ಶನಿವಾರ, ಮಾರ್ಚ್ 6, 2021
19 °C
ಟೆಂಡರ್‌ ನೀಡಿಕೆಯಲ್ಲಿನ ಗೊಂದಲ ಕಾರಣ?

ಮಕ್ಕಳಿಗೆ ತಲುಪದ ‘ಸಮವಸ್ತ್ರ ಭಾಗ್ಯ’

ಮನೋಜಕುಮಾರ್‌ ಗುದ್ದಿ Updated:

ಅಕ್ಷರ ಗಾತ್ರ : | |

ಮಕ್ಕಳಿಗೆ ತಲುಪದ ‘ಸಮವಸ್ತ್ರ ಭಾಗ್ಯ’

ಹುಬ್ಬಳ್ಳಿ: ಮೈಸೂರು, ಬೆಂಗಳೂರು ಹಾಗೂ ಕಲಬುರ್ಗಿ ವಲಯದ ಶಾಲಾ ಮಕ್ಕಳು ಸರ್ಕಾರ ನೀಡಿದ ಸಮವಸ್ತ್ರ ಹಾಕಿಕೊಂಡು ಠಾಕುಠೀಕಾಗಿ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದರೆ, ಬೆಳಗಾವಿ ವಲಯದ 16.58 ಲಕ್ಷ ಮಕ್ಕಳಿಗೆ ಮಾತ್ರ ಹೊಸ ಸಮವಸ್ತ್ರ ಹಾಕಿಕೊಳ್ಳುವ ಅದೃಷ್ಟ ಇನ್ನೂ ಬಂದಿಲ್ಲ.ಟೆಂಡರ್‌ ಕರೆಯುವಲ್ಲಿನ ಗೊಂದಲವೇ ಸಮವಸ್ತ್ರ ಪೂರೈಕೆ ವಿಳಂಬವಾಗಲು ಕಾರಣ ಎಂಬ ಆರೋಪ ನೇಕಾರರ ಸಂಘಟನೆಗಳಿಂದ ಕೇಳಿ ಬರುತ್ತಿದೆ. ಸುಮಾರು 45 ಲಕ್ಷ ಮೀಟರ್‌ ಬಟ್ಟೆ ಬೆಳಗಾವಿ ವಲಯದ ಶಾಲಾ ಮಕ್ಕಳಿಗೆ ಅಗತ್ಯವಿದ್ದು, ಇಷ್ಟು ಬೃಹತ್‌ ಪ್ರಮಾಣದ ಬಟ್ಟೆಯನ್ನು ಪೂರೈಸಲು ಜನವರಿ, ಫೆಬ್ರುವರಿಯಲ್ಲೇ ಪ್ರಯತ್ನ ಆರಂಭವಾಗಿತ್ತು. ಆದರೆ, ಬಟ್ಟೆ ಪೂರೈಕೆಯ ಹೊಣೆಯನ್ನು ಯಾರಿಗೆ ನೀಡಬೇಕು ಎಂಬ ಗೊಂದಲದಲ್ಲೇ ಕಾಲ ಕಳೆದ ಸರ್ಕಾರ, ಇದಕ್ಕಾಗಿ ಸೂಕ್ತ ಸಿದ್ಧತೆ ಮಾಡಿಕೊಂಡಿರಲಿಲ್ಲ.‘ನಿತ್ಯ ಶಾಲೆಗೆ ಬರುವ ಮಕ್ಕಳಿಗೆ ಸಮವಸ್ತ್ರ ನಾಳೆ ಬರುತ್ತದೆ, ನಾಡಿದ್ದು ಬರುತ್ತದೆ ಎಂದು ಹೇಳಿ ಹೇಳಿ ಸಾಕಾಗಿ ಹೋಗಿದೆ. ಮಕ್ಕಳನ್ನು ಹೇಗಾದರೂ ಸುಮ್ಮನಿರಿಸಬಹುದು. ಆದರೆ, ಅವರ ಪಾಲಕರೂ ಈ ಬಗ್ಗೆ ವಿಚಾರಿಸುತ್ತಿದ್ದಾರೆ’ ಎಂದು ಧಾರವಾಡ ಜಿಲ್ಲೆಯ ಹಲವು ಶಿಕ್ಷಕರು ಅಲವತ್ತುಕೊಳ್ಳುತ್ತಿದ್ದಾರೆ.‘ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಈಚೆಗಷ್ಟೇ ವರ್ಗಾವಣೆ ಹೊಂದಿದ ಹಿರಿಯ ಅಧಿಕಾರಿಯೊಬ್ಬರು ಇಡೀ ಸಮಸ್ಯೆಗೆ ಕಾರಣರಾಗಿದ್ದು, ಎಷ್ಟೇ ಮನವಿ ಮಾಡಿದರೂ ಬೆಳಗಾವಿ ವಲಯದ ಮಕ್ಕಳಿಗೆ ವಿತರಿಸುವ ಬಟ್ಟೆ  ಸಿದ್ಧಪಡಿಸುವ ಹೊಣೆಯನ್ನು ನಮಗೆ ನೀಡಲೇ ಇಲ್ಲ’ ಎಂದು ಅಖಿಲ ಕರ್ನಾಟಕ ಕೈಮಗ್ಗ ನೇಕಾರರ ಸಂಘದ ಉಪಾಧ್ಯಕ್ಷ ಎನ್‌.ಜೆ. ಮಾಳವದೆ ಆಕ್ರೋಶ ವ್ಯಕ್ತಪಡಿಸುತ್ತಾರೆ.ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಮಹಾರಾಷ್ಟ್ರದ ವಿದ್ಯುತ್‌ ಮಗ್ಗಗಳಲ್ಲಿ ತಯಾರಾದ ಬಟ್ಟೆಗಳನ್ನು ಖರೀದಿಸಲು ಸರ್ಕಾರ ವಿನಾಕಾರಣ ಆಸಕ್ತಿ ವಹಿಸುತ್ತಿದೆ. ನಮಗೆ ಟೆಂಡರ್‌ ನೀಡಿ ಎಂದು ಮನವಿ ಮಾಡಿಕೊಂಡರೂ ಸರ್ಕಾರ ಓಗೊಟ್ಟಿಲ್ಲ. ಜನವರಿ, ಫೆಬ್ರುವರಿಯಲ್ಲಿ ನಮಗೆ ಬಟ್ಟೆ ಪೂರೈಕೆಯ ಜವಾಬ್ದಾರಿಯನ್ನು ವಹಿಸಿದ್ದರೆ ಇಷ್ಟೊತ್ತಿಗಾಗಲೇ ಅಗತ್ಯವಿದ್ದಷ್ಟು ಸಮವಸ್ತ್ರಗಳನ್ನು ನಾವು ಪೂರೈಕೆ ಮಾಡುತ್ತಿದ್ದೆವು.ಆದರೆ, ವಿದ್ಯುತ್‌ ಮಗ್ಗಗಳಿಂದ ಬಟ್ಟೆ ತಯಾರಿಸಿ ತರುವ ವ್ಯವಹಾರದಲ್ಲಿ ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ‘ಲಾಭ’ ದೊರೆಯುತ್ತಿದೆ. ಹಾಗಾಗಿ ಮಹಾರಾಷ್ಟ್ರದ ವಿದ್ಯುತ್‌ ಮಗ್ಗಗಳಲ್ಲಿ ತಯಾರಾದ ಬಟ್ಟೆಗಳನ್ನು ತರಲು ಉತ್ಸುಕರಾಗಿದ್ದಾರೆ’ ಎಂದು ಅವರು ಆರೋಪಿಸಿದರು.ಮೈಸೂರು, ಕಲಬುರ್ಗಿ ವಲಯದ ಶಾಲಾ ಮಕ್ಕಳಿಗೆ ಬಟ್ಟೆ ಪೂರೈಕೆಯ ಹೊಣೆಯನ್ನು ನಮಗೆ ವಹಿಸಲಾಗಿತ್ತು. ಅದನ್ನು ಅಚ್ಚುಕಟ್ಟಾಗಿ ಮಾಡಿದ್ದೇವೆ. ಕೆಲ ಅಧಿಕಾರಿಗಳ ಮಾತು ಕೇಳಿದ ಸರ್ಕಾರ, ಮಹಾರಾಷ್ಟ್ರದಿಂದ ಬಟ್ಟೆ ತರಿಸಲು ಆಸಕ್ತಿ ವಹಿಸಿದೆ. ಅಲ್ಲಿನ ಬಟ್ಟೆ ತಯಾರಕರಿಗೆ ಸೂಕ್ತ ಆದೇಶ ರವಾನೆಯಾಗದ ಕಾರಣ ಮಕ್ಕಳಿಗೆ ಅತ್ತ ಸಮವಸ್ತ್ರವೂ ಇಲ್ಲ. ಇತ್ತ ನೇಕಾರರಿಗೆ ಕೆಲಸವೂ ಇಲ್ಲದಂತಾಗಿದೆ’ ಎಂದು ಟೀಕಿಸಿದರು.‘ಒಂದು ಅಂದಾಜಿನ ಪ್ರಕಾರ ಧಾರವಾಡ ಜಿಲ್ಲೆಯೊಂದರಲ್ಲೇ 1,47,595 ಮಕ್ಕಳು ಓದುತ್ತಿದ್ದು, ಅಷ್ಟು ಪ್ರಮಾಣದ ಸಮವಸ್ತ್ರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪೂರೈಕೆ ಮಾಡಬೇಕಿದೆ. ಆದರೆ, ಇನ್ನೊಂದು ವಾರದಲ್ಲಿ ಬಟ್ಟೆಗಳು ದೊರೆಯಲಿವೆ ಎಂಬ ಹುಸಿ ಭರವಸೆ ನೀಡುವುದೇ ಆಗಿದೆ. ಇಲಾಖೆ ಯಾವಾಗ ಸಮವಸ್ತ್ರ ಪೂರೈಕೆ ಮಾಡಲಿದೆ ಎಂಬ ಬಗ್ಗೆ ಕಿಂಚಿತ್‌ ಸುಳಿವೂ ನೀಡುತ್ತಿಲ್ಲ’ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.ಸಮವಸ್ತ್ರ ಖರೀದಿಸುವ ಹೊಣೆ ನಮ್ಮದಲ್ಲ.  ಶಿಕ್ಷಣ ಇಲಾಖೆಯ ಆಯುಕ್ತರು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ನಮಗೆ ಲಭ್ಯವಾದ ಮಾಹಿತಿ ಪ್ರಕಾರ, ಇನ್ನೊಂದು ತಿಂಗಳಲ್ಲಿ ಸಮವಸ್ತ್ರ ಪೂರೈಕೆಯಾಗಲಿದೆ

ವೀರಣ್ಣ ತುರಮರಿ

ಹೆಚ್ಚುವರಿ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಳಗಾವಿ ವಲಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.