ಬುಧವಾರ, ಜನವರಿ 22, 2020
28 °C

ಮಕ್ಕಳಿಗೆ ಸೌಲಭ್ಯ ಅನುಷ್ಠಾನ ವಿಫಲ: ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಸರ್ಕಾರ ಮಕ್ಕಳ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದರೂ ಅದು ಸರಿಯಾಗಿ ಅನುಷ್ಠಾನವಾಗದಿರುವುದು ಶೋಚನೀಯ ಎಂದು ನಗರಸಭೆ ಉಪಾ­ಧ್ಯಕ್ಷ ಅಮ್ಜದ್‌ ಪಟೇಲ್‌ ಹೇಳಿದರು. ನಗರದ ಸಾಹಿತ್ಯ ಭವನದಲ್ಲಿ ಮಂಗಳವಾರ ಜಿಲ್ಲಾ ಜನಪರ ವೇದಿಕೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಅಪೌಷ್ಟಿಕತೆ, ಬಾಲಕಾರ್ಮಿಕತನ, ಮತ್ತಿತರ ಪಿಡುಗುಗಳಿಂದ ಹೂಗಳಂಥ ಮಕ್ಕಳು ಅರಳುವ ಮುನ್ನವೇ ಬಾಡುತ್ತಿ­ದ್ದಾರೆ. ಸಾಂಸಾರಿಕ ಭಿನ್ನಾಭಿಪ್ರಾಯ­ಗಳಿಗೆ ಮಕ್ಕಳು ಬಲಿಪಶುವಾಗುತ್ತಿ­ದ್ದಾರೆ. ಇದರ ನಡುವೆಯೂ ಮಕ್ಕಳ ರಕ್ಷಣೆ, ಪೋಷಣೆಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಹಣ ವೆಚ್ಚ ಮಾಡುತ್ತಿದೆ. ಆದರೆ, ಅದು ಸರಿಯಾಗಿ ಬಳಕೆಯಾಗುತ್ತಿಲ್ಲ. ಇದು ಬೇಸರದ ಸಂಗತಿ ಎಂದು ನುಡಿದರು.ಮಕ್ಕಳು, ಮಹಿಳೆಯರ ರಕ್ಷಣೆ ಮತ್ತು ಕಾಳಜಿಯ ಉದ್ದೇಶದೊಂದಿಗೆ ಜಿಲ್ಲಾ ಜನಪರ ವೇದಿಕೆ ಅಸ್ತಿತ್ವಕ್ಕೆ ಬಂದಿರುವುದು ಶ್ಲಾಘನೀಯ.

ಈ ಸಂಸ್ಥೆಯ ಉದ್ದೇಶ ಹಾಗೂ ಕಾರ್ಯಕ್ರಮಗಳು ನಿಗದಿತ ಸಮುದಾಯವನ್ನು ತಲುಪಲಿ ಎಂದು ಹಾರೈಸಿದರು. ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಸವರಾಜ ಶೀಲವಂತರ ಮಾತನಾಡಿ, ಸರ್ಕಾರ ಕೇವಲ ತೋರಿಕೆಗಾಗಿ ಮಕ್ಕಳ ಮೇಲೆ ಕಾಳಜಿ ವಹಿಸುತ್ತಿದೆ.

ಅದು ಒದಗಿಸುವ ಸೌಲಭ್ಯಗಳ ಪೈಕಿ ಶೇ 50ರಷ್ಟು ಮಾತ್ರ ಮಕ್ಕಳಿಗೆ ಸಿಗುತ್ತಿದೆ. ಉಳಿದದ್ದು ಕಳ್ಳರ ಪಾಲಾಗುತ್ತಿದೆ. ಕಳಪೆ ಆಹಾರ ಪೂರೈಕೆ ಮಾಡಲಾ­ಗುತ್ತಿದೆ. ಅಂಗನವಾಡಿ, ಹಾಸ್ಟೆಲ್‌ಗಳಿಗೆ ಸಮರ್ಪಕ ಆಹಾರ ಪೂರೈಸಬೇಕು ಎಂದು ಒತ್ತಾಯಿಸಿದರು. ಜನಸಾಮಾನ್ಯನಿಗೆ ಸಿಗಬೇಕಾದ ವಿವಿಧ ಯೋಜನೆಗಳ ಸೌಲಭ್ಯಗಳು ಸರಿಯಾಗಿ ಮುಟ್ಟುತ್ತಿಲ್ಲ. ಅದಕ್ಕಾಗಿ ಸಂಘಟನಾತ್ಮಕವಾಗಿ ಸೇರಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಬೇಕು ಎಂದರು.ನಗರಸಭಾ ಅಧ್ಯಕ್ಷೆ ಲತಾ ವೀರಣ್ಣ ಸಂಡೂರ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯ ಜಿಲ್ಲಾ ಅಧ್ಯಕ್ಷ ಮೈಲಪ್ಪ ಬಿಸರಳ್ಳಿ, ಉಪಾಧ್ಯಕ್ಷೆ ಇಂದಿರಾ ಬಾವಿಕಟ್ಟಿ, ಗಾಳೆಪ್ಪ ಎಚ್‌. ಪೂಜಾರ್‌ ಉಪಸ್ಥಿತರಿದ್ದರು. ಸುಂಕಪ್ಪ ಮೀಸಿ ಸ್ವಾಗತಿಸಿದರು. ಪಿ.ಎಸ್‌.ನಾಸರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌.ಎ.ಗಫಾರ್‌ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)