ಮಂಗಳವಾರ, ಜೂನ್ 22, 2021
27 °C

ಮಕ್ಕಳಿಸ್ಕೂಲು ಮನೇಲಲ್ವೇ?

ಇ.ಎಸ್‌.ಸುಧೀಂದ್ರ ಪ್ರಸಾದ್‌ Updated:

ಅಕ್ಷರ ಗಾತ್ರ : | |

‘ಮುಂಜಾನೆ ಕ್ರಿಕೆಟ್ಟು, ಆಮೇಲೆ ಸ್ಕೂಲು, ಸಂಜೆ ಮ್ಯೂಸಿಕ್ಕು, ಆಮೇಲೆ ಟ್ಯೂಷನ್‌. ಎಲ್ಲಿದೆ ನಮ್ಮ ಟೈಮು’ ಎಂದು ಇಂದಿನ ವಿದ್ಯಾರ್ಥಿಗಳು ಹೊಸ ಹಾಡೊಂದನ್ನು ಹುಟ್ಟಹಾಕಿದ್ದರೂ ಆಶ್ಚರ್ಯವಿಲ್ಲ. ಐಟಿ–ಬಿಟಿ ಕ್ಷೇತ್ರಗಳಲ್ಲಿ ಮಾತ್ರವಲ್ಲ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲೂ ಸಾಕಷ್ಟು ಒತ್ತಡ ಸೃಷ್ಟಿಸುವ ವಾತಾವರಣವಿದೆ. ಸಮಾಜ, ಪೋಷಕರು ಹಾಗೂ ಶಿಕ್ಷಕರು ದಶದಿಕ್ಕುಗಳಿಂದಲೂ ಮಕ್ಕಳ ಬೆಳವಣಿಗೆ ಕುರಿತಂತೆ ಅತೀವ ಕಾಳಜಿ ವಹಿಸುತ್ತಿದ್ದಾರೆ. ಇದು ಸ್ವಚ್ಛಂದವಾಗಿ ಅರಳಬೇಕಾದ ಮಕ್ಕಳ ಮೇಲೆ ಅತಿಯಾದ ಒತ್ತಡ ಸೃಷ್ಟಿಸುತ್ತಿದೆ.ಬೆಂಗಳೂರಿನಂಥ ಮಹಾನಗರದಲ್ಲಿ ಮಕ್ಕಳ ಮೇಲೆ ಒತ್ತಡ ಹೇರುವಲ್ಲಿ ಹೆಚ್ಚು ಓದಿರುವ ವಿದ್ಯಾವಂತ ಪೋಷಕರ ಸಂಖ್ಯೆಯೇ ಅಧಿಕವಂತೆ. ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬಯಸುವ ವಯಸ್ಸಿನಲ್ಲಿ ಅತಿಯಾದ ಬುದ್ಧಿಮಾತು, ಒತ್ತಡ ಹಾಗೂ ಸೋಲನ್ನು ಒಪ್ಪಿಕೊಳ್ಳದ ಮನಸ್ಥಿತಿಯೇ ದುಡುಕು ನಿರ್ಧಾರ ಕೈಗೊಳ್ಳಲು ಕಾರಣ ಎಂದು ಹಲವು ಪರಿಣತರು ಅಭಿಪ್ರಾಯಪಡುತ್ತಾರೆ.ತಮಗಾದ ಅವಮಾನ, ಒತ್ತಡವನ್ನು ಹಂಚಿಕೊಳ್ಳುವಂಥ ಆಪ್ತ ವಲಯ ಮಕ್ಕಳಿಂದ ದೂರವಾಗುತ್ತಿದೆ. ಇವೆಲ್ಲಕ್ಕೂ ತಲೆ ಕೆಡೆಸಿಕೊಳ್ಳುವಷ್ಟು ಸಮಯ ಪೋಷಕರಿಗೆ ಇಲ್ಲ ಎಂಬ ಸಂಗತಿಯನ್ನು ಶಿಕ್ಷಣ ತಜ್ಞರು ಹೇಳುತ್ತಾರೆ. ‘ನಲಿಯುತ್ತಾ ಕಲಿಯುವ ಕಾಲ ದೂರವಾಗಿದೆ. ಈಗ ಏನಿದ್ದರೂ ಗುರಿ ಎಡೆಗೆ ಓಡುವುದಷ್ಟೇ. ಸಮಾಜ, ಮನೆ, ಶಾಲೆ ಮೂರೂ ಕಡೆ ಕೇವಲ ಜಯದ ಜಪ ಕೇಳುತ್ತಿರುವುದರಿಂದ ಮಕ್ಕಳಲ್ಲಿ ಸೋಲನ್ನು ಒಪ್ಪಿಕೊಳ್ಳುವ ಗುಣ ಮಾಯವಾಗಿದೆ. ಹೀಗಾಗಿ ಇಂಥ ಅವಘಡಗಳು ಸಂಭವಿಸುತ್ತವೆ’ ಎನ್ನುವುದು ಶಿಕ್ಷಣ ತಜ್ಞ ಶ್ಯಾಮಸುಂದರ ಶರ್ಮ ಅವರ ಅಭಿಪ್ರಾಯ.‘ಕಳೆದ ವರ್ಷ ಮನೆಯಲ್ಲಿ ಎಲ್ಲಾ ಕಡೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಈ ವರ್ಷ ನಾನು ಎಸ್ಸೆಸೆಲ್ಸಿ ಎಂಬ  ಕಾರಣಕ್ಕೆ ಹೊರಗೆ ಸುತ್ತಾಡಲು ಇರಲಿ, ಆಟವಾಡಲೂ ಬಿಡುತ್ತಿಲ್ಲ. ಬಿಡುವು ಸಿಕ್ಕಾಗಲೆಲ್ಲಾ ಓದು ಎಂದು ಅಮ್ಮ ಹೇಳುತ್ತಲೇ ಇರುತ್ತಾರೆ. ಇಷ್ಟು ವರ್ಷ ಪರೀಕ್ಷೆ ಬರೆದಿದ್ದು, ಓದಿದ್ದು ಯಾವುದರ ದಣಿವೂ ಇರಲಿಲ್ಲ. ಆದರೆ ಈ ವರ್ಷ ಒಮ್ಮೆಲೆಗೇ ಎಲ್ಲವೂ ಮೈಮೇಲೆ ಬಿದ್ದಂತೆನಿಸುತ್ತಿದೆ. ಮನೆಯಲ್ಲಿ ಆಸಕ್ತಿದಾಯಕವಾದ ಯಾವ ಕೆಲಸದಲ್ಲೂ ತೊಡಗಿಸಿಕೊಳ್ಳಲು ಬಿಡುತ್ತಿಲ್ಲ. ನಿನ್ನ ಕೆಲಸ ನೋಡಿಕೋ. ಇವೆಲ್ಲವನ್ನೂ ನಾವು ಮಾಡುತ್ತೇವೆ ಎಂದು ಜವಾಬ್ದಾರಿಗಳನ್ನು ಅವರೇ ವಹಿಸಿಕೊಳ್ಳುತ್ತಾರೆ. ಒಂದು ರೀತಿಯಲ್ಲಿ ನನ್ನನ್ನು ಜೈಲಿಗೆ ಹಾಕಿದಂತಾಗಿದೆ. ಪರೀಕ್ಷೆ ಯಾವತ್ತು ಮುಗಿಯುತ್ತದೆ ಎಂದು ಕಾಯುತ್ತಿದ್ದೇನೆ’ ಎಂದು ಹೇಳುತ್ತಾನೆ ಶರತ್‌.ಮಕ್ಕಳು ಮುಗ್ಧರಲ್ಲ

‘ಇಂದಿನ ಮಕ್ಕಳು ನಾವು ತಿಳಿದುಕೊಂಡಷ್ಟು ಮುಗ್ಧರಲ್ಲ. ಮಾಧ್ಯಮ, ಮೊಬೈಲ್‌ ಹಾಗೂ ಇಂಟರ್‌ನೆಟ್‌ನಿಂದಾಗಿ ಜಗತ್ತಿನ ವಿಚಾರಗಳನ್ನು ವಯಸ್ಸಿಗೆ ಮೀರಿ ತಿಳಿದುಕೊಂಡಿರುತ್ತಾರೆ. ಪೋಷಕರೊಂದಿಗೆ ಹಂಚಿಕೊಳ್ಳಲಾಗದ ಸಂಗತಿಗಳನ್ನು ಮುಖ ಪರಿಚಯವಿಲ್ಲದ ಇಂಟರ್‌ನೆಟ್‌ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆ. ಪೋಷಕರ ಮಾತಿಗಿಂತ ಅಲ್ಲಿ ಸಿಗುವ ಸಂಗತಿಗಳನ್ನೇ ಪರಿಹಾರ ಎಂದುಕೊಳ್ಳುವ ಅಪಾಯವೂ ಇದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.‘ಪ್ರೌಢಾವಸ್ಥೆ ಎಂದರೆ ಅದು ಒತ್ತಡ ಹಾಗೂ ದಣಿವಿನ ಕಾಲಘಟ್ಟ. ಇದರ ತಯಾರಿಯನ್ನು ಹತ್ತನೇ ತರಗತಿಗೆಂದೇ ಮೀಸಲಿಡುವ ಬದಲು ಆರನೇ ತರಗತಿಯಿಂದಲೇ ಆರಂಭಿಸುವುದು ಸೂಕ್ತ. ಮಕ್ಕಳಲ್ಲಿ ಕೆಲ ಬದಲಾವಣೆಗಳನ್ನು ಗ್ರಹಿಸಿ, ಅದಕ್ಕೆ ಸ್ಪಂದಿಸಲು ದೊಡ್ಡ ದೊಡ್ಡ ಶಾಲೆಗಳಲ್ಲಿ ಆಪ್ತ ಸಮಾಲೋಚಕರು ಇರುತ್ತಾರೆ. ಜತೆಗೆ ಮಕ್ಕಳಲ್ಲಿನ ಬದಲಾವಣೆಯನ್ನು ಅರಿಯುವ ಸೂಕ್ಷ್ಮ ಮನಸ್ಸು ಶಿಕ್ಷಕರಿಗೆ ಇರಬೇಕು. ಒಟ್ಟಾರೆಯಾಗಿ ಎಡೆಬಿಡದ ಜೀವನದಲ್ಲಿ ಮಕ್ಕಳನ್ನು ಜೀತದಾಳುಗಳಂತೆ ಮಾಡಿರುವುದಂತೂ ಸತ್ಯ’ ಎಂದು ಹೇಳುತ್ತಾರೆ ಶ್ಯಾಮಸುಂದರ ಶರ್ಮ.ರ್‍ಯಾಂಕ್‌ ಹುಡುಗಿಯ ಆತ್ಮವಿಶ್ವಾಸ

‘ಪ್ರೌಢಾವಸ್ಥೆ ಹಂತಕ್ಕೆ ಮಕ್ಕಳು ಬರುವಾಗ ಅವರಿಗೆ ಒಂದು ಗುರಿ ತೋರಬೇಕಾದದ್ದು ಪೋಷಕರ ಹಾಗೂ ಶಿಕ್ಷಕರ ಜವಾಬ್ದಾರಿ. ಆದರೆ ಅದು ಆಗುತ್ತಿಲ್ಲ. ಎಲ್ಲಾ ಮಕ್ಕಳು ಓದುವುದರಲ್ಲಿ ಆಸಕ್ತಿ ಹೊಂದಿರುತ್ತಾರೆ ಎಂದು ಹೇಳುವುದು ಕಷ್ಟ. ಕೆಲವರಿಗೆ ಆಟ, ಇನ್ನು ಕೆಲವರಿಗೆ ಕಲೆ, ಸಂಗೀತ ಇಷ್ಟವಿರಬಹುದು. ಆದರೆ ಅವರಿಗೆ ವಿದ್ಯಾಭ್ಯಾಸವೂ ತಮ್ಮ ಆಸಕ್ತಿ ಕ್ಷೇತ್ರದಷ್ಟೇ ಇಷ್ಟಪಡುವಂತೆ ಮಾಡಬೇಕು. ನನ್ನ ಮಗಳಿಗೆ ನಾವು ಎಂದೂ ಓದು ಎಂದು ಹೇಳಿಲ್ಲ. ಏಕೆಂದರೆ ಅವಳು ಸದಾ ಓದುತ್ತಲೇ ಇದ್ದಳು. ಅದರ ಬದಲು ಹೊರಗೆ ಹೋಗಿ ಒಂದಷ್ಟು ಕಾಲ ಆಟವಾಡಿ ಬಾ ಎಂದು ಹೇಳುತ್ತಿದ್ದೆವು’ ಎಂದು ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ನಲ್ಲಿ (ಭಾರತೀಯ ವಿಜ್ಞಾನ ಸಂಸ್ಥೆ) ಮುಖ್ಯ ಸಂಶೋಧನಾ ವಿಜ್ಞಾನಿಯಾಗಿರುವ ಡಾ. ಎಸ್‌.ಜಿ. ರಾಮಚಂದ್ರ ಅವರು ಅಭಿಪ್ರಾಯ ಪಡುತ್ತಾರೆ.ರಾಮಚಂದ್ರ ಅವರ ಮಗಳು ರಮ್ಯಾ 2011ರಲ್ಲಿ ಪಿಯುಸಿ ಪರೀಕ್ಷೆಯಲ್ಲಿ 7ನೇ ಹಾಗೂ ಸಿಇಟಿ ವೈದ್ಯಕೀಯ ವಿಭಾಗದಲ್ಲಿ ಮೊದಲ ರ್‍್ಯಾಂಕ್‌ ಪಡೆದಿದ್ದಳು. ‘ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಸಹಜವಾಗಿ ತರಗತಿಗಳಲ್ಲಿ ಒತ್ತಡ ಇದ್ದೇ ಇರುತ್ತಿತ್ತು. ಸದಾ ಓದುತ್ತಲೇ ಇರಬೇಕು ಎಂಬ ಶಿಕ್ಷಕರ ಎಚ್ಚರಿಕೆಯ ಸದ್ದು ಕಿವಿಗೆ ಅಪ್ಪಳಿಸುತ್ತಿತ್ತು. ಆದರೆ ನಾನು ಆ ಒತ್ತಡವನ್ನು ತುಂಬಾ ಸಂಭ್ರಮಿಸುತ್ತಿದ್ದೆ. ಒತ್ತಡ ಇಲ್ಲವೆಂದರೆ ಓದಲು ಮನಸ್ಸು ಬರುತ್ತಿರಲಿಲ್ಲ. ತರಗತಿಯಲ್ಲಿ ಟೆಸ್ಟ್‌ ಅಥವಾ ಪರೀಕ್ಷೆ ಎಂದಾಕ್ಷಣ ಒಮ್ಮೆಲೆ ನನ್ನೊಳಗಿನ ಮನಸ್ಸು ಜಾಗೃತವಾಗುತ್ತಿತ್ತು. ಹೀಗಾಗಿ ಸದಾ ಪರೀಕ್ಷೆಗೆ ತಯಾರಿ ನಡೆಸುತ್ತಲೇ ಇದ್ದೆ’ ಎಂದೆನ್ನುವ ರಮ್ಯಾ ಈಗ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ ಓದುತ್ತಿದ್ದಾರೆ.ಒಳಿತು–ಕೆಡುಕಿನ ಅರಿವು ಬೇಕು

ಮಕ್ಕಳನ್ನು ಪ್ರೋತ್ಸಾಹಿಸುವುದು ಬಹಳ ಮುಖ್ಯ. ಅದೇ ಸಂದರ್ಭದಲ್ಲಿ ಒಳಿತು ಹಾಗೂ ಕೆಡುಕುಗಳ ನಡುವಿನ ವ್ಯತ್ಯಾಸವೂ ಅವರಲ್ಲಿ ಅರಿವು ಮೂಡುವಂತೆ ಮಾಡಬೇಕು.ಎಲ್ಲಾ ರಂಗದಲ್ಲೂ ನಮ್ಮ ಮಕ್ಕಳೇ ಮೊದಲಿಗರಾಗಬೇಕೆಂಬ ಮನೋಭಾವ ತಪ್ಪು.ಕ್ರೀಡೆ, ಸಂಗೀತ, ವಿದ್ಯಾಭ್ಯಾಸ ಇತ್ಯಾದಿ ಎಂದು ಅತಿಯಾದ ಒತ್ತಡ ಮಕ್ಕಳ ಮೇಲೆ ಹೇರುವುದು ತಪ್ಪು.

ದಿನಕ್ಕೆ ಕನಿಷ್ಠ ಒಂದು ಗಂಟೆಯಾದರೂ ಮಕ್ಕಳನ್ನು ಆಟ ಆಡಲು ಬಿಡುವುದು ಸೂಕ್ತ. ಇದರಿಂದ ಸೋಲು ಹಾಗೂ ಗೆಲುವು ಎರಡರ ಪರಿಚಯವೂ ಮಕ್ಕಳಿಗೆ ಆಗುತ್ತದೆ. ಇದರಿಂದ ಸೋಲನ್ನು ಒಪ್ಪಿಕೊಳ್ಳುವ ಮನಸ್ಥಿತಿಯೂ ಮಕ್ಕಳಲ್ಲಿ ಬೆಳೆಯುವುದರಿಂದ ದುಡುಕು ನಿರ್ಧಾರಗಳನ್ನು ಕೈಗೊಳ್ಳರು.ಕಾರಣ ಹುಡುಕಿ

ಓದಿನ ರೇಸ್‌ನಲ್ಲಿ ಮೊದಲು ಬರಬೇಕೆಂಬ ಒತ್ತಡದಲ್ಲಿರುವ ಮಕ್ಕಳು ಕಡಿಮೆ ಅಂಕ ತೆಗೆದಾಗ ಅಂಕದ ಪಟ್ಟಿಗೆ ಪೋಷಕರ ಸಹಿ ಹಾಕಿಸಿ ತರುವಂತೆ ಶಿಕ್ಷಕರು ಒತ್ತಡ ಹೇರುತ್ತಾರೆ. ಕಡಿಮೆ ಅಂಕ ಎಂಬ ಕಾರಣಕ್ಕೆ ಪೋಷಕರು ಸಹಿ ಹಾಕದೇ ಕಳುಹಿಸುತ್ತಾರೆ. ಇವರಿಬ್ಬರ ಅಡಕತ್ತರಿಗೆ ಸಿಕ್ಕ ಸ್ಥಿತಿ ಆ ವಿದ್ಯಾರ್ಥಿಯದ್ದು.

ಇದರ ಬದಲು ಅಂಕ ಕಡಿಮೆ ಬರಲು ಕಾರಣವೇನು ಎಂಬುದನ್ನು ವಿದ್ಯಾರ್ಥಿ ಮನಸ್ಸಿಗೆ ಅರ್ಥವಾಗುವಂತೆ ಹೇಳಬೇಕು. ಪೋಷಕರು ಕೂಡ ಮಕ್ಕಳ ವಿಷಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇದು ಮಕ್ಕಳಲ್ಲೂ ಆತ್ಮವಿಶ್ವಾಸ ತುಂಬುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.