ಗುರುವಾರ , ಜನವರಿ 30, 2020
22 °C
ಭಿಕ್ಷೆ ಬೇಡಿ ತಾಯಿಯ ಅಂತ್ಯಕ್ರಿಯೆ

ಮಕ್ಕಳನ್ನು ಆಂಧ್ರಕ್ಕೆ ಕಳುಹಿಸಿದ ಚಾಲಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳನ್ನು ಆಂಧ್ರಕ್ಕೆ ಕಳುಹಿಸಿದ ಚಾಲಕರು

ಬೆಂಗಳೂರು: ಭಿಕ್ಷೆ ಬೇಡಿ ತಾಯಿಯ ಅಂತ್ಯಸಂಸ್ಕಾರ ಮಾಡಿದ ಮಕ್ಕಳನ್ನು ಆಂಬುಲೆನ್ಸ್‌ ಚಾಲಕರು ಸೋಮವಾರ ಮಧ್ಯಾಹ್ನ ತಂದೆಯೊಂದಿಗೆ ಆಂಧ್ರಪ್ರದೇಶಕ್ಕೆ ಕಳುಹಿಸಿದ್ದಾರೆ.ಅನಾರೋಗ್ಯದ ಕಾರಣದಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ದುರ್ಗಮ್ಮ ಎಂಬ ಮಹಿಳೆ ಶನಿವಾರ ರಾತ್ರಿ ಕೊನೆಯುಸಿರೆಳೆದರು. ತಾಯಿಯ ಅಂತ್ಯಸಂಸ್ಕಾರಕ್ಕೆ ಹಣ ಹೊಂದಿಸಲು ಹಿರಿಯ ಮಗಳು  ನಿರ್ಮಲಾ ಎರಡು ತಿಂಗಳ ಕೂಸನ್ನು ಕಂಕುಳಲ್ಲಿ ಇಟ್ಟುಕೊಂಡು ಆಸ್ಪತ್ರೆ ಆವರಣದಲ್ಲಿ ಭಿಕ್ಷೆ ಬೇಡುತ್ತಿದ್ದಳು. ಈ ವೇಳೆ ಆಕೆಯ ನೆರವಿಗೆ ಧಾವಿಸಿದ ತ್ರಿವಿಕ್ರಮ ಮಹದೇವ್‌ ಎಂಬುವರು ಆಂಬುಲೆನ್ಸ್ ಚಾಲಕರಿಂದ ಹಾಗೂ ರೋಗಿಗಳಿಂದ ಹಣ ಸಂಗ್ರಹಿಸಿ ಮೈಸೂರು ರಸ್ತೆಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಿಸಿದ್ದರು.‘ಭಾನುವಾರ ಬೆಳಿಗ್ಗೆ ನನ್ನ ಬಳಿ ಬಂದ ಮಕ್ಕಳು, ತಾಯಿಯ ಅಂತ್ಯ­ಕ್ರಿಯೆ­ಗೆ ನೆರವು ನೀಡುವಂತೆ ಬೇಡಿ­ಕೊಂಡರು. ಇದನ್ನು ಸ್ಥಳದಲ್ಲಿದ್ದ ಆಂಬು­ಲೆನ್ಸ್ ಚಾಲಕರ ಹಾಗೂ ರೋಗಿಗಳ ಗಮನಕ್ಕೆ ತಂದಾಗ ಅವರು ಕೈಲಾದ ಸಹಾಯ ಮಾಡಿದರು. ಸಂಜೆ ವೇಳೆಗೆ ರೂ 800 ಸಂಗ್ರಹವಾಯಿತು. ಮೈಸೂರು ರಸ್ತೆಯ ಚಿತಾಗಾರದಲ್ಲಿ ದುರ್ಗಮ್ಮ ಅವರ ಅಂತ್ಯಕ್ರಿಯೆ ಮಾಡಲಾಯಿತು. ಸೋಮವಾರ ಕೂಡ ₨ 700 ಸಂಗ್ರಹವಾಯಿತು. ಆ ಹಣದಲ್ಲಿ ತಂದೆ– ಮಕ್ಕಳನ್ನು ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಂಧ್ರ ಬಸ್‌ ಹತ್ತಿಸಲಾಯಿತು’ ಎಂದು ತ್ರಿವಿಕ್ರಮ ಮಹದೇವ್‌ ಅವರು ತಿಳಿಸಿದರು.ಆಂಧ್ರಪ್ರದೇಶದ ನಂದ್ಯಾಲ ಗ್ರಾಮ­ದ ದಂಪತಿ, ಮಕ್ಕಳಾದ ನಿರ್ಮಲಾ (11), ನಾಗವಲ್ಲಿ (5) ಹಾಗೂ ಎರಡು ತಿಂಗಳ ಮಗುವಿನೊಂದಿಗೆ ಹಾರೋಹಳ್ಳಿಯಲ್ಲಿ ವಾಸವಾಗಿದ್ದರು. ಮಗುವಿಗೆ ಜನ್ಮ ನೀಡಿದ ನಂತರ ದುರ್ಗಮ್ಮ ಅವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿತ್ತು.

ಪ್ರತಿಕ್ರಿಯಿಸಿ (+)