ಮಂಗಳವಾರ, ಏಪ್ರಿಲ್ 20, 2021
30 °C

ಮಂಡ್ಯದಲ್ಲಿ ವಿಜಯ ಅಲ್ಟ್ರಾ ಸ್ಮಾಲ್ ಬ್ರಾಂಚ್

ಬಸವರಾಜ ಹವಾಲ್ದಾರ Updated:

ಅಕ್ಷರ ಗಾತ್ರ : | |

ಈಗಲೂ ಗ್ರಾಮೀಣ ಪ್ರದೇಶದ ಶೇ 50ಕ್ಕೂ ಹೆಚ್ಚು ಜನರು ಬ್ಯಾಂಕಿಂಗ್ ಸೇವೆಯಿಂದ ಹೊರಗುಳಿದಿದ್ದಾರೆ. ಅವರನ್ನು ಬ್ಯಾಂಕಿಂಗ್ ಸೇವೆಗೆ ಸೇರ್ಪಡೆಗೊಳಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್, ಆರ್ಥಿಕ ಸೇರ್ಪಡೆ ಯೋಜನೆಯಡಿ ಮುಂದಾಗಿದೆ.ಪರಿಣಾಮ ಎರಡು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಹಳ್ಳಿಗಳಲ್ಲಿ ಒಬ್ಬರೇ ಸಿಬ್ಬಂದಿ ನಿರ್ವಹಿಸುವ `ಅತಿ ಸಣ್ಣ ಶಾಖೆ (ಅಲ್ಟ್ರಾ ಸ್ಮಾಲ್ ಬ್ರಾಂಚ್) ಆರಂಭಿಸಲಾಗುತ್ತಿದೆ.ರಾಜ್ಯದ ಏಳು ಜಿಲ್ಲೆಗಳಲ್ಲಿ ಈ `ಅತಿ ಸಣ್ಣ ಶಾಖೆ~ ಬ್ಯಾಂಕಿಂಗ್ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ಮಂಡ್ಯ ಜಿಲ್ಲೆಯೂ ಯೋಜನೆ ಜಾರಿಗೆ ಬಂದಿದೆ. ಜಿಲ್ಲೆಯ ಲೀಡ್ ಬ್ಯಾಂಕ್ ಸಹ ಆಗಿರುವ ವಿಜಯ ಬ್ಯಾಂಕ್ ಈಗಾಗಲೇ 122 ಗ್ರಾಮಗಳಲ್ಲಿ `ಅತಿ ಸಣ್ಣ ಶಾಖೆ~ಗಳನ್ನು ಆರಂಭಿಸಿದೆ.ಗ್ರಾಮ ಪಂಚಾಯಿತಿ ಅಥವಾ ಸರ್ಕಾರಕ್ಕೆ ಸೇರಿದ ಕಟ್ಟಡದ ಕೊಠಡಿಗಳಲ್ಲಿ ಈ ಶಾಖೆಗಳನ್ನು ತೆರೆಯಲಾಗಿದ್ದು, ಇದರ ನಿರ್ವಹಣೆಗಾಗಿ ಎಸ್‌ಎಸ್‌ಎಲ್‌ಸಿ ತೇರ್ಗಡೆಯಾಗಿರುವ ಸ್ಥಳೀಯ ಯುವಕರೊಬ್ಬರನ್ನು ವ್ಯವಹಾರ ಪ್ರತಿನಿಧಿ ಎಂದು ನೇಮಿಸಿಕೊಳ್ಳಲಾಗಿದೆ.ಗ್ರಾಮದ ಮನೆ ಮನೆಗೆ ತೆರಳಿ ಬ್ಯಾಂಕ್‌ಗಳಲ್ಲಿ ಯಾವುದೇ ಖಾತೆ ಹೊಂದಿರದವರ ಮನವೊಲಿಸಿ ಖಾತೆ ಆರಂಭಿಸಲಾಗುತ್ತಿದೆ. ಹೊಸ ಖಾತೆದಾರರಿಗೆ ಭಾವಚಿತ್ರ ಸಹಿತ ಸ್ಮಾರ್ಟ್ ಕಾರ್ಡ್ (ಡೆಬಿಟ್ ಕಾರ್ಡ್ ಅಳತೆ) ನೀಡಲಾಗುತ್ತದೆ.ಅದರ ಬಳಕೆ ಬಗೆಗೂ ಅವರಿಗೆ ತಿಳಿಸಿಕೊಡಲಾಗುತ್ತದೆ. ಈ ಸ್ಮಾರ್ಟ್ ಬಳಸಿಕೊಂಡು ಖಾತೆದಾರರು ದಿನದಲ್ಲಿ 10 ರೂಪಾಯಿಯಿಂದ 2 ಸಾವಿರ ರೂಪಾಯಿವರೆಗೂ ಹಣ ಜಮಾ ಮಾಡಬಹುದು ಅಥವಾ ವಾಪಸ್ ಪಡೆಯಬಹುದು.ಬಯೋಮೆಟ್ರಿಕ್ ಸಿಸ್ಟಮ್ ಅಳವಡಿಸಲಾಗಿದ್ದು, ಖಾತೆದಾರರ ಬೆರಳಚ್ಚು ಸ್ಕ್ಯಾನ್ ಮಾಡಿ ದಾಖಲಿಸಿಕೊಳ್ಳಲಾಗಿರುತ್ತದೆ. ಈ ವ್ಯವಹಾರಕ್ಕಾಗಿಯೇ 20 ಸೆ.ಮೀ. ಅಗಲ, ಅಷ್ಟೇ ಉದ್ದ ಹಾಗೂ ಐದು ಸೆ.ಮೀಟರ್ ಎತ್ತರದ ಟರ್ಮಿನಲ್ ಮಷಿನ್ ಈ `ಅತಿ ಸಣ್ಣ ಶಾಖೆ~ಗಳಲ್ಲಿ ಅಳವಡಿಸಲಾಗಿದೆ.ಪ್ರತಿ ಬಾರಿ ಬ್ಯಾಂಕಿಂಗ್ ವ್ಯವಹಾರ ನಡೆಸುವ ಮುನ್ನವೂ ಖಾತೆದಾರರ ಬೆರಳನ್ನು ಟರ್ಮಿನಲ್ ಮೆಷಿನ್ ಮೇಲೆ ನಿಗದಿಪಡಿಸಿದ ಜಾಗದಲ್ಲಿಟ್ಟು, ಬೆರಳಚ್ಚನ್ನು ಯಂತ್ರ ಗುರುತಿಸಿದ ನಂತರವೇ ವ್ಯವಹಾರಕ್ಕೆ ಅನುವು ಮಾಡಿಕೊಡಲಾಗುತ್ತದೆ.ಅನಕ್ಷರಸ್ಥರಿಗೂ ಇಲ್ಲಿ ವ್ಯವಹರಿಸುವುದು ಬಹಳ ಸುಲಭ. ಬೆರಳಚ್ಚು ಗುರುತಿಸಿದ ಯಂತ್ರ ಮುಂದಿನ ಹಂತಗಳಲ್ಲಿ ಏನೇನು ಮಾಡಬೇಕು ಎಂಬುದನ್ನು ಸೂಚಿಸುತ್ತಾ ಹೋಗುತ್ತದೆ. ಜಮಾ ಮಾಡಿದ ಅಥವಾ ವಾಪಸ್ ಪಡೆದ ಮೊತ್ತವನ್ನೂ ಈ ಪುಟ್ಟ ಯಂತ್ರ ತೋರಿಸುತ್ತದೆ. ಖಾತೆದಾರರು ಮೋಸ ಹೋಗಲು ಸಾಧ್ಯವಿಲ್ಲ ಎನ್ನುತ್ತಾರೆ ಆರ್ಥಿಕ ಸೇರ್ಪಡೆ ಕೋಶದ ಮುಖ್ಯ ಪ್ರಬಂಧಕ ದಯಾಕರ ರೆಡ್ಡಿ.ವಿಜಯ ಬ್ಯಾಂಕ್, ಜಿಲ್ಲೆಯ 232 ಗ್ರಾಮ ಪಂಚಾಯಿತಿಗಳಲ್ಲಿಯೂ ವಿವಿಧ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗಾಗಿ `ಎಲೆಕ್ಟ್ರಾನಿಕ್ ಬೆನಿಫಿಟ್ ಟ್ರಾನ್ಸ್‌ಫರ್~ ಸೌಲಭ್ಯವನ್ನು ಒದಗಿಸುತ್ತಿದೆ. ಇಲ್ಲಿಯೂ ಟರ್ಮಿನಲ್ ಮೆಷಿನ್ ಮೂಲಕ ವ್ಯವಹರಿಸಲಾಗುತ್ತದೆ.ವಿಧವಾ, ಅಂಗವಿಕಲ, ವೃದ್ಧಾಪ್ಯ ಮುಂತಾದ ಮಾಸಾಶನದ ಗೌರವ ಧನವನ್ನು ಫಲಾನುಭವಿಗಳು, ಇನ್ನು ಮುಂದೆ ಬ್ಯಾಂಕ್ ಮೂಲಕ ಪಡೆಯಲಿದ್ದಾರೆ.ಮೈಕ್ರೊ ಇನ್‌ಷ್ಯೂರೆನ್ಸ್: ವಿಜಯ ಬ್ಯಾಂಕ್, ಭಾರತೀಯ ಜೀವವಿಮಾ ನಿಗಮ ಹಾಗೂ ಯುನೈಟೆಡ್ ಇನ್‌ಷ್ಯೂರೆನ್ಸ್ ಆಫ್ ಇಂಡಿಯ ಜತೆ ಮಾಡಿಕೊಂಡ ಒಪ್ಪಂದದಂತೆ ಮೈಕ್ರೊ ಇನ್‌ಷ್ಯೂರೆನ್ಸ್ ಪಾಲಿಸಿಗಳನ್ನೂ ಈ ಅತಿ ಸಣ್ಣ ಶಾಖೆಗಳಲ್ಲಿ ವಿತರಿಸಲಾಗುತ್ತದೆ.

 

ಇವು ರೈತರಿಗೆ ಅನುಕೂಲವಾಗುವಂಥ ಪಾಲಿಸಿಗಳಾಗಿದ್ದು, ಪ್ರತಿ ವರ್ಷ ಕನಿಷ್ಠ 15 ರೂಪಾಯಿ ಕಂತಿನ ಸೌಲಭ್ಯದ ಪಾಲಿಸಿಗಳೂ ಇವೆ ಎನ್ನುತ್ತಾರೆ ರೆಡ್ಡಿ.ಅತಿ ಸಣ್ಣ ಶಾಖೆಗಳನ್ನು ತೆರೆದಿರುವುದರಿಂದ 122 ಜನರಿಗೆ ಉದ್ಯೋಗ ಅವಕಾಶ ಲಭಿಸಿದೆ. ಅವರಿಗೆ ಗೌರವ ಧನವಾಗಿ 1200 ರೂಪಾಯಿ ನೀಡಲಾಗುತ್ತದೆ.

 

ಪ್ರತಿ ವ್ಯವಹಾರಕ್ಕೆ 50 ಪೈಸೆ ಕಮಿಷನ್ ನೀಡಲಾಗುತ್ತದೆ. ಈ ಶಾಖೆಗಳು, ಗ್ರಾಮೀಣ ಜನರಿಗೆ ಅನುಕೂಲವಾಗುವಂತೆ ಬೆಳಿಗ್ಗೆ 7 ರಿಂದ 11 ಹಾಗೂ ಸಂಜೆ 4 ರಿಂದ ರಾತ್ರಿ 8ರ ವರೆಗೆ ಕಾರ್ಯ ನಿರ್ವಹಿಸುತ್ತವೆ. ಜತೆಗೆ ಗ್ರಾಮೀಣ ಜನರಿಗೂ ಬ್ಯಾಂಕಿಂಗ್ ಸೌಲಭ್ಯ ಸಿಕ್ಕಂತಾಗುತ್ತಿದೆ.

                           

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.