ಭಾನುವಾರ, ಏಪ್ರಿಲ್ 11, 2021
23 °C

ಮಂತ್ರಿಗಳ ಕಚೇರಿಯಲ್ಲಿ ಹೋಮ, ವಾಸ್ತು ನಿಷಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಚಿವರು ಮತ್ತು ಅದೇ ದರ್ಜೆಯ ಸ್ಥಾನಮಾನ ಹೊಂದಿರುವವರು, ಸರ್ಕಾರ ತಮಗೆ ನೀಡುವ ಕಚೇರಿ ಹಾಗೂ ವಸತಿ ಕಟ್ಟಡಗಳನ್ನು `ವಾಸ್ತು ಹೆಸರಿನಲ್ಲಿ ನವೀಕರಿಸುವುದಕ್ಕೆ' ನಿಷೇಧ ಹೇರುವ ಮಸೂದೆ ವಿಧಾನಮಂಡಲದ ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಲಿದೆ.

ಅಲ್ಲದೆ ಇವರುಗಳು ಸರ್ಕಾರಿ ಕಚೇರಿಗಳಲ್ಲಿ ಹೋಮ, ಹವನ, ಪೂಜೆ ಮತ್ತಿತರ ಧಾರ್ಮಿಕ ಚಟುವಟಿಕೆಯನ್ನೂ ನಡೆಸದಂತೆ ಈ ಮಸೂದೆ ನಿರ್ಬಂಧ ಹೇರುತ್ತದೆ.

ಮಂತ್ರಿಗಳಿಗೆ ನೀಡುವ ಸರ್ಕಾರಿ ಕಟ್ಟಡಗಳಲ್ಲಿ ಮನಸೋ ಇಚ್ಛೆ ನವೀಕರಣ ಕಾಮಗಾರಿ ಕೈಗೊಂಡು ಅವುಗಳ ಸ್ವರೂಪ ಬದಲಿಸುವುದು ಮತ್ತು ಕಚೇರಿಗಳಲ್ಲಿ ಪೂಜೆ, ಹೋಮ, ಹವನ ಮತ್ತಿತರ ಧಾರ್ಮಿಕ ಕಾರ್ಯಗಳನ್ನು ನಡೆಸುವ ಮೂಲಕ ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದನ್ನು ನಿಯಂತ್ರಿಸುವುದು ಇದರ ಉದ್ದೇಶ. ಈ ಕಾರಣಕ್ಕಾಗಿ `ಕರ್ನಾಟಕ ವಿಧಾನಮಂಡಲ ಸಂಬಳಗಳು, ವಿಶ್ರಾಂತಿ ವೇತನಗಳು ಮತ್ತು ಇತರೆ ಭತ್ಯೆಗಳ ಕಾಯ್ದೆ-1956'ಕ್ಕೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ.

ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನ ಕುರಿತ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, `ಪರಿಷತ್‌ನಲ್ಲಿನ ಜೆಡಿಎಸ್ ನಾಯಕ ಎಂ.ಸಿ.ನಾಣಯ್ಯ ಅವರು ಖಾಸಗಿ ಮಸೂದೆಯ ರೂಪದಲ್ಲಿ ಈ ತಿದ್ದುಪಡಿ ಮಂಡಿಸಲು ಮುಂದಾಗಿದ್ದರು. ಆದರೆ ಸರ್ಕಾರವೇ ಈಗ ಮಸೂದೆ ಮಂಡಿಸಲು ನಿರ್ಧರಿಸಿದೆ' ಎಂದರು.

ವಾಸ್ತು ಹೆಸರಿನಲ್ಲಿ ಸರ್ಕಾರಿ ಕಟ್ಟಡಗಳ ನವೀಕರಣ ಮತ್ತು ಸಚಿವರ ಕಚೇರಿಗಳಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸುವುದನ್ನು ತಡೆಯುವ ಉದ್ದೇಶದಿಂದ ನಾಣಯ್ಯ ಈ ಮಸೂದೆಯನ್ನು ಸಿದ್ಧಪಡಿಸಿದ್ದರು. ಅದರಲ್ಲಿನ ಅಂಶಗಳನ್ನೂ ಸೇರಿಸಿಕೊಂಡು ಸರ್ಕಾರ ಹೊಸದಾಗಿ ಕರಡು ಸಿದ್ಧಪಡಿಸಿದೆ.

ಸಭಾಪತಿ, ಸಭಾಧ್ಯಕ್ಷ, ಸಚಿವರು, ವಿರೋಧ ಪಕ್ಷದ ನಾಯಕರು ಮತ್ತು ಸಚೇತಕರಿಗೆ ಸರ್ಕಾರದ ವತಿಯಿಂದ ಒದಗಿಸುವ ಕಟ್ಟಡಗಳನ್ನು (ಕಚೇರಿ ಮತ್ತು ಬಂಗಲೆಗಳು) ದುರಸ್ತಿಗಳ ನೆಪದಲ್ಲಿ ಬದಲಾವಣೆ ಮಾಡುವುದಕ್ಕೂ ತಡೆ ಹಾಕಲು ಸರ್ಕಾರ ಯೋಚಿಸಿದೆ.ಸಚಿವರು ಮತ್ತು ಅವರಿಗೆ ಸರಿಸಮನಾದ ಸ್ಥಾನಮಾನ ಹೊಂದಿರುವವರಿಗೆ ಸರ್ಕಾರ ಒದಗಿಸುವ ಕಚೇರಿಗಳಲ್ಲಿ ಸಂವಿಧಾನದ ಜಾತ್ಯತೀತ ತತ್ವಕ್ಕೆ ವಿರುದ್ಧವಾದ ರೀತಿಯಲ್ಲಿ ಪೂಜೆ, ಹೋಮ, ಹವನ ಮತ್ತಿತರ ಧಾರ್ಮಿಕ ಕಾರ್ಯ ನಡೆಸುವುದು ಟೀಕೆಗೆ ಗುರಿಯಾಗಿತ್ತು.  ಸಂವಿಧಾನದ ಆಶಯಕ್ಕೆ ಅಪಚಾರ ತಡೆಯುವುದು, ನವೀಕರಣದಿಂದ ಬೊಕ್ಕಸಕ್ಕೆ ಹೊರೆಯಾಗುವುದನ್ನು ತಪ್ಪಿಸುವುದು ಮಸೂದೆಯ ಉದ್ದೇಶ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.