ಬುಧವಾರ, ಏಪ್ರಿಲ್ 21, 2021
25 °C

ಮಂತ್ರಾಲಯ ಮಠದಿಂದ ಶ್ರೀರಂಗಂನಲ್ಲಿ ವೇದಶಾಸ್ತ್ರ ಗುರುಕುಲ:ಸುಯತೀಂದ್ರಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಶ್ರೀರಂಗಂ ಕ್ಷೇತ್ರದಲ್ಲಿ ವೇದಶಾಸ್ತ್ರ ಗುರುಕುಲವನ್ನು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ ಆರಂಭಿಸಲಾಗುವುದು ಎಂದು ಮಠದ ಶ್ರೀ ಸುಯತೀಂದ್ರತೀರ್ಥ ಶ್ರೀಪಾದಂಗಳವರು ಗುರುವಾರ ತಿಳಿಸಿದರು. ‘ದ್ವೈತ ಸಿದ್ಧಾಂತ ಮತ್ತು ಸಂಸ್ಕೃತ’ ಕುರಿತು ಮಂತ್ರಾಲಯ ಮಠದ ಆವರಣದಲ್ಲಿ ಹಮ್ಮಿಕೊಂಡಿರುವ ವಿದ್ವಾಂಸರ ರಾಷ್ಟ್ರ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

 

ಈ ಗುರುಕುಲಕ್ಕೆ ಶ್ರೀ ಸುಮತೀಂದ್ರತೀರ್ಥರ ವೇದಶಾಸ್ತ್ರವಿದ್ಯಾ ಗುರುಕುಲ ಎಂದು ಹೆಸರಿಡಲಾಗುವುದು. ಮುಂದಿನ ವರ್ಷವೇ ಈ ಗುರುಕುಲ ಆರಂಭಗೊಳ್ಳಲಿದೆ ಎಂದು ಅವರು ನುಡಿದರು.  ಸಂಸ್ಕೃತ ವಿದ್ಯಾಪೀಠದಲ್ಲಿ 1ರಿಂದ 5ನೇ ತರಗತಿಯವರೆಗೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ 500, 6ರಿಂದ ವ್ಯಾಸಂಗ ಮುಗಿಯುವವರೆಗೆ ತಲಾ 1 ಸಾವಿರ ಕೊಡಲಾಗುವುದು. ಉನ್ನತ ವೇದಾಧ್ಯಯನಕ್ಕೂ ಪ್ರೋತ್ಸಾಹ ನೀಡಲಾಗುವುದು.ಅಧ್ಯಯನ ಪೂರ್ಣಗೊಂಡ ಬಳಿಕ ಆಸಕ್ತರಿಗೆ ಶ್ರೀಮಠದಲ್ಲೇ ಉದ್ಯೋಗಾವಕಾಶ, ಸ್ವತಃ ಪಾಠ ಪ್ರವಚನ ಮಾಡಲು ಆಸಕ್ತರಿಗೆ ಪ್ರತಿ ತಿಂಗಳು 5 ಸಾವಿರದಂತೆ 20 ವರ್ಷ ಸಹಾಯಧನ ವಿತರಣೆ ಮಾಡಲಾಗುವುದೆಂದು ಅವರು ತಿಳಿಸಿದರು. ಈ ಸಮಾವೇಶದಲ್ಲಿ ಅಮೂಲ್ಯ ಗ್ರಂಥಗಳ ಮಹತ್ವ ಸಾರುವ ನಿಟ್ಟಿನಲ್ಲಿ ಗಮನಾರ್ಹ ಚರ್ಚೆಗಳಾಗಲಿ. ಭಿನ್ನತೆಯಲ್ಲೂ ಸಮಾನತೆ ಇರಬೇಕು ಎಂದು ನುಡಿದರು. ದೇಶದ ವಿವಿಧ ಭಾಗಗಳಿಂದ ಸುಮಾರು 200ಕ್ಕೂ ಹೆಚ್ಚು ವಿದ್ವಾಂಸರು ಪಾಲ್ಗೊಂಡಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.  ಸುಬ್ರಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥರು, ಮಾಧ್ವತೀರ್ಥಮಠದ ವಿದ್ಯಾಸಾಗರ ಮಾಧವ ತೀರ್ಥ ಸ್ವಾಮೀಜಿ, ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಮುಖ್ಯಸ್ಥ ಡಾ.ವಿ.ಆರ್ ಪಂಚಮುಖಿ, ವಿದ್ವಾನ್ ಎನ್ ವಾದಿರಾಜಾಚಾರ್ಯ, ಶ್ರೀಮಠದ ಪೀಠಾಧಿಪತಿಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.