ಮಂಗಳವಾರ, ಜೂನ್ 22, 2021
29 °C

ಮಕ್ಕಳ ಹಣ ನುಂಗಿದ ನೀಚರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನಷ್ಟೇ ಬಹಿರಂಗಪಡಿಸಿಲ್ಲ. ಮಕ್ಕಳಿಗಾಗಿ ಮೀಸಲಿಟ್ಟ ಹಣವನ್ನೂ ವ್ಯವಸ್ಥಿತವಾಗಿ ನುಂಗಿ ಹಾಕುತ್ತಿರುವ ನೀಚತನ ಇಲಾಖೆ ಅಧಿಕಾರಿಗಳಲ್ಲಿರುವುದನ್ನು ಹೊರಹಾಕಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೆಚ್ಚ ಮಾಡುತ್ತಿರುವ ಕೋಟ್ಯಂತರ ರೂಪಾಯಿ ಈ ಅಧಿಕಾರಿಗಳ ಹೆಸರಿನಲ್ಲಿ ವಾಣಿಜ್ಯ ಸಂಕೀರ್ಣ, ನಿವೇಶನಗಳು, ಚಿನ್ನಬೆಳ್ಳಿಯ ಆಭರಣಗಳಾಗಿ ಪರಿವರ್ತನೆಯಾಗಿರುವುದನ್ನೂ ಈ ದಾಳಿ ಬಯಲು ಮಾಡಿದೆ. ಕಳೆದ 5 ವರ್ಷಗಳಿಂದಲೂ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ನೆಪದಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರ ಖಾಸಗಿ ಕಂಪೆನಿ ಒಂದು ಸಾವಿರ ಕೋಟಿಗೂ ಹೆಚ್ಚು ಹಣವನ್ನು ಹೀಗೆ ಅಕ್ರಮ ಆಸ್ತಿ ಅಭಿವೃದ್ಧಿಗೆ ಬಳಸಿಕೊಂಡಿದ್ದಾರೆಂದರೆ ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಮಕ್ಕಳು ಸಾವಿಗೆ ಈಡಾಗುವ ಪರಿಸ್ಥಿತಿ ಇರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಇದರಲ್ಲಿ ಭಾಗಿಯಾದ ಅಧಿಕಾರಿಗಳು ಮತ್ತು ಅವರಿಗೆ ರಕ್ಷಣೆ ನೀಡಿದ ಸರ್ಕಾರ, ಮಹಿಳೆಯರು ಮತ್ತು ಮಕ್ಕಳಿಗೆ ಮೀಸಲಾದ ಸೌಲಭ್ಯಗಳನ್ನು ವಂಚಿಸಿದ ಕ್ರಿಮಿನಲ್ ಅಪರಾಧಿಗಳು. ಇದು ರಾಜ್ಯದ ಮುಂದಿನ ಪೀಳಿಗೆಗೆ ಎಸಗಿದ ದ್ರೋಹ. ಈ ಅಪರಾಧಕ್ಕಾಗಿ ಸಂಬಂಧಪಟ್ಟವರೆಲ್ಲರೂ ಉಗ್ರ ಶಿಕ್ಷೆಗೆ ಅರ್ಹರು.

ಅಂಗನವಾಡಿಗಳಲ್ಲಿ ಮಕ್ಕಳಿಗೆ ಬಿಸಿ ಊಟವನ್ನೇ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಅದನ್ನು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಲಕ್ಷಿಸಿಲ್ಲ ಎಂಬುದೂ ಈ ಪ್ರಕರಣದಲ್ಲಿ ಬಹಿರಂಗಗೊಂಡಿದೆ. ತಮಿಳುನಾಡಿನಲ್ಲಿ ಸುಪ್ರೀಂ ಕೋರ್ಟ್‌ನಿಂದ ನಿರ್ಬಂಧಕ್ಕೆ ಒಳಗಾಗಿದ್ದ ಕ್ರಿಸ್ಟಿ ಫ್ರೈಡ್ ಗ್ರ್ಯಾಮ್ಸ ಎಂಬ ಕಂಪೆನಿಗೆ ಕರ್ನಾಟಕದಲ್ಲಿ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸಲು ಗುತ್ತಿಗೆ ನೀಡುವ ಮೂಲಕ ಈ ಅಧಿಕಾರಿಗಳು ಕೋರ್ಟ್ ಆದೇಶ ಉಲ್ಲಂಘಿಸಿರುವುದೂ ಸ್ಪಷ್ಟವಾಗಿದೆ. ಅಂಗನವಾಡಿಗಳಲ್ಲಿಯೇ ಆರೋಗ್ಯಕರ ಆಹಾರ ಸಿದ್ಧಪಡಿಸಬೇಕೆಂಬ ಆದೇಶವನ್ನು ನಿರ್ಲಕ್ಷಿಸಿ ಹೊರರಾಜ್ಯದ ಖಾಸಗಿ ಕಂಪೆನಿಗೆ ಸಿದ್ಧ ಆಹಾರ ಪೂರೈಕೆಗೆ ಗುತ್ತಿಗೆ ನೀಡಿದ್ದೇ ಅಕ್ರಮ. ಸಾವಿರಾರು ಕೋಟಿ ರೂಪಾಯಿ ಅವ್ಯವಹಾರದ ಶಂಕೆ ಇರುವ ಈ ಪ್ರಕರಣ, ದಾಳಿಯಲ್ಲಿ ಸಿಕ್ಕಿರುವ ಅಕ್ರಮ ಆಸ್ತಿಗಳ ವಿವರಗಳ ಪ್ರಕಟಣೆಯೊಂದಿಗೆ ಮುಕ್ತಾಯವಾಗಬಾರದು. ಹಗರಣದಲ್ಲಿ ಐಎಎಸ್ ಅಧಿಕಾರಿಯೊಬ್ಬರು ಶಾಮೀಲಾಗಿರುವುದರಿಂದ ಅವರನ್ನು ವಿಚಾರಣೆಗೆ ಒಳಪಡಿಸುವುದಕ್ಕೆ ಸರ್ಕಾರದ ಪೂರ್ವಾನುಮತಿ ಪಡೆಯುವಂಥ ನಿಯಮಗಳು ಅಡ್ಡಿಯಾಗಿ ಇಡೀ ಪ್ರಕರಣ ದುರ್ಬಲವಾಗುವ ಸಂಭವ ಇದೆ. ಇಲಾಖೆ ಸಚಿವರು ಈ ಯೋಜನೆಯ ಅನುಷ್ಠಾನದಲ್ಲಿನ ಲೋಪಗಳನ್ನು ಗುರುತಿಸಿದ್ದರೆ ಇಷ್ಟು ಪ್ರಮಾಣದ ಭ್ರಷ್ಟಾಚಾರಕ್ಕೆ ಆಸ್ಪದವಾಗುತ್ತಿರಲಿಲ್ಲವೇನೋ. ಸಚಿವರು ವಿಧಾನಸಭೆಯಲ್ಲಿ ಆಶ್ಲೀಲ ಚಿತ್ರ ವೀಕ್ಷಿಸಿದ ಆರೋಪದಲ್ಲಿ ಸ್ಥಾನ ಕಳೆದುಕೊಂಡ ಮೇಲೆ ಈ ಇಲಾಖೆಯ ಹೊಣೆಯೂ ಮುಖ್ಯಮಂತ್ರಿಯವರ ಹೆಗಲಿಗೆ ಏರಿದೆ. ಈಗ ಮುಖ್ಯಮಂತ್ರಿಗಳೇ ಈ ಹಗರಣವನ್ನು ಪ್ರತ್ಯೇಕ ತನಿಖೆಗೆ ಆದೇಶಿಸಿ ಮಕ್ಕಳ ಹಣ ನುಂಗಿದ ನೀಚರಿಗೆ ಶಿಕ್ಷೆ ಕೊಡಿಸಲು ಮುಂದಾಗಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.