ಶನಿವಾರ, ಮೇ 15, 2021
24 °C
ನಗರದಲ್ಲಿ ಆಘಾತಕಾರಿ ಪ್ರಕರಣ

ಮಗಳಿಗೆ 4 ವರ್ಷ ಗೃಹಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಲ್ಲೇಶ್ವರದ 15ನೇ ಅಡ್ಡರಸ್ತೆಯ ಮನೆಯೊಂದರಲ್ಲಿ ನಾಲ್ಕು ವರ್ಷಗಳಿಂದ ಗೃಹಬಂಧನದಲ್ಲಿದ್ದ ಯುವತಿ ಹೇಮಾವತಿ (32) ಎಂಬುವರನ್ನು ಪೊಲೀಸರು ಮಂಗಳವಾರ ರಕ್ಷಿಸಿದ್ದಾರೆ. ಮಗಳನ್ನು ಪೋಷಕರೇ ಗೃಹಬಂಧನದಲ್ಲಿರಿಸಿದ್ದರು ಎಂಬ ಆರೋಪ ಕೇಳಿಬಂದಿದೆ.ಈ ಬಗ್ಗೆ ಸ್ಥಳೀಯರು ಸೋಮವಾರ ಸಂಜೆ ಮಲ್ಲೇಶ್ವರ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆ ಮಾಹಿತಿ ಆಧರಿಸಿ, ಎಸ್‌ಐ ರೇಣುಕಾ ಅವರ ನೇತೃತ್ವದಲ್ಲಿ ಸಿಬ್ಬಂದಿ ಮನೆಗೆ ತೆರಳಿದ್ದರು. ಮಾಧ್ಯಮಗಳಲ್ಲಿ ಬೆಳಿಗ್ಗೆ ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಯು.ಟಿ.ಖಾದರ್ ಹಾಗೂ ಸ್ಥಳೀಯ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಸ್ಥಳಕ್ಕೆ ಭೇಟಿ ನೀಡಿ ಹೇಮಾವತಿಯನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಲು ವ್ಯವಸ್ಥೆ ಮಾಡಿದರು.ಹೇಮಾವತಿ, ರೇಣುಕಪ್ಪ ಮತ್ತು ಪುಟ್ಟಗೌರಮ್ಮ ದಂಪತಿಯ ಮಗಳು. `ಮಗಳಿಗೆ ಸರಿಯಾದ ಸಮಯಕ್ಕೆ ಮದುವೆ ಮಾಡದ ಪೋಷಕರು, ಎಲ್ಲ ವಿಷಯಗಳಲ್ಲೂ ಆಕೆಯ ಇಚ್ಛೆಗೆ ವಿರುದ್ಧವಾಗಿ ವರ್ತಿಸುತ್ತಿದ್ದರು. ಪೋಷಕರ ಈ ವರ್ತನೆ ಹೇಮಾವತಿಯ ಮನಸ್ಸಿನ ಮೇಲೆ ಪ್ರಭಾವ ಬೀರಿದೆ.ಗೃಹಬಂಧನದಲ್ಲಿರಿಸಿದಾಗಲೂ  ಆಕೆ ಯನ್ನು ಯಾರೂ ಸರಿಯಾಗಿ ನೋಡಿ ಕೊಳ್ಳುತ್ತಿರಲಿಲ್ಲ' ಎಂದು ಸ್ಥಳೀಯರು ಹಾಗೂ ಹೇಮಾವತಿಯ ಸಹಪಾಠಿಗಳು ಆರೋಪಿಸಿದ್ದಾರೆ.ಈ ಆರೋಪವನ್ನು ತಳ್ಳಿ ಹಾಕಿದ ಹೇಮಾವತಿ ತಂದೆ ರೇಣುಕಪ್ಪ, `ಮೊದಲು ಆರೋಗ್ಯವಾಗಿಯೇ ಇದ್ದ ಮಗಳಿಗೆ ಐದು ವರ್ಷದ ಹಿಂದೆ ಚಿಕೂನ್‌ಗುನ್ಯ ಕಾಯಿಲೆ ಬಂದಿತ್ತು. ಇದರಿಂದಾಗಿ ಆಕೆಯ ಕೈಕಾಲುಗಳು ಸ್ವಾಸ್ಥ್ಯ ಕಳೆದುಕೊಂಡವು. ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ (ಕಿಮ್ಸ), ಮದರ್ ಥೆರೆಸಾ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಕೊಡಿಸಿದರೂ ಆಕೆ ಗುಣಮುಖಳಾಗಲಿಲ್ಲ. ನಮಗೂ ವಯಸ್ಸಾಗಿದ್ದರಿಂದ ಆಕೆಯನ್ನು ಕೋಣೆಯಲ್ಲಿರಿಸಿ ಆರೈಕೆ ಮಾಡುತ್ತಿದ್ದೆವು' ಎಂದು ಹೇಳಿದರು. ಹೇಮಾವತಿಯ ಸಹೋದರರಾದ ಸೋಮಶೇಖರ್ ಮತ್ತು ಬಾಲಚಂದ್ರ ಕೂಡ ತಂದೆಯ ಹೇಳಿಕೆಗೆ ತಲೆದೂಗಿದರು.`ಹೇಮಾವತಿ ಪ್ರತಿದಿನ ಹಸಿವು ಎಂದು ಕಿರುಚಿಕೊಳ್ಳುತ್ತಿದ್ದಳು. ಆದರೆ, ಸೋಮವಾರ ರಾತ್ರಿ ಊಟಕ್ಕಾಗಿ ಆಕೆಯ ಆಕ್ರಂದನ ಜೋರಾಗಿತ್ತು. ಆಕೆಯ ನೋವನ್ನು ನೋಡಲಾಗದೇ, ಸ್ಥಳೀಯರೆಲ್ಲ ನಿರ್ಧರಿಸಿ ಮಲ್ಲೇಶ್ವರ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದೆವು. ಜತೆಗೆ ಕೆಲ ಮಾಧ್ಯಮಗಳಿಗೂ ವಿಷಯ ತಿಳಿಸಿದೆವು' ಎಂದು ಸ್ಥಳೀಯರಾದ ಷಣ್ಮುಗಪ್ಪ ಹೇಳಿದರು.`ನಾಲ್ಕು ವರ್ಷಗಳಿಂದ ಹೇಮಾವತಿ ಗೃಹಬಂಧನದಲ್ಲಿರುವ ವಿಷಯ ಗೊತ್ತಿದ್ದರೂ ಯಾರೂ ಮನೆ ಸಮೀಪ ಹೋಗುವ ಧೈರ್ಯ ಮಾಡಿರಲಿಲ್ಲ. ಕಾರಣ, ಆಕೆಯ ತಂದೆ ಕೋಪಿಷ್ಠ. ನೆರೆಹೊರೆಯವರು, ಸಂಬಂಧಿಕರು, ಸಹೋದರರೂ ಸೇರಿದಂತೆ ಎಲ್ಲರ ಜತೆಯೂ ಜಗಳವಾಡಿಕೊಂಡು ಸಂಬಂಧ ಕಡಿತ ಮಾಡಿಕೊಂಡಿದ್ದಾನೆ. ಮಗಳ ಬಗ್ಗೆ ವಿಚಾರಿಸಲು ಮನೆ ಬಳಿ ಹೋದರೆ ಕಿಡಿಕಾರುತ್ತಾನೆ' ಎಂದು ಅಲ್ಲಿನ ನಿವಾಸಿ ಭಾಸ್ಕರ್‌ರೆಡ್ಡಿ ತಿಳಿಸಿದರು.ಕೋಣೆಯಲ್ಲೇ ಮಲಮೂತ್ರ: `ಹೇಮಾವತಿ ಅವರು ಕೋಣೆಯಲ್ಲಿ ಊಟ ಮಾಡಿ, ಅಲ್ಲೇ ಮಲಮೂತ್ರ ಮಾಡುತ್ತಿದ್ದರು. ಅದನ್ನು ಸ್ವಚ್ಚಗೊಳಿಸುವ ಗೋಜಿಗೂ ಹೋಗದ ಪೋಷಕರು, ಮಗಳನ್ನು ಅಮಾನವೀಯವಾಗಿ ನೋಡಿಕೊಂಡಿದ್ದಾರೆ. ಹೀಗೆ ನಾಲ್ಕು ವರ್ಷಗಳಿಂದ ಕತ್ತಲ ಕೋಣೆಯಲ್ಲಿ ಕಳೆದಿರುವ ಹೇಮಾವತಿಯನ್ನು ಬೆಳಿಗ್ಗೆ ಬೆಳಕಿಗೆ ಕರೆತರುತ್ತಿದ್ದಂತೆ ಆತಂಕದಿಂದ ಕಿರುಚಿಕೊಂಡಳು. ಆಕೆಯ ಕೈಕಾಲು ಬೆರಳುಗಳಲ್ಲಿ ಎರಡು ಇಂಚಿನಷ್ಟು ಉಗುರು ಬೆಳೆದಿದ್ದು, ಸ್ನಾನ ಮಾಡಿಸದ ಕಾರಣ ಮೈಮೇಲೆಲ್ಲಾ ಹುಳಗಳಿದ್ದವು. ದೇಹ ಮುಚ್ಚಿಕೊಳ್ಳಲು ಒಂದು ಬೆಡ್‌ಶಿಟ್ ಬಿಟ್ಟರೆ ಆಕೆಗೆ ತುಂಡು ಬಟ್ಟೆಯನ್ನೂ ನೀಡಿರಲಿಲ್ಲ' ಎಂದು ಪೊಲೀಸರು ಹೇಳಿದ್ದಾರೆ.ವಿಚಿತ್ರ ವ್ಯಕ್ತಿಗಳು: `ಮೊದಲು ಹಣ್ಣು ತರಕಾರಿ ಖರೀದಿಸಲು ನಮ್ಮ ಅಂಗಡಿಗೆ ಬರುತ್ತಿದ್ದ ಹೇಮಾವತಿ, ಹಲವು ವರ್ಷಗಳಿಂದ ನಾಪತ್ತೆಯಾಗಿದ್ದಳು. ಬೆಳಿಗ್ಗೆ ಸುದ್ದಿ ವಾಹಿನಿಗಳಲ್ಲಿ ಆಕೆಯ ಸ್ಥಿತಿ ನೋಡಿ ಆಘಾತವಾಯಿತು. ಅವರ ಪೋಷಕರು ಹಾಗೂ ಸಹೋದರು ಹಣಕ್ಕಾಗಿ ಏನು ಬೇಕಾದರೂ ಮಾಡುವಂತಹ ವಿಚಿತ್ರ ವ್ಯಕ್ತಿಗಳು. ನಗರದ ವಿವಿಧೆಡೆ ಐದಾರು ಮನೆಗಳಿದ್ದು, ಪ್ರತಿ ತಿಂಗಳು ಸುಮಾರು ಒಂದು ಲಕ್ಷ ರೂಪಾಯಿ ಬಾಡಿಗೆ ಹಣ ಬರುತ್ತದೆ. ಆದರೂ ಹೇಮಾವತಿಯ ತಂದೆ ಪೈಸೆ ಪೈಸೆಗೂ ಲೆಕ್ಕ ಹಾಕುತ್ತಾರೆ' ಎಂದು ಎಂಇಎಸ್ ಕಾಲೇಜು ಸಮೀಪ 14 ವರ್ಷಗಳಿಂದ ತರಕಾರಿ ಅಂಗಡಿ ಇಟ್ಟುಕೊಂಡಿರುವ ಎಸ್.ದಾಸಪ್ಪ `ಪ್ರಜಾವಾಣಿ'ಗೆ ತಿಳಿಸಿದರು.ಶೀಲ ಶಂಕಿಸಿದ್ದ ತಂದೆ: `ನೆಲಮಂಗಲದಲ್ಲಿ ರೇಣುಕಪ್ಪ ಅವರ ಪಿತ್ರಾರ್ಜಿತ ಆಸ್ತಿ ಇದೆ. ಆ ಆಸ್ತಿಗಾಗಿ ಸಹೋದರರೊಂದಿಗೆ ಜಗಳ ಮಾಡಿಕೊಂಡ ರೇಣುಕಪ್ಪ, ನಂತರ ಮಲ್ಲೇಶ್ವರದಲ್ಲಿ ಪ್ರತ್ಯೇಕ ಮನೆ ಮಾಡಿಕೊಂಡ. ಚೆನ್ನಾಗಿ ಓದಿಕೊಂಡಿದ್ದ ಹೇಮಾವತಿ, ಒಳ್ಳೆಯ ಕೆಲಸವನ್ನೂ ಗಿಟ್ಟಿಸಿಕೊಂಡಳು. ಆದರೆ, ಮಗಳ ಶೀಲ ಶಂಕಿಸಿದ ಕ್ರೂರಿ ತಂದೆ ಆಕೆಯನ್ನು ಕೆಲಸದಿಂದ ಬಿಡಿಸಿ ಕತ್ತಲ ಕೋಣೆಗೆ ತಳ್ಳಿದ' ಎಂದು ರೇಣುಕಪ್ಪನ ಅತ್ತಿಗೆ ಪುಟ್ಟನಂಜಮ್ಮ ಆಕ್ರೋಶ ವ್ಯಕ್ತಪಡಿಸಿದರು.`ನನಗೂ ಎಲ್ಲರಂತೆ ಬದುಕಬೇಕೆಂಬ ಆಸೆ ಇದೆ. ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಗುಣಮುಖಳನ್ನಾಗಿ ಮಾಡಿ' ಎಂದು ಸಚಿವ ಖಾದರ್ ಬಳಿ ಹೇಮಾವತಿ ಅಂಗಲಾಚಿದ ದೃಶ್ಯ ಮನಕಲಕುವಂತಿತ್ತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಖಾದರ್, `ಇದೊಂದು ಅಮಾನವೀಯ ಘಟನೆ. ಅಸ್ವಸ್ಥಗೊಂಡಿರುವ ಹೇಮಾವತಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್‌ನಲ್ಲಿ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಮಾನವೀಯತೆ ದೃಷ್ಟಿಯಿಂದ ಆಕೆಯ ಚಿಕಿತ್ಸೆಯ ಖರ್ಚನ್ನು ಸರ್ಕಾರವೇ ಭರಿಸಲಿದೆ' ಎಂದು ಭರವಸೆ ನೀಡಿದರು.`ಹೇಮಾವತಿಯ ತಂದೆ ರೇಣುಕಪ್ಪ ಕುಟುಂಬ ಸದಸ್ಯರೊಂದಿಗೂ ಅನೋನ್ಯವಾಗಿರಲಿಲ್ಲ. ಸುಬ್ರಹ್ಮಣ್ಯನಗರದಲ್ಲಿರುವ ಸ್ನೇಹಿತನೊಬ್ಬನ ಟೀ ಅಂಗಡಿಯಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಹರಟೆ ಹೊಡೆಯುತ್ತಿದ್ದರು. ಪೈಸೆ ಪೈಸೆಗೆ ಲೆಕ್ಕ ಹಾಕುವ ಅವರು, ಟಿ.ವಿಗೆ ಕೇಬಲ್ ಕೂಡ ಹಾಕಿಸಿಲ್ಲ.  ಹೇಮಾವತಿ, ಎಂಬಿಎ ಮಾಡಬೇಕೆಂಬ ಕನಸು ಕಂಡಿದ್ದಳು. ಆದರೆ, ಆ ಕೋರ್ಸ್ ಮುಗಿಸಲು ಹೆಚ್ಚಿನ ಹಣ ಬೇಕಾಗುತ್ತದೆ ಎಂದು ಎಂಬಿಎ ಮಾಡಲು ಒಪ್ಪಿರಲಿಲ್ಲ' ಎಂದು ಹೇಮಾವತಿ ಸಂಬಂಧಿ ಆಂಜನೇಯರೆಡ್ಡಿ ಆಕ್ರೋಶದಿಂದ ನುಡಿದರು.ಕಾರಣ ತಿಳಿಯಲು ಕಾಲಾವಕಾಶ ಬೇಕು

ಮಧ್ಯಾಹ್ನ 1.30ರ ಸುಮಾರಿಗೆ ಹೇಮಾವತಿಯನ್ನು ಆಸ್ಪತ್ರೆಗೆ ಕರೆತರಲಾಯಿತು. ಸದ್ಯ ಅವರನ್ನು ಮನೋನಿರೀಕ್ಷಣಾ ವಿಭಾಗದಲ್ಲಿರಿಸಲಾಗಿದೆ. ತನ್ನ ಸುತ್ತ ನಡೆಯುವ ಎಲ್ಲ ಚಟುವಟಿಕೆಗಳನ್ನು ಗಮನಿಸುತ್ತಿದ್ದಾಳೆ. ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಆಕೆ ಈ ಸ್ಥಿತಿ ತಲುಪಲು ಕಾರಣವೇನು ಎಂದು ಖಚಿತವಾಗಿ ತಿಳಿಯಲು ಕಾಲಾವಕಾಶ ಬೇಕಾಗುತ್ತದೆ. ಹೇಮಾವತಿಯ ಪೂರ್ವಾಪರ ಹಾಗೂ ಬಾಲ್ಯ ಜೀವನದ ಬಗ್ಗೆ ಪೋಷಕರಲ್ಲಿ ಮಾಹಿತಿ ಪಡೆಯುತ್ತಿದ್ದೇವೆ.

- ಡಾ.ವಿ.ಎಲ್.ಸತೀಶ್,ವೈದ್ಯಕೀಯ ಅಧೀಕ್ಷಕ, ನಿಮ್ಹಾನ್ಸ್ಸ್ವಯಂ ಪ್ರೇರಿತ ದೂರು ದಾಖಲು

`ಹೇಮಾವತಿ ಗೃಹಬಂಧನ ಪ್ರಕರಣ ಸಂಬಂಧ ಮಾಧ್ಯಮಗಳಲ್ಲಿ ಪ್ರಸಾರವಾದ ವರದಿ ಆಧರಿಸಿ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಜತೆಗೆ, ಐಜಿಪಿ ದರ್ಜೆಯ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಬೇಕೆಂದು ಕೋರಿದ್ದೇವೆ. ಈಗಾಗಲೇ ಆಯೋಗದ ಡಿವೈಎಸ್‌ಪಿ ರಾಧಕೃಷ್ಣ ಅವರು ಹೇಮಾವತಿಯ ಮನೆಗೆ ಭೇಟಿ  ನೀಡಿ, ಪೋಷಕರು ಹಾಗೂ ನೆರೆಹೊರೆಯವರ ವಿಚಾರಣೆ ನಡೆಸಿದ್ದಾರೆ. ಬುಧವಾರ ಆಸ್ಪತ್ರೆಗೆ ತೆರಳಿ ಹೇಮಾವತಿ ಅವರ ಹೇಳಿಕೆಯನ್ನೂ ಪಡೆಯಲಿದ್ದಾರೆ. ಸೂಕ್ತ ತನಿಖೆ ನಡೆಸಿ ಆಯೋಗಕ್ಕೆ ವರದಿ ಸಲ್ಲಿಸುವಂತೆ ಸ್ಥಳೀಯ ಡಿಸಿಪಿ ಅವರನ್ನು ಕೋರಿದ್ದೇವೆ'

- ನಿವೃತ್ತ ನ್ಯಾಯಮೂರ್ತಿ ಸಿ.ಜೆ.ಹುನಗುಂದ್,

ಮಾನವ ಹಕ್ಕುಗಳ ಆಯೋಗದ ಸದಸ್ಯಹೇಮಾವತಿ ಹೇಳಿಕೆ ಪಡೆದು ಕ್ರಮ

ಘಟನೆ ಸಂಬಂಧ ಈವರೆಗೆ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ನಿಮ್ಹಾನ್ಸ್‌ನಲ್ಲಿ ಹೇಮಾವತಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ವೈದ್ಯರು ನೀಡುವ ವರದಿ ಹಾಗೂ ಹೇಮಾವತಿಯ ಹೇಳಿಕೆಯನ್ನು ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಆಕೆಯ ಇಚ್ಛೆಗೆ ವಿರುದ್ಧವಾಗಿ ಪೋಷಕರು ವರ್ತಿಸಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

- ಎಸ್.ಎನ್.ಸಿದ್ದರಾಮಪ್ಪ, ಡಿಸಿಪಿ, ಉತ್ತರ ವಿಭಾಗ ಪ್ರೇಮ ವಿವಾಹಕ್ಕೆ ಒಪ್ಪಿರಲಿಲ್ಲ

ಹೇಮಾವತಿ ಕಾಲೇಜು ದಿನಗಳಲ್ಲಿ ಯುವಕನೊಬ್ಬನನ್ನೂ ಪ್ರೀತಿ ಮಾಡುತ್ತಿದ್ದಳು. ಆದರೆ, ಪ್ರೇಮವಿವಾಹಕ್ಕೆ ಪೋಷಕರು ಒಪ್ಪಿರಲಿಲ್ಲ. ಅಲ್ಲದೇ, ಸರಿಯಾದ ಸಮಯಕ್ಕೆ ಮದುವೆಯನ್ನೂ ಮಾಡದೇ ಆಕೆಯ ಜೀವನವನ್ನೇ ಹಾಳು ಮಾಡಿದರು. ಇದರಿಂದಾಗಿ ಹಂತಹಂತವಾಗಿ ಆಕೆ ಖಿನ್ನತೆಗೆ ಒಳಗಾದಳು. ಹೀಗಾಗಿ ಹೇಮಾವತಿಯ ಇಂದಿನ ಸ್ಥಿತಿಗೆ ಆಕೆಯ ತಂದೆಯೇ ನೇರ ಕಾರಣ. ಮನೆ ಬಿಟ್ಟು ಪ್ರೀತಿಸಿದ ಯುವಕನೊಂದಿಗೆ ಹೋಗಿದ್ದರೂ ಹೇಮಾವತಿ ಚೆನ್ನಾಗಿರುತ್ತಿದ್ದಳು.

- ಉಮಾ, ಹೇಮಾವತಿಯ ಸಹಪಾಠಿರ‍್ಯಾಂಕ್ ವಿದ್ಯಾರ್ಥಿನಿ

ಮಲ್ಲೇಶ್ವರದ ನಿರ್ಮಲರಾಣಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ್ದ ಹೇಮಾವತಿ, ಎಂಇಎಸ್ ಕಾಲೇಜಿನಲ್ಲಿ ಪಿಯುಸಿ ಓದಿದ್ದರು. ಬಳಿಕ ಮಲ್ಲೇಶ್ವರ ಮಹಿಳಾ ಶಿಕ್ಷಣ ಸಂಸ್ಥೆಯಲ್ಲಿ (ಎಂಎಲ್‌ಎ) 1996ರಲ್ಲಿ ಬಿ.ಕಾಂನಲ್ಲಿ ರ‍್ಯಾಂಕ್ ಪಡೆದ ಅವರು, ಚಾರ್ಟೆಡ್ ಅಕೌಂಟೆಂಟ್ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.