ಮಂಗಳವಾರ, ಮೇ 24, 2022
26 °C

ಮಕ್ಕಳಿಗೆ ಉಚಿತ ನೋಟಬುಕ್ ವಿತರಿಸಿದ ಹಾಸ್ಯ ನಟ ಟೆನಿಸ್ ಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಸಾವಿರಾರು ಮಕ್ಕಳಿಗೆ 4 ವರ್ಷಗಳಿಂದ ಪ್ರತಿ ವರ್ಷ 30 ಸಾವಿರ ಉಚಿತ ನೋಟ್‌ಬುಕ್ ವಿತರಿಸುತ್ತಿರುವ ಉದ್ಯಮಿ ಹಾಗೂ ಜಾತ್ಯತೀತ ಜನತಾ ದಳದ ಹಿರಿಯ ಧುರೀಣ ಮಲ್ಲಿಕಾರ್ಜುನ ಗಾಜರೆ ಅವರ ಸಮಾಜ ಸೇವೆ ಶ್ಲಾಘನೀಯ ಎಂದು ಖ್ಯಾತ ಹಾಸ್ಯನಟ ಟೆನಿಸ್ ಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದರು.ಮಂಗಳವಾರ ಇಲ್ಲಿನ ಚಂದಾಪುರದ ಹಾರಕೂಡ ಚನ್ನಬಸವೇಶ್ವರ ಪ್ರೌಢ ಶಾಲೆಯ ನೂರಾರು ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಿಸಿ ಅವರು ಮಾತನಾಡಿದರು. ಮಕ್ಕಳಿಗೆ ಉಪಯೋಗವಾಗಲಿ ಎಂದು ಸರ್ಕಾರಿ ಹಾಗೂ ಖಾಸಗಿ ಶಾಲೆ ಎಂಬ ಭೇದ ಎಣಿಸದೇ, ಎಲ್ಲಾ ಮಕ್ಕಳನ್ನು ಸಮಾನವಾಗಿ ಕಂಡು ತಮ್ಮ ಶಿಕ್ಷಣ ಸಂಸ್ಥೆಯ ವತಿಯಿಂದ ನೋಟ್ ಬುಕ್ ವಿತರಿಸುತ್ತಿರುವುದು ಸಂತಸದ ಸಂಗತಿ ಎಂದು ನುಡಿದ ಟೆನಿಸ್ ಕೃಷ್ಣ, ಇಂಥ ಪರೋಪಕಾರದ ಸೇವೆಯನ್ನು ಮುಂದುವರಿಸಬೇಕೆಂದು ಸಲಹೆ ಮಾಡಿದರು.ನೋಟ್‌ಬುಕ್‌ಗಳ ದಾಸೋಹಿ ಮಲ್ಲಿಕಾರ್ಜುನ ಗಾಜರೆ ಮಾತನಾಡಿ `ನಾನು ಸ್ವಂತ ಪರಿಶ್ರಮದಿಂದ ಮೇಲೆ ಬಂದಿದ್ದೇನೆ. ಶಿಕ್ಷಣವನ್ನು ಪ್ರತಿಯೊಬ್ಬ ಪಡೆಯಲೇಬೇಕು. ಅದಕ್ಕೆ ಬಡತನ ಅಡ್ಡಿಯಾಗಬಾರದು. ಹೀಗಾಗಿ ಮಕ್ಕಳಿಗೆ ನೆರವಾಗಲು ನಾನೇ ಸ್ಥಾಪಿಸಿದ ಗಾಜರೆ ಎಜ್ಯುಕೇಶನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ 30 ಸಾವಿರ ನೋಟ್ ಪುಸ್ತಕ ವಿತರಿಸುತ್ತಿದ್ದೇನೆ~ ಎಂದರು.ಜೆಡಿಎಸ್ ಮುಖಂಡ ಗೋಪಾಲರಾವ್ ಕಟ್ಟೀಮನಿ, ಹಾರಕೂಡ ಚನ್ನಬಸವೇಶ್ವರ ಸೇವಾ ಸಮಿತಿ ಟ್ರಸ್ಟ್ ಕೋಶಾಧ್ಯಕ್ಷ ಚನ್ನಬಸಪ್ಪ ನಾವದಗಿ ಮಾತನಾಡಿದರು.ಗುರುದತ್ತ ಎಂ. ಗಾಜರೆ, ವೀರಪ್ಪ ನಾಯಕ್, ಹಣಮಂತರಾವ್ ರಾಜಗಿರಾ, ಸಲೀಮ್ ಸೌದಾಗರ್, ಸುರೇಶ ಬಳಂಕರ್, ಹಣಮಂತ ಪೂಜಾರಿ, ಜಗನ್ನಾಥ ಪಾಟೀಲ್, ಗೀತಾರಾಣಿ ಐನೋಳ್ಳಿ ಇತರರು ಇದ್ದರು.ಇದೇ ಮೊದಲ ಬಾರಿಗೆ ಹಾರಕೂಡ ಶಾಲೆಗೆ ಆಗಮಿಸಿದ ಹಾಸ್ಯನಟ ಟೆನಿಸ್ ಕೃಷ್ಣ ಅವರನ್ನು ಚನ್ನಬಸಪ್ಪ ನಾವದಗಿ ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಿದರು.ಶಿವಕುಮಾರ ಬಿರಾದಾರ ಸ್ವಾಗತಿಸಿದರು. ಜೆಡಿಎಸ್ ಯುವ ಅಧ್ಯಕ್ಷ ಶೇಖ್ ಭಕ್ತಿಯಾರ್ ಜಹಗೀರದಾರ್ ಅವರು ನಿರೂಪಿಸಿದರು. ಮೌಲಾನಾ ಪಟೇಲ್ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.