗಳ ಶಿಫಾರಸು ಮಾಡಿದ್ದು, ಅವು ಒಂದೊಂದಾಗಿ ಜಾರಿಗೆ ಬರುತ್ತಿವೆ. ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್‌ನಲ್ಲಿನ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಜನರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯ ಕ್ರೈಸ್ತ ಸಂಘಟನೆಗಳ ನೆರವು ಕೇಳಿದೆ.

 

ದೇಶದಲ್ಲಿ ರೈತರು ಬೆಳೆದ ಕೃಷಿ ಉತ್ಪನ್ನಗಳ ಸಂಸ್ಕರಣೆ ಸಮರ್ಪಕವಾಗಿ ನಡೆಯದೆ ಅವರಿಗೆ ನ್ಯಾಯವಾದ ಬೆಲೆ ಸಿಗುತ್ತಿಲ್ಲ. ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಿಒಡಿಪಿಯಂತಹ ಸಂಘಟನೆಗಳು ಜನರ ಆರ್ಥಿಕ ಸ್ಥಾನಮಾನ ಸುಧಾರಣೆ ಜತೆಗೇ ಸಾಮಾಜಿಕ ಸ್ಥಾನಮಾನ ಸುಧಾರಣೆಗೂ ಯತ್ನಿಸಬೇಕು. ಜತೆಗೇ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಜಾರಿಗೆ ಬಂದಾಗ ಜನರ ಜೀವನಮಟ್ಟ ಸುಧಾರಿಸುವುದೂ ಸಾಧ್ಯವಾಗುತ್ತದೆ ಎಂದು ಮೊಯಿಲಿ ನುಡಿದರು.ಮಂಗಳೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಅಲೋಷಿಯಸ್ ಪಾವ್ಲ್ ಡಿಸೋಜ ಮಾತನಾಡಿ, ಸಮಾಜದ ಆರ್ಥಿಕ ಅಭಿವೃದ್ಧಿಗಾಗಿ ಸಿಒಡಿಪಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ವಿವರಿಸಿದರು. ಇತ್ತೀಚೆಗೆ ಬಿಷಪ್‌ಗಳ ಸಮ್ಮೇಳನದಲ್ಲಿ ಬಡವರ ಉದ್ಧಾರ ನಿಮಿತ್ತ ಕೈಗೊಂಡ ನಿರ್ಣಯಗಳನ್ನು ವಿವರಿಸಿದ ಅವರು, ಸಿಒಡಿಪಿಯಂತಹ ಸಂಘಟನೆಗಳು ಜಾತಿ, ಮತ ಭೇದ ಮಾಡದೆ ಸಾಮಾಜಿಕ ಕಾರ್ಯಗಳನ್ನು ಸಮರ್ಥವಾಗಿ ಕೈಗೊಳ್ಳುತ್ತಿವೆ ಎಂದರು.ದೆಹಲಿಯ ಕಾರಿತಾಸ್ ಇಂಡಿಯ ನಿಯೋಜಿತ ಅಧ್ಯಕ್ಷ ಫ್ರೆಡ್ರಿಕ್ ಡಿಸೋಜ ಕಳೆದ 50 ವರ್ಷಗಳಿಂದ ತಮ್ಮ ಸಂಘಟನೆ ದೇಶದಾದ್ಯಂತ ಹಮ್ಮಿಕೊಂಡಿರುವ ಜನಪರ, ಸಾಮಾಜಿಕ ಕಾಳಜಿಯ ಸೇವೆಗಳನ್ನು ವಿವರಿಸಿದರು.ಸಿಒಡಿಪಿ ಚಟವಟಿಕೆಗಳ ಬಗ್ಗೆ ಸ್ಥೂಲ ಪರಿಚಯ ನೀಡಿದ ಸಂಘಟನೆಯ ನಿರ್ದೇಶಕ ಒನಿಲ್ ಡಿಸೋಜ, ಇಂದು ಸಂಘಟನೆಯಡಿ 700 ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, 10640 ಸದಸ್ಯರಿದ್ದಾರೆ. 2.68 ಕೋಟಿ ಉಳಿತಾಯ ಮಾಡಿರುವ ಸಂಘಟನೆಗಳು, 7.29 ಕೋಟಿ ರೂಪಾಯಿ ಸಾಲ ಪಡೆದಿವೆ. ಒಟ್ಟು 2,026 ಮಂದಿ ಸ್ವಉದ್ಯೋಗ ಮಾಡುತ್ತಿದ್ದಾರೆ ಎಂದರು.ಸಾಮಾಜಿಕ ಕಾರ್ಯಕರ್ತೆ ರೀಟಾ ನರೋನ್ಹಾ, ಸಿಒಡಿಪಿ ಸಹಾಯಕ ನಿರ್ದೇಶಕ ಓಸ್ವಾಲ್ಡ್ ಮೊಂತೆರೊ, ಬೆಂಗಳೂರು ಕ್ರಾಸ್ ಸಂಸ್ಥೆ ನಿರ್ದೇಶಕ ಪ್ರೀಟರ್ ಬ್ರ್ಯಾಂಕ್ ಇದ್ದರು. ಇದೇ ಸಂದರ್ಭದಲ್ಲಿ ಉತ್ತಮ ಸಾಧನೆ ತೋರಿದ ಸ್ವಸಹಾಯ ಸಂಘಗಳಿಗೆ ಪಾರಿತೋಷಕ ನೀಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಬಲ್ಮಠ ಮೈದಾನದಿಂದ ಮಿಲಾಗ್ರಿಸ್ ಶಾಲೆ ಆವರಣದವರೆಗೆ ಬೃಹತ್ ಮೆರವಣಿಗೆ ನಡೆಯಿತು.`ಸಣ್ಣ ಪ್ರಮಾಣದ ಉತ್ಪಾದಕರ ಸಂಘ ರಚನೆ ಸಂಬಂಧ ಚರ್ಚೆ~ಸಹಕಾರ ಸಂಘಗಳ ಮಾದರಿಯಲ್ಲಿಯೇ ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವಾಲಯದಿಂದ ಸಣ್ಣ ಪ್ರಮಾಣದ ಉತ್ಪಾದಕರ ಸಂಘ ರಚನೆ ಸಂಬಂಧ ಇದೀಗ ಗಂಭೀರ ಚರ್ಚೆ ನಡೆಯುತ್ತಿದೆ. ಇದಕ್ಕೆ ಅಂತಿಮ ರೂಪ ದೊರೆತ ನಂತರ ರಾಷ್ಟ್ರಪತಿಗಳ ಅನುಮತಿ ಪಡೆದು ಕಾಯ್ದೆ ಜಾರಿಗೆ ತರಲಾಗುತ್ತದೆ ಎಂದು ಸಚಿವ ವೀರಪ್ಪ ಮೊಯಿಲಿ ಹೇಳಿದರು.ಇಲ್ಲಿ ಭಾನುವಾರ ನಡೆದ ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಹತ್ತು ಮಂದಿ ರೈತರು ಇರುತ್ತಾರೆ. ತಮ್ಮ ಉತ್ಪನ್ನಗಳಿಗೆ ಯೋಗ್ಯ ಬೆಲೆ ಪಡೆಯಲು ಮತ್ತು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆಗೆ ಈ ಸಂಘ ನೆರವಾಗುತ್ತದೆ. ಸಹಕಾರ ಸಂಘಗಳ ರಚನೆಗೆ ಇರುವ ಕಠಿಣ ನಿಯಮಗಳು ಇಲ್ಲಿ ಇರುವುದಿಲ್ಲ ಎಂದು ಅವರು ತಿಳಿಸಿದರು.ಸರ್ಕಾರ ಒಂದೆಡೆ ಸಹಕಾರಿ ಸಂಘಗಳ ಲಾಭದ ಮೇಲೆ ತೆರಿಗೆ ವಿಧಿಸುತ್ತಿದ್ದು, ಹೊಸ ಸಂಘಗಳ ಸ್ಥಾಪನೆಗೂ ಮುಂದಾಗುತ್ತಿದೆ. ಇದು ಸರ್ಕಾರದ ಇಬ್ಬಗೆ ನೀತಿಯಲ್ಲವೇ ಎಂದು ಬಳಿಕ ಪತ್ರಕರ್ತರು ಪ್ರಶ್ನಿಸಿದಾಗ, ಸಹಕಾರಿ ಸಂಘಗಳಿಗೆ ತೆರಿಗೆ ವಿಧಿಸುವ ವಿಚಾರ ತಮ್ಮ ಇಲಾಖೆಗೆ ಸಂಬಂಧಿಸಿದ್ದಲ್ಲ. ಹೀಗಾಗಿ ತಾವು ಆ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ. ತಮ್ಮ ಇಲಾಖೆ ವಿಚಾರವನ್ನಷ್ಟೇ ಮುಂದಿಟ್ಟಿದ್ದಾಗಿ ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.