ಶನಿವಾರ, ಮೇ 15, 2021
29 °C

ಮಂಜೂರಾತಿ ಮೀರಿ ನಿಯೋಜನೆ:ಗಣ್ಯರ ಭದ್ರತೆಗೇ ಹೆಚ್ಚು ಪೊಲೀಸರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೇಶದಲ್ಲಿ ಈಗ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಿಂತ ಗಣ್ಯರ ಭದ್ರತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ದೇಶದಾದ್ಯಂತ 16,788 ಗಣ್ಯರ ಭದ್ರತೆಗಾಗಿ ನಿಗದಿಪಡಿಸಿದಕ್ಕಿಂತ ಎರಡು ಪಟ್ಟು ಹೆಚ್ಚು ಪೊಲೀಸರನ್ನು ನಿಯೋಜಿಸಿರುವುದು ಬೆಳಕಿಗೆ ಬಂದಿದೆ.ಗೃಹ ಸಚಿವಾಲಯದ ಪ್ರಕಾರ, ಈ 16,788 ಗಣ್ಯರಲ್ಲಿ ಬಹುತೇಕರು ಸಚಿವರು, ಸಂಸದರು, ಶಾಸಕರು, ನ್ಯಾಯಾಧೀಶರು ಮತ್ತು ಅಧಿಕಾರಿಗಳು ಸೇರಿದ್ದಾರೆ. 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಈ ಗಣ್ಯರ ಭದ್ರತೆಗಾಗಿ 2010ರಲ್ಲಿ  50,059 ಪೊಲೀಸರನ್ನು ನಿಯೋಜಿಸಲಾಗಿದೆ. ಇವರು ಆರು ತಿಂಗಳು ಅಥವಾ ಅದಕ್ಕೂ ಹೆಚ್ಚು ಕಾಲ ಭದ್ರತೆ ಕಾರ್ಯ ಕೈಗೊಂಡಿದ್ದರು.ಅಚ್ಚರಿ ಸಂಗತಿಯೆಂದರೆ, ಈ ಅವಧಿಯಲ್ಲಿ ಈ ಗಣ್ಯರ ಭದ್ರತೆಗೆ ಕೇವಲ 28,298 ಪೊಲೀಸರನ್ನು ನಿಯೋಜಿಸಲು ಅನುಮೋದನೆ ನೀಡಲಾಗಿತ್ತು.ಇದರ ಪರಿಸ್ಥಿತಿ 2009ರಲ್ಲಿ ಇನ್ನೂ ಕೆಟ್ಟದಾಗಿತ್ತು. ದೇಶದಲ್ಲಿರುವ 17,451 ಗಣ್ಯರ ಭದ್ರತೆಗೆ ಮಂಜೂರಾತಿಗಿಂತ ಎರಡು ಪಟ್ಟು ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.2010ರಲ್ಲಿ ಬಿಹಾರದಲ್ಲಿ ಅತೀ ಹೆಚ್ಚು ಅಂದರೆ 3,030 ಗಣ್ಯರಿಗೆ ಭದ್ರತೆ ನೀಡಲಾಗಿತ್ತು. ಪಂಜಾಬ್‌ನಲ್ಲಿ 1,685 ಮತ್ತು  ಪಶ್ಚಿಮ ಬಂಗಾಳದಲ್ಲಿ 1,640 ಗಣ್ಯರಿಗೆ ಭದ್ರತೆ ಒದಗಿಸಲಾಗಿತ್ತು.2010ರಲ್ಲಿ ಗಣ್ಯರ ಭದ್ರತೆಗಾಗಿ ಪಂಜಾಬ್‌ನಲ್ಲಿ ಗರಿಷ್ಠ ಅಂದರೆ 5,410 ಪೊಲೀಸರನ್ನು ನಿಯೋಜಿಸಿದರೆ, ದೇಶದ ರಾಜಧಾನಿ ದೆಹಲಿಯಲ್ಲಿ 5,001 ಮತ್ತು ಆಂಧ್ರಪ್ರದೇಶದಲ್ಲಿ 3,958 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.ಗೃಹ ಸಚಿವ ಪಿ. ಚಿದಂಬರಂ ಈಚೆಗೆ ಈ ವರದಿ ಬಿಡುಗಡೆಗೊಳಿಸಿ ಮಾತನಾಡಿ, ಅನುಮತಿ ಪಡೆಯದೇ ಮಂಜೂರಾತಿಗಿಂತ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಕೊಂಡಿದ್ದು, ಹೆಚ್ಚುವರಿ ಸಿಬ್ಬಂದಿಯನ್ನು ವಾಪಸ್ ಪಡೆಯಲಾಗುವುದು ಎಂದಿದ್ದಾರೆ. ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಈ ವರದಿ ಸಿದ್ಧಪಡಿಸಿದ್ದು, 2011ರ ಜನವರಿಯಲ್ಲಿ ಅಂದಾಜಿಸಿದಂತೆ ಒಂದು ಲಕ್ಷ ಜನರಿಗೆ ಮಂಜೂರಾದ 173.51 ಪೊಲೀಸ್ ಹುದ್ದೆಗಳ ಪೈಕಿ 131.39 ಹುದ್ದೆಯಲ್ಲಿ ಮಾತ್ರ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ.ದೇಶದಲ್ಲಿ ಒಂದು ಲಕ್ಷ ಜನರಿಗೆ ಇರಬೇಕಾದ ಪೊಲೀಸರ ಪ್ರಮಾಣದಲ್ಲಿ ತೀರಾ ವ್ಯತ್ಯಾಸವಿದೆ. ರಾಷ್ಟ್ರೀಯ ಸರಾಸರಿ ಪೊಲೀಸರ ಪ್ರಮಾಣ 174 ಇದ್ದು, ರಾಜ್ಯಗಳಲ್ಲಿ ಇದಕ್ಕೆ ವಿರುದ್ಧವಾದ ಪರಿಸ್ಥಿತಿ ಇದೆ. ಪಶ್ಚಿಮ ಬಂಗಾಳದಲ್ಲಿ ಒಂದು ಲಕ್ಷ ಜನರಿಗೆ ಕೇವಲ 81 ಜನ ಪೊಲೀಸ್ ಸಿಬ್ಬಂದಿ ಇದ್ದರೆ, ಬಿಹಾರದಲ್ಲಿ 88, ಮಧ್ಯಪ್ರದೇಶದಲ್ಲಿ 115, ರಾಜಸ್ತಾನದಲ್ಲಿ 118 ಪೊಲೀಸ್ ಸಿಬ್ಬಂದಿ ಇದ್ದಾರೆ.ಆದರೆ ಜನ ದಟ್ಟಣೆ ಇಲ್ಲದ ತ್ರಿಪುರಾದಲ್ಲಿ ಒಂದು ಲಕ್ಷ ಜನರಿಗೆ 1,124 ಪೊಲೀಸರು ಇದ್ದರೆ ಮಣಿಪುರದಲ್ಲಿ 1,147 ಮತ್ತು ಮಿಜೋರಾಂನಲ್ಲಿ 1,112 ಪೊಲೀಸರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.