ಮಂಗಳವಾರ, ಮೇ 11, 2021
25 °C

ಮಕ್ಕಳನ್ನು ಜೀತಕ್ಕೆ ಕಳಿಸದಿರಿ: ತೋಂಟದ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ದೇಶದ ಸಂಪತ್ತು ಆಗಿರುವ ಮಕ್ಕಳನ್ನು ಜೀತಕ್ಕೆ ಬಿಡುವುದು ಸರಿಯಲ್ಲ ಎಂದು ತೋಂಟದಾರ್ಯ ಮಠದ ಡಾ.ಸಿದ್ದಲಿಂಗ ಸ್ವಾಮೀಜಿ ಹೇಳಿದರು.ನಗರದ ತೋಂಟದಾರ್ಯ ಮಠದ ಶಿವಾನುಭವದಲ್ಲಿ ನಡೆದ ವಿಶ್ವ ಮಕ್ಕಳ ಹಕ್ಕುಗಳ ದಿನಾಚರಣೆ ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಎಷ್ಟೋ ವರ್ಷಗಳ ಕಾಲ ತಂದೆಯೇ ಮಕ್ಕಳನ್ನು ಜೀತಕ್ಕೆ ಬಿಟ್ಟಿರುವ ಉದಾಹರಣೆ ಇದೆ. ಮಕ್ಕಳಿಗೆ ಶಿಕ್ಷಣ ಕೊಡಿಸಿ ಉತ್ತಮ ಪ್ರಜೆಯಾಗಿ ಮಾಡಬೇಕು. ಮಕ್ಕಳಿಗೆ ತಮ್ಮದೆ ಆದ ಹಕ್ಕುಗಳಿವೆ. ಯೋಗ್ಯ ಪರಿಸರ, ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡುವುದರಿಂದ  ಭವಿಷ್ಯ ಸುಧಾರಿಸಲು ಸಾಧ್ಯ. ಮಕ್ಕಳ ಮೇಲೆ ಆಗುತ್ತಿರುವ ಅನ್ಯಾಯ ತಡೆಗಟ್ಟಬೇಕು ಎಂದು ತಿಳಿಸಿದರು.ಬಾಲ್ಯದಲ್ಲಿ ಮಕ್ಕಳಿಗೆ ಅವರ ತಂದೆ -ತಾಯಿಯಿಂದ ದೊರೆತ ಪ್ರೇರಣೆ, ಸಂಸ್ಕಾರ ಮಕ್ಕಳ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುವುದೆಂಬುದಕ್ಕೆ ನಚಿಕೇತ, ಸತ್ಯಹರಿಶ್ಚಂದ್ರ, ಅಭಿಮನ್ಯು, ಛತ್ರಪತಿ ಶಿವಾಜಿ, ಸುಭಾಸಚಂದ್ರ ಬೋಸ್, ಮಹಾತ್ಮಾ ಗಾಂಧಿ ಅವರಂತಹ ಮಹನೀಯರ ಜೀವನ ಸಾಧನೆಗಳು ನಿದರ್ಶನವಾಗಿವೆ ಎಂದು ಹೇಳಿದರು.ಹಿರಿಯ ಸ್ವತಂತ್ರ ಸೇನಾನಿ ದಿ.ವೀರಪ್ಪ ಕೌತಾಳ ಅವರ ಸ್ಮರಣಾರ್ಥ ನಡೆದ ಶಿವಾನುಭವ ಭಕ್ತಿಸೇವೆ ಹಿನ್ನೆಲೆಯಲ್ಲಿ ಅವರ ಮಕ್ಕಳಾದ ವೈಜನಾಥ ಕೌತಾಳ ಸಹೋದರರು, ಪರಿವಾರದರಿಗೆ ಆರ್ಶೀವದಿಸಿದರು. ಮಕ್ಕಳ ಹಕ್ಕುಗಳ ಕುರಿತು ಯರೇಹಂಚಿನಾಳ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಅಶೋಕ ಗಿರಡ್ಡಿ ಉಪನ್ಯಾಸ ನೀಡಿದರು.  ಮಕ್ಕಳಿಗೆ ನ್ಯಾಯಯುತವಾಗಿ ಸಿಗಬೇಕಾದ ಎಲ್ಲ ಸೌಲಭ್ಯಗಳ ನೀಡಿಕೆಗೆ ಮುಂದಾಗಬೇಕೆಂದರು. ಮಕ್ಕಳ ಅನ್ಯಾಯ, ಶೋಷಣೆ ಕಂಡು ಬಂದರೆ ಹಿಂಜರಿಕೆ ಇಲ್ಲದೆ ತಡೆಯಬೇಕೆಂದರು.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಆಧ್ಯಕ್ಷ ಜಿ.ಸಿ.ರೇಷ್ಮೆ ಮಾತನಾಡಿದರು. ಜ್ಯೋತಿ ಪರಪ್ಪ ಕೌಜಗೇರಿ, ದೇವಕ್ಕಿ ಪರಪ್ಪ ಕೌಜಗೇರಿ ಧರ್ಮಗ್ರಂಥ ಪಠಣ ನಡೆಯಿತು. ಭಕ್ತಿಸೇವೆಯನ್ನು ವೈಜನಾಥ ಕೌತಾಳ ಕುಟುಂಬ ವಹಿಸಿದ್ದರು.ಲಿಂಗಾಯತ ಪ್ರಗತಿಶೀಲ ಸಂಘದ ಕಾರ್ಯದರ್ಶಿ ವೀರಣ್ಣ ಹೊನಗಣ್ಣವರ ಸ್ವಾಗತಿಸಿದರು.ಶಿವಾನುಭವ ಸಮಿತಿ ಅಧ್ಯಕ್ಷ ಪ್ರೊ. ಎಸ್.ಎನ್.ಆದಿ  ನಿರೂಪಿಸಿದರು. ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ, ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಶಿವಲೀಲಾ ಕುರಡಗಿ, ಸಹ ಕಾರ್ಯದರ್ಶಿ ಗುರುಬಸವಲಿಂಗ ತಡಸದ, ಕೋಶಾಧ್ಯಕ್ಷ ಪ್ರಭಯ್ಯ ಹಿರೇಮಠ  ಹಾಜರಿದ್ದರುಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ 95 ಹಾಗೂ ಸಿಇಟಿಯಲ್ಲಿ 986ನೇ ರ‌್ಯಾಂಕ್ ಪಡೆದ ಐಶ್ಚರ್ಯಳನ್ನು ಸನ್ಮಾನಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.